Mysore
26
scattered clouds

Social Media

ಸೋಮವಾರ, 26 ಜನವರಿ 2026
Light
Dark

ಬೆಲೆ ಏರಿಕೆ; ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ

ವಿದ್ಯುತ್‌, ಹಾಲು, ಟೋಲ್‌, ಮುದ್ರಾಂಕ, ಟಿಸಿ ಶುಲ್ಕ ಹೆಚ್ಚಳಕ್ಕೆ ಖಂಡನೆ

-ಮಹೇಂದ್ರ ಹಸಗೂಲಿ

ಗುಂಡ್ಲುಪೇಟೆ: ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಅಧಿಕಾರಕ್ಕೆ ಬಂದು ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಮಾಡುತ್ತಾ ಬಡವರ್ಗದ ಜನರ ಸುಲಿಗೆ ಮಾಡುತ್ತಿದೆ ಎಂದು ಜನಸಾಮಾನ್ಯರು ಆಕ್ರೋಶ ಹೊರಹಾಕಿದ್ದಾರೆ.

ಉಪನೋಂದಣಿ ಶುಲ್ಕ, ಬಸ್ ಪ್ರಯಾಣ ದರ ಹೆಚ್ಚಳ, ಮೆಟ್ರೋ ಪ್ರಯಾಣ ದರ ಹೆಚ್ಚಳ, ಪಹಣಿ, ಟಿಸಿ ಖರೀದಿ, ಹಾಲಿನ ದರಗಳನ್ನು ಹೆಚ್ಚಿಸಿರುವುದರಿಂದ ಜನರು, ರೈತರಿಗೆ ಹೊರೆಯಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಮಂಗಳವಾರದಿಂದ ಮುದ್ರಾಂಕ ಶುಲ್ಕ 50 ರೂ. ನಿಂದ 500 ರೂ. ವರೆಗೆ ಏರಿಕೆಯಾಗುವುದರಿಂದ ಅಫಿಡವಿಟ್ ಶುಲ್ಕ 20
ರೂ.ನಿಂದ 100 ರೂ.ವರೆಗೆ ಹೆಚ್ಚಳವಾಗಲಿದೆ. ಟಿಸಿ ಪರಿಶೀಲನೆ ನವೀಕರಣ ಶುಲ್ಕ ಸಾವಿರ ರೂ. ಒಳಗಿದ್ದದ್ದು ಈಗ 8 ಸಾವಿರ ರೂ.
ವರೆಗೂ ಏರಿಕೆ ಯಾಗಿದೆ. ಇದರಿಂದ ರೈತರಿಗೆ ತೊಂದರೆಯಾಗಿದೆ.

ವಿದ್ಯುತ್ ದರ ಪ್ರತಿ ಯುನಿಟ್‌ಗೆ 36 ಪೈಸೆ ಹೆಚ್ಚಳ ಮಾಡಲಾಗಿದೆ. ಇನ್ನೊಂದು ಕಡೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯನ್ನು ಕೂಡ ಮಾಡುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.

ಸರ್ಕಾರ ಬೆಲೆ ಏರಿಕೆ ಮಾಡುತ್ತ ಜನರ ಜೀವ ಹಿಂಡುತ್ತಿದೆ. ಜಮೀನು ಮಾರಲು, ಖರೀದಿಸಲು ದುಪ್ಪಟ್ಟು ಬೆಲೆ, ಸಣ್ಣಪುಟ್ಟದಕ್ಕೂ ಬಡವರಿಗೆ ವಿವಿಧ ಇಲಾಖೆಗಳಲ್ಲಿ ಅಫಿಡವಿಟ್ ಕೇಳುತ್ತಾರೆ. ಈಗ ಮುದ್ರಾಂಕ ಶುಲ್ಕ ಹೆಚ್ಚಳವಾಗಿದೆ. ಟಿಸಿ ನವೀಕರಣ ಶುಲ್ಕ ಏರಿಕೆ ಮಾಡಿರುವುದರಿಂದ ರೈತರಿಗೆ ತೊಂದರೆಯಾಗಿದೆ. ಟೋಲ್ ಹೆಚ್ಚಳದಿಂದ ಮೈಸೂರಿಗೆ ಹೋಗಲು ಬಸ್ ಪ್ರಯಾಣ ದರದಷ್ಟೇ ಟೋಲ್ ಕಟ್ಟಬೇಕಿದೆ. ಒಟ್ಟಾರೆ ರಾಜ್ಯವನ್ನು ದಿವಾಳಿ ಮಾಡುವತ್ತ ಸರ್ಕಾರ ಹೆಜ್ಜೆ ಹಾಕಿದೆ.

-ಎಚ್.ಎಂ.ನಂದೀಶ್, ಪ್ರಗತಿಪರ ರೈತ, ಹಂಗಳ

ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಉಚಿತ ಯೋಜನೆ ಆಶ್ವಾಸನೆ ನೀಡಿ ಬೆಲೆ ಏರಿಕೆ ಮಾಡಿ ಕೂಲಿ ಕಾರ್ಮಿಕರು, ಬಡವರು ಬದುಕದಂತೆ ಮಾಡಿದೆ. ಇದು ಬಡವರ ವಿರೋಧಿ ಸರ್ಕಾರವಾಗಿದ್ದು, ಹಾಲು, ವಿದ್ಯುತ್ ದರ ಏರಿಕೆ ಮಾಡಿ ತೊಂದರೆ ನೀಡುತ್ತಿದೆ.

-ಮುನೀರ್ ಪಾಷ, ಕರುನಾಡು ಯುವಶಕ್ತಿ ಸಂಘಟನೆ ಅಧ್ಯಕ್ಷ.

 

Tags:
error: Content is protected !!