Mysore
20
overcast clouds
Light
Dark

ಸ್ವಚ್ಛತೆ ಕಾರ್ಯಕ್ಕೆ ಸಿಸಿ ಕ್ಯಾಮೆರಾ ಕಣ್ಗಾವಲು

ಮೈಸೂರು: ನಗರದ ಹೃದಯಭಾಗ ಮತ್ತು ಜನವಸತಿ ಪ್ರದೇಶಗಳ ರಸ್ತೆ ಬದಿಗಳಲ್ಲಿ ತ್ಯಾಜ್ಯ ಎಸೆಯುವವರ ಮೇಲೆ ಕಣ್ಗಾವಲು ಇರಿಸಲು ನಗರ ಪಾಲಿಕೆಯು ವಿವಿಧೆಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಿದ್ದು, ಮುಂದಿನ ದಿನಗಳಲ್ಲಿ ಬೇಕಾಬಿಟ್ಟಿ ತ್ಯಾಜ್ಯ ಎಸೆಯುವವರಿಗೆ ದಂಡ ಬೀಳುವುದು ನಿಶ್ಚಿತವಾಗಿದೆ.

ನಗರ ಪಾಲಿಕೆ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಿದ ಪರಿಣಾಮ ನಗರದಲ್ಲಿ ಮನೆ ಮನೆಗೆ ತ್ಯಾಜ್ಯ ಸಂಗ್ರಹಿಸಲು ಬರುವ ವಾಹನಗಳಿಗೆ ಸಾರ್ವಜನಿಕರು ತ್ಯಾಜ್ಯವನ್ನು ಹಸಿಕಸ ಹಾಗೂ ಒಣಕಸವಾಗಿ ವಿಂಗಡಿಸಿ ಸಾರ್ವಜನಿಕರು ನೀಡುತ್ತಿದ್ದಾರೆ. ಆದರೆ, ಕೆಲವರು ಯಾವುದೇ ಜಾಗೃತಿಗೂ ತಲೆಕೆಡಿಸಿಕೊಳ್ಳದೆ ಪ್ರತಿನಿತ್ಯ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಎಸೆಯುತ್ತಿದ್ದಾರೆ.

ಕೆಲವರು ಮಾಡುತ್ತಿರುವ ತಪ್ಪಿನಿಂದಾಗಿ ನಗರದಲ್ಲಿ ಅಶುಚಿತ್ವ ತಾಂಡವವಾಡುತ್ತಿದ್ದು, ಸ್ವಚ್ಛ ಸರ್ವೇಕ್ಷಣೆಯಲ್ಲಿ ನಗರ ನಿರಂತರವಾಗಿ ಹಿನ್ನಡೆ ಅನುಭವಿಸುತ್ತಾ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವವರಿಗೆ ನಗರ ಪಾಲಿಕೆ ಈಗಾಗಲೇ ದಂಡ ವಿಧಿಸಲು ಪ್ರಾರಂಭಿಸಿದೆ. ಆದರೆ, ಕೆಲವರು ಬೆಳ್ಳಂಬೆಳಿಗ್ಗೆ ತ್ಯಾಜ್ಯವನ್ನು ತಂದು ಎಸೆಯುತ್ತಿದ್ದು, ಹೀಗಾಗಿ ಎಲ್ಲರಿಗೂ ದಂಡ ವಿಧಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜನರು ತ್ಯಾಜ್ಯವನ್ನು ಪ್ರತಿನಿತ್ಯ ತಂದು ಎಸೆಯುವ ಜಾಗಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗುವ ದೃಶ್ಯಾವಳಿಯನ್ನು ಆಧರಿಸಿ ದಂಡ ವಿಧಿಸಲು ಪಾಲಿಕೆ ನಿರ್ಧರಿಸಿದೆ.

ಕಸ ಎಸೆಯುವ ಸ್ಥಳಗಳಲ್ಲಿ ಎರಡು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಒಂದು ಸಿಸಿ ಕ್ಯಾಮೆರಾ ಅಳವಡಿಸಿದರೆ ಕದ್ದೊಯ್ಯುವ ಅಥವಾ ಹಾನಿಮಾಡುವ ಸಾಧ್ಯತೆಗಳು ಇರುವ ಹಿನ್ನೆಲೆಯಲ್ಲಿ ಎರಡು ಸಿಸಿ ಕ್ಯಾಮೆರಾ ಅಳವಡಿಸಲಾಗುವುದು. ಈ ಎರಡು ಸಿಸಿ ಕ್ಯಾಮೆರಾಗಳನ್ನು ಪರಸ್ಪರ ಕಾಣುವ ರೀತಿಯಲ್ಲಿ ಅಳವಡಿಸುವ ಹಿನ್ನೆಲೆಯಲ್ಲಿ ಸಿಸಿ ಕ್ಯಾಮೆರಾ ಕಳವು ಮಾಡುವವರು ಅಥವಾ ಹಾನಿ ಮಾಡುವವರ ದೃಶ್ಯಗಳು ಸುಲಭವಾಗಿ ಸೆರೆಯಾಗುತ್ತದೆ. ಈಗಾಗಲೇ ಸಿಸಿಟಿವಿ ಅಳವಡಿಕೆಗೆ ಸಂಬಂಧಿಸಿದಂತೆ ಟೆಂಡರ್ ಕರೆಯುವ ಹಂತಕ್ಕೆ ಬಂದಿದ್ದು, ಒಂದೊಂದು ವಾರ್ಡ್‌ನಲ್ಲಿ ಎರಡು ಸ್ಥಳಗಳಲ್ಲಿ ತಲಾ ನಾಲ್ಕು ಕ್ಯಾಮೆರಾಗಳನ್ನು ಅಳವಡಿಸಲು ಚಿಂತನೆ ನಡೆಸಲಾಗಿದೆ.

ದಂಡದ ಎಚ್ಚರಿಕೆ: ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದಕ್ಕೆ ಕಡಿವಾಣ ಹಾಕಲು ನಗರ ಪಾಲಿಕೆ ಈಗಾಗಲೇ ದಂಡದ ಪ್ರಮಾಣ ನಿಗದಿ ಮಾಡಿದೆ. ಸಾರ್ವಜನಿಕ ರಸ್ತೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು, ಉಗುಳುವುದು, ಬಹಿರ್ದೆಸೆ ಮಾಡುವುದು, ಮೂತ್ರ ವಿಸರ್ಜಿಸುವುದು ಕಂಡು ಬಂದರೆ ಮೊದಲ ಬಾರಿ 500 ರೂ., ಪುನರಾವರ್ತನೆಗೆ 1,000 ರೂ. ದಂಡ ಬೀಳಲಿದೆ.

ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿಕಸ ಮತ್ತು ಒಣಕಸ, ಕೈತೋಟದ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯ, ವಿಷಕಾರಿ ತ್ಯಾಜ್ಯ ಹಾಗೂ ಇತರೆ ತ್ಯಾಜ್ಯವನ್ನು ಬೇರ್ಪಡಿಸಿ ನೀಡದೆ ಹೋದರೆ ನಿವಾಸಿಗಳಿಗೆ ಮೊದಲ ಬಾರಿ 200 ರೂ., ಪುನರಾವರ್ತನೆಯಾದರೆ 500 ರೂ., ವಾಣಿಜ್ಯ ಉದ್ದಿಮೆದಾರರಿಗೆ ಮೊದಲ ಬಾರಿ 500 ರೂ., ಪುನರಾವರ್ತನೆ ಮಾಡಿದರೆ 1,000 ರೂ. ದಂಡ ವಿಧಿಸಲಾಗುವುದು.

ಹೊಲಸು ನೀರು ಹಾಗೂ ಇನ್ನಿತರೆ ದ್ರವ್ಯ ತ್ಯಾಜ್ಯವನ್ನು ರಸ್ತೆಗಳಲ್ಲಿ ಹರಿಯಬಿಟ್ಟರೆ, ಸಾರ್ವಜನಿಕರು ಪ್ರಾಣಿಜನ್ಯ ತ್ಯಾಜ್ಯ, ಹೊಸಲು ನೀರನ್ನು ನಿಗದಿ ಸ್ಥಳದಲ್ಲಿ ವಿಲೇವಾರಿ ಮಾಡದೆ ಚರಂಡಿಗಳಲ್ಲಿ ಹರಿಯಲು ಬಿಟ್ಟರೆ ಮೊದಲ ಬಾರಿ 500 ರೂ., ಪುನರಾವರ್ತನೆಗೆ 1,000 ರೂ. ದಂಡ ವಿಧಿಸಲಾಗುವುದು. ಕಟ್ಟಡದ ಭಗ್ನಾವಶೇಷ ತ್ಯಾಜ್ಯವನ್ನು ನಿಗದಿ ಜಾಗದಲ್ಲಿ ವಿಲೇವಾರಿ ಮಾಡದೆ ಇದ್ದರೆ ಮೊದಲನೇ ಬಾರಿ 5,000 ರೂ., ಪುನರಾವರ್ತನೆ ಮಾಡಿದರೆ 10,000 ರೂ. ದಂಡ ಪಾವತಿಸಬೇಕಾಗುತ್ತದೆ.

ನಗರದಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುವುದು ಸಾಮಾನ್ಯವಾಗಿದೆ. ಇಂಥವರ ವಿರುದ್ಧ ಕಠಿಣ ಕ್ರಮಕ್ಕೆ ಪಾಲಿಕೆ ಮುಂದಾಗಿದ್ದು, ರಸ್ತೆ ಬದಿಯಲ್ಲಿ ಎಲೆಗಳ ತ್ಯಾಜ್ಯ ಸುಡುವವರಿಗೆ 2000ರೂ., ಪುನರಾವರ್ತನೆಗೆ 500 ರೂ., ಪ್ಲಾಸ್ಟಿಕ್ ವಸ್ತುಗಳು ಮತ್ತು ಒಣತ್ಯಾಜ್ಯ ಸುಡುವವರಿಗೆ ಮೊದಲ ಬಾರಿಗೆ 500 ರೂ., ಪುನರಾವರ್ತನೆಗೆ 1,000 ರೂ., ಇ-ತ್ಯಾಜ್ಯ ಸುಡುವವರಿಗೆ ಮೊದಲ ಬಾರಿ 1,000 ರೂ., ಪುನರಾವರ್ತನೆಗೆ 5,000 ರೂ. ದಂಡ ವಿಧಿಸಲಾಗುವುದು.

ಸರಾಸರಿ 100 ಕೆ.ಜಿ. ತ್ಯಾಜ್ಯ ಉತ್ಪಾದಿಸುವವರನ್ನು ಭಾರಿ ತ್ಯಾಜ್ಯ ಉತ್ಪಾದಕರು ಎಂದು ಪರಿಗಣಿಸಲಾಗುತ್ತದೆ. ವಿದ್ಯಾರ್ಥಿ ನಿಲಯಗಳು, ಹೋಟೆಲ್, ರೆಸ್ಟೋರೆಂಟ್, ವಿದ್ಯಾಸಂಸ್ಥೆಗಳು, ಕಲ್ಯಾಣ ಮಂಟಪಗಳು, ಮಾಲ್‌ಗಳು, ವಾಣಿಜ್ಯ ಕಟ್ಟಡಗಳು, ಕೋಚಿಂಗ್ ಸೆಂಟರ್, ಸರ್ಕಾರಿ ಕಚೇರಿಗಳು, ಕಾರ್ಯಕ್ರಮ ನಡೆಯುವ ಸ್ಥಳಗಳು, ವಸ್ತು ಪ್ರದರ್ಶನ ಆವರಣದಲ್ಲಿ ಭಾರಿ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಇವರುಗಳು ತಮ್ಮಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಸಂಸ್ಕರಣೆ ಮಾಡದೆ ಹೋದರೆ ಮೊದಲನೇ ಬಾರಿ 20,000 ರೂ, ಪುನರಾವರ್ತನೆ ಮಾಡಿದರೆ 50,000 ರೂ. ದಂಡ ವಿಧಿಸಲಾಗುತ್ತದೆ. ಪ್ರತಿ ಬಾರಿ ಸ್ವಚ್ಛತೆಯಲ್ಲಿ ದೇಶದ ಟಾಪ್ 10 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದ್ದ ನಗರ 2023ರ ಸ್ವಚ್ಛ
ಸರ್ವೇಕ್ಷಣೆಯಲ್ಲಿ 27 ನೇ ಸ್ಥಾನಕ್ಕೆ ತಳಲ್ಪಟ್ಟಿದ್ದು, ನಗರ ಮತ್ತೆ ದೇಶದ ಟಾಪ್-10 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸ್ವಚ್ಛತೆ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಅನಿವಾರ್ಯವಾಗಿದೆ.

