Mysore
24
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಎಂಎಂಸಿ ಶವಾಗಾರ; ದುರ್ವಾಸನೆಯ ಆಗರ

ಮೈಸೂರು: ನಗರದ ಮೈಸೂರು ಮೆಡಿಕಲ್ ಕಾಲೇಜು ಅಧೀನಕ್ಕೆ ಒಳಪಡುವ ಶವಾಗಾರದಲ್ಲಿನ ಮೂರು ಶೀತಲ ಯಂತ್ರಗಳು ಕೆಟ್ಟು ನಿಂತಿರುವ ಪರಿಣಾಮ ಶವಪರೀಕ್ಷೆಗಾಗಿ ಬರುವ ಮೃತದೇಹಗಳು ಕೊಳೆತು ದುರ್ವಾಸನೆ ಬೀರುತ್ತಿವೆ. ಸಮಸ್ಯೆಯನ್ನು ಸರಿಪಡಿಸಬೇಕಾದ ವೈದ್ಯಾಧಿಕಾರಿಗಳು ಮಾತ್ರ ದಿವ್ಯ ಮೌನಕ್ಕೆ ಶರಣಾಗಿದ್ದಾರೆ.

ಕಳೆದ ಒಂದು ತಿಂಗಳ ಹಿಂದೆಯೇ ಶೀತಲ ಯಂತ್ರಗಳು ಕೆಟ್ಟು ಹೋಗಿವೆ. ಈ ಸಂಬಂಧ ಶೀತಲ ಯಂತ್ರಗಳನ್ನು ದುರಸ್ತಿಗೊಳಿಸುವಂತೆ ಶವಾಗಾರದ ಸಿಬ್ಬಂದಿಗಳು ಎಂಎಂಸಿ ಮುಖ್ಯಸ್ಥರಿಗೆ ಪತ್ರ ಬರೆದಿದ್ದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎನ್ನಲಾಗಿದೆ.

ಶವಪರೀಕ್ಷೆ ನಂತರ ಮೃತದೇಹಗಳನ್ನು ಕೊಂಡೊಯ್ಯಲು ಬರುವ ಸಂಬಂಧಿಕರು ಶವಾಗಾರದ ದುಃಸ್ಥಿತಿ ಹಾಗೂ ಶವದಿಂದ ಸೂಸುವ ದುರ್ವಾಸನೆ ತಡೆಯಲಾರದೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ನಡುವೆ ಶವಾಗಾರದ ಸಿಬ್ಬಂದಿ ದುರ್ವಾಸನೆಯನ್ನು ಸಹಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅಪಘಾತ, ಆತ್ಮಹತ್ಯೆ ಹಾಗೂ ಇನ್ನಿತರೆ ಕಾರಣಗಳಿಂದ ಮೃತಪಟ್ಟವರ ಶವಗಳನ್ನು ಮೈಸೂರು ಮೆಡಿಕಲ್ ಕಾಲೇಜು ಆವರಣದಲ್ಲಿನ ಶವಾಗಾರಕ್ಕೆ ತರಲಾಗುತ್ತದೆ. ಜೊತೆಗೆ ಅಪರಿಚಿತ ಶವಗಳನ್ನೂ ಇಲ್ಲಿ ಇರಿಸಲಾಗುತ್ತದೆ.
ಅನೇಕ ಬಾರಿ ವಾರಸುದಾರರು ಇಲ್ಲದ ಕಾರಣ ಶವಪರೀಕ್ಷೆ ಎರಡು, ಮೂರು ದಿನಗಳು ವಿಳಂಬವಾಗುತ್ತದೆ. ಇಂತಹ ಸಂದರ್ಭದಲ್ಲಿ ಅನಿವಾರ್ಯವಾಗಿ ಮೃತದೇಹಗಳನ್ನು ಸಂರಕ್ಷಿಸಬೇಕಾಗುತ್ತದೆ. ಇದಕ್ಕಾಗಿ ಮೂರು ಶೀತಲ ಯಂತ್ರಗಳನ್ನು ಇಲ್ಲಿ ಅಳವಡಿಸಲಾಗಿದೆ.

ಮೂರು ಶೀತಲ ಯಂತ್ರಗಳ ಪೈಕಿ ಎರಡು ಯಂತ್ರಗಳು ಸಂಪೂರ್ಣ ಕೆಟ್ಟು ನಿಂತಿದ್ದು, ಉಳಿದ ಒಂದು ಯಂತ್ರ ಕೂಡ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಒಂದು ಶೀತಲ ಯಂತ್ರದಲ್ಲಿ 6 ಮೃತದೇಹಗಳನ್ನು ಇರಿಸಬಹುದಾಗಿದೆ. ಹೀಗೆ ಮೂರು ಯಂತ್ರಗಳಲ್ಲಿ 18 ಶವಗಳನ್ನು ಇರಿಸುವ ವ್ಯವಸ್ಥೆ ಇದೆ.

ಇದೀಗ ಮೃತ ದೇಹಗಳ ನಿರ್ವಹಣೆ ಸಾಧ್ಯವಾಗದೆ ಅವು ಕೊಳೆತು ದುರ್ವಾಸನೆ ಬೀರುತ್ತಿವೆ. ಕೆಲ ಶವಗಳ ಮೇಲೆ ಹುಳುಗಳು ಹರಿದಾಡುತ್ತಿವೆ. ಶೀತಲ ಯಂತ್ರಗಳನ್ನು ದುರಸ್ತಿಗೊಳಿಸಿ ಎಂದು ಪತ್ರ ಬರೆದರೂ ಅದು ಡೀನ್ ಅವರಿಗೆ ತಲುಪೇ ಇಲ್ಲ ಎಂದು ಶವಾಗಾರದ ಸಿಬ್ಬಂದಿಯೊಬ್ಬರು ದೂರುತ್ತಾರೆ.

ಯಾರೇ ಸತ್ತರೂ ಅವರ ಮೃತದೇಹಗಳಿಗೆ ಗೌರವ ಕೊಡಬೇಕಾದುದು ಎಲ್ಲರ ಜವಾಬ್ದಾರಿ. ಆದರೆ, ಶವಾಗಾರದಲ್ಲಿ ಇರಿಸಲಾಗಿರುವ ಶವಗಳನು ನೋಡಿದಲ್ಲಿ ಇದು ವೈದ್ಯರಾದವರು ನಡೆದುಕೊಳ್ಳುವ ರೀತಿಯೇ ಎಂದು ಬೇಸರ ಹುಟ್ಟಿಸುತ್ತದೆ.

ಶವಗಳು ಕೊಳೆತಲ್ಲಿ ಅದರಿಂದ ಹೊರ ಸೂಸುವ ದುರ್ವಾಸನೆಯಿಂದ ಸಾಕಷ್ಟು ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿ ಕೆಲಸ ಮಾಡುವವರ ಪಾಡೇನು ಹಾಗೂ ಶವಗಳನ್ನು ಪಡೆದುಕೊಳ್ಳಲು ಬರುವ ಸಂಬಂಧಿಗಳ ಆರೋಗ್ಯದ ಗತಿಯೇನು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಶವಾಗಾರದ ಅವ್ಯವಸ್ಥೆ ಬಗ್ಗೆ ಗಮನ ಹರಿಸಬೇಕು. ಇಲ್ಲವಾದಲ್ಲಿ ಶವಾಗಾರದ ಆವರಣ ರೋಗರುಜಿನಗಳ ತಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಶವಾಗಾರದಲ್ಲಿ ಶೀತಲ ಯಂತ್ರಗಳು ಕೆಟ್ಟಿರುವ ಬಗ್ಗೆ ಬುಧವಾರ ಮಧ್ಯಾಹ್ನದವರೆಗೂ ನನ್ನ ಗಮನಕ್ಕೆ ಬಂದಿಲ್ಲ. ಇಂತಹ ವಿಷಯವನ್ನು ಗಮನಕ್ಕೆ ತಾರದ ಬಯೋ ಮೆಡಿಕಲ್ ಇಂಜಿನಿಯ‌ರ್ ಹಾಗೂ ವಿಭಾಗದ ಮುಖ್ಯಸ್ಥರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಗುರುವಾರ ಸಂಜೆಯ ಒಳಗಾಗಿ ಯಂತ್ರಗಳನ್ನು ದುರಸ್ತಿಗೊಳಿಸುವಂತೆ ಸೂಚನೆ ನೀಡಲಾಗಿದೆ.

• ಕೆ.ಆರ್.ದಾಕ್ಷಾಯಿಣಿ, ಡೀನ್ ಮತ್ತು ನಿರ್ದೆಶಕರು, ಮೈಸೂರು ಮೆಡಿಕಲ್‌ ಕಾಲೇಜು.

Tags: