Mysore
28
broken clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಹೂಟಗಳ್ಳಿ: ಮಳೆ ಬಂದರೆ ತಪ್ಪದು ನಿವಾಸಿಗಳಿಗೆ ಗೋಳು

readers letter

ಮನೆಗಳು,ಮಳಿಗೆಗಳಿಗೆ ನುಗ್ಗುವ ಮಳೆ ನೀರು ಚರಂಡಿಯನ್ನೇ ಮುಚ್ಚಿಹಾಕಿರುವ ಕೆಲ ನಿವಾಸಿಗಳು

ಮೈಸೂರು: ನಗರದ ಹೊರ ವಲಯದಲ್ಲಿರುವ ಹೂಟಗಳ್ಳಿ ನಗರಸಭೆಯಾಗಿ ಮೇಲ್ದರ್ಜೆಗೇರಿದ್ದರೂ ಮೂಲ ಸೌಕರ್ಯಗಳ ಕೊರತೆಯಿಂದ ಸ್ಥಳೀಯ ನಿವಾಸಿಗಳ ಗೋಳು ಹೇಳತೀರದಾಗಿದೆ. ಬುಧವಾರ ಸುರಿದ ಮಳೆಯಿಂದಾಗಿ ಹೂಟಗಳ್ಳಿಯ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ೧೦ಕ್ಕೂ ಹೆಚ್ಚು ಮನೆಗಳು ಹಾಗೂ ಮಳಿಗೆಗಳಿಗೆ ನೀರು ನುಗ್ಗಿದ್ದು,ನಿವಾಸಿಗಳು ಹೈರಾಣಾಗಿದ್ದಾರೆ.

ಅವೈಜ್ಞಾನಿಕ ರೀತಿಯಲ್ಲಿ ರಸ್ತೆ ನಿರ್ಮಾಣ, ಚರಂಡಿಯಲ್ಲಿ ತುಂಬಿರುವ ಹೂಳು,ಉದ್ಯಾನವನದ ಜಾಗ ಒತ್ತುವರಿ ಹೀಗೆ ಅನೇಕ ಕಾರಣಗಳಿಂದಾಗಿ ಹೂಟಗಳ್ಳಿಯ ಕೆಲವೆಡೆ ಮಳೆ ಬಂತೆಂದರೆ ಜನರು ಆತಂಕಕ್ಕೀಡಾಗುವಂತಾಗಿದೆ. ಸಾಧಾರಣ ಮಳೆ ಬಂತೆಂದರೆ ಸಾಕು ಇಲ್ಲಿನ ರಸ್ತೆಗಳಲ್ಲಿ ನೀರು ಹರಿಯುವುದಲ್ಲದೆ, ಮನೆಗಳು ಹಾಗೂ ವಾಣಿಜ್ಯ ಮಳಿಗೆಗಳಿಗೆ ಮಳೆ ನೀರು ನುಗ್ಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದರಂತೂ ಇಲ್ಲಿನ ಜನರ ಗೋಳು ಕೇಳುವಂತೆಯೇ ಇಲ್ಲ. ಬುಧವಾರ ಮಧ್ಯಾಹ್ನ ಸುಮಾರು ಒಂದು ಗಂಟೆ ಕಾಲ ಬಿದ್ದ ಜೋರು ಮಳೆಯಿಂದಾಗಿ ಹೂಟಗಳ್ಳಿ ಹೌಸಿಂಗ್ ಬೋರ್ಡ್ ಕಾಲೋನಿಯ ಎಚ್ ಐಜಿ, ಎಂಐಜಿ, ಎಲ್‌ಐಜಿ ಮನೆಗಳಿರುವ ರಸ್ತೆಗಳಲ್ಲಿ ನೀರು ಕಾಲುವೆಯಂತೆ ಹರಿದಿದ್ದಲ್ಲದೆ ಮನೆಗಳ ಒಳಗೂ ನುಗ್ಗಿದ ನೀರು ಅವಾಂತರ ಸೃಷ್ಟಿಸಿತು.

ಅವೈಜ್ಞಾನಿಕ ರಸ್ತೆ ಕಾಮಗಾರಿ: ಹೂಟಗಳ್ಳಿ ನಗರಸಭೆ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯಿಸಿ, ಹೌಸಿಂಗ್ ಬೋರ್ಡ್ ಕಾಲೋನಿಯಹಲವೆಡೆ ಅವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ನಡೆಸಲಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಸಮತಟ್ಟು ಮಾಡಿಲ್ಲ. ಹೀಗಾಗಿ ಮಳೆಯ ನೀರು ಮೋರಿಗೆ ಸೇರುತ್ತಿಲ್ಲ. ಇಂತಹ ಹಲವು ರಸ್ತೆಗಳನ್ನು ನಾವು ಗುರುತು ಮಾಡಿದ್ದು, ಹಂತ ಹಂತವಾಗಿ ದುರಸ್ತಿಮಾಡುತ್ತಿದ್ದೇವೆ ಎನ್ನುತ್ತಾರೆ.

