Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಜರ್ಮನ್‌ನಿಂದ ಕನ್ನಡಕ್ಕೆ ಬಂದ ನನ್ನ ತಂಗಿ ಈಡಾ!

ಹರ್ಷ ರಘುರಾಮ್ ಅನುವಾದಿಸಿರುವ ಕೃತಿ ಬಿಡುಗಡೆ ವಿಶೇಷ ಕಾರ್ಯಕ್ರಮ

ಮೈಸೂರು: ಅದು ಲೇಖಕರೊಬ್ಬರ ಪ್ರಥಮ ಕೃತಿಯು ಅನುವಾದಕರೊಬ್ಬರ ಮೊದಲನೇ ಪುಸ್ತಕವಾಗಿ ಹೊರಹೊಮ್ಮಿದ ಅಪರೂಪದ ಕಾರ್ಯಕ್ರಮ. ಇಂಗ್ಲಿಷ್ ಭಾಷೆಯ ಮಧ್ಯಸ್ಥಿಕೆ ಇಲ್ಲದೆ ಜರ್ಮನ್ ಅಕ್ಷರಗಳಿಂದ, ಕನ್ನಡವರ್ಣಮಾಲೆಗಳ ಒಡಲಾಳದಿಂದ ನೇರವಾಗಿ ರೂಪುಗೊಂಡ ಪುಸ್ತಕ ಅದು. ಜರ್ಮನ್ ಮಹಿಳಾ ಲೇಖಕಿ ಕರೊಲೀನ ಅವರ ’22 ಬಾನೆನ್’ ನ್ನು ಆಸ್ಟ್ರಿಯಾ ದೇಶದ ವಿಯೆನ್ನಾ ನಿವಾಸಿ ಕನ್ನಡ ಸಾಹಿತಿ ಹರ್ಷ ರಘುರಾಮ್ ‘ನನ್ನ ತಂಗಿ ಈಡಾ’ ಆಗಿ ತರ್ಜುಮೆ ಮಾಡಿದ್ದಾರೆ.

ನಗರದಲ್ಲಿ ಕನ್ನಡ ಓದುಗರ ಒಕ್ಕೂಟ’ದ ವತಿಯಿಂದ ‘ನನ್ನ ತಂಗಿ ಈಡಾ’ ಕೃತಿಯನ್ನು ಮಂಗಳವಾರ ಬಿಡು ಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಲೇಖಕರು, ಸಭಿಕರೊಂದಿಗೆ ನಡೆಸಿದ ಸಂವಾದ ಪ್ರಶೋತ್ತರ ರೂಪದಲ್ಲಿದೆ.

• ಪ್ರಶ್ನೆ: ಜರ್ಮನ್ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಲು ನಿಮಗೆ ಸ್ಫೂರ್ತಿ ಏನು?

ಹರ್ಷ: ಜರ್ಮನಿಯಲ್ಲಿ ಒಮ್ಮೆ ಲೇಖಕರಾದ ವಸುಧೇಂದ್ರ ಅವರ ಆಕಸಿಕವಾಗಿ ಭೇಟಿಯಾದರು. ಉತ್ಸಾಹದಿಂದ ಅವರನ್ನು ನಮ್ಮ ಮನೆಗೆ ಆಹ್ವಾನಿಸಿದಾಗ ಅವರು ಸಂತೋಷದಿಂದ ನಮ್ಮೊಂದಿಗೆ ಕೆಲವು ದಿನಗಳನ್ನು ಕಳೆದರು. ಆಗ ಅವರು ನನ್ನ ಜರ್ಮನ್ ಭಾಷೆಯ ಮೇಲಿನ ಹಿಡಿತವನ್ನು ಕಂಡು ಜರ್ಮನ್ ಭಾಷೆಯಿಂದ ಉತ್ತಮವಾದ ಕೃತಿಗಳನ್ನು ಅನುವಾದ ಮಾಡಲು ನನ್ನನ್ನು ಹುರಿದುಂಬಿಸಿ, ಒತ್ತಾಸೆ ಮಾರ್ಗದರ್ಶನ, ಉತ್ತೇಜನ ನೀಡುತ್ತಲೇ ಬಂದರು. ಕಡೆಗೆ ಅವರ ಒತ್ತಾಸೆಯ ಮೇರೆಗೆ ನಾನು ಕನ್ನಡಕ್ಕೆ ಅನುವಾದ ಮಾಡಿದ ಕರೊಲೀನ ವಾಲ್ ಅವರ 22 ಬಾನೆನ್’ ಕಾದಂಬರಿಯನ್ನು ನನ್ನ ತಂಗಿ ಈಡಾ’ ಎಂಬ ಶೀರ್ಷಿಕೆಯಲ್ಲಿ ಅನುವಾದ ಮಾಡಿದೆ. ಅದನ್ನು ವಸುಧೇಂದ್ರ ಅವರೇ ಪ್ರಕಟಿಸಿದರು ಕೂಡ.

ಪ್ರಶ್ನೆ: ನಿಮ್ಮ ಚೊಚ್ಚಲ ಅನುವಾದಕ್ಕೆ ಕರೊಲೀನ ವಾಲ್ ಅವರ ಚೊಚ್ಚಲ ಕೃತಿ ’22 ಬಾನೆನ್ ಕೃತಿಯನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣ?

ಹರ್ಷ: ನಿಜ ಹೇಳಬೇಕೆಂದರೆ ಕರೆಲೀನ ವಾಲ್ ಅವರ ಕೃತಿ ಬಿಡುಗಡೆಯಾಗುವ ಮುನ್ನವೇ ಪ್ರಕಾಶಕರ ವೆಬ್‌ಸೈಟ್‌ನಲ್ಲಿ ಆ ಕಾದಂಬರಿಯ ಕಥಾವಸ್ತು ಏನೆಂದು ತಿಳಿದುಕೊಂಡು, ಆ ಪುಸ್ತಕವನ್ನು ಅನುವಾದಕ್ಕೆ ಆಯ್ಕೆ ಮಾಡಿಕೊಂಡೆ. ’22 ಬಾನೆನ್’ ಬಿಡುಗಡೆಯಾಗಿ ವರ್ಷ ಕಳೆಯುವುದರೊಳಗೆ ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟ ವಾಗಿ, ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು ಅತ್ಯಂತ ಜನಪ್ರಿಯ ಪುಸ್ತಕವಾಗಿ ಹೊರಹೊಮ್ಮಿದೆ.

ಪ್ರಶ್ನೆ: ನೀವು ಜರ್ಮನ್ ಭಾಷೆಯನ್ನು ಕಲಿತದ್ದು ಹೇಗೆ?

ಹರ್ಷ: ನಾನು ಬೆಂಗಳೂರಿನಲ್ಲಿ ಬಿಐಟಿ ಕಾಲೇಜಿನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸುತ್ತಿದ್ದಂತೆ ಜರ್ಮನಿಯ ಕೈಸರ್ಸ್‌ ಲಾಟರ್ನ್ ವಿಶ್ವವಿದ್ಯಾಲಯಕ್ಕೆ ಉನ್ನತ ವ್ಯಾಸಂಗಕ್ಕಾಗಿ ತೆರಳಿದೆ.

ಜರ್ಮನಿಯಲ್ಲಿ ವ್ಯಾಸಂಗ ಮಾಡಬೇಕೆಂದರೆ ಜರ್ಮನ್ ಭಾಷೆಯನ್ನು ಸ್ವಲ್ಪ ಮಟ್ಟಿಗಾದರೂ ಕಲಿಯುವುದು ಅನಿವಾರ್ಯ. ಹಾಗಾಗಿ ಬೆಂಗಳೂರಿನ ಮಾರ್ಕಸ್ ಮ್ಯುಲ್ಲರ್ ಭವನದ ಗೋಥೆ ಇನ್ ಸ್ಟಿಟ್ಯೂಟ್‌ನಲ್ಲಿ ಜರ್ಮನ್ ಭಾಷೆಯನ್ನು ಕಲಿತೆ. ನಂತರ ಜರ್ಮನಿಯಲ್ಲಿ ನೆಲೆಸಿದ ನಂತರ ಅಲ್ಲಿನ ನನ್ನ ಸಹಪಾಠಿಗಳೊಂದಿಗೆ, ಸ್ಥಳೀಯರೊಂದಿಗೆ ಜರ್ಮನ್ ನಲ್ಲೇ ವ್ಯವಹರಿಸುತ್ತಿದ್ದುದರಿಂದ ಬಹಳ ಬೇಗ ಭಾಷೆ ಯನ್ನು ಕರಗತಮಾಡಿಕೊಂಡೆ. ಮುಂದೆ ನನ್ನ ಕುತೂ ಹಲಕ್ಕೆ ಜರ್ಮನ್ ಸಾಹಿತ್ಯವನ್ನೂ ಓದಲು ಪ್ರಾರಂಭಿಸಿದೆ.

• ಪ್ರಶ್ನೆ: ಅನುವಾದ ಕಾರ್ಯವನ್ನು ಕೈಗೆತ್ತಿಕೊಂಡಾಗ ಎದುರಿಸಿದ ಸವಾಲುಗಳೇನು?

ಹರ್ಷ: ಈ ಕೃತಿಯ ಮಟ್ಟಿಗೆ ನನಗನ್ನಿಸಿದ ಮುಖ್ಯವಾದ ಸವಾಲುಗಳೆಂದರೆ- ಸಮಕಾಲೀನ ಜರ್ಮನಿಯ ಸಣ್ಣ ಊರಿನ ಸಂಸ್ಕೃತಿ ಮತ್ತು ಜನ ಜೀವನವನ್ನು ಮೂಲ ಕಥಾವಸ್ತು ಕೆಡದಂತೆ ಕನ್ನಡದ ಓದುಗರಿಗೆ ಪರಿಚಯಿಸುವುದು ಹಾಗೂ ಹೊಸ ವಸ್ತು ಅಥವಾ ವಿಚಾರಗಳನ್ನು ಟಿಪ್ಪಣಿಯಾಗಿ ನೀಡದೆ ಕತೆಯ ಹರಿವಿನಲ್ಲೇ ಸರಾಗವಾಗಿ ಮಿಳಿತವಾಗುವಂತೆ ಮಾಡು ವುದು. ಇದರೊಂದಿಗೆ ಮೂಲ ಲೇಖಕಿಯ ಉದ್ದೇಶ ಗಳಿಗೆ ಧಕ್ಕೆ ಬಾರದಂತೆ, ಜೊತೆಗೆ ಕನ್ನಡದ ಓದುಗರಿಗೆ ಕಥಾವಸ್ತುವು ಅಪರಿಚಿತವೆನಿಸದಂತೆ ಸಮತೋಲನ ವನ್ನು ಕಾಯ್ದುಕೊಳ್ಳುವುದು ಸವಾಲಾಗಿತ್ತು.

• ಪ್ರಶ್ನೆ: ಕಾದಂಬರಿಯ ಶೀರ್ಷಿಕೆಯನ್ನು ಯಥಾವತ್ತಾಗಿ ಅನುವಾದಿಸದೆ ‘ನನ್ನ ತಂಗಿ ಈಡಾ’ ಎಂದು ಬದಲಾಯಿಸಿದ್ದು ಏಕೆ?

ಹರ್ಷ: ನಾನು 22 ಬಾನೆನ್’ ಕಾದಂಬರಿಯ ಮೊದಲ ಹತ್ತು ಪುಟಗಳನ್ನು ಅನುವಾದಿಸುವಾಗಲೇ ಅದರ ಶೀರ್ಷಿಕೆಯನ್ನು ನನ್ನ ತಂಗಿ ಈಡಾ’ ಎಂದು ನೀಡಲು ತೀರ್ಮಾನಿಸಿದ್ದೆ. ಏಕೆಂದರೆ 22 ಬಾನೆನ್ ಎನ್ನುವ ಶೀರ್ಷಿಕೆ ಕಥಾನಾಯಕಿ ಈಜುಕೊಳದಲ್ಲಿ ಹಾಕುವ 22 ಸುತ್ತುಗಳ ಕುರಿತದ್ದಾಗಿದೆ. ಆದರೆ ಈಜುಕೊಳಕ್ಕೆ ಹೋಗುವ ಸಂಸ್ಕೃತಿ ನಮ್ಮಲ್ಲಿ ಹೆಚ್ಚಾಗಿ ಇಲ್ಲದ ಕಾರಣ ನಾನು ಅದನ್ನು ಕಥಾನಾಯಕಿಗೆ ಆಕೆಯ ತಂಗಿಯ ಮೇಲಿರುವ ಪ್ರೀತಿಯನ್ನೇ ಕೇಂದ್ರವಾಗಿಟ್ಟುಕೊಂಡು ಶೀರ್ಷಿಕೆಯನ್ನು ನೀಡಿದ್ದೇನೆ.

ಪ್ರಶ್ನೆ: ಮಹಿಳಾ ಕೇಂದ್ರಿತ ಕಾದಂಬರಿಯನ್ನು ಅನುವಾದಿಸುವಾಗ ಎದುರಿಸಿದ ತೊಡಕುಗಳು?

ಹರ್ಷ: ನಾನು ಅನುವಾದವನ್ನು ಪ್ರಾರಂಭಿಸುವ ಮೊದಲು ಕನ್ನಡದಲ್ಲಿ ವೈದೇಹಿಯವರ ಕೃತಿಗಳನ್ನು ಬಹಳಷ್ಟು ಓದಿದ್ದೆ. ಹಾಗಾಗಿ ನನ್ನ ಸುಪ್ತಪ್ರಜ್ಞೆಯಲ್ಲಿ ಅದು ಸದಾ ಕೆಲಸ ಮಾಡಿದೆ ಎನ್ನಬಹುದು. ಹಾಗಾಗಿ ಈ ಕಾದಂಬರಿಯ ಕಥಾನಾಯಕಿ ಜಿಲ್ಲಾ ತನ್ನ ದೈನಂದಿನ ಜೀವನದಲ್ಲಿ ಎದುರಿಸುವ ಕಷ್ಟಗಳನ್ನೆಲ್ಲಾ ಒಂದು ರೀತಿ ನಿರ್ಲಿಪ್ತತೆಯಿಂದ ಸ್ವೀಕರಿಸುವ ರೀತಿ ನನಗೆ ವೈದೇಹಿಯವರ ಕಾದಂಬರಿ ಕಥಾನಾಯಕಿಯರೇ ನೆನಪಿಗೆ ಬಂದದ್ದು.

ಮೈಸೂರಿನಲ್ಲಿ ‘ಕನ್ನಡ ಓದುಗರ ಒಕ್ಕೂಟ’ದ ವತಿಯಿಂದ ‘ನನ್ನ ತಂಗಿ ಈಡಾ’ ಕೃತಿಯನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು. ಲೇಖಕ ಹರ್ಷ ರಘುರಾಮ್, ‘ಆಂದೋಲನ’ ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ರಶ್ಮಿ ಕೋಟಿ, ಕನ್ನಡ ಓದುಗರ ಒಕ್ಕೂಟದ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಶುಭಾ ಸಂಜಯ್‌ ಅರಸ್ ಇದ್ದರು.

Tags: