ಮೈಸೂರು: ದೇಶದ ಮಹಾಸಂಗ್ರಾಮ ಎಂದೇ ಹೇಳಲಾಗಿದ್ದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಣಿಸಲು ಒಂದಾದ ಜಾ. ದಳ – ಬಿಜೆಪಿ ನಾಯಕರು ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿಯೂ ಒಂದಾಗಿ ಅಖಾಡಕ್ಕೆ ಧುಮುಕಿದ್ದು, ಮೂರು ದಶಕಗಳ ಬಳಿಕ ಈ ಕ್ಷೇತ್ರದಲ್ಲಿ ಕಾಂಗ್ರೆಸ್-ಜಾ.ದಳದ ನಡುವೆ ನೇರ ಹಣಾಹಣಿಗೆ ವೇದಿಕೆ ಸಜ್ಜಾಗಿದೆ.
ಜನತಾ ಪರಿವಾರದ ಅಭ್ಯರ್ಥಿಗಳ ವಿರುದ್ಧ ಹೋರಾಟ ಮಾಡುತ್ತಿದ್ದ ಬಿಜೆಪಿ ಮೈತ್ರಿಧರ್ಮ ಪಾಲನೆಗೆ ಮೂರು ದಶಕಗಳ ಬಳಿಕ ಕ್ಷೇತ್ರ ತ್ಯಾಗ ಮಾಡಬೇಕಾಗಿದ್ದರಿಂದ ಈಗ ಅಭ್ಯರ್ಥಿ ಮರಿತಿಬ್ಬೇಗೌಡ ಹಾಗೂ ಜಾ.ದಳದ ಅಭ್ಯರ್ಥಿ ಕೆ. ವಿವೇಕಾನಂದರ ನಡುವೆ ನೇರ ಫೈಟ್ ನಡೆಯುತ್ತಿದ್ದು, ರಣಾಂಗಣ ರೋಚಕ ತಿರುವು ಪಡೆಯುವ ಸಾಧ್ಯತೆ ಇದೆ. ಮರಿತಿಬ್ಬೇಗೌಡರನ್ನು ಮಣಿಸಲು ದಳಪತಿಗಳು ಕಾರ್ಯತಂತ್ರ ಹೆಣೆಯುತ್ತಿದ್ದರೆ, ಮತ್ತೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೋಡಿ ಕಾಂಗ್ರೆಸ್ ಗೆಲುವಿಗಾಗಿ ಪ್ರತಿ ತಂತ್ರಗಾರಿಕೆ ಹೂಡುತ್ತಿದೆ.
1994ರ ಚುನಾವಣೆಯಿಂದಲೂ ಕಾಂಗ್ರೆಸ್, ಬಿಜೆಪಿ ಹಾಗೂ ಜನತಾಪರಿವಾರದ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟರೂ ಜನತಾ ಪರಿವಾರದ ಅಭ್ಯರ್ಥಿಗಳು ಗೆಲ್ಲುತ್ತಾ ಬಂದಿದ್ದರು. ಮಂಡ್ಯ, ಹಾಸನ ಜಿಲ್ಲೆಗಳ ಮತದಾರರು ನಿರ್ಣಾಯಕ ಪಾತ್ರವಹಿಸುತ್ತಿದ್ದರಿಂದ 2000ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲು ಹಿಂದೇಟು ಹಾಕಿದ್ದ ಮರಿತಿಬ್ಬೇಗೌಡರು ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು. ನಂತರ, 2006ರಲ್ಲಿ ಪಕ್ಷೇತರರಾಗಿ, 2012 ಮತ್ತು 2018ರಲ್ಲಿ ಜಾ. ದಳದಿಂದ ಆಯ್ಕೆಯಾಗಿ ಸತತ ನಾಲ್ಕು ಬಾರಿಗೆ ಆಯ್ಕೆಯಾಗಿರುವ ಪ್ರಾಬಲ್ಯ ಉಳಿಸಿಕೊಂಡಿದ್ದಾರೆ.
ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯ ಟಿಕೆಟ್ ಆಯ್ಕೆ ವಿಚಾರದಲ್ಲಿ ದಳಪತಿಗಳ ವಿರುದ್ಧ ಮುನಿದು ದೂರ ಉಳಿದ ಮರಿತಿಬ್ಬೇಗೌಡರು ಈಗ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಐದನೇ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸುವ ಕನಸು ಇಟ್ಟುಕೊಂಡಿದ್ದಾರೆ.
ಪರಸ್ಪರ ತಂತ್ರ-ಪ್ರತಿತಂತ್ರ: ಪಕ್ಷದ ವಿರುದ್ಧ ಸಿಡಿದು ಕಾಂಗ್ರೆಸ್ ಸೇರಿರುವ ಮರಿತಿಬ್ಬೇಗೌಡರನ್ನು ಮಣಿಸಬೇಕೆಂದು ದಳಪತಿಗಳು ಕಾರ್ಯತಂತ್ರ ಹೂಡಿದ್ದು, ಅದಕ್ಕೆ ತಕ್ಕಂತೆ ಸ್ಥಳೀಯ ನಾಯಕರು ಕೈಜೋಡಿಸಿದ್ದಾರೆ. ಚುನಾವಣಾ ಉಸ್ತುವಾರಿಯನ್ನು ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಎ.ಮಂಜು ಹೊತ್ತಿದ್ದು, ಬಿಜೆಪಿ-ಜಾ.ದಳದ ಹಾಲಿ-ಮಾಜಿ ಶಾಸಕರಿಗೆ ಆಯಾಯ ವಿಧಾನಸಭಾ ಕ್ಷೇತ್ರದ ಹೊಣೆ ನೀಡಲಾಗಿದೆ. ವಿಶೇಷವಾಗಿ ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಸಂಸದ ಪ್ರಜ್ವಲ್ ಪ್ರಕರಣದ ಬಗ್ಗೆ ತಲೆ ಬಿಸಿಮಾಡಿಕೊಳ್ಳದೆ ಚುನಾವಣಾ ಪ್ರಚಾರದಲ್ಲಿ ತೊಡಗುವಂತೆ ಸೂಚನೆ ನೀಡಿದ್ದರಿಂದ ಸದ್ದಿಲ್ಲದೆ ಕೆಲಸ ಮಾಡುತ್ತಿರುವುದು ಕಂಡುಬಂದಿದೆ.
ಆದರೆ, ಕಾಂಗ್ರೆಸ್ ನಾಯಕರು ಮೈತ್ರಿಕೂಟಕ್ಕೆ ಸೋಲುಣಿಸಲು ಬೇಕಾದ ಎಲ್ಲಾ ರಣತಂತ್ರಗಳನ್ನು ಹೂಡಿದ್ದಾರೆ. ಮರಿತಿಬ್ಬೇಗೌಡರು ಶಿಕ್ಷಕರ ವಲಯದಲ್ಲಿ ತಮ್ಮದೇ ಮತ ಬ್ಯಾಂಕ್ ಹೊಂದಿರುವ ಕಾರಣ ಕಾಂಗ್ರೆಸ್ ಬೆನ್ನಿಗೆ ನಿಂತಿದೆ. ಹಾಸನ, ಮಂಡ್ಯ ಜಿಲ್ಲೆಗಳಲ್ಲಿ ಒಕ್ಕಲಿಗ ಸಮುದಾಯದ ಶಿಕ್ಷಕ ವರ್ಗದ ಮತವನ್ನು ಗಣನೀಯವಾಗಿ ಪಡೆಯುವ ಜತೆಗೆ ದಲಿತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಶಿಕ್ಷಕ ಮತದಾರರ ಕ್ರೋಢಿಕರಣಕ್ಕೆ ಹಲವರಿಗೆ ಜವಾಬ್ದಾರಿ ನೀಡಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ಕಾರಣ ಆಯಾಯ ಜಿಲ್ಲಾ ಉಸ್ತುವಾರಿ ಸಚಿವರು ಚುನಾವಣೆಗೆ ಒಂದು ವಾರ ಇರುವ ಮುನ್ನ ತಾಲ್ಲೂಕುವಾರು ಶಿಕ್ಷಕರ ಸಭೆಗಳನ್ನು ನಡೆಸಿ ಮತಯಾಚನೆ ಮಾಡಲು ಬೇಕಾದ ತಯಾರಿ ನಡೆದಿದೆ ಎಂದು ಹೇಳಲಾಗಿದೆ.
ಕಣದಿಂದ ದೂರ ಉಳಿದ ಬಿಜೆಪಿ: ಚುನಾವಣೆಯಲ್ಲಿ ಸತತ ಸೋಲು ಕಂಡರೂ ಮರಳಿ ಯತ್ನಿಸುತ್ತಿದ್ದ ಬಿಜೆಪಿ ಮೊದಲ ಬಾರಿಗೆ ಕಣದಿಂದ ದೂರ ಸರಿದಿದೆ. ಪಕ್ಷದಿಂದ ಘೋಷಿಸಿದ್ದ ಅಭ್ಯರ್ಥಿ ಡಾ.ಈ.ಸಿ.ನಿಂಗರಾಜ್ ಗೌಡರನ್ನು ವಾಪಸ್ ಕರೆಸಿಕೊಂಡಿದ್ದರಿಂದ ಕಣದಲ್ಲಿ ಬಿಜೆಪಿ ಅಭ್ಯರ್ಥಿ ಇಲ್ಲದಂತಾಗಿದೆ. ಪ್ರೊ.ಎಸ್.ಎಂ.ಗುರುನಂಜಯ್ಯ, ಬಿ.ನಿರಂಜನಮೂರ್ತಿ ಸೋಲುಂಡಿದ್ದರು. ಈ ಬಾರಿಯೂ ಟಿಕೆಟ್‌ಗೆ ಬೇಡಿಕೆ ಉಂಟಾಗಿದ್ದರೂ ಜಾ.ದಳ ಪಾಲಾಗಿದ್ದರಿಂದ ಬಿಜೆಪಿ ನಾಯಕರು ಈಗ ಮೈತ್ರಿ ಪರವಾಗಿ ಕೆಲಸ ಮಾಡಲು ಅಖಾಡಕ್ಕೆ ಧುಮುಕಿದ್ದಾರೆ.
ಮೈತ್ರಿಗೆ ಒಳೇಟಿನ ಗುಮ್ಮ: ಕೆ.ಟಿ.ಶ್ರೀಕಂಠೇಗೌಡರು ತಟಸ್ಥವಾಗಿ ಉಳಿದರೂ ಅಥವಾ ಪ್ರಚಾರದಲ್ಲಿ ತೊಡಗಿದರೂ ಮೈತ್ರಿ ಅಭ್ಯರ್ಥಿಗೆ ಒಳೇಟಿನ ಗುಮ್ಮ ಕಾಡಲು ಶುರುವಾಗಿದೆ. ಮೇಲ್ನೋಟಕ್ಕೆ ಬಿಜೆಪಿ-ಜಾ.ದಳದ ಪರವಾಗಿ ಕೆಲಸ ಮಾಡುತ್ತಿದ್ದರೂ ಒಳಗೊಳಗೆ ಪೆಟ್ಟು ನೀಡುವ ಬೆಳವಣಿಗೆಗಳು ನಡೆಯುತ್ತಿವೆ. ಬಿಜೆಪಿ ಪರವಾಗಿದ್ದ ಶಿಕ್ಷಕ ಸಂಘಟನೆಗಳ ಕೆಲವು ಪದಾಧಿಕಾರಿಗಳು ಈಗಾಗಲೇ ಮರಿತಿಬ್ಬೇಗೌಡರ ಕ್ಯಾಂಪ್‌ನಲ್ಲಿ ಗುರುತಿಸಿಕೊಂಡಿದ್ದರೆ, ಹಲವರು ಮೌನವಾಗಿದ್ದಾರೆ. ಅದೇ ರೀತಿ ಕೆ.ಟಿ.ಶ್ರೀಕಂಠೇಗೌಡರು ತಟಸ್ಥವಾಗಿರುವ ಕಾರಣ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.