ಮೋರಿಯನ್ನೇ ಮುಚ್ಚಿದ್ದಾರೆ: ಈ ಬಡಾವಣೆಯ ಕೆಲ ನಿವಾಸಿಗಳು ತಮ್ಮ ವಾಹನಗಳ ನಿಲುಗಡೆಗಾಗಿ ಮನೆಯ ಮುಂದಿನ ಮೋರಿಯನ್ನೇ ಮಣ್ಣಿನಿಂದ ಮುಚ್ಚಿಹಾಕಿದ್ದಾರೆ. ಹೀಗಾಗಿ ನೀರು ಮೋರಿಗೆ ಹೋಗದೆ ರಸ್ತೆ ಅಥವಾ ಮನೆಯ ಒಳಗೆ ನುಗ್ಗುತ್ತಿದೆ.

ಮೀನು ಅಂಗಡಿ ಅವಾಂತರ: ಇಲ್ಲಿನ ಉದ್ಯಾನವನದಲ್ಲಿ ಮೀನಿನ ಖಾದ್ಯಗಳ ಮಾರಾಟ ಮಳಿಗೆಯೊಂದು ಆರಂಭವಾಗಿದೆ. ಮಳಿಗೆ ಮಾಲೀಕರು ಮೋರಿಯನ್ನು ಮುಚ್ಚಿ ರಸ್ತೆಯನ್ನಾಗಿ ಪರಿವರ್ತಿಸಿದ್ದಾರೆ. ಹೀಗಾಗಿ ಅಲ್ಲಿಂದ ಬರುವ ನೀರು ಅಕ್ಕಪಕ್ಕದ ಮನೆಗಳಿಗೆ ನುಗ್ಗುತ್ತಿದೆ.

ಮೋಟಾರ್ ಪಂಪ್‌ಗಳು ಹಾಳು: ಬುಧವಾರ ಬಿದ್ದ ಮಳೆಯಿಂದಾಗಿ ಮೋಟಾರ್ ಪಂಪ್‌ಗಳು ಇದ್ದ ಗೋದಾಮಿಗೆ ನೀರು ನುಗ್ಗಿದೆ.ಇದರಿಂದಾಗಿ ಲಕ್ಷಾಂತರ ರೂ. ಮೌಲ್ಯದ ಮೋಟಾರ್‌ಗಳು ಹಾಳಾಗಿವೆ. ಅಧಿಕಾರಿಗಳ ಭೇಟಿ: ಸ್ಥಳೀಯ ನಿವಾಸಿಗಳಾದ ಪರಶುರಾಮ್ ಹಾಗೂ ಇನ್ನಿತರರು ಸಮಸ್ಯೆಯ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ತಿಳಿಸಿದ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಸ್ಥಳಕ್ಕೆ ಬಂದ ಅಧಿಕಾರಿಗಳು ಜನರ ಸಮಸ್ಯೆಯನ್ನು ಆಲಿಸಿ, ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.

“ಸಾಧಾರಣವಾಗಿಯಾಗಲೀ, ಜೋರಾಗಿಯಾಗಲೀ ಮಳೆ ಬಂದರೆ ಸಾಕು ಇಲ್ಲಿ ಸಮಸ್ಯೆ ಉದ್ಭವಿಸುತ್ತದೆ. ಮನೆಯ ಒಳಗೆ ನೀರು ನುಗ್ಗುವುದರಿಂದ ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾಗುತ್ತಾರೆ. ನಗರಸಭೆ ಅಧಿಕಾರಿಗಳು ಇದೀಗ ಪರಿಶೀಲನೆ ನಡೆಸಿದ್ದಾರೆ. ಆದಷ್ಟು ಶೀಘ್ರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.”

-ಪರಶುರಾಮ್, ಸ್ಥಳೀಯ ನಿವಾಸಿ

” ಇಲ್ಲಿನ ಸಾಕಷ್ಟು ರಸ್ತೆಗಳು ಅವೈಜ್ಞಾನಿಕ ವಾಗಿ ನಿರ್ಮಾಣವಾಗಿವೆ. ಅಂತಹ ರಸ್ತೆಗಳನ್ನು ಗುರುತಿಸಿ ದುರಸ್ತಿ ಕಾಮ ಗಾರಿ ಆರಂಭಿಸಲಾಗಿದೆ. ಇದೀಗ ಸಮಸ್ಯೆ ಎದುರಾಗಿರುವ ಸ್ಥಳ ಪರಿಶೀಲನೆ ನಡೆಸಲಾಗಿದೆ. ಮುಂದಿನ ಒಂದೆರಡು ದಿನಗಳಲ್ಲಿ ಸಮಸ್ಯೆಯನ್ನು ಪರಿಹರಿಸಲಾಗುವುದು.”

-ಬಿ.ಎನ್.ಚಂದ್ರಶೇಖರ್, ಆಯುಕ್ತರು, ಹೂಟಗಳ್ಳಿ ನಗರಸಭೆ

Tags:
error: Content is protected !!