Mysore
19
overcast clouds
Light
Dark

ದೀಪಾಲಂಕಾರ; ಪರಿಕಲ್ಪನೆ ರೂಪಾಂತರ

ಪ್ರವಾಸಿಗರ ಆಕರ್ಷಣೆಗೆ ಮುಂಬೈ, ಪಶ್ಚಿಮಬಂಗಾಳದ ಪ್ರಮುಖ ಹಬ್ಬಗಳ ಅಲಂಕಾರ ಮಾದರಿ ಅಳವಡಿಕೆ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ನವರಾತ್ರಿಯ ದಿನಗಳಲ್ಲಿ ಅರಮನೆ ನಗರಿಗೆ ಆಗಮಿಸುವ ಪ್ರವಾಸಿ ಗರನ್ನು ಆಕರ್ಷಿಸುವ ವಿದ್ಯುತ್ ದೀಪಾ ಲಂಕಾರಕ್ಕೆ ಮತ್ತಷ್ಟು ಮೆರುಗು ನೀಡಲು ಮುಂದಾಗಿದ್ದು, ಈ ಬಾರಿ ವಾರ್ಮ್ ವೈಟ್ ಪರಿಕಲ್ಪನೆಯಡಿ ದೀಪಾಲಂಕಾರ ಮಾಡಲಾಗುತ್ತದೆ.

ನವರಾತ್ರಿಯ ಹತ್ತೂ ದಿನಗಳಲ್ಲಿ ಲಕ್ಷಾಂತರ ಜನರು ದೀಪಾಲಂಕಾರವನ್ನು ಕಣ್ತುಂಬಿಕೊಳ್ಳುವ ಕಾರಣ ಹಳೆಯ ಮತ್ತು ಏಕತಾನತೆಯಿಂದ ಕೂಡಿರದೆ ಬದಲಾದ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡು ವಿನೂತನ ಶೈಲಿಯ ದೀಪಾಲಂಕಾರ ಮಾಡಲಾಗುತ್ತದೆ. ಈಗಾಗಲೇ ಮುಂಬೈ, ಪಶ್ಚಿಮಬಂಗಾಳದ ಪ್ರಮುಖ ನಗರಗಳಲ್ಲಿ ನಡೆಯುವ ಹಬ್ಬಗಳಲ್ಲಿ ಮಾಡಿರುವ ದೀಪಾಲಂಕಾರದ ಮಾದರಿಯನ್ನು ಸಂಗ್ರಹಿಸಿ ದಸರಾ ದೀಪಾಲಂಕಾರದಲ್ಲಿ ಅಳವಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಈಗಾಗಲೇ ಸೆಸ್ಕ್‌ನ ವ್ಯವಸ್ಥಾಪಕ ನಿರ್ದೇಶಕರು, ತಾಂತ್ರಿಕ ನಿರ್ದೇಶಕರು ಮಹತ್ವದ ಸಭೆಗಳನ್ನು ನಡೆಸಿ ದೀಪಾಲಂಕಾರದಲ್ಲಿ ಹಲವಾರು ಬದಲಾವಣೆ, ಸುಧಾರಣೆಗಳನ್ನು ತರುವ ಮೂಲಕ ದೀಪಾಲಂಕಾರಕ್ಕೆ ಹೊಸತನದ ಟಚ್ ಕೊಡಲು ಮುಂದಾಗಿರುವುದರಿಂದ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸಲಿದೆ. ಈ ಬಾರಿ ಅಂಬಾವಿಲಾಸ ಅರಮನೆಯ ದೀಪಾಲಂಕಾರಕ್ಕೆ ಸರಿಹೊಂದುವಂತೆ ವಾರ್ಮ್ ವೈಟ್ ಪರಿಕಲ್ಪನೆಯಲ್ಲಿ ದೀಪಾಲಂಕಾರ ಮಾಡುತ್ತಿರುವುದು ಗಮನಾರ್ಹವಾಗಿದೆ. ಈಗಾಗಲೇ ನಗರದ ಕೆ. ಆರ್. ವೃತ್ತ, ಹಾರ್ಡಿಂಜ್ ವೃತ್ತ, ರಾಮಸ್ವಾಮಿ ವೃತ್ತ, ದಾಸಪ್ಪ ವೃತ್ತ, ಆಯುರ್ವೇದ ಆಸ್ಪತ್ರೆ ಸರ್ಕಲ್, ಅಶೋಕ ವೃತ್ತ, ಅಗ್ರಹಾರ, ಡಿ. ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಧನ್ವಂತ್ರಿ ರಸ್ತೆ, ಅಲ್ಬರ್ಟ್ ವಿಕ್ಟರ್ ರಸ್ತೆ, ಅಶೋಕ ರಸ್ತೆ, ಮುಖ್ಯ ರಸ್ತೆಗಳು, ವೃತ್ತಗಳು ಹಾಗೂ ಪ್ರಮುಖ ಸ್ಮಾರಕಗಳಿಗೆ ದೀಪಾಲಂಕಾರ ಮಾಡುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ರೂಪರೇಷೆ ಸಿದ್ಧಪಡಿಸಲಾಗಿದೆ.

ವಿಶೇಷವಾಗಿ, ಅಂಬಾವಿಲಾಸ ಅರಮನೆ ಸುತ್ತಲಿನ ಪ್ರದೇಶ, ಚಾಮುಂಡಿಬೆಟ್ಟ, ದೊಡ್ಡಕೆರೆ ಮೈದಾನ ಅಲ್ಲದೆ ಹಲವು ಪ್ರಮುಖ ಸ್ಥಳಗಳಲ್ಲಿ ದೀಪಾಲಂಕಾರ ಮಾಡಲಾಗುತ್ತದೆ. ದೀಪಾಲಂಕಾರದಲ್ಲಿ ಏಕತಾನತೆಯಿಂದ ಹೊರ ತರುವ ಸವಾಲು ಇಲಾಖೆ ಮೇಲಿದೆ. ನೂತನ ತಂತ್ರಜ್ಞಾನಗಳ ನೆರವಿನಿಂದ ಹೊಸತನ ಪರಿಚಯಿಸುವ ಉದ್ದೇಶ ಹೊಂದಲಾಗಿದೆ.

ಮುಂಬಯಿ-ಪಶ್ಚಿಮ ಬಂಗಾಳ ಮಾದರಿ: ಈ ನಿಟ್ಟಿನಲ್ಲಿ ಈಗಾಗಲೇ ಸಂಬಂಧಪಟ್ಟ ಅಽಕಾರಿ ವರ್ಗದವರು ಕಾರ್ಯೋನ್ಮುಖವಾಗಿದ್ದು, ಮುಂಬೈ, ಪಶ್ಚಿಮಬಂಗಾಳದ ಪ್ರಮುಖ ನಗರಗಳಿಗೆ ತೆರಳಿ ಅಲ್ಲಿನ ಪ್ರಮುಖ ಹಬ್ಬಗಳ ಆಚರಣೆ ವೇಳೆಯಲ್ಲಿನ ದೀಪಾಲಂಕಾರ ವ್ಯವಸ್ಥೆ ಬಗೆಗೂ ಮಾಹಿತಿ ಸಂಗ್ರಹಿಸಲಾಗಿದೆ. ಜತೆಗೆ ಚೀನಾದಲ್ಲಿನ ತಾಂತ್ರಿಕ ಅಭಿವೃದ್ಧಿ ಬಗೆಗೂ ಹೆಚ್ಚಿನ ಅಧ್ಯಯನ ನಡೆಸಿ ಅವುಗಳನ್ನು ದಸರಾ ದೀಪಾಲಂಕಾರದಲ್ಲಿ ಅಳವಡಿಸಿಕೊಳ್ಳಲು ಉದ್ದೇಶಿಸಲಾಗಿದೆ.

ಸಾವಿರ ಡ್ರೋನ್ ಕ್ಯಾಮೆರಾದಲ್ಲಿ ಶೂಟ್: ಮೈಸೂರಿನ ದಸರಾ ದೀಪಾಲಂಕಾರ ಪ್ರಮುಖ ಯೋಜನೆಯಾಗಿ ಪ್ರಸಿದ್ಧವಾಗಿದೆ. ಇದು ಪ್ರವಾಸಿಗರ ಗಮನವನ್ನು ಸೆಳೆಯುತ್ತದೆ ಮತ್ತು ನಗರವನ್ನು ಸುಂದರ ಹಾಗೂ ಆಕರ್ಷಕವಾಗಿ ತೋರಿಸುತ್ತದೆ. ಈ ಸೌಂದರ್ಯವನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಒಮ್ಮೆಲೇ ಒಂದು ಸಾವಿರ ಡ್ರೋನ್‌ಗಳನ್ನು ಬಳಸಿ 135 ಕಿ. ಮೀ. ಉದ್ದದ ದೀಪಾಲಂಕಾರದ ದೃಶ್ಯ ವೈಭವನ್ನು ಸೆರೆ ಹಿಡಿಯಲು ಚಿಂತಿಸಲಾಗುತ್ತಿದೆ. ಆದರೆ, ಸದ್ಯಕ್ಕೆ ಇದಕ್ಕಾಗಿ ಯಾವುದೇ ಹಣ ಮೀಸಲಿ ಟ್ಟಿಲ್ಲ. ಹಾಗಾಗಿ, ಪ್ರಾಯೋಜಕರ ಸಹಾಯ ದಿಂದ ಈ ಯೋಜನೆ ಜಾರಿಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ತಾಂತ್ರಿಕ ನಿರ್ದೇಶಕ ಕೆ. ಎಂ. ಮುನಿಗೋಪಾಲರಾಜು ಹೇಳಿದರು.