Mysore
24
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಬುಟ್ಟಿ ಹೆಣೆದು ಬದುಕು ಕಟ್ಟಿಕೊಳ್ಳಲು ಹೆಣಗಾಟ; ನೆಲ್ಲೂರಿನಿಂದ ಮೈಸೂರಿಗೆ ಬಂದಿರುವ ಐದು ಕುಟುಂಬಗಳ ಪಡಿಪಾಟಲು

ಮೈಸೂರು: ಕಷ್ಟ ಕಾರ್ಪಣ್ಯದ ಜೀವನ… ದುಡಿದರೆ ಮಾತ್ರ ಗಂಜಿ ಎಂಬಂತಹ ಸ್ಥಿತಿ… ಯಾವುದೋ ಊರಿಂದ ಬಂದು ಬಿಸಿಲು, ಮಳೆ, ಗಾಳಿಗೆ ಅಂಜದೆ, ಬದುಕಿನ ಬಂಡಿ ಎಳೆಯಲು ಪರಿಶ್ರಮಪಡುವ ಜೀವಿಗಳು… ಅವರ ಕೈಯಲ್ಲಿ ವರ್ಣರಂಜಿತವಾಗಿ ಅರಳುತ್ತವೆ ಬುಟ್ಟಿಗಳು, ಅವು ನೋಡುಗರನ್ನು ಮುದಗೊಳಿಸಿ, ಖರೀದಿಸಲು ಉತ್ತೇಜಿಸುತ್ತವೆ. ಹೌದು, ಆ ಬುಟ್ಟಿಗಳೇ ಅವರಿಗೆ ತುತ್ತಿನ ಬುತ್ತಿಯೊದಗಿಸುವ ಜೀವನಾಡಿಗಳು…

ಇದು ಪ್ಲಾಸ್ಟಿಕ್ ವೈರ್‌ನಿಂದ ಪೂಜಾ ಬುಟ್ಟಿಯನ್ನು ಹೆಣೆದು ಬದುಕು ಕಟ್ಟಿಕೊಳ್ಳಲು ಹೆಣಗುತ್ತಿರುವ ನೆರೆಯ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಿಂದ ಮೈಸೂರಿಗೆ ವಲಸೆ ಬಂದಿರುವ 5 ಅಲೆಮಾರಿ ಕುಟುಂಬಗಳ ಕಾಯಕ ಜೀವನಕ್ಕೆ ಕನ್ನಡಿ ಹಿಡಿಯುವ ಅಂಶ. ಇವರು ಮೈಸೂರು- ಊಟಿ ರಸ್ತೆ ಬದಿಯಲ್ಲಿರುವ ಗುಂಡೂರಾವ್ ನಗರದ ಖಾಲಿ ಜಾಗದಲ್ಲಿ ಗೂಡಿನಂತಹ ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಸ್ತವ್ಯ ಹೂಡಿದ್ದಾರೆ. ಇವರು ಎಲ್ಲೇ ಹೋಗಿ ಬಿಡಾರ ಹಾಕಿದರೂ ಚೆಂದದ ವೈರ್‌ಗಳನ್ನು ಬಳಸಿಕೊಂಡು ಪೂಜಾ ಬುಟ್ಟಿಗಳನ್ನು ತಯಾರಿಸುತ್ತಾರೆ. ಆಕರ್ಷಕ ಬಣ್ಣಗಳ ಈ ಬುಟ್ಟಿಗಳನ್ನು ಸಾಮಾನ್ಯವಾಗಿ ಜನರು ದೇವಾಲಯಕ್ಕೆ ಹಣ್ಣು, ಕಾಯಿ ತೆಗೆದುಕೊಂಡು ಹೋಗುವುದಕ್ಕೆ ಬಳಸುತ್ತಾರೆ.

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಇಲ್ಲಿ ಪೂಜಾ ಬುಟ್ಟಿಗಳು ತಯಾರಾಗುತ್ತವೆ. ತಮಗೆ ಬೇಕಾದ ವಿನ್ಯಾಸವನ್ನು ಮೊದಲೇ ತಿಳಿಸಿದರೆ ಅವುಗಳನ್ನು ಇಲ್ಲಿನ ಬುಟ್ಟಿ ತಯಾರಕರು ಸಿದ್ಧಪಡಿಸುತ್ತಾರೆ.

ಹೀಗಿದೆ ಇವರ ದಿನಚರಿ…

ಬೆಳಿಗ್ಗೆ ಸಮಯದಲ್ಲಿ ಕುಟುಂಬದ ಮಹಿಳೆಯರು ಪೂಜಾ ಬುಟ್ಟಿಗಳನ್ನು ತಮ್ಮ ಕೈ ಚಳಕದಿಂದ ಹೆಣೆಯುತ್ತಾರೆ. ನಂತರ ಬಿಸಿಲು ಏರುತ್ತಿದ್ದಂತೆ, ಅಂದರೆ ಸುಮಾರು 10- 11 ಗಂಟೆ ವೇಳೆಗೆ ಬುಟ್ಟಿಗಳನ್ನು ದ್ವಿಚಕ್ರ ವಾಹನಕ್ಕೆ ಕಟ್ಟಿಕೊಂಡು ಮಾರಾಟಕ್ಕೆ ಹೊರಡುತ್ತಾರೆ. ಸಂಜೆಯವರೆಗೂ ಮೈಸೂರಿನ ಸುತ್ತಮುತ್ತಲಿನ ಬಡಾವಣೆಗಳು, ಹಳ್ಳಿಗಳಲ್ಲಿ, ಜನಸಂದಣಿ ಇರುವ ಪ್ರದೇಶ ಹಾಗೂ ಜಾತ್ರೆಗಳಲ್ಲಿ ಮಹಿಳೆಯರು ಮತ್ತು ಪುರುಷರು ಹೋಗಿ ಮಾರಾಟ ಮಾಡುತ್ತಾರೆ.

ಬುಟ್ಟಿಯ ದರ ಎಷ್ಟು?
ವಿವಿಧ ಬಗೆಯ ಅಥವಾ ಗಾತ್ರದ ಪೂಜಾ ಬುಟ್ಟಿಗಳಿದ್ದು, ಚಿಕ್ಕ ಬುಟ್ಟಿಗೆ 100ರಿಂದ 200 ರೂ., ದೊಡ್ಡ ಬುಟ್ಟಿಗೆ 300 ರೂ. ಗಳವರೆಗೆ ಮಾರಾಟ ಮಾಡುತ್ತಾರೆ.

ಮಾರುಕಟ್ಟೆಯಿಂದ ಪ್ಲಾಸ್ಟಿಕ್ ವೈರ್ ಖರೀದಿ…

ಬುಟ್ಟಿ ತಯಾರಕರು ಪೂಜಾ ಬುಟ್ಟಿಗೆ ಬೇಕಾದ ನಾನಾ ರೀತಿಯ ಬಣ್ಣ ಬಣ್ಣದ ವೈರ್‌ಗಳನ್ನು ಮಾರುಕಟ್ಟೆಯಿಂದ ತಂದು ತಮ್ಮ ಶೆಡ್ ಬಳಿಯೇ ಚಿತ್ತಾಕರ್ಷಿಸುವಂತಹ ಬುಟ್ಟಿಗಳನ್ನು ತಯಾರಿಸುತ್ತಾರೆ.

ಸಮಸ್ಯೆಗಳಿಗೆ ಹೊಂದಿಕೊಂಡ ಜೀವನ…

ಮೈಸೂರು -ಊಟಿ ರಸ್ತೆಯಲ್ಲಿ ದಿನಕ್ಕೆ ಸಾವಿರಾರು ವಾಹನಗಳು ಓಡಾಡುತ್ತವೆ. ಬುಟ್ಟಿ ತಯಾರಕರು ಈ ರಸ್ತೆ ಬದಿಯಲ್ಲಿ ವಾಸವಾಗಿರುವುದರಿಂದ ನಿತ್ಯ ವಾಹನಗಳ ಕಿರಿಕಿರಿ ಅನುಭವಿಸುತ್ತಿದ್ದಾರೆ. ಜತೆಗೆ, ಜೋರು ಮಳೆ ಬಂದರೆ ಶೆಡ್‌ಗೆ ನೀರು ನುಗ್ಗುವ ಸಾಧ್ಯತೆಗಳಿವೆ. ಹೀಗೆ ಸಮಸ್ಯೆಗಳಿಗೆ ಹೊಂದಿಕೊಂಡೇ ಇವರು ಜೀವನ ನಡೆಸುವುದು ಅನಿವಾರ್ಯವಾಗಿದೆ.

ಕಳೆದ ಒಂದು ವರ್ಷದಿಂದ ಮೈಸೂರಿಗೆ ಹೆಣೆದು ಜೀವನ ಸಾಗಿಸುತ್ತಿದ್ದೇವೆ. ಬೆಳಿಗ್ಗೆ ಸಂಜೆಯವರೆಗೂ ಬುಟ್ಟಿಗಳನ್ನು ಹಳ್ಳಿಗಳಿಗೆ, ಕುಟುಂಬ ಸಮೇತ ಬಂದು, ಪೂಜಾ ಬುಟ್ಟಿಗಳನ್ನು ಹೊತ್ತು ಬುಟ್ಟಿ ಹೆಣೆಯುತ್ತೇವೆ. ಮಧ್ಯಾಹ್ನದಿಂದ ಜಾತ್ರೆ-ಉತ್ಸವ, ಜನಸಂದಣಿ ಇರುವ ಜಾಗಗಳಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತೇವೆ. ಒಂದು ಬುಟ್ಟಿ ಹೆಣೆಯಲು 1 ಗಂಟೆ ಸಮಯ ಬೇಕಾಗುತ್ತದೆ.
-ಜಯಮ್ಮ, ಬುಟ್ಟಿ ತಯಾರಕರು

Tags: