Mysore
24
clear sky

Social Media

ಶನಿವಾರ, 24 ಜನವರಿ 2026
Light
Dark

ಒಣ ಮರಗಳ ತೆರವು ಆಗಲಿ : ಜನರ ಸಂಚಾರ ನಿರಾಳವಾಗಲಿ

dried tree

ಪ್ರಶಾಂತ್ ಎಸ್.

ಮೈಸೂರು: ಮಳೆಗಾಲ ಆರಂಭವಾದರೆ ನಗರ ಪ್ರದೇಶಗಳಲ್ಲಿ ಒಳ ಚರಂಡಿಗಳಿಂದ ನೀರು ಹೊರಗೆ ಹರಿಯುವುದು, ರಸ್ತೆಗಳು ಜಲಾವೃತವಾಗುವುದು, ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭಯ. . . ಹೀಗೆ ಸಾರ್ವಜನಿಕರಿಗೆ ಹತ್ತು- ಹಲವು ತೊಂದರೆಗಳು ಉಂಟಾಗುತ್ತವೆ. ಇದೇ ರೀತಿ ಒಣಗಿದ ಮರಗಳು, ಕೊಂಬೆಗಳ ಸಮಸ್ಯೆಯೂ ಇದೆ. ಜೋರು ಮಳೆ- ಗಾಳಿಗೆ ಒಣ ಮರಗಳು ನೆಲಕ್ಕುರುಳುವುದು ಸಹಜ. ಅದರಿಂದ ಸಾರ್ವಜನಿಕರು ಅಪಾಯಕ್ಕೆ ಸಿಲುಕುವ ಸಾಧ್ಯತೆಗಳು ಇವೆ.

ನಗರದ ಸರಸ್ವತಿಪುರಂ, ಆರ್‌ಟಿಒ ವೃತ್ತ, ರಾಮಸ್ವಾಮಿ ವೃತ್ತ, ಮಹಾರಾಜ ವಿದ್ಯಾರ್ಥಿನಿಲಯ, ಹಳೆಯ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಹಲವೆಡೆ ಸುಮಾರು ೪೦ ರಿಂದ ೫೦ ಮರಗಳು ಒಣಗಿದ್ದು, ಧರೆಗುರುಳುವ ಹಂತ ದಲ್ಲಿವೆ. ಈ ಮರಗಳಿರುವ ದಾರಿಯಲ್ಲಿ ಸಾರ್ವಜನಿಕರು, ವಾಹನಗಳ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಯಾವ ಗಳಿಗೆಯಲ್ಲಿ ಮರಗಳು, ಕೊಂಬೆ ಗಳು ನಮ್ಮ ಮೇಲೆ ಉರುಳಿ ಬಿದ್ದು ಬಿಡುತ್ತವೋ ಎಂಬ ಆತಂಕದಿಂದಲೇ ಜನರು ಓಡಾಡುವಂತಾಗಿದೆ.

ಪ್ರತಿವರ್ಷ ನಗರಪಾಲಿಕೆ ವತಿಯಿಂದ ಮಳೆಗಾಲಕ್ಕೂ ಮುಂಚಿತವಾಗಿಯೇ ಒಣಗಿದ ಮರ, ಕೊಂಬೆಗಳನ್ನು ಗುರುತಿಸಿ ಅವನ್ನು ತೆರವುಗೊಳಿಸಲಾಗುತ್ತಿತ್ತು. ಆದರೆ ಈ ಬಾರಿ ದುಸ್ಥಿತಿಯಲ್ಲಿರುವ ಮರಗಳನ್ನು ಗುರುತಿಸುವ ಕೆಲಸ ಕೂಡ ಆಗಿಲ್ಲ. ಅದರಿಂದ ಜೋರು ಮಳೆಗೆ ಮರಗಳು ಬಿದ್ದು, ಅನಾಹುತ ಸಂಭವಿ ಸಬಹುದಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಾರಿ ಮಳೆ ವಾಡಿಕೆಗಿಂತ ಮೊದಲೇ ಪ್ರಾರಂಭವಾಗಿರುವುದು ಪಾಲಿಕೆ ಯಿಂದ ಒಣಮರಗಳು ಅಥವಾ ಕೊಂಬೆಗಳನ್ನು ತೆರವು ಮಾಡುವುದಕ್ಕೆ ಅಡ್ಡಿಯಾಗಿರಬಹುದು. ಆದರೆ, ಮಳೆಗಾಲ ಶುರುವಾಗುವವರೆಗೂ ಕಾಯುವ ಅಗತ್ಯ ಇಲ್ಲ. ಬೇಸಿಗೆಯ ಕೊನೆಯಲ್ಲೇ ನಗರಪಾಲಿಕೆ ತೆರವುಗೊಳಿ ಸಲು ಕ್ರಮವಹಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ.

ನಗರದಲ್ಲಿರುವ ಒಣಗಿದ ಮರಗಳು, ಕೊಂಬೆಗಳನ್ನು ಗುರುತಿಸಿ ಕಟಾವು ಮಾಡಲು ರೆಂಬೆ – ಕೊಂಬೆಗಳನ್ನು ಟ್ರಿಮ್ ಮಾಡಲು ಅನುಮತಿ ನೀಡುವಂತೆ ನಗರಪಾಲಿಕೆಯಿಂದ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಆದರೆ, ನಗರಪಾಲಿಕೆ ಅಧಿಕಾರಿಗಳು ಈ ವರ್ಷ ಒಣಗಿದ ಮರಗಳನ್ನು ಸರ್ವೆ ಮಾಡುವುದಕ್ಕೆ ಮುಂದಾಗಿಲ್ಲ. ನಗರದ ಹಲವೆಡೆ ೫೦ಕ್ಕೂ ಹೆಚ್ಚು ಮರಗಳು, ಕೊಂಬೆಗಳು ಒಣಗಿ ನಿಂತಿದ್ದು, ಯಾವ ಕ್ಷಣದಲ್ಲಾದರೂ ಬೀಳುವ ಹಂತದಲ್ಲಿವೆ ಎನ್ನಲಾಗಿದೆ.

ಜನರಿಗೆ ಅಪಾಯವಾದರೆ ಯಾರು ಹೊಣೆ? : ಕಳೆದ ಬೇಸಿಗೆಯ ಬಿಸಿಲಿನ ತಾಪಮಾನದಿಂದ ನಗರದ ಬಹುತೇಕ ಮರಗಳೆಲ್ಲ ಒಣಗಿವೆ. ತೇವಾಂಶ ಇಲ್ಲದೆ ರೆಂಬೆಕೊಂಬೆಗಳು ಮುರಿದು ಬೀಳುವ ಹಂತಕ್ಕೆ ತಲುಪಿವೆ. ಆ ಮೂಲಕ ಅವು ಜನರ ಪಾಲಿಗೆ ಅಪಾಯಕಾರಿ ಯಾಗುವ ಸಾಧ್ಯತೆಗಳಿವೆ.

ಜೋರಾದ ಮಳೆ ಸುರಿದರೆ ಅಥವಾ ಗಾಳಿ ಬೀಸಿದರೆ ಉಳಿಯುವ ಸಾಧ್ಯತೆ ಇಲ್ಲ . ಅದರಿಂದ ಜನರ ಪ್ರಾಣ, ಆಸ್ತಿ-ಪಾಸ್ತಿಗೆ ಹಾನಿಯಾ ದರೆ ಯಾರು ಹೊಣೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಇತ್ತೀಚೆಗೆ ಬಿದ್ದ ಮಳೆ ಯಿಂದ ದುರ್ಬಲ ಮರಗಳ ರೆಂಬೆ-ಕೊಂಬೆಗಳು ಆಟೋ, ಬಸ್, ಮನೆ ವಾಹನಗಳ ಮೇಲೆ ಬಿದ್ದು ಸಾಕಷ್ಟು ಅವಾಂತರ ಸೃಷ್ಟಿಸಿದೆ. ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂಬುದು ಸಮಾ ಧಾನಕರ ಅಂಶ. ಆದರೂ ನಗರ ಪಾಲಿಕೆ ಹಾಗೂ ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಜನರು ಭಯದಲ್ಲೇ ಬದುಕು ವಂತಾಗಿದೆ ಎಂಬ ದೂರುಗಳು ಕೇಳಿಬಂದಿವೆ.

ನಗರಪಾಲಿಕೆ, ಅರಣ್ಯ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವ ಹಿಸುವುದು ಅಗತ್ಯ. ಮಳೆ ಇನ್ನೂ ಬಿರುಸು ಪಡೆದುಕೊಳ್ಳುವ ಮುಂಚೆಯೇ ಒಣಗಿರುವ ಮರಗಳು, ಕೊಂಬೆಗಳನ್ನು ತೆರವುಗೊಳಿಸಲು ನಗರಪಾಲಿಕೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಸಮಸ್ಯೆಗಳಿದ್ದಲ್ಲಿ ತಿಳಿಸಿ
ಮಳೆಯಿಂದ ನಿಮ್ಮ ಬಡಾವಣೆಗಳಲ್ಲಿ ಹಾಗೂ ತಗ್ಗು ಪ್ರದೇಶಗಳಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ಹಾಗೂ ಅನಾಹುತಗಳ ಕುರಿತು ಚಿತ್ರ ಸಹಿತ ‘ಆಂದೋಲನ’ ಪತ್ರಿಕೆಗೆ ಕಳುಹಿಸಿ ಆ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಮೊ.ಸಂ ; 9071777071

Tags:
error: Content is protected !!