Mysore
16
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ʼಆಶಾಗಳಿಗೆ ಗೌರವಧನ ಬಿಡುಗಡೆ ಪ್ರಕ್ರಿಯೆ ಆರಂಭʼ

dinesh gundurao

ಆಂದೋಲನಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಸಚಿವ ದಿನೇಶ್‌ ಗುಂಡೂರಾವ್‌  ಭರವಸೆ

– ರಶ್ಮಿ ಕೋಟಿ

‘ಆಶಾ ಧ್ವನಿ’ ಸರಣಿಯ ಕೊನೆಯ ಭಾಗವಾಗಿ‘ಆಂದೋಲನ’ ನಡೆಸಿದ ವಿಶೇಷ ಸಂದರ್ಶನದಲ್ಲಿ ಆಶಾ ಕಾರ್ಯಕರ್ತೆಯರ ಸಮಸ್ಯೆಗಳನ್ನು ಪರಿಹರಿಸುವ
ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಮ್ಮಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಆಂದೋಲನ: ಆಶಾಗಳ ಗೌರವಧನವನ್ನು ಹೆಚ್ಚಿಸುವುದಾಗಿ ಆಶ್ವಾಸನೆ ನೀಡಿದ್ದೀರಿ. ಅದನ್ನು ಏಪ್ರಿಲ್ನಿಂದಲೇ ಜಾರಿ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ. ಇದು ಸಾಧ್ಯವೇ?

ದಿನೇಶ್ ಗುಂಡೂರಾವ್: ರಾಜ್ಯ ಸರ್ಕಾರದಿಂದ ಆಶಾ ಕಾರ್ಯಕರ್ತರಿಗೆ 5,000 ರೂ. ಹಾಗೂ ಕೇಂದ್ರ ಸರ್ಕಾರದಿಂದ 2,000 ರೂ. ನೀಡಲಾಗುತ್ತಿತ್ತು. ಕಳೆದ ಜನವರಿಯಲ್ಲಿ ಆಶಾಗಳ ಮನವಿಗೆ ಸ್ಪಂದಿಸಿ ಎಲ್ಲಾ ಆಶಾಗಳಿಗೆ ಕನಿಷ್ಠ 10,000 ರೂ. ಗೌರವಧನವನ್ನು ನೀಡುವುದಾಗಿ ಘೋಷಿಸಿದ್ದೇವೆ. ಅದನ್ನು ಏಪ್ರಿಲ್‌ನಿಂದಲೇ ಜಾರಿ ಗೊಳಿಸಲು ಅಗತ್ಯವಾದ ಎಲ್ಲ ಪ್ರಕ್ರಿಯೆಗಳನ್ನೂ ಈಗಾಗಲೇ ಪ್ರಾರಂಭಿಸಿದ್ದೇವೆ.

ಆಂದೋಲನ: ಹೆಚ್ಚಿನ ಆಶಾಗಳು ಸ್ಮಾರ್ಟ್ ಫೋನ್ ಹಾಗೂ ಡೇಟಾ ಅಲಭ್ಯದಿಂದ ತೊಂದರೆಗೊಳಗಾಗುತ್ತಿದ್ದಾರೆ. ಈ ಸಮಸ್ಯೆಯನ್ನು ಹೇಗೆ ಬಗೆಹರಿಸಲಿದ್ದೀರಿ?

ದಿನೇಶ್ ಗುಂಡೂರಾವ್: ಈಗಾಗಲೇ 38 ಸಾವಿರ ಆಶಾ ಕಾರ್ಯಕರ್ತೆಯರ ಬಳಿ ಸ್ಮಾರ್ಟ್ ಫೋನ್ ಇದೆ. ಹಾಗಾಗಿ “ಬ್ರಿಂಗ್ ಯುವರ್ ಓನ್ ಡಿವೈಸ್”
ಕಾರ್ಯಕ್ರಮದಡಿ ಪ್ರತಿಯೊಬ್ಬ ಆಶಾ ಕಾರ್ಯಕರ್ತೆ ಯರಿಗೂ ತಿಂಗಳಿಗೆ 280 ರೂ. ಪ್ರೋತ್ಸಾಹಧನವನ್ನು ಕೊಡುತ್ತೇವೆ. ಸ್ಮಾರ್ಟ್‌ಫೋನ್‌ ಇಲ್ಲದ ಆಶಾ
ಕಾರ್ಯಕರ್ತೆಯರಿಗೆ ತಿಂಗಳಿಗೆ 550 ರೂ. ನಂತೆ ಪ್ರೋತ್ಸಾಹಧನವನ್ನು ಕೊಡಲಾಗುವುದು.

ಆಂದೋಲನ: ಮೊಬೈಲ್‌ನಿಂದ ಅಪ್‌ಡೇಟ್‌ ಮಾಡಲು ಅಸಮರ್ಥರಾದವರಿಗೆ ಪರ್ಯಾಯ ವ್ಯವಸ್ಥೆ ಏನು?

ದಿನೇಶ್ ಗುಂಡೂರಾವ್: ಈ ಸಮಸ್ಯೆ ಪರಿಹಾರಕ್ಕಾಗಿ ಎಲ್ಲ ಆಶಾ ಕಾರ್ಯಕರ್ತೆಯರಿಗೂ ಮೊಬೈಲ್‌ನಿಂದ ಜಾಲತಾಣದಲ್ಲಿ ತಮ್ಮ ತಮ್ಮ ಕೆಲಸಗಳನ್ನು ತಾವೇ ಅಪ್ಲೋಡ್ ಮಾಡುವಂತೆ ತರಬೇತಿ ನೀಡಲಾಗುವುದು.

ಆಂದೋಲನ: ಆರೋಗ್ಯ ಸೇವೆಗೆಂದು ನೇಮಕ ಮಾಡಿಕೊಂಡು ಅವರಿಂದ ಅನೇಕ ಸರ್ವೆಗಳನ್ನು ಮಾಡಿಸಲಾಗುತ್ತಿದೆ. ಇದು ಸರಿಯೇ?

ದಿನೇಶ್ ಗುಂಡೂರಾವ್: ಆಶಾಗಳು ಮಾಡುವ ಪ್ರತಿಯೊಂದು ಹೆಚ್ಚುವರಿ ಕೆಲಸಗಳನ್ನು ಜಾಲತಾಣದಲ್ಲಿ ತಪ್ಪದೇ ನಮೂದಿಸಬೇಕು. ಅದಕ್ಕೆ ಅನುಗುಣವಾಗಿ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ.

ಆಂದೋಲನ: ಇಡೀ ಸಮಾಜದ ಸ್ವಾಸ್ಥ್ಯ ಕಾಪಾಡುವ ಆಶಾಗಳು ತೀವ್ರವಾದ ಅನಾರೋಗ್ಯಕ್ಕೆ ಒಳಗಾದಾಗ ಅವರ ಚಿಕಿತ್ಸೆಗೆ ಸರ್ಕಾರ ಯಾವ ರೀತಿ ಸ್ಪಂದಿಸಲಿದೆ?

ದಿನೇಶ್ ಗುಂಡೂರಾವ್: ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗುವವರ ಪರಿಸ್ಥಿತಿಯನ್ನು ಪರಿಶೀಲಿಸಿ ಅವರಿಗೆ ಬೇಕಾದ ಸಹಾಯಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ.

ಆಂದೋಲನ: ಆರ್.ಸಿ.ಎಚ್. ಪೋರ್ಟಲ್‌ನಲ್ಲಿ  ಲೋಪದೋಷಗಳಿರುವುದರಿಂದ ಅದನ್ನು ರದ್ದು ಮಾಡಬೇಕು ಎಂಬ ಒತ್ತಾಯ ಇದೆಯಲ್ಲ?

ದಿನೇಶ್ ಗುಂಡೂರಾವ್: ಅದಕ್ಕೆ ನಮ್ಮ ಸಹಮತವಿಲ್ಲ. ಏಕೆಂದರೆ ಅದನ್ನು ರದ್ದು ಮಾಡಿದರೆ ನಮಗೆ ಆಶಾಗಳು ಮಾಡಿರುವ ಕೆಲಸದ ಡೇಟಾ ಸಿಗುವುದಿಲ್ಲ. ಆರ್.ಸಿ.ಎಚ್. ಪೋರ್ಟಲ್‌ನಿಂದಾಗಿ ಸಮಯದ ಉಳಿತಾಯ ಹಾಗೂ ನಕಲಾಗುವಿಕೆಯನ್ನು ತಪ್ಪಿಸುವುದು. ಅನುದಾನದ ಸದ್ಬಳಕೆ ಆಗಬೇಕು ಎಂಬ ಕಾರಣದಿಂದ ಆಶಾ ನಿಧಿ ತಂತ್ರಾಂಶದ ಜೊತೆಗೆ ಆರ್.ಸಿ.ಎಚ್. ಜಾಲತಾಣವನ್ನು ವಿಲೀನ ಮಾಡುತ್ತಿದ್ದೇವೆ. ಪ್ರಸ್ತುತ ಜಾಲತಾಣದಲ್ಲಿ
ಯಾವುದೇ ತಾಂತ್ರಿಕ ತೊಡಕುಗಳಿಲ್ಲ. ಒಂದು ವೇಳೆ ತೊಡಕುಗಳು ಕಂಡುಬಂದಲ್ಲಿ ನಮ್ಮ ಗಮನಕ್ಕೆ ತಂದರೆ, ಅದನ್ನು ಸರಿಪಡಿಸಲಾಗುವುದು.

ಆಂದೋಲನ: 60ನೇ ವಯಸ್ಸಿಗೆ ಸೇವಾ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಇಡುಗಂಟನ್ನು ಹೆಚ್ಚಿಸಬೇಕೆಂಬ ಆಗ್ರಹ ಇದೆಯಲ್ಲಾ?

ದಿನೇಶ್ ಗುಂಡೂರಾವ್: ಅದು ಇನ್ನೂ ಚರ್ಚೆಯ ಹಂತದಲ್ಲಿದೆ. ಕಾರ್ಮಿಕ ಇಲಾಖೆಯೊಂದಿಗೂ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ. ಹತ್ತು ವರ್ಷಗಳಿಗೂ ಮೇಲ್ಪಟ್ಟು ಕಾರ್ಯ ನಿರ್ವಹಿಸಿರುವ ಆಶಾಗಳಿಗೆ ಅವರು ಕರ್ತವ್ಯದಿಂದ ಬಿಡುಗಡೆಗೊಂಡ ಸಂದರ್ಭದಲ್ಲಿ 20 ಸಾವಿರ ರೂ. ಇಡುಗಂಟು ದೊರೆಯಲಿದೆ.

  • ಆಶಾಗಳಿಗೆ ಏಪ್ರಿಲ್‌ನಿಂದಲೇ  ಕನಿಷ್ಠ 10,000  ರೂ. ಗೌರವಧನ.
  • ಸ್ಮಾರ್ಟ್‌ಫೋನ್‌ಇಲ್ಲದ ಆಶಾಗಳಿಗೆ ತಿಂಗಳಿಗೆ 550 ರೂ. ಪ್ರೋತ್ಸಾಹ ಧನ.
  • ಆಶಾ ನಿಧಿ ತಂತ್ರಾಂಶದ ಜೊತೆಗೆ ಆರ್.ಸಿ.ಎಚ್. ಜಾಲತಾಣ ವಿಲೀನ.
  • ಎಲ್ಲ ಆಶಾಗಳಿಗೂ ಮೊಬೈಲ್ನಲ್ಲಿ ಕೆಲಸ ಅಪ್ಲೋಡ್ ಮಾಡುವ ತರಬೇತಿ.

ಆಶಾ ಕಾರ್ಯಕರ್ತೆಯರಿಗೆ ಆಯವ್ಯಯದಲ್ಲಿ ಘೋಷಿಸಿರುವ ಗೌರವಧನ ಹೆಚ್ಚಳವನ್ನು ಏಪ್ರಿಲ್ ತಿಂಗಳಿನಿಂದಲೇ ಬಿಡುಗಡೆಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ಅಲ್ಲದೆ, ಅವರು ಮಾಡುವ ಹೆಚ್ಚುವರಿ ಸೇವೆಗೆ ಅನುಗುಣವಾಗಿ ಪ್ರೋತ್ಸಾಹಧನವನ್ನು ನೀಡಲಾಗುವುದು.

-ದಿನೇಶ್ ಗುಂಡೂರಾವ್, ಸಚಿವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.

 

 

Tags:
error: Content is protected !!