Mysore
33
few clouds

Social Media

ಬುಧವಾರ, 25 ಮಾರ್ಚ್ 2026
Light
Dark

ಅರಮೇರಿ, ಕಡಂಗಮೂರುರಲ್ಲಿ ಗಣಿಗಾರಿಕೆಗೆ ವಿರೋಧ

ಸ್ಥಳೀಯರಿಗೆ ಸಮಸ್ಯೆ; ಹೋರಾಟದ ಎಚ್ಚರಿಕೆ ನೀಡಿದ ಗ್ರಾಮಸ್ಥರು

• ಕಾಂಗೀರ ಬೋಪಣ್ಣ

ವಿರಾಜಪೇಟೆ : ಸ್ಥಳೀಯರಿಗೆ ಎಲ್ಲ ರೀತಿಯಲ್ಲೂ ಸಮಸ್ಯೆಯನ್ನು ತಂದೊಡ್ಡುತ್ತದೆ ಎಂಬ ಕಾರಣಕ್ಕೆ ಸ್ಥಗಿತಗೊಂಡಿದ್ದ ಗಣಿಗಾರಿಕೆಯನ್ನು ಮತ್ತೆ ಆರಂಭಿಸುವ ಹುನ್ನಾರ ನಡೆಯುತ್ತಿದ್ದು, ಗಣಿಗಾರಿಕೆ ಆರಂಭಿಸಿದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ವಿರಾಜಪೇಟೆ ತಾಲ್ಲೂಕಿನ ಅರಮೇರಿಮತ್ತು ಕಡಂಗಮೂರುರು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಅರಮೇರಿ ಮತ್ತು ಕಡಂಗಮೂರುರು ಗ್ರಾಮಗಳ ಗಡಿಯಂಚಿನ ಸರ್ವೆ ನಂ. 343ರ 4.50 ಎಕರೆ ಪ್ರದೇಶದಲ್ಲಿ ಹಲವು ವರ್ಷಗಳ ಹಿಂದೆ ಕಲ್ಲು ಗಣಿಗಾರಿಕೆ ನಡೆದಿತ್ತು. ನಂತರದ ದಿನಗಳಲ್ಲಿ ಗ್ರಾಮಸ್ಥರ ವಿರೋಧದ ಹಿನ್ನೆಲೆಯಲ್ಲಿ ಗಣಿಗಾರಿಕೆ ಸ್ತಗಿತಗೊಂಡಿತ್ತು. ಮತ್ತೆ 2022ರಲ್ಲಿ ಕೆಲವು ಪ್ರಭಾವಿಗಳು ಇದನ್ನು ಸಕ್ರಿಯಗೊಳಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಕೊಂಡಿದ್ದಾರೆ. 2024ರಲ್ಲಿ ಇಲ್ಲಿ ಕ್ರಷರ್ ಸ್ಥಾಪಿಸಿ ಬೃಹತ್ ಗಣಿಗಾರಿಕೆ ನಡೆಸಲು ಯತ್ನಿಸಿದ್ದಾರೆ.

ಇದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ, ಜಿಲ್ಲಾಡಳಿತ, ಅರಣ್ಯ ಇಲಾಖೆ, ಕಂದಾಯ ಇಲಾಖೆಗೆ ದೂರು ಸಲ್ಲಿಸಿದರೂ ಇಲ್ಲಿ ಗಣಿಗಾರಿಕೆ ಆರಂಭಿಸಲಾಗಿತ್ತು. ಕೆಲ ಸಮಯ ನಡೆದ ಗಣಿಗಾರಿಕೆಯಿಂದ ಸ್ಥಳೀಯರಿಗೆ ಸಮಸ್ಯೆಗಳು ಉಂಟಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ ಸ್ಥಳೀಯ ಶಾಸಕ ಎ.ಎಸ್.ಪೊನ್ನಣ್ಣ, ಸ್ಥಗಿತಕ್ಕೆ ಸೂಚಿಸಿದ ಪರಿಣಾಮ ಗಣಿಗಾರಿಕೆ ಸದ್ಯಕ್ಕೆ ನಿಂತಿದೆ. ಆದರೂ ತೆರೆಮರೆಯಲ್ಲಿ ಇದನ್ನು ಮತ್ತೆ ಆರಂಭಿಸಲು ಇನ್ನಿಲ್ಲದ ಕಸರತ್ತು ನಡೆಯುತ್ತಿದೆ.

ಇದಕ್ಕೆ ಪೂರಕವಾಗಿ ಸದನದಲ್ಲಿ ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯರೊಬ್ಬರು ಕೊಡಗು ಜಿಲ್ಲೆಯಲ್ಲಿ ಗಣಿಗಾರಿಕೆಯ ನಿಯಮಗಳನ್ನು ಸಡಿಲಿಸಬೇಕು, ವಸತಿ ಪ್ರದೇಶಗಳ ಇರುವಿಕೆಯ ಅಂತರವನ್ನು 500 ಮೀ.ನಿಂದ 100 ಮೀ.ಗೆ ಕಡಿಮೆ ಮಾಡಬೇಕೆಂದು ಪ್ರಸ್ತಾಪಿಸಿದ್ದರು. ಇದರ ಹಿಂದೆ ಗಣಿಗಾರಿಕೆ ಮತ್ತೆ ಆರಂಭಿಸುವ ಹುನ್ನಾರವಿದ್ದು, ಯಾವುದೇ ಕಾರಣಕ್ಕೂ ಗಣಿಗಾರಿಕೆ ಆರಂಭಿಸಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸದ್ಯ ಎರಡೂ ಗ್ರಾಮಗಳಲ್ಲಿ ಪೂಳಂಡ, ಬಲ್ಯಂಡ, ಕೋದಂಡ, ಚೋಳಂಡ ಬಲಟಿಕಾಳಂಡ ಮತ್ತು ತೆಲಗು ಬಣಜಿಗರ ಕುಟುಂಬದವರು ಹಾಗೂ ಇತರ ಗ್ರಾಮಗಳ ನಿವಾಸಿಗಳು ಗಣಿಗಾರಿಕೆ ನಡೆಸದಂತೆ ಹೋರಾಟ ನಡೆಸುತ್ತಿದ್ದಾರೆ. ಇವರ ಹೋರಾಟಕ್ಕೆ ಸಂಘ ಸಂಸ್ಥೆಗಳು ಬೆಂಬಲ ನೀಡಿದ್ದು, ಕೊಡಗು ಏಕೀಕರಣ ರಂಗದಿಂದಲೂ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ.

ಒಟ್ಟಾರೆ ಸ್ಥಳೀಯರ ಹೆಸರಿನಲ್ಲಿ ಅನುಮತಿ ಪಡೆದು, ಕೇರಳ ರಾಜ್ಯದ ಪ್ರಭಾವಿಗಳು ಹಣ ಗಳಿಸುವ ಹುನ್ನಾರ ಇದರಲ್ಲಿದೆ. ಒಂದು ವೇಳೆ ಗಣಿಗಾರಿಕೆ ಆರಂಭ ಗೊಂಡರೆ, ಮನೆಗಳು ಮತ್ತು ಕೃಷಿ ಭೂಮಿಗೆ ಮುಳುವಾಗಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಗಣಿಗಾರಿಕೆಯಿಂದ ಅಪಾಯ ನಿಶ್ಚಿತ..!
ನಿಯಮದಂತೆ 500 ಮೀ ವ್ಯಾಪ್ತಿಯಲ್ಲಿ ಎರಡು ಗ್ರಾಮಗಳೂ ಸೇರಿ ಸುಮಾರು 50 ಮನೆಗಳು ಹಾಗೂ ಕೃಷಿ ಭೂಮಿ ಇದ್ದು, ಸ್ಫೋಟದಿಂದ ಮತ್ತು ಗಣಿಗಾರಿಕೆಯ ದೂಳಿನಿಂದ ವ್ಯಾಪಕ ಹಾನಿ ಹಾಗೂ ಜಲ ಮೂಲ, ಪ್ರಾಣಿ ಸಂಕುಲಕ್ಕೆ ಅಪಾಯ ನಿಶ್ಚಿತ. ಹೀಗಿದ್ದರೂ ತಮ್ಮ ಸ್ವಾರ್ಥಕ್ಕಾಗಿ ಕೆಲವರು ಗಣಿಗಾರಿಕೆಗೆ ಯತ್ನ ನಡೆಸಿರುವುದರ ವಿರುದ್ದ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಣಿಗಾರಿಕೆಯನ್ನು ಮತ್ತೆ ಆರಂಭಿಸಬಾರದು ಎಂದಿರುವ ಗ್ರಾಮಸ್ಥರು, ಹೋರಾಟದ ಎಚ್ಚರಿಕೆ ನೀಡಿದ್ದಾರೆ.

Tags:
error: Content is protected !!