 

ಒಂದು ವಾರದಿಂದ ಕಸ ವಿಲೇವಾರಿಯಾಗದೆ ನಗರದೆಲ್ಲೆಡೆ ಕಸ ರಾಶಿ ಬಿದ್ದಿದ್ದು, ದುರ್ವಾಸನೆ ಬೀರುತ್ತಿದೆ. ಕಸದಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಆಂತಕ ಎದುರಾಗಿದೆ. ಈ ಬಗ್ಗೆ ಪಾಲಿಕೆಗೆ ದೂರು ನೀಡಿದ್ದರೂ, ನಿರ್ಲಕ್ಷ್ಯವಹಿಸಿದ್ದಾರೆ.
-ಎಂ.ವೇದ ಪ್ರಸಾದ್, ತ್ಯಾಗರಾಜ ರಸ್ತೆ

ಮನೆ, ಹೋಟೆಲ್ ಸೇರಿದಂತೆ ಇನ್ನಿತರ ಸ್ಥಳಗಳಿಂದ ಸಂಗ್ರಹವಾಗುವ ಕಸಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದು, ಎಂ.ಜಿ. ರಸ್ತೆಯಲ್ಲಿ ಕಸ ಗಬ್ಬು ನಾರುತ್ತಿದ್ದರೂ ನಗರಪಾಲಿಕೆ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಈ ಸಮಸ್ಯೆ ಹಲವು ವರ್ಷಗಳಿಂದಲೂ ಇದೆ. ಪರಿಹಾರ ಕಂಡು ಹಿಡಿಯುವ ಪ್ರಯತ್ನಗಳು ಇನ್ನೂ ಕೂಡ ಆಗಿಲ್ಲ.
– ಜೀವನ್ ಕುಮಾರ್, ಇಟ್ಟಿಗೆಗೂಡು

ನಗರದಲ್ಲಿ ರಸ್ತೆ ಬದಿಯಲ್ಲಿ ವಿಲೇವಾರಿಯಾಗದೆ ಉಳಿದಿರುವ ಕಸ ಕೊಳೆಯಲಾರಂಭಿಸಿದೆ. ಮಳೆ ನೀರಿನೊಂದಿಗೆ ಕಸ ರಾಜಕಾಲುವೆ ಸೇರಿ ದುರ್ನಾತ ಹೆಚ್ಚಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ.
– ಆರ್ಯ ರಾಧಾಕೃಷ್ಣ, ಅಗ್ರಹಾರ

ನಗರದಲ್ಲಿ ಸಾಕಷ್ಟು ಜನರು ಸ್ವಚ್ಛತೆಗೆ ಸಹಕಾರ ನೀಡುತ್ತಿದ್ದಾರೆ. ಆದರೆ, ಕೆಲವರು ಇನ್ನೂ ಕೂಡಾ ನಮ್ಮ ಮನವಿಗೆ ಸ್ಪಂದಿಸದೆ ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿಯುತ್ತಿರುವುದು ಕಂಡು ಬರುತ್ತಿದೆ. ಈಗಾಗಲೇ ಹಲವಾರು ಜನರಿಗೆ ದಂಡ ವಿಧಿಸಲಾಗಿದೆ. ತ್ಯಾಜ್ಯ ಸುರಿಯುವ ಪ್ರತಿಯೊಬ್ಬರಿಗೂ ದಂಡ ವಿಧಿಸುವ ಸಲುವಾಗಿ ತ್ಯಾಜ್ಯ ಸುರಿಯುವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಗಿದೆ.
– ಡಾ.ವೆಂಕಟೇಶ್, ನಗರ ಪಾಲಿಕೆ ಆರೋಗ್ಯಾಧಿಕಾರಿ