Mysore
19
overcast clouds
Light
Dark

ಮೋದಿ-ಪುಟಿನ್ ಅಪ್ಪುಗೆ ಎಬ್ಬಿಸಿದ ಆಕ್ರೋಶ

ಡಿ.ವಿ ರಾಜಶೇಖರ

ಉಕ್ರೇನ್ ಮೇಲೆ ರಷ್ಯಾದ ಸೇನಾ ಅತಿಕ್ರಮಣ ಮತ್ತು ಗಾಜಾ ಪ್ರದೇಶದ ಮೇಲೆ ಇಸ್ರೇಲ್ ಸೇನಾ ದಾಳಿ ಆರಂಭವಾದ ನಂತರ ಭಾರತ ತೆಗೆದುಕೊಂಡ ನಿಲುವುಗಳು ಅಂತಾರಾಷ್ಟ್ರೀಯವಾಗಿ ತೀವ್ರ ಟೀಕೆಗೆ ಗುರಿಯಾಗಿವೆ. ಚೀನಾ ಮತ್ತು ಪಾಕಿಸ್ತಾನ ಗಡಿಯಲ್ಲಿ ಸಮಸ್ಯೆಯುಂಟುಮಾಡಿದಾಗ ದೇಶದ ಸಮಗ್ರತೆ ಮತ್ತು ಸಾರ್ವಭೌಮತೆಗೆ ಭಂಗ ಉಂಟುಮಾಡುತ್ತಿರುವ ಆರೋಪವನ್ನು ಭಾರತ ಮಾಡುತ್ತ ಬಂದಿದೆ. ಆದರೆ ಇದೀಗ ರಷ್ಯಾ ದೇಶ ಉಕ್ರೇನ್ ಮೇಲೆ ಮತ್ತು ಪ್ಯಾಲೆಸ್ಟೇನ್ ಜನರು ವಾಸಿಸುವ ಗಾಜಾ ಪ್ರದೇಶದ ಮೇಲೆ ಇಸ್ರೇಲ್ ಮಿಲಿಟರಿ ದಾಳಿ ನಡೆಸು ತಿದ್ದರೂ ಆ ಪ್ರದೇಶಗಳ ಸಮಗ್ರತೆ ಹಾಗೂ ಸಾರ್ವಭೌಮತೆಯ ಪ್ರಶ್ನೆಯನ್ನು ಭಾರತ ಎತ್ತದೆ ಇರುವುದು ಗೊಂದಲಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ ಪ್ರಜಾತಂತ್ರ ದೇಶವಾಗಿರುವ ಭಾರತವು ಮಿಲಿಟರಿ ಆಕ್ರಮಣ ನಡೆಸಿ ಅಮಾಯಕ ಜನರನ್ನು ಕೊಲ್ಲುತ್ತಿರುವ ಇಸ್ರೇಲ್ ಮತ್ತು ರಷ್ಯಾ ಪರ ನಿಂತಿರುವುದು ವಿಚಿತ್ರ ಎನಿಸಿದೆ.

ಇಂಥ ಇಬ್ಬಂದಿ ನೀತಿಯನ್ನು ಭಾರತವಷ್ಟೇ ಅನುಸರಿಸುತ್ತಿಲ್ಲ. ಅಮೆರಿಕವೂ ಕೂಡ ಇಂಥದೇ ಇಬ್ಬಂದಿ ನೀತಿಯನ್ನು ಅನುಸರಿಸುತ್ತಿದೆ. ಮಿತ್ರ ದೇಶವೆಂದು ಭಾರತವು ರಷ್ಯಾಕ್ಕೆ ಬೆಂಬಲವಾಗಿ ನಿಂತಿರುವಂತೆ ಅಮೆರಿಕ ತನ್ನ ಮಿತ್ರ ದೇಶ ಇಸ್ರೇಲ್ ಪರ ನಿಂತಿದೆ. ಉಕ್ರೇನ್ ವಿಚಾರದಲ್ಲಿ ಅಮೆರಿಕನಿಲುವು ಭಿನ್ನವಾಗಿದೆ. ಅದು ಉಕ್ರೇನ್ ಪರವಾದ ನಿಲುವು ತಳೆದಿದೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ವಿರುದ್ಧ ಅಮೆರಿಕ ಸಮರ ಸಾರಿದೆ.

ಉಕ್ರೇನ್ ಮೇಲೆ ಮಿಲಿಟರಿ ದಾಳಿ ನಡೆಸುತ್ತಿರುವ ರಷ್ಯಾದ ಪರ ಭಾರತ ನಿಲ್ಲಲು ಮುಖ್ಯ ಕಾರಣ ಅದರ ಜೊತೆಗಿರುವ ಸ್ನೇಹ. ತನ್ನ ಕಷ್ಟಕಾಲದಲ್ಲಿ ನೆರವಾದ ಅದರಲ್ಲಿಯೂ ತನ್ನ ವಿರುದ್ಧ ಅಮೆರಿಕ ಮಿಲಿಟರಿ ಬಲ ಪ್ರದರ್ಶಿಸಲು ನಿಂತ ಸಂದರ್ಭದಲ್ಲಿ ನೆರವಿಗೆ ಬಂದ ಇತಿಹಾಸದ ಅನುಭವ ಅಂಥ ನಿಲುವಿಗೆ ಕಾರಣವಾಗಿದೆ. ಭಾರತ-ಪಾಕ್ ಸಂಘರ್ಷಗಳ ಸಂದರ್ಭದಲ್ಲಿ ಅಮೆರಿಕ ಸದಾ ಪಾಕಿಸ್ತಾನದ ಪರ ನಿಂತದ್ದನ್ನು ಭಾರತ ಮರೆತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಅಮೆರಿಕದ ನಿಲುವುಗಳು ಭಾರತದ ಪರ ಬದಲಾಗಿದೆಯಾದರೂ ರಾಜತಾಂತ್ರಿಕವಾಗಿ ಸಂಬಂಧಗಳು ಇನ್ನೂ ಗಟ್ಟಿಯಾಗಿಲ್ಲ. ಭಾರತವೂ ರಷ್ಯಾ ಜೊತೆಗಿನ ರಕ್ಷಣಾ ಬಾಂಧವ್ಯವನ್ನು ಸಡಿಲಗೊಳಿಸಿದೆ. ಶಸ್ತ್ರಾಸ್ತ್ರಗಳಿಗಾಗಿ ಭಾರತ ನೂರಕ್ಕೆ ನೂರು ಪಾಲು ರಷ್ಯಾವನ್ನು ಹಿಂದೆ ಅವಲಂಬಿಸಿತ್ತು. ಈಗ ಅದು ಶೇ.40ಕ್ಕೆ ಇಳಿದಿದೆ. ಅಮೆರಿಕ ಮತ್ತು ಯೂರೋಪ್ ದೇಶಗಳಿಂದಲೂ ಭಾರತ ಈಗ ಶಸ್ತ್ರಾಸ್ತ್ರ ಕೊಳ್ಳುತ್ತಿದೆ. ಈಗ ಭಾರತ ಅಗ್ಗದ ದರದಲ್ಲಿ ಅಪಾರ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ ಭಾರತ-ರಷ್ಯಾ ಬಾಂಧವ್ಯ ಗಟ್ಟಿಯಾಗಿಯೇ ಇದೆ. ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಭಾರತವು ರಷ್ಯಾದ ಜೊತೆಗೆ ನಿಂತಿರುವುದು ಹಲವಾರು ದಶಕಗಳ ಸ್ನೇಹದಿಂದ, ಭಾರತದ ಈ ನಿಲುವು ಅಂತಾರಾಷ್ಟ್ರೀಯವಾಗಿ ಮೌಲಿಕವೋ ಅಥವಾ ಅಲ್ಲವೋ ಎಂಬುದು ಬೇರೆ ವಿಚಾರವಾದರೂ ರಾಷ್ಟ್ರದ ಹಿತಾಸಕ್ತಿಯ ಕಾರಣದಿಂದಾಗಿ ಆ ನಿಲುವು ತೆಗೆದುಕೊಳ್ಳಲಾಗಿದೆ ಎಂದು ಭಾರತ ಸಮರ್ಥನೆ ಒದಗಿಸಿದೆ.

ಉಕ್ರೇನ್ ವಿಚಾರದಲ್ಲಿ ಅಮೆರಿಕ ನೇತೃತ್ವದಲ್ಲಿ ಪಾಶ್ಚಿಮಾತ್ಯ ದೇಶಗಳು ಮತ್ತು ಇಡೀ ಯೂರೋಪ್ ದೇಶಗಳು ರಷ್ಯಾದ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರಿವೆ. ತೈಲ ಮಾರಾಟದ ಮೇಲೂ ನಿರ್ಬಂಧಗಳಿವೆ. ಆದರೆ ಭಾರತ ಈ ನಿರ್ಬಂಧಗಳನ್ನು ಧಿಕ್ಕರಿಸಿ ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲವನ್ನು ಅಪಾರ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದೆ. ರಾಷ್ಟ್ರದ ಹಿತಾಸಕ್ತಿಯಿಂದ ಅಂದರೆ ತೈಲ ಅಭಾವವನ್ನು ಅಥವಾ ತೈಲ ಬೆಲೆ ಏರಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಹೀಗೆ ಮಾಡಲಾಗುತ್ತಿದೆ ಎಂದು ಭಾರತ ಸಮರ್ಥನೆ ಒದಗಿಸುತ್ತಿದೆ. ಭಾರತದ ಸಮರ್ಥನೆಯನ್ನು ಅಮೆರಿಕ ಸೇರಿದಂತೆ ಯೂರೋಪಿನ ಬಲಿಷ್ಠ ದೇಶಗಳು ಒಪ್ಪಿ ಸುಮ್ಮನಿವೆ. ಭಾರತದ ಮೇಲೆ ನಿರ್ಬಂಧ ಹೇರಿದರೆ ಆಗಬಹುದಾದ ಕೆಟ್ಟಪರಿಣಾಮಗಳನ್ನು ಅಂದಾಜು ಮಾಡಿ ಬಹುಶಃ ಸುಮ್ಮನಿರಬಹುದು. ಚೀನಾವನ್ನು ನಿಯಂತ್ರಿಸಲು ಭಾರತವನ್ನು ಬಳಸುವ ತಂತ್ರಗಾರಿಕೆಯ ಭಾಗವಾಗಿ ಅಮೆರಿಕ ಸುಮ್ಮನಿರಬಹುದು. ರಷ್ಯಾ ಮೇಲಿನ ನಿರ್ಬಂಧಗಳನ್ನು ಪಾಲಿಸದ ಭಾರತದ ಮೇಲೆ ಕ್ರಮ ಏಕಿಲ್ಲ ಎನ್ನುವ ಪ್ರಶ್ನೆಗೆ ಇಂಥ ಹಲವು ಉತ್ತರಗಳಿರುವಂತಿದೆ. ಉಕ್ರೇನ್ ವಿಚಾರದಲ್ಲಿ ಅಮೆರಿಕ ಸೇರಿದಂತೆ 32 ದೇಶಗಳ ಸದಸ್ಯತ್ವದ ನ್ಯಾಟೋ ಸಂಘಟನೆ ಒಂದು ಕಡೆ ಇದ್ದರೆ ಇನ್ನೊಂದು ಕಡೆ ರಷ್ಯಾ, ಚೀನಾ ಮತ್ತು ಭಾರತ ಇರುವುದು ವಿಚಿತ್ರ ಸಂಘರ್ಷದ ಸನ್ನಿವೇಶಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಇದೀಗ ಮತ್ತೊಂದು ಸೂಕ್ಷ್ಮವಾದ ಬೆಳವಣಿಗೆಯೊಂದು ನಡೆದಿದೆ. ವಾಷಿಂಗ್ಟನ್‌ನಲ್ಲಿ ‘ನ್ಯಾಟೋ’ (ನಾರ್ಥ್ ಅಟ್ಲಾಂಟಿಕ್ ಟೀಟಿ ಆರ್ಗನೈಜೇಷನ್) ಸಂಘಟನೆಯ 75ನೇ ವರ್ಷದ ಶೃಂಗಸಭೆ (ಜುಲೈ 9ರಿಂದ 11) ನಡೆಯುವ ಸಂದರ್ಭದಲ್ಲಿಯೇ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವಾಡಮಿರ್ ಪುಟಿನ್ ಅವರು ಮಾಸ್ಕೋದಲ್ಲಿ ಭೇಟಿಯಾಗಿ ಪರಸ್ಪರ ಅಪ್ಪಿಕೊಂಡಿರುವ ದೃಶ್ಯ ಟಿವಿಗಳಲ್ಲಿ ಪ್ರಸಾರವಾಗಿದೆ. ಉಕ್ರೇನ್ ರಾಜಧಾನಿ . ನಗರದ ಮಕ್ಕಳ ಆಸ್ಪತ್ರೆಯೊಂದರ ಮೇಲೆ ರಷ್ಯಾ ಕೈ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಹತ್ತಾರು ಮಕ್ಕಳು ಸತ್ತ ದಿನದಂದೇ ಮೋದಿ ಅವರು ಪುಟಿನ್ ಅವರನ್ನು ಅಪ್ಪಿಕೊಂಡು ಕೈಕುಲುಕಿದ್ದು ನ್ಯಾಟೋ ದೇಶಗಳ ನಾಯಕರಲ್ಲಿ ಆಘಾತ ಉಂಟುಮಾಡಿತ್ತು. ನ್ಯಾಟೋ ರಾಷ್ಟ್ರಗಳ ನಾಯಕರ ಶೃಂಗಸಭೆಯಲ್ಲಿ ಮುಖ್ಯವಾಗಿ ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ದಾಳಿ ಮತ್ತು ಮುಂದೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚೆಗೆ ಬರುವುದಿತ್ತು. ರಷ್ಯಾವನ್ನು ಮತ್ತಷ್ಟು ಏಕಾಂಗಿ ಮಾಡುವ ದಿಕ್ಕಿನಲ್ಲಿ ಮಾತುಕತೆ ನಡೆಯುವುದಿತ್ತು. ಇಂಥ ಸಂದರ್ಭದಲ್ಲಿ ಮೋದಿ ಮತ್ತು ಪುಟಿನ್ ಭೇಟಿ ನ್ಯಾಟೋಗೆ ಸವಾಲೆನಿಸುವಂತೆ ಕಾಣಿಸಿತು. ಅಮೆರಿಕದ ವಿದೇಶಾಂಗ ಖಾತೆ ವಕ್ತಾರ ಮ್ಯಾಥ್ಯ ಮಿಲ್ಲರ್ ಈ ಬೆಳವಣಿಗೆಗೆ ಕಟುವಾಗಿಯೇ ಪ್ರತಿಕ್ರಿಯೆ ವ್ಯಕ್ತಮಾಡಿದರು. ಬೆಳೆಯುತ್ತಿರುವ ಪುಟಿನ್-ಮೋದಿ ಬಾಂಧವ್ಯದ ಬಗ್ಗೆ ಅವರು ಆತಂಕ ವ್ಯಕ್ತಮಾಡಿದರು. ಈ ಹಿನ್ನೆಲೆಯಲ್ಲಿ ಮೋದಿ ಅವರನ್ನು ಅಮೆರಿಕದ ಅಧಿಕಾರಿಗಳು ಸಂಪರ್ಕಿಸಿ ತಮ್ಮ ಆತಂಕವನ್ನು ಅವರ ಗಮನಕ್ಕೆ ತಂದರು, ಉಕ್ರೇನ್ ದೇಶದ ಸಮಗ್ರತೆ ಮತ್ತು ಸಾರ್ವಭೌಮತೆಯ ಪ್ರಶ್ನೆಯನ್ನು ಪುಟಿನ್ ಜೊತೆ ಚರ್ಚಿಸಬೇಕೆಂದು ಅಧಿಕಾರಿಗಳು ಆಗ್ರಹಮಾಡಿದರು. ‘ವಿಶ್ವದ ಅತಿದೊಡ್ಡ ಪ್ರಜಾತಂತ್ರ ದೇಶದ ನಾಯಕರಾದ ಮೋದಿ ಅವರು ವಿಶ್ವದ ರಕ್ತಪಿಪಾಸು, ಘೋರ ಕ್ರಿಮಿನಲ್‌ ಅಪರಾಧಿಯೊಬ್ಬರನ್ನು ಅಪ್ಪಿಕೊಳ್ಳುತ್ತಿರುವುದು ದೊಡ್ಡ ದುರಂತ ಎಂದು ನ್ಯಾಟೋ ಸಭೆಯಲ್ಲಿ ಭಾಗವಹಿಸಲು ಬಂದಿದ್ದ ಉಕ್ರೇನ್ ಅಧ್ಯಕ್ಷ ನಾಡಮಿರ್ ಜಲನ ಕಟುವಾಗಿಯೇ ಪ್ರತಿಕ್ರಿಯೆ ನೀಡಿದರು. ಹಾಗೆ ನೋಡಿದರೆ ಅಂಥ ಕಟು ಟೀಕೆಗೆ ಪುಟಿನ್-ಮೋದಿ ಭೇಟಿ ಅರ್ಹವಾಗಿರಲಿಲ್ಲ. ನ್ಯಾಟೋ ಶೃಂಗಸಭೆಯನ್ನು ಗಮನದಲ್ಲಿಟ್ಟುಕೊಂಡು ಮೋದಿ ಮತ್ತು ಪುಟಿನ್ ಭೇಟಿ ಯೋಜಿಸಿರಲಿಲ್ಲ. ಜೊತೆಗೆ ಮೋದಿ ಅವರು ಪುಟಿನ್ ಅವರ ಜೊತೆ ಯುದ್ದದ ನಿರರ್ಥಕತೆ ಬಗ್ಗೆ ಮಾತನಾಡಿದ್ದಾರೆ. ಯುದ್ಧದಿಂದ ಸಮಸ್ಯೆ ಬಗೆಹರಿಯುವುದಿಲ್ಲ, ಮಾತುಕತೆಯಿಂದ ಮಾತ್ರ ಸಮಸ್ಯೆ ಬಗೆಹರಿಯುತ್ತದೆ ಎಂದು ಪುಟಿನ್ ಅವರಿಗೆ ಮೋದಿ ಸಲಹೆ ಮಾಡಿದರು. ಹೀಗಾಗಿ ಮೋದಿ-ಪುಟಿನ್ ಅಪ್ಪುಗೆ ತಪ್ಪು ಅರ್ಥಕ್ಕೆ ಕಾರಣವಾಗಬೇಕಿರಲಿಲ್ಲ.

ನ್ಯಾಟೋ ಸಭೆಯಲ್ಲಿ ಮುಖ್ಯವಾಗಿ ಚರ್ಚೆಗೆ ಬಂದ ವಿಷಯ ಚೀನಾ ಮತ್ತು ರಷ್ಯಾ ಸಂಬಂಧ, ರಷ್ಯಾದ ಆಕ್ರಮಣ ಮುಂದುವರಿಯಲು ಚೀನಾ ನೀಡುತ್ತಿರುವ ಶಸ್ತ್ರಾಸ್ತ್ರಗಳ ಒತ್ತಾಸೆಯೇ ಕಾರಣ ಎಂಬ ವಿಚಾರ ಗಟ್ಟಿಯಾಗಿ ಕೇಳಿ ಬಂತು. ಈ ಹಿನ್ನೆಲೆಯಲ್ಲಿ ನ್ಯಾಟೋ ಸಭೆಯಲ್ಲಿ ರಷ್ಯಾಕ್ಕೆ ಮಿಲಿಟರಿ ನೆರವನ್ನು ನಿಲ್ಲಿಸಬೇಕೆಂದು ಚೀನಾವನ್ನು ಒತ್ತಾಯಿಸಲಾಯಿತು. ಈ ಆರೋಪವನ್ನು ಚೀನಾ ಅಲ್ಲಗಳೆದಿದೆ. ಏಷ್ಯಾ ಪೆಸಿಫಿಕ್ ವಲಯದಲ್ಲಿ ನ್ಯಾಟೋ ಹಸ್ತಕ್ಷೇಪ ಮಾಡುತ್ತಿದೆ, ಶಾಂತಿ ಕದಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಚೀನಾ ಆರೋಪ ಮಾಡುತ್ತಿದೆ. ನ್ಯಾಟೋ ಸಂಘಟನೆಯ ಕಣ್ಣು ಚೀನಾದ ಮೇಲಿದ್ದು ಹೆಚ್ಚುತ್ತಿರುವ ಅದರ ಆರ್ಥಿಕ ಮತ್ತು ಮಿಲಿಟರಿ ಪ್ರಭಾವವನ್ನು ತಗ್ಗಿಸುವುದು ಹೇಗೆಂಬ ಬಗ್ಗೆಯೂ ನ್ಯಾಟೋ ಸಭೆಯಲ್ಲಿ ಚರ್ಚಿಸಲಾಗಿದೆ. ನ್ಯಾಟೋ ದೇಶಗಳಿಗೆ ಭಾರತವು ವಿಶ್ವ ಶಾಂತಿಗೆ ಒಂದು ಬೆದರಿಕೆ ಎಂದೆನಿಸಿಲ್ಲ. ಹೀಗಾಗಿಯೇ ನ್ಯಾಟೋ ಅಂತಿಮ ಘೋಷಣೆಯಲ್ಲಿ ಭಾರತವು ರಷ್ಯಾದ ಪರವಾಗಿ ಇರುವ ಪ್ರಶ್ನೆ ಸ್ಥಾನ ಪಡೆದಿಲ್ಲ.

ಉಕ್ರೇನ್ ದೇಶದ ಸಾರ್ವಭೌಮತೆಯ ರಕ್ಷಣೆ ಮತ್ತು ಶಾಂತಿ ಸ್ಥಾಪನೆ ಉದ್ದೇಶದಿಂದಾಗಿಯೇ ಉಕ್ರೇನ್‌ಗೆ ಮಿಲಿಟರಿ ನೆರವು ನೀಡುತ್ತಿರುವುದಾಗಿ ನ್ಯಾಟೋ ನಾಯಕರು ಹೇಳಿದ್ದಾರೆ. ಉಕ್ರೇನ್‌ಗೆ ಯುದ್ಧಾಸ್ತ್ರಗಳ ನೆರವು ನೀಡುವ ದಿಸೆಯಲ್ಲಿ ದೀರ್ಘಾವಧಿ ಯೋಜನೆಯೊಂದನ್ನು ಸಿದ್ಧಮಾಡಲಾಗಿದೆ ಅತ್ಯಾಧುನಿಕ ಯುದ್ಧಾಸ್ತ್ರಗಳನ್ನು ಕೊಡುವ ಭರವಸೆಯನ್ನೂ ನ್ಯಾಟೋ ನಾಯಕರು ನೀಡಿದ್ದಾರೆ. ಅಷ್ಟೇ ಅಲ್ಲ ಯಾವುದೇ ನಿರ್ಬಂಧಗಳಿಲ್ಲದೆ ಅವುಗಳನ್ನು ಬಳಸಲು ಅನುಮತಿ ನೀಡಲಾಗಿದೆ. ಉಕ್ರೇನ್ ಗಡಿ ದಾಟಿ ರಷ್ಯಾದ ಮೇಲೆ ದಾಳಿ ನಡೆಸಬಹುದಾದಂಥ ಕ್ಷಿಪಣಿಗಳನ್ನು ಅಮೆರಿಕ ಸೇರಿದಂತೆ ಪಶ್ಚಿಮದ ದೇಶಗಳು ಪೂರೈಸಲಿವೆ. ಯೂರೋಪ್ ಒಕ್ಕೂಟದ ಕೆಲವು ನಾಯಕರು ತಮ್ಮಲ್ಲಿರುವ ಎಫ್-16 ಯುದ್ಧ ವಿಮಾನಗಳನ್ನು ಕೊಡುವ ಭರವಸೆಯನ್ನು ಉಕ್ರೇನ್ ಅಧ್ಯಕ್ಷರಿಗೆ ನೀಡಿದ್ದಾರೆ. ನ್ಯಾಟೋ ದೇಶಗಳು ಮಿಲಿಟರಿ ಶಸ್ತ್ರಾಸ್ತ್ರಗಳ ಉತ್ಪಾದನೆಯನ್ನು ಈಗಾಗಲೇ ಹೆಚ್ಚಿಸಿದ್ದು, ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಹೆಚ್ಚಿಸಲು ತೀರ್ಮಾನಿಸಿವೆ. ಜೊತೆಗೆ ಪರಮಾಣು ಅಸ್ತ್ರಗಳನ್ನು ಉಳ್ಳ ದೇಶಗಳು ಮಧ್ಯಮ ಪ್ರಮಾಣದ ಪರಮಾಣು ಅಸ್ತ್ರಗಳ ಉತ್ಪಾದನೆಯನ್ನು ಹೆಚ್ಚಿಸಲೂ ನಿರ್ಧರಿಸಲಾಗಿದೆ. ಈ ಬೆಳವಣಿಗೆಯನ್ನು ನೋಡಿದರೆ ಹೆಸರಿಗೆ ಮಾತ್ರ ಶಾಂತಿ ಸ್ಥಾಪನೆ ಗುರಿ ಇರುವಂತಿದೆ. ಯುದ್ಧ ಮುಂದುವರಿಸಲು ಬೇಕಾದ ಎಲ್ಲ ಸಿದ್ಧತೆ ನ್ಯಾಟೋ ಶೃಂಗಸಭೆಯಲ್ಲಿ ನಡೆದಂತಿದೆ. ಮಾತುಕತೆ ಸಾಧ್ಯತೆಗಳು ಕಾಣಿಸುತ್ತಿಲ್ಲ. ಈಗಾಗಲೇ ತಂತಿಯ ಮೇಲೆ ನಡೆಯಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಭಾರತ ಮುಂದೆ ಇನ್ನೂ ತೀವ್ರ ಬಿಕ್ಕಟ್ಟನ್ನು ಎದುರಿಸಬೇಕಾಗಿ ಬರಬಹುದು.