Mysore
23
haze

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಮಳೆ : ಕಂಟ್ರೋಲ್‌ ರೂಂಗೆ ದೂರುಗಳ ಸುರಿಮಳೆ

10 ದಿನಗಳಲ್ಲಿ ಬರೋಬ್ಬರಿ 372ದೂರುಗಳು ದಾಖಲು; ಸಮಸ್ಯೆ ಇತ್ಯರ್ಥ

ಎಚ್. ಎಸ್. ದಿನೇಶ್ ಕುಮಾರ್
ಮೈಸೂರು: ಮಳೆಗಾಲ ಹಾಗೂ ಸಾಮಾನ್ಯ ಸಂದರ್ಭ ಗಳಲ್ಲಿ ತುರ್ತು ಕಾರ್ಯನಿರ್ವಹಣೆಗಾಗಿ ಮಹಾನಗರಪಾಲಿಕೆ 24*7 ಕೆಲಸ ಮಾಡುವ ನಿಯಂತ್ರಣ ಕೊಠಡಿಯನ್ನು ತೆರೆದಿದೆ. ಮಳೆ ಆರಂಭವಾದ ಕಳೆದ ೧೦ ದಿನಗಳಲ್ಲಿ ಕಂಟ್ರೋಲ್ ರೂಂಗೆ ಬರೋಬ್ಬರಿ ೩೭೨ ಮಂದಿ ದೂರು ದಾಖಲಿಸಿ ಸಮಸ್ಯೆಗೆ ಪರಿಹಾರ ಕಂಡು ಕೊಂಡಿದ್ದಾರೆ.

ಈ ಮೊದಲಾದರೆ ಸ್ಥಳೀಯರು ಆಯಾ ವಾರ್ಡ್‌ನ ನಗರಪಾಲಿಕೆ ಸದಸ್ಯರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು. ಸದಸ್ಯರೂ ತಕ್ಷಣವೇ ಸ್ಪಂದಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ವಿಚಾರ ತಿಳಿಸಿ ಸಮಸ್ಯೆ ಯನ್ನು ಬಗೆಹರಿಸುತ್ತಿದ್ದರು. ಆದರೆ, ಕಳೆದ ಎರಡು ವರ್ಷಗಳಿಂದ ನಗರಪಾಲಿಕೆಗೆ ಚುನಾವಣೆ ನಡೆಯದ ಕಾರಣ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲ. ಇನ್ನು ಅಧಿಕಾರಿ ವರ್ಗ ಜನರಿಗೆ ಸ್ಪಂದಿಸುವುದು ತೀರಾ ಅಪರೂಪ. ಅವರು ಜನರ ಕೈಗೂ ಸಿಗುವುದಿಲ್ಲ. ದೂರವಾಣಿ ಸಂಪರ್ಕಕ್ಕೂ ದಕ್ಕುವುದಿಲ್ಲ. ಹೀಗಾಗಿ ಜನರಿಗೆ ಸದ್ಯಕ್ಕೆ ಆಶಾಕಿರಣದಂತಿರುವುದು ನಗರ ಪಾಲಿಕೆಯ ಕಂಟ್ರೋಲ್ ರೂಂ. ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ನಗರಪಾಲಿಕೆ ಈ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಪ್ರಸ್ತುತ ನಗರಪಾಲಿಕೆ ಕಂಟ್ರೋಲ್ ರೂಂನಲ್ಲಿ ಮೂರು ಪಾಳಿಗಳಲ್ಲಿ ೭ ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಲ್ಲಿ ಓರ್ವ ಅಂಗವಿಕಲರೂ ಇದ್ದಾರೆ.

ನಗರದಾದ್ಯಂತ ಒಳಚರಂಡಿ, ಮೋರಿ ಸ್ವಚ್ಛತೆ, ಬೀದಿ ದೀಪ, ನಾಯಿಗಳ ಕಾಟ, ಮರ ಬಿದ್ದಲ್ಲಿ, ರಸ್ತೆಯಲ್ಲಿ ನೀರು ಹರಿಯುತ್ತಿದ್ದಲ್ಲಿ, ಖಾಲಿ ನಿವೇಶನ ಸ್ವಚ್ಛಗೊಳಿಸ ಬೇಕಾದಲ್ಲಿ, ಕಸ ಸಂಗ್ರಹಣೆಗೆ ಪೌರಕಾರ್ಮಿಕರು ಬಾರದಿದ್ದಲ್ಲಿ ಸಾರ್ವಜನಿಕರು ಕಂಟ್ರೋಲ್ ರೂಂ ಸಿಬ್ಬಂದಿಯನ್ನು ಸಂಪರ್ಕಿಸಬಹುದಾಗಿದೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಅವರು ನಿಮ್ಮ ಹೆಸರು, ಮೊಬೈಲ್ ಸಂಖ್ಯೆಯನ್ನು ನಮೂದು ಮಾಡಿಕೊ ಳ್ಳುತ್ತಾರೆ. ನಂತರ ಸಂಬಂಧಪಟ್ಟ ವಲಯ ಕಚೇರಿ ಅಽಕಾರಿಗಳಿಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿ ತಕ್ಷಣವೇ ಸಂಬಂಧಪಟ್ಟವರನ್ನು ಸ್ಥಳಕ್ಕೆ ಕಳುಹಿಸುವಂತೆ ತಿಳಿಸುತ್ತಾರೆ. ಅದರಂತೆ ಕಳೆದ ೧೦ ದಿನಗಳಲ್ಲಿ ಯುಜಿಡಿ, ಮರ ಉರುಳಿರುವುದು, ಮೋರಿ ಸ್ವಚ್ಛತೆ ಬಗ್ಗೆ ಸುಮಾರು ೩೭೨ ಮಂದಿ ಸಾರ್ವಜನಿಕರು ದೂರು ದಾಖಲಿಸಿ ದ್ದಾರೆ.

ಉಳಿದಂತೆ ರಸ್ತೆ ಕೆಲಸ ಆಗಿಲ್ಲ, ರಸ್ತೆಗಳು ಗುಂಡಿ ಬಿದ್ದಿವೆ, ಮೋರಿ ಕುಸಿತ ಸೇರಿದಂತೆ ಮುಂತಾದ ಕಾರಣ ಗಳಿಗಾಗಿ ೭೦ಕ್ಕೂ ಹೆಚ್ಚು ಮಂದಿ ಕಂಟ್ರೋಲ್ ರೂಂಗೆ ದೂರು ನೀಡಿದ್ದಾರೆ. ಇವುಗಳನ್ನು ಅಲ್ಲಿನ ಸಿಬ್ಬಂದಿ ವಲಯ ಕಚೇರಿಗಳ ಇಂಜಿನಿಯರಿಂಗ್ ವಿಭಾಗಕ್ಕೆ ರವಾನಿಸಿದ್ದಾರೆ. ತಕ್ಷಣವೇ ಸಿಬ್ಬಂದಿ ಕಾರ್ಯ ಪ್ರವೃತ್ತರಾಗುತ್ತಿದ್ದಾರೆ.

ಸಮಸ್ಯೆಗಳಿದಲ್ಲಿ ತಿಳಿಸಿ
ಮಳೆಯಿಂದ ನಿಮ್ಮ ಬಡಾವಣೆಗಳಲ್ಲಿ ಹಾಗೂ ತಗ್ಗು ಪ್ರದೇಶಗಳಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ಹಾಗೂ ಅನಾಹುತಗಳ ಕುರಿತು ಚಿತ್ರ ಸಹಿತ ‘ಆಂದೋಲನ’ ಪತ್ರಿಕೆಗೆ ಕಳುಹಿಸಿ ಆ ಮೂಲಕ ಪರಿಹಾರ ಕಂಡುಕೊಳ್ಳಬಹುದು. 9071777071

Tags:
error: Content is protected !!