ಎಚ್. ಡಿ. ಕೋಟೆ: ಮುಖ್ಯೋಪಾಧ್ಯಾಯರ ಅಸಭ್ಯ ವರ್ತನೆ ವಿರುದ್ಧ ಎಸ್‌ಡಿಎಂಸಿ ಸದಸ್ಯರು ಮತ್ತು ಪೋಷಕರು, ವಿದ್ಯಾರ್ಥಿಗಳು ತರಗತಿಯನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಲಲಿತಮ್ಮ ಎಂಬವರು ಮೂರು ತಿಂಗಳಿನಿಂದಲೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ನಿಂದಿಸುತ್ತಿದ್ದಾರೆ. ೭೦,೦೦೦ರಿಂದ ೮೦,೦೦೦ ರೂ. ಅನುದಾನವನ್ನು ದುರುಪಯೋಗಪಡಿಸಿ ಕೊಂಡು ಮೂಲಸೌಕರ್ಯಗಳನ್ನು ವಂಚಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಯ್ಯ ಶಾಲೆಗೆ ಭೇಟಿ ನೀಡಿ ಪ್ರತಿಭಟನಾಕಾರರು, ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರ ಜೊತೆ ಸಭೆ ನಡೆಸಿದರು. ಈ ವೇಳೆ ಮುಖ್ಯೋಪಾಧ್ಯಾಯರಾದ ಲಲಿತಮ್ಮ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಎಸ್ ಡಿಎಂಸಿ ಸದಸ್ಯರಿಗೆ ನಾನು ಬೇಡವೆಂದರೆ ಒಂದು ತಿಂಗಳು ರಜಾ ಹಾಕಿಕೊಂಡು ಆನಂತರ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತೇನೆ. ಮಮತಾ ಎಂಬವರಿಗೆ ನನ್ನ ಅಧಿಕಾರವನ್ನು ವಹಿಸುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್, ಸದಸ್ಯರಾದ ಪ್ರಸನ್ನ, ತಿಲಕ್‌ರಾಜ್, ವೆಂಕಟೇಶ್, ಡೇವಿಡ್, ಜ್ಯೋತಿ, ಶಿವಲಿಂಗಪ್ಪ, ನೇರಳೆ ಪ್ರಕಾಶ್, ಗೋವಿಂದರಾಜು, ಶೀತ, ಬಸವರಾಜು, ಸುರೇಂದ್ರ, ಭಾನುಪ್ರಕಾಶ್, ರಾಜು, ರೂಪಶ್ರೀ, ಮೇರಿ ಹಾಜರಿದ್ದರು.