ಜನಪ್ರತಿನಿಧಿಗಳು,ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಪೂಜೆ ಸಲ್ಲಿಸಿದ ಅರಣ್ಯ ಇಲಾಖೆ
ಮೈಸೂರು: ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಎರಡನೇ ಹಂತದಲ್ಲಿ ಆಗಮಿಸಿದ ಮಹೇಂದ್ರ ನೇತೃತ್ವದ ಐದು ಆನೆಗಳನ್ನೂ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಮೊದಲ ಹಂತದಲ್ಲಿ ಆಗಮಿಸಿದ್ದ 9 ಆನೆಗಳೊಂದಿಗೆ ಈಗ ಬಂದಿರುವ ಐದು ಆನೆಗಳೂ ಸೇರಿದಂತೆ ಒಟ್ಟು 14 ಆನೆಗಳು ಭಾನುವಾರದಿಂದ ಪೂರ್ಣ ಪ್ರಮಾಣದಲ್ಲಿ ತಾಲೀಮು ಶುರು ಮಾಡಲಿವೆ. ಜನಪ್ರತಿನಿಧಿ ಗಳು, ಜಿಲ್ಲಾಮಟ್ಟದ ಅಧಿಕಾರಿಗಳ ಅನುಪಸ್ಥಿತಿ ಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಜಯಮಾರ್ತಾಂಡ ದಾರದ ಬಳಿ ಪೂಜೆ ಸಲ್ಲಿಸಿ ಪುಷ್ಪಾರ್ಚನೆಗೈದು ಬರಮಾಡಿಕೊಂಡರು.
ದುಬಾರೆ ಶಿಬಿರದಿಂದ ಪ್ರಶಾಂತ, ಸುಗ್ರೀವ, ಮತ್ತಿಗೋಡು ಶಿಬಿರದಿಂದ ಮಹೇಂದ್ರ, ರಾಮ ಪುರ ಶಿಬಿರದಿಂದ ಹಿರಣ್ಯ, ದೊಡ್ಡಹರವೆ ಶಿಬಿರ ದಿಂದ ಬಂದ ಲಕ್ಷ್ಮೀ ಆನೆಗಳನ್ನು ಮೊದಲಿಗೆ ಲಾರಿಯಿಂದ ಸುರಕ್ಷಿತವಾಗಿ ಕೆಳಗಿಳಿಸಿಕೊಂಡು ನಂತರ ಕೊಳದಲ್ಲಿ ಸ್ನಾನ ಮಾಡಿಸಲಾಯಿತು. ನಂತರ, ಜಯ ಮಾರ್ತಾಂಡ ದ್ವಾರದ ಬಳಿ ಕರೆ ತಂದು ನಿಲ್ಲಿಸಲಾಯಿತು. ಅರ್ಚಕ ಪ್ರಹ್ಲಾದ್ ರಾವ್ ಅವರು ಐದೂ ಆನೆಗಳ ಪಾದ ಪೂಜೆ ಮಾಡಿದರು.
ನಂತರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯ, ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಅವರು ಪುಷ್ಪಾರ್ಚನೆ ಮಾಡಿ ಕಬ್ಬು, ಬೆಲ್ಲ, ಚಕ್ಕುಲಿ, ಕೋಡುಬಳೆ ನೀಡಿ ಸ್ವಾಗತಿಸಿದರು. ಬಳಿಕ ನೇರವಾಗಿ ಆನೆಗಳು ಬಿಡಾರ ಹೂಡಿರುವ ಸ್ಥಳಕ್ಕೆ ಕರೆದೊಯ್ಯ ಲಾಯಿತು. ಎರಡನೇ ಹಂತದಲ್ಲಿ ಆಗಮಿಸಿದ್ದ ರಿಂದಾಗಿ ಸರಳವಾಗಿ ಸ್ವಾಗತಿಸಲಾಯಿತು. ಮಾವುತರು, ಕಾವಾಡಿಗಳ ಕುಟುಂಬದವರಿಗೆ ಅರಮನೆ ಮಂಡಳಿ ವತಿಯಿಂದ ಬೇಕಾದ ಪರಿಕರಗಳನ್ನು ವಿತರಿಸಲಾಯಿತು.
ಮೊದಲನೇ ಹಂತದಲ್ಲಿ 9, ಎರಡನೇ ಹಂತದಲ್ಲಿ 5 ಆನೆಗಳು ಅರಮನೆಗೆ ಆಗಮಿಸಿವೆ. ಶುಕ್ರವಾರ ಎರಡನೇ ಹಂತದ ಆನೆಗಳಿಗಷ್ಟೇ ತೂಕ ಪರೀಕ್ಷೆ ನಡೆಯಲಿದೆ. ನಂತರ ಎಲ್ಲ ಆನೆಗಳಿಗೂ ಪೂರ್ಣ ಪ್ರಮಾಣದಲ್ಲಿ ತಾಲೀಮು ಶುರುವಾಗಲಿದೆ. -ಡಾ.ಐ.ಬಿ.ಪ್ರಭುಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ.
ಮೊದಲ ಬಾರಿ ದಸರೆಯಲ್ಲಿ ಲಕ್ಷ್ಮೀ ಮೈಸೂರು: ಎರಡನೇ ಹಂತದಲ್ಲಿ ಆಗಮಿಸಿರುವ ಐದು ಆನೆಗಳ ಪೈಕಿ ಲಕ್ಷ್ಮೀ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದೆ. ಈ ಆನೆಯು ಸರ್ಕಸ್ ಆನೆಯಾಗಿದ್ದು, 2015ರಲ್ಲಿ ಅರಣ್ಯ ಇಲಾಖೆಯ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಈಗ ಸಂಪೂರ್ಣ ಆರೋಗ್ಯವಾಗಿದೆ.
ಪ್ರಶಾಂತ: ವರ್ಷ-51, ಎತ್ತರ-2.61 ಮೀ. ತೂಕ-4,650 ಕೆ.ಜಿ. ಶಿಬಿರ-ದುಬಾರೆ
ಲಕ್ಷ್ಮೀ: ವರ್ಷ-53, ಎತ್ತರ -2.52 ಮೀ, ತೂಕ-3,000-3,500 ಕೆ.ಜಿ. ಶಿಬಿರ-ದೊಡ್ಡಹರವೆ
ಮಹೇಂದ್ರ: ವರ್ಷ-41 ಎತ್ತರ-2.75 ಮೀ. ತೂಕ-3,150 ಕೆ.ಜಿ, ಶಿಬಿರ: ಮತ್ತಿಗೋಡು
ಸುಗ್ರೀವ: ವರ್ಷ-42, ಎತ್ತರ-2.77 ಮೀ, ತೂಕ – 4,800-5,000 ಕೆಜಿ, ಶಿಬಿರ-ದುಬಾರೆ
ಹಿರಣ್ಯ: ವರ್ಷ-47, ಎತ್ತರ-2.40 ಮೀ, ತೂಕ-2,800 ಕೆ.ಜಿ, ಶಿಬಿರ-ರಾಮಪುರ