ಮೈಸೂರು: ದಸರಾ ಮಹೋತ್ಸವವು ವೈಭವವಾಗಿ ನಡೆಯುವಂತೆಯೇ, ಸಂಪ್ರದಾಯ ಬದ್ಧವಾಗಿಯೂ ಆಚರಿಸಲ್ಪಡುತ್ತದೆ. ರಾಜವಂಶಸ್ಥರ ಖಾಸಗಿ ಸಂಪ್ರದಾಯಗಳಲ್ಲಿ ವಜ್ರಮುಷ್ಟಿ ಕಾಳಗವೂ ಒಂದಾಗಿದ್ದು, ಇದು ಬಹಳ ವೈಶಿಷ್ಟ್ಯಪೂರ್ಣವೂ ಹೌದು.
ದಸರಾ ಉತ್ಸವದ ೧೦ನೇ ದಿನ ಅಂದರೆ ವಿಜಯದಶಮಿಯಂದು ಅರಮನೆಯ ಕರಿಕಲ್ಲುತೊಟ್ಟಿ ಆವರಣದಲ್ಲಿ ವಜ್ರಮುಷ್ಟಿ ಕಾಳಗವನ್ನು ಏರ್ಪಾಡು ಮಾಡಲಾಗುತ್ತದೆ. ರಾಜ ವಂಶಸ್ಥರ ಎದುರಿನಲ್ಲೇ ಅರಮನೆಯ ಇಬ್ಬರು ಜಟ್ಟಿಗಳ ನಡುವೆ ಈ ಮುಷ್ಟಿ ಯುದ್ಧ ನಡೆಯುತ್ತದೆ. ಒಬ್ಬರ ಶರೀರದಿಂದ ರಕ್ತ ಹನಿಯುವವರೆಗೆ ಕಾಳಗ ನಡೆಯುತ್ತದೆ.
ವಜ್ರಮುಷ್ಟಿ ಕಾಳಗದಲ್ಲಿ ಭಾಗವಹಿಸಲು ಹಿಂದಿನಿಂದಲೂ ಮೈಸೂರು, ಚಾಮರಾಜನಗರ, ಚನ್ನಪಟ್ಟಣ, ಬೆಂಗಳೂರು ಭಾಗದಿಂದ ಬಂದು ಭಾಗವಹಿಸುತ್ತಿದ್ದರು. ಜೊತೆಗೆ ಬೇರೆ ರಾಜ್ಯಗಳಿಂದ ಬರುವವರು ಬೆಂಗಳೂರಿನಲ್ಲಿ ರುವ ವಜ್ರಮುಷ್ಟಿ ಕಾಳಗದ ಅಖಾಡಕ್ಕೆ ಹೋಗಿ ಅಲ್ಲಿನ ಮುಖ್ಯಸ್ಥರ ಅನುಮತಿ ಪಡೆದು ಬರುವುದು ವಾಡಿಕೆಯಾಗಿದೆ. ಮಹಾರಾಜರ ಕಾಲದಲ್ಲಿ ವಜ್ರಮುಷ್ಟಿ ಕಾಳಗದಲ್ಲಿ ಗೆದ್ದವರಿಗೆ ಖುಷಿಯಿಂದ ಜಹಗೀರು(ಕೃಷಿ ಭೂಮಿ) ಅಥವಾ ಇಂತಿಷು ನಗದು ಬಹುಮಾನ ಕೊಡುತ್ತಿದ್ದರು. ಹಿಂದಿನ ತಲೆಮಾರಿನವರಿಗೆ ಮನೆಯನ್ನು ಕೂಡ ನೀಡಿದ್ದು ಇದೆ. ವಜ್ರ ಮುಷ್ಟಿ ಕಾಳಗ ತಂಡದ ಎಲ್ಲರೂ ಸೇರಿ ಸಾಂಪ್ರದಾಯಿಕ ಗೌರವ ಪಡೆಯುತ್ತಿದ್ದರು.
ಜೋಡಿ ಕಟ್ಟುವುದು ಹೇಗೆ? : ದಸರಾದ ವಜ್ರಮುಷ್ಟಿ ಕಾಳಗದಲ್ಲಿ ಪ್ರತಿ ವರ್ಷ ಎರಡು ಜೋಡಿ ಅಂದರೆ ನಾಲ್ಕು ಜನರಿಗೆ ಅವಕಾಶ ದೊರೆಯಲಿದೆ. ಕಾಳಗದಲ್ಲಿ ಭಾಗಿಯಾಗುವ ದೃಷ್ಟಿಯಿಂದ ಜಟ್ಟಿಗಳು ಅರಮನೆಯ ವಜ್ರ ಮುಷ್ಟಿ ಕಾಳಗದ ಉಸ್ತಾದ್‌ಗಳ ಬಳಿ ಈಗಾಗಲೇ ಅಭ್ಯಾಸ ನಡೆಸುತ್ತಿದ್ದಾರೆ. ಅವರ ಪೈಕಿ ನಾಲ್ವರನ್ನು ಆರಿಸಿ ಎತ್ತರ ಮತ್ತು ತೂಕದ ಆಧಾರದ ಮೇಲೆ ದೈಹಿಕವಾಗಿ ಸರಿ ಹೊಂದುವ ಎರಡು ಜೋಡಿ ಕಟ್ಟಲಾಗುತ್ತದೆ. ಅವರನ್ನು ಅಂದೇ ರಾಜವಂಶಸ್ಥರಿಗೆ ಪರಿಚಯ ಮಾಡಿಸಲಾಗುತ್ತದೆ. ಬೆಂಗಳೂರು, ಮೈಸೂರು, ಚನ್ನಪಟ್ಟಣ ಹಾಗೂ ಚಾಮರಾಜನಗರದ ತಲಾ ಒಬ್ಬ ಜೆಟ್ಟಿಗೆ ಅವಕಾಶ ನೀಡಲಾಗುತ್ತದೆ.
ಕೆಂಪು ಮಣ್ಣು ಮಿಶ್ರಿತ ಅಖಾಡಕ್ಕೆ ಉಸ್ತಾದ್: ಅರಮನೆಯ ಕರಿಕಲ್ಲು ತೊಟ್ಟಿ ಅಂಗಳದಲ್ಲಿ ನಡೆಯಲಿರುವ ವಜ್ರಮುಷ್ಟಿ ಕಾಳಗದಲ್ಲಿ ನಾಲ್ವರು ಜಟ್ಟಿಗಳು ವಜ್ರನಖ ಎಂಬ ಹರಿತವಾದ ಆಯುಧದೊಂದಿಗೆ ಅಖಾಡಕ್ಕೆ ಇಳಿಯಲಿದ್ದಾರೆ. ಕಾಳಗಕ್ಕೆ ನಿಗದಿ ಮಾಡಲಾಗಿರುವ ಸಮಯದಲ್ಲಿ ಜಟ್ಟಿಗಳ ಕುಲದೇವತೆ ನಿಂಬುಜಾಂಬೆಗೆ ಪೂಜೆ ಸಲ್ಲಿಸಿ, ಸಾಂಪ್ರದಾಯಿಕವಾಗಿ ಮೈತುಂಬ ಕೆಂಪು ಮಣ್ಣು ಬಳಿದುಕೊಂಡು ಅಖಾಡದಲ್ಲಿ ಭಾಗವಹಿಸಲಿದ್ದಾರೆ. ವಜ್ರಮುಷ್ಟಿ ಕಾಳಗ ಆಯೋಜನೆಗೆ ಮೈಸೂರಿನ ಉಸ್ತಾದ್ ಟೈಗರ್ ಬಾಲಾಜಿ, ಉಸ್ತಾದ್ ಮಾಧು ಜಟ್ಟಿ, ಉಸ್ತಾದ್ ನಾಗರಾಜ ಜಟ್ಟಿ, ಬೆಂಗಳೂರಿನ ಉಸ್ತಾದ್ ಕೃಷ್ಣ ಜಟ್ಟಿ, ಚಾಮರಾಜನಗರದ ಉಸ್ತಾದ್ ಹೇಮಂತ್ ಜಟ್ಟಿ, ಚನ್ನಪಟ್ಟಣದ ಉಸ್ತಾದ್ ಜಯಸಿಂಹ ಸೇರಿದಂತೆ ಇನ್ನೂ ಅನೇಕ ಉಸ್ತಾದ್‌ಗಳು ಹಾಗೂ ಅರಮನೆಯ ಉಸ್ತಾದ್‌ಗಳು ಈಗಾಗಲೇ ಸಿದ್ಧತೆ ನಡೆಸುತ್ತಿದ್ದಾರೆ.
ವಜ್ರಮುಷ್ಟಿ ಕಾಳಗದಲ್ಲಿ ಭಾಗವಹಿಸುವುದು ಎಂದರೆ ಅದೊಂದು ಗೌರವ. ನಮ್ಮ ಜನಾಂಗಕ್ಕೆ ಮಾತ್ರ ಇದರಲ್ಲಿ ಭಾಗಿಯಾಗಲು ಅವಕಾಶ. ಇದಕ್ಕಾಗಿ ನಮಗೆ ಗೌರವಧನ ಸಿಗುತ್ತದೆ. ಆದರೆ, ದುಡ್ಡಿಗಾಗಿ ನಾವು ಇದರಲ್ಲಿ ಪಾಲ್ಗೊಳ್ಳುತ್ತಿಲ್ಲ. ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವ ಉದ್ದೇಶ ಅಷ್ಟೆ. ಈ ಸಮರ ಕಲೆಯನ್ನು ಉಳಿಸುವುದು ನಮ್ಮ ಕರ್ತವ್ಯ. -ಉಸ್ತಾದ್ ಹೇಮಂತ್, ಚಾಮರಾಜನಗರ.
ಈ ಜಟ್ಟಿ ಕಾಳಗ ಎಂಬುದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ, ಇದರಲ್ಲಿ ಜಯಶೀಲರಾದವ ರಿಗೆ ಯಾವುದೇ ಗೌರವ ಪುರಸ್ಕಾರ ನೀಡಿರುವುದಿಲ್ಲ. ನಮ್ಮ ಪೂರ್ವಜರ ಕಾಲದಿಂದಲೂ ಕಲೆಗೆ ಬೆಲೆ ಕೊಟ್ಟು ಅಖಾಡಕ್ಕೆ ಇಳಿಯುತ್ತಿದ್ದು, ಅದನ್ನು ನಾವು ಮುಂದುವರಿಸುತ್ತಿದ್ದೇವೆ. ಇದುವರೆಗೂ ಎಷ್ಟು ಉಸ್ತಾದ್‌ಗಳು ಭಾಗವಹಿಸಿದ್ದಾರೆ ಎಂಬುದರ ದಾಖಲೆ ಇಲ್ಲ. -ಉಸ್ತಾದ್ ಟೈಗರ್ ಬಾಲಾಜಿ ಜೆಟ್ಟಿ, ಮೈಸೂರು