Mysore
27
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಮಳೆ ಬಂದರೆ ಕೆಸರು ಗದ್ದೆಯಂತಾಗುವ ಎಂ.ಜಿ.ರಸ್ತೆ ಮಾರುಕಟ್ಟೆ

ಮೈಸೂರು: ಎತ್ತ ನೋಡಿದರೂ ಕೆಸರು… ಕೊಳೆತ ತರಕಾರಿಗಳ ದುರ್ವಾಸನೆ… ಎಲ್ಲೆಂದರಲ್ಲಿ ಕಸದ ರಾಶಿ… ಮುರಿದ ಚರಂಡಿಯ ಸ್ಲಾಬ್‌ಗಳು… ಅಂಗಳದಲ್ಲಿ ಕಾಲಿಟ್ಟರೆ ಪಿಚ್ ಎನ್ನುವಂತೆ ಕಾಲಿಗೆ ಮೆತ್ತಿಕೊಳ್ಳುವ ರಾಡಿ ಮಣ್ಣು… ಹೀಗೆ ಕಾಲಿಡಲೂ ಒಂದು ಕ್ಷಣ ಯೋಚನೆ ಮಾಡುವಂತಹ ಜಾಗಕ್ಕೆ ರೈತರು ತಾವು ಬೆಳೆದ ಫಸಲುಗಳನ್ನು ಮಾರಾಟ ಮಾಡಲು ತರುತ್ತಾರೆ. ಸಾರ್ವಜನಿಕರು ಸೊಪ್ಪು ತರಕಾರಿಗಳ ಖರೀದಿಗೆ ಇಲ್ಲಿಗೆ ತರುತ್ತಾರೆ. ಇದು ಜನಜನಿತ ಎಂ.ಜಿ.ರಸ್ತೆಯ ತರಕಾರಿ ಮಾರುಕಟ್ಟೆಯ ಮಳೆಗಾಲದ ಚಿತ್ರಣ.

ರೈತರು, ಸಣ್ಣ ವ್ಯಾಪಾರಸ್ಥರು, ತರಕಾರಿ ಕೊಳ್ಳುವ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸ್ಥಾಪನೆಯಾದ ಈ ಮಾರುಕಟ್ಟೆಗೆ ಆರಂಭದಿಂದಲೂ ಭೂಗಳ್ಳರ ತೊಡರುಗಾಲು ಇದ್ದೇ ಇದೆ. ಪ್ರಭಾವಿಗಳು, ಭೂಗಳ್ಳರು ಈ ಮಾರುಕಟ್ಟೆಯನ್ನು ಎತ್ತಂಗಡಿ ಮಾಡಿಸಿ ಭೂಮಿ ಲಪಟಾಯಿಸಲು ನಿರಂತರವಾಗಿ ಸಂಚು ನಡೆಸುತ್ತಲೇ ಇದ್ದಾರೆ. ಹಾಗಾಗಿ ಈ ಮಾರುಕಟ್ಟೆಯನ್ನು ಉಳಿಸಿಕೊಳ್ಳಲು ನಿತ್ಯವೂ ಹೆಣಗಾಡುತ್ತಿರುವ ರೈತರು, ವ್ಯಾಪಾರಸ್ಥರಿಗೆ ಈಗ ಮತ್ತೊಂದು ಕಿರಿಕಿರಿ ಶುರುವಾಗಿದೆ.

ಮಳೆಯಿಂದಾಗಿ ಈ ಮಾರುಕಟ್ಟೆ ಕೆಸರು ಗದ್ದೆಯಂತಾಗಿದೆ. ಮಾರಾಟಗಾರರು ಬೇಡವಾದ ಅಳಿದುಳಿದ ಹಣ್ಣು, ಸೊಪ್ಪು, ತರಕಾರಿಯನ್ನು ಬಿಸಾಡುವುದರಿಂದ ಅವು ಕೊಳೆತು ಮಣ್ಣಿನಲ್ಲಿ ಸೇರಿ ದುರ್ವಾಸನೆ ಬೀರುವುದಲ್ಲದೆ, ಇಲ್ಲಿ ಕಾಲಿಟ್ಟವರಿಗೆ ಯಾವುದಾದರೊಂದು ರೋಗ ಖಚಿತ ಎಂಬಂತಾಗಿದೆ.

ಇದೊಂದು ಗಂಭೀರವಾದ ವಿಚಾರವಾಗಿದ್ದು, ಸಾರ್ವಜನಿ ಕರು, ರೈತರು, ವ್ಯಾಪಾರಸ್ಥರ ಬಗ್ಗೆ ಆಡಳಿತ ವರ್ಗಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ ಎಂಬುದನ್ನು ಸಾಕ್ಷೀಕರಿಸುತ್ತದೆ. ಇತ್ತೀಚೆಗೆ ಎಲ್ಲೆಡೆ ಹರಡುತ್ತಿರುವ ಡೆಂಗ್ಯು ಬಗ್ಗೆ ಮೈಸೂರು ಜಿಲ್ಲಾಡಳಿತ ಎಷ್ಟರ ಮಟ್ಟಿಗೆ ಕ್ರಮ ಕೈಗೊಳ್ಳುತ್ತಿದೆ ಎಂಬುದನ್ನು ಈ ಮಾರುಕಟ್ಟೆ ಹಾಗೂ ಇದರ ಸುತ್ತಲಿನ ಪ್ರದೇಶ ಸಾಬೀತುಪಡಿಸುತ್ತದೆ.

ಪ್ರತಿ ದಿನ ಲಕ್ಷಾಂತರ ರೂ. ವಹಿವಾಟು ನಡೆಯುವ ಕೇಂದ್ರ ಸ್ಥಾನ: ಮೈಸೂರಿನ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಿಂದ ತರಕಾರಿಗಳನ್