Mysore
28
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

‘ಕತ್ತಲ ಜಗತ್ತುʼ ಪುಸ್ತಕದಲ್ಲಿ ಪ್ರತಾಪ್‌ ಸಿಂಹ ಬಣ್ಣ ಬಯಲು

ಮೈಸೂರು: ‘ಕತ್ತಲೆ ಜಗತ್ತು’ ಪುಸ್ತಕ ಬಿಡುಗಡೆಯಾದರೆ ತಮ್ಮ ನಿಜ ಬಣ್ಣ ಬಯಲಾಗುತ್ತದೆ ಎಂಬ ಭಯದಿಂದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು, ಮೇಲ್ಮನವಿ ಸಲ್ಲಿಸಿ ನ್ಯಾಯಾಲಯದ ಅನುಮತಿ ಪಡೆದು ಪುಸ್ತಕ ಬಿಡುಗಡೆಗೊಳಿಸುತ್ತೇವೆ ಎಂದು ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ ಮೈ. ಕಾ. ಪ್ರೇಮ್‌ಕುಮಾರ್ ತಿಳಿಸಿದರು.

ನಗರದ ದಿ ಇನ್‌ಸ್ಟಿಟ್ಯೂಷನ್ ಆ- ಇಂಜಿನಿಯರ‍್ಸ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವೀಣ್ ಕುಮಾರ್ ಮಾವಿನಕಾಡು ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ಅಲ್ಲಿ ದೊರೆತ ದಾಖಲೆ ಇಟ್ಟುಕೊಂಡು ಪುಸ್ತಕ ಬರೆದಿದ್ದಾರೆ. ಪುಸ್ತಕ ಬಿಡುಗಡೆಗೆ ಮೊದಲೇ ತಡೆಯಾಜ್ಞೆ ತಂದಿರುವುದು ನಾಚಿಕೆಗೇಡಿನ ವಿಚಾರ ಎಂದರು. ಯಾವ ಕಾರಣಕ್ಕೆ ಅವರಿಗೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿತು ಎಂಬ ಅಂಶಗಳನ್ನು ಪುಸ್ತಕ ತೆರೆದಿಡಲಿದೆ. ಅವರ ಕುರಿತ ಹಲವಾರು ವಿಷಯಗಳಿರುವ ‘ಕತ್ತಲೆ ಜಗತ್ತು’ ಪುಸ್ತಕ ಹೊರಬಂದರೆ ತಮ್ಮ ನಿಜವಾದ ಬಣ್ಣ ಬಯಲಾಗುತ್ತದೆ ಎನ್ನುವ ಕಾರಣಕ್ಕಾಗಿಯೇ ತಡೆಯಾಜ್ಞೆ ತಂದಿದ್ದಾರೆ ಎಂದು ಆರೋಪಿಸಿದರು. ಮೈಸೂರು ಬಿಜೆಪಿ ನಾಯಕರೊಳಗಿನ ಬೇಗುದಿಗೆ ಪ್ರತಾಪ್ ಸಿಂಹ ಕಾರಣ. ಹುಣಸೂರಿನಲ್ಲಿ ಶಾಂತಿಯುತವಾಗಿ ನಡೆ ಯುತ್ತಿದ್ದ ಹನುಮ ಜಯಂತಿಯು ಇವರ ಪ್ರವೇಶದ ಬಳಿಕ ಹಿಂದೂ, ಮುಸ್ಲಿಂ ಜಗಳದ ಕೇಂದ್ರ ಬಿಂದುವಾಯಿತು.

ಅಲ್ಲಿ ಅವರ ವಿರುದ್ಧ ದಾಖಲಾದ ಪ್ರಕರಣ ತೆಗಿಸಿದರು. ಆದರೆ, ಯುವಕರಿಬ್ಬರ ಮೇಲೆ ದಾಖಲಾದ ಗೂಂಡಾ ಕಾಯ್ದೆಯನ್ನು ಯಾರು ತೆಗೆಸುತ್ತಾರೆ ಎಂದು ಪ್ರಶ್ನಿಸಿದರು. ಪತ್ರಿಕಾಗೋಷ್ಠಿಗಳಲ್ಲಿ ಮುಸ್ಲಿಮರು ತಲವಾರ್ ಹಿಡಿದರೆ ಹಿಂದೂ ಯುವಕರು ಅದನ್ನೇ ಅನುಸರಿಸಬೇಕಾಗುತ್ತದೆ ಎಂದು ಪ್ರಚೋದನೆ ನೀಡುತ್ತಾರೆ. ಆದರೆ, ಅವರ ರಕ್ಷಣೆ ಮಾಡಿದ್ದಾರೆಯೇ? ಉಪ ಚುನಾವಣೆಯ ಪ್ರಚಾರಕ್ಕೆ ಕರೆಯದಿದ್ದರೂ ತೆರಳಿ, ಮುಸ್ಲಿಮರಿಗೆ ಬೈದು ಪರೋಕ್ಷವಾಗಿ ಕಾಂಗ್ರೆಸ್ ಏಜೆಂಟ್‌ರಂತೆ ವರ್ತಿಸಿದ್ದಾರೆ. ರಾಜ್ಯಾಧ್ಯಕ್ಷರು ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ, ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ತಾಕೀತು ಮಾಡಬೇಕು ಎಂದು ಒತ್ತಾಯಿಸಿದರು. ಸಂಸತ್‌ನಲ್ಲಿ ಸ್ಮೋಕ್ ಬಾಂಬ್ ಸಿಡಿಸಿದ ಯುವಕರಿಗೆ ಪಾಸ್ ಕೊಡಿಸಿ ನರೇಂದ್ರ ಮೋದಿ ತಲೆ ತಗ್ಗಿಸುವಂತೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಪ್ರತಾಪ್ ಸಿಂಹ ಅವರಿಗೂ ಯುವಕರಿಗೂ ಇರುವ ಸಂಬಂಧದ ಬಗ್ಗೆ ತನಿಖೆಯಾಗಬೇಕು. ಈಗಾಗಲೇ ಅವರು ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದುಕೊಂಡು ಓಡಾಡುತ್ತಿದ್ದು, ತಾಕತ್ತಿದ್ದರೆ ನರಸಿಂಹ ರಾಜ ಕ್ಷೇತ್ರದಲ್ಲಿ ನಿಂತು ಗೆದ್ದು ತೋರಿಸಲಿ ಎಂದು ಸವಾಲೆಸೆದರು. ಮೈಸೂರು ರಕ್ಷಣಾ ವೇದಿಕೆಯ ಉಪಾಧ್ಯಕ್ಷ ಕುಮಾರ್ ಗೌಡ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Tags: