Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಬೆಳೆ ಸಮೀಕ್ಷೆಯಲ್ಲಿ ಲೋಪ: ರೈತರಿಗೆ ನಷ್ಟ

• ಮಹೇಂದ್ರ ಹಸಗೂಲಿ

ಗುಂಡ್ಲುಪೇಟೆ: ಬೆಳೆದಿರುವುದು ಸೂರ್ಯ ಕಾಂತಿ… ಪಹಣಿಯಲ್ಲಿ ನಮೂದಾಗಿರುವುದು ಜೋಳ, ಹತ್ತಿ… ಇಂತಹ ಸಂದಿಗ್ಧತೆಯಿಂದ ರೈತರು ಸೂರ್ಯಕಾಂತಿ ಬೆಂಬಲ ಬೆಲೆಯ ಸೌಲಭ್ಯದಿಂದ ವಂಚಿತರಾಗುವ ಆತಂಕ ಎದುರಿಸುತ್ತಿದ್ದಾರೆ.

ಕೇಂದ್ರಸರ್ಕಾರದಿಂದ ಸೂರ್ಯಕಾಂತಿಗೆ ಬೆಂಬಲ ಬೆಲೆ ನಿಗದಿಯಾಗಿದ್ದು ಸೆ.2ರಿಂದ ಬೆಳೆಗಾರರ ನೋಂದಣಿ ಕಾರ್ಯ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಆರಂಭಗೊಂಡಿದೆ. ರೈತರು ಬೆಂಬಲ ಬೆಲೆ ಪಡೆಯಲು ಮುಂದಾಗಿದ್ದು ಕೆಲವು ದಿನಗಳಲ್ಲಿ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ.

ಸಾಕಷ್ಟು ರೈತರು ಸೂರ್ಯಕಾಂತಿ ಬೆಳೆದಿದ್ದರೂ ಅವರ ಜಮೀನಿನ ಪಹಣಿ (ಆರ್‌ಟಿಸಿ)ಯಲ್ಲಿ ಜೋಳ, ಹತ್ತಿ ಎಂದು ನಮೂದಾಗಿದೆ. ಪಹಣಿ ಯಲ್ಲಿ ಸೂರ್ಯಕಾಂತಿ ಬೆಳೆ ನಮೂದಾಗಿದ್ದರೆ ಮಾತ್ರ ಖರೀದಿ ಕೇಂದ್ರದಲ್ಲಿ ಸೂರ್ಯಕಾಂತಿ ಖರೀದಿ ಸಾಧ್ಯ. ಇಲ್ಲದಿದ್ದರೆ ಅವಕಾಶವಿಲ್ಲ.

ಹಾಗಾಗಿ ಅಂತಹ ರೈತರು ಸೂರ್ಯಕಾಂತಿ ಬೆಳೆದಿ ದ್ದರೂ ಬೆಂಬಲ ಬೆಲೆಯಿಂದ ವಂಚಿತರಾ ಗುವ ಪರಿಸ್ಥಿತಿ ನಿರ್ಮಾಣವಾಗಿ ನಷ್ಟ ಉಂಟಾಗುತ್ತದೆ. ಇದಕ್ಕೆ ಕೃಷಿ ಇಲಾಖೆಯು ಬೆಳೆ ಸಮೀಕ್ಷೆ ನಡೆಸಲು ನೇಮಿಸಿದ ಪಿಆರ್ ಗಳು ನೇರ ಕಾರಣ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.

ಸೂರ್ಯಕಾಂತಿಯನ್ನು ದಲ್ಲಾಳಿಗಳು 3,500 ರೂ. ಗಳಿಗೆ ಖರೀದಿ ಮಾಡುತ್ತಿದ್ದರು. ಖರೀದಿ ಕೇಂದ್ರ ತೆರೆಯುವುದು ಖಚಿತವಾದಂತೆ 4,500 ರೂ.ಗಳಿಗೆ ಖರೀದಿಸಲು ಮುಂದಾಗಿದ್ದಾರೆ. ಆದರೆ, ಕ್ವಿಂಟಾಲ್ ಸೂರ್ಯಕಾಂತಿಗೆ ಬೆಂಬಲ ಬೆಲೆ 7,280 ರೂ. ಗಳಾಗಿವೆ. ವಿಪರ್ಯಾಸ ಎಂದರೆ ರೈತರು ಪಹಣಿ ಯಲ್ಲಿ ಸೂರ್ಯಕಾಂತಿ ಬೆಳೆ ನಮೂದಾಗಿಲ್ಲ.

ಇದರಿಂದ ರೈತರಿಗೆ ಕ್ವಿಂಟಾಲ್‌ಗೆ 2,500 ರೂ. ನಿಂದ 3,000 ರೂ. ನಷ್ಟವಾಗುತ್ತದೆ. ಒಬ್ಬ ರೈತ ಕನಿಷ್ಠ 4-5 ಕ್ವಿಂಟಾಲ್ ಮಾರಾಟ ಮಾಡಿದರೆ ಆತನಿಗೆ 15,000 ರೂ. ನಷ್ಟವಾಗುತ್ತದೆ. ಇದನ್ನು ತುಂಬಿ ಕೊಡುವವರು ಯಾರು? ಎಂಬುದು ರೈತರ ಪ್ರಶ್ನೆ. ಬೆಳೆ ಸಮೀಕ್ಷೆ ನಡೆಸಲು ನಿಯೋಜಿಸಿದ ಪಿಆರ್ ಗಳು ಫಸಲಿನ ತಾಕುಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡಿಲ್ಲ. ಆದ್ದರಿಂದಲೇ ಸೂರ್ಯಕಾಂತಿ ಬೆಳೆದಿರುವ ಜಮೀನಿನ ಆರ್‌ಟಿಸಿಯಲ್ಲಿ ಹತ್ತಿ, ಜೋಳ ಎಂದು ನಮೂದಾಗಿದೆ ಎಂಬುದು ರೈತರ ಆರೋಪ. ತಾಲ್ಲೂಕಿನ ಹಸಗೂಲಿ ಗ್ರಾಮದ ಈಶ್ವರಪ್ಪ ತಮಗೆ ಸೇರಿದ ಸರ್ವೆ ಸಂಖ್ಯೆ 95/1, ಮತ್ತು 95/2ರ ಜಮೀನುಗಳಲ್ಲಿ ಪ್ರಸ್ತುತ ಸೂರ್ಯಕಾಂತಿ ಬೆಳೆದಿದ್ದರು. ಕೃಷಿ ಇಲಾಖೆ ನಡೆಸಿದ ಸಮೀಕ್ಷೆ ಬಳಿಕ ಇವರ ಪಹಣಿಯಲ್ಲಿ ಜೋಳ, ಹತ್ತಿ ಎಂದು ನಮೂದಾಗಿದೆ. ಯಾವ ಮಾನದಂಡದಲ್ಲಿ ವಾಸ್ತವ ಬೆಳೆಯನ್ನು ಕೈಬಿಟ್ಟು ಬೇರೊಂದು ಬೆಳೆ ಸೇರಿಸಲಾಗಿದೆ. ಇದರಿಂದ ರೈತನಿಗೆ ಆಗುವ ನಷ್ಟವನ್ನು ಭರಿಸುವವರು ಯಾರು ಎಂದು ರೈತರು ಪ್ರಶ್ನಿಸಿದ್ದಾರೆ.

ಕೋಟ್ಸ್‌))

ಕಷ್ಟಪಟ್ಟು ಬೆಳೆದ ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಮಾರಲು ಸಾಧ್ಯವಾಗುತ್ತಿಲ್ಲ. ಬೆಳೆ ಸಮೀಕ್ಷೆಯಲ್ಲಿ ದೋಷವಾಗಿದ್ದು ರೈತರು ಸಮಸ್ಯೆ ತೋಡಿಕೊಳ್ಳುತ್ತಿದ್ದಾರೆ. ಅಂತಹ ರೈತರ ಸೂರ್ಯಕಾಂತಿಯನ್ನು ಖರೀದಿಸಬೇಕು. ಜೊತೆಗೆ ಆರ್‌ಟಿಸಿಯಲ್ಲಿ ಬೆಳೆಯನ್ನು ತಪ್ಪಾಗಿ ನಮೂದಿಸಿರುವುದನ್ನು ಬದಲಿಸಬೇಕು.

-ಸುರೇಶ್, ರೈತರು

‘ಬೆಳೆ ದರ್ಶಕ್ 2024’ ಮುಂಗಾರು ಮಳೆ ಆ್ಯಪ್ ಅನ್ನು ರೈತರು ಸ್ಮಾರ್ಟ್‌ ಫೋನ್‌ನಲ್ಲಿ ಡೌನ್ ಲೋಡ್ ಮಾಡಿಕೊಂಡು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಯಾವ ಫಸಲು ನಮೂದಾಗಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಬಹುದು. ಕೊಲ್ಲೋತ್ತರ ಮತ್ತು ನಂತರವೂ ಅಗತ್ಯ ಮಾಹಿತಿಯನ್ನು ನೀಡಿ ಬೆಳೆಯನ್ನು ದಾಖಲಿಸಬಹುದು. ಲೋಪವಾಗಿದ್ದರೆ ಹತ್ತಿರದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಬಹುದು.

-ವೆಂಕಟೇಶ್, ಸಹಾಯಕ ಕೃಷಿ ನಿರ್ದೇಶಕರು, ಗುಂಡ್ಲುಪೇಟೆ.

Tags: