Mysore
15
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ಅಪರಾಧ ತಡೆಗೆ ಶಸ್ತ್ರ ಸಹಿತ ರಸ್ತೆಗಿಳಿದ ಪೊಲೀಸರು

ಸಂಚಾರ ನಿಯಮ ಉಲ್ಲಂಘಿಸುವವರ ಮೇಲೂ ನಿಗಾ

ಎಚ್.ಎಸ್‌ ದಿನೇಶ್‌ ಕುಮಾರ್‌
ಮೈಸೂರು: ಅಪರಾಧ ಪ್ರಕರಣಗಳು, ಸಂಚಾರ ನಿಯಮ ಉಲ್ಲಂಘನೆ ಇತ್ಯಾದಿ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣಕ್ಕಾಗಿ ನಗರ ಪೊಲೀಸರು ಶಸಸಜ್ಜಿತರಾಗಿ ವಿಶೇಷ ತಪಾಸಣಾ ಕಾರ್ಯಕ್ಕೆ ಮುಂದಾಗಿದ್ದಾರೆ.

ಸರಗಳ್ಳತನ, ದರೋಡೆ, ಸಂಖ್ಯಾ ಫಲಕವಿಲ್ಲದ ವಾಹನಗಳ ಮೇಲೆ ಕ್ರಮ ಕೈಗೊಳ್ಳಬೇಕು, ಈ ಮೂಲಕ ಅಪರಾಧ ಕೃತ್ಯಗಳನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು ಎಂಬ ಉದ್ದೇಶದಿಂದ ನಗರ ಪೊಲೀಸ್ ಆಯುಕ್ತರು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸರನ್ನೂ ಬಳಸಿಕೊಂಡು ಪ್ರತಿದಿನ ಸಂಜೆ ೬ ಗಂಟೆಯಿಂದ ತಡರಾತ್ರಿವರೆಗೆ ವಿಶೇಷ ತಪಾಸಣಾ ಕಾರ್ಯವನ್ನು ಆರಂಭಿಸಿದ್ದಾರೆ. ಅದೂ ಶಸ್ತ್ರ ಸಜ್ಜಿತ ಪೊಲೀಸರೊಂದಿಗೆ. . !

ಎರಡು ದಿನಗಳ ಹಿಂದೆ ಈ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ. ನಗರದ ಹೃದಯಭಾಗದ ಪ್ರಮುಖ ರಸ್ತೆಗಳು, ನಗರದಾದ್ಯಂತ ವಿವಿಧ ಬಡಾವಣೆಗಳ ಪ್ರಮುಖ ರಸ್ತೆಗಳಲ್ಲಿ ಶಸ್ತ್ರ ಸಜ್ಜಿತ ಪೊಲೀಸರು ಗಸ್ತು ಹಾಗೂ ತಪಾಸಣೆ ನಡೆಸುತ್ತಿದ್ದಾರೆ.

ನಗರದ ವಿವಿಧೆಡೆ ಆಗಾಗ್ಗೆ ಸರಗಳ್ಳತನ, ದರೋಡೆ, ರಸ್ತೆಯಲ್ಲಿಯೇ ಬಡಿದಾಟ, ಗಲಾಟೆ ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ ಕಳೆದ ವಾರ ಪೊಲೀಸ್ ಅಧಿಕಾರಿಗಳು ಹಾಗೂ ಎಲ್ಲಾ ಠಾಣೆಗಳ ಅಧಿಕಾರಿಗಳ ಸಭೆ ಕರೆದಿದ್ದ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಕೇವಲ ಸಂಚಾರ ಪೊಲೀಸರು ತಪಾಸಣೆ ನಡೆಸಿದರೆ ಕೆಲ ಅಪರಾಧ ಪ್ರಕರಣಗಳು ಪತ್ತೆಯಾಗಲು ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿತ ಸೀಮಾ ಲಾಟ್ಕರ್ ಅವರು, ನಗರದ ಎಲ್ಲಾ ಕಾನೂನು- ಸುವ್ಯವಸ್ಥೆ ಠಾಣೆಗಳ ಪೊಲೀಸರನ್ನೂ ತಪಾಸಣೆಗೆ ಬಳಸಿಕೊಂಡಿದ್ದಾರೆ. ಆಯಾ ಠಾಣೆಗಳ ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ಓರ್ವ ಎಸ್‌ಐ ಹಾಗೂ ಮೂವರು ಕಾನ್‌ಸ್ಟೆಬಲ್‌ಗಳನ್ನು ವಿಶೇಷ ತಪಾಸಣೆಗೆ ಬಳಸಿಕೊಳ್ಳಲಾಗಿದೆ. ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಸಂಚರಿಸುವ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಅಂತಹ ವಾಹನಗಳ ದಾಖಲೆಗಳನ್ನು ತಪಾಸಣೆ ಮಾಡಿ ದಾಖಲೆಗಳನ್ನು ಪರಿಶೀಲಿಸುವ ಕೆಲಸ ಮಾಡಲಾಗುತ್ತಿದೆ. ಇನ್ನು ಸಂಖ್ಯಾ ಫಲಕವಿಲ್ಲದ ವಾಹನಗಳನ್ನು ತಡೆಯುವ ಪೊಲೀಸರು, ಸವಾರರನ್ನು ಮುಲಾಜಿಲ್ಲದೆ ಠಾಣೆಗೆ ಕರೆದೊಯ್ಯುತ್ತಿದ್ದಾರೆ. ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುವವರಿಗೆ ಪೊಲೀಸರ ತಂಡ ಜಾಗೃತಿ ಮೂಡಿಸುತ್ತಿದೆ. ತಪಾಸಣೆ ವೇಳೆ ಕಾರುಗಳ ಬಗ್ಗೆ ವಿಶೇಷ ನಿಗಾ ವಹಿಸಲಾಗುತ್ತಿದೆ. ಈ ವಿಶೇಷ ತಪಾಸಣೆ ನಿರಂತರವಾಗಿ ಮುಂದುವರಿಯಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಪೊಲಿಸರು ಮನವಿ ಮಾಡಿದ್ದಾರೆ.

ಸುರಕ್ಷತೆಗೆ ಮೊದಲ ಆದ್ಯತೆ
ಜನರ ಸುರಕ್ಷತೆಗೆ ನಮ್ಮ ಮೊದಲ ಆದ್ಯತೆ. ಹೀಗಾಗಿ ವಿಶೇಷ ತಪಾಸಣೆ ಆರಂಭಿಸಲಾಗಿದೆ. ವಾಹನ ಸವಾರರು ಸಂಚಾರ ನಿಯಮವನ್ನು ಪಾಲಿಸಬೇಕು. ಹಾಗೂ ದಾಖಲೆಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳಬೇಕು. ರಂಜಾನ್ ಹಬ್ಬ ಮುಗಿಯುವವರೆಗೂ ಈ ತಪಾಸಣೆ ಮುಂದುವರಿಯಲಿದೆ. ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತರು.

Tags:
error: Content is protected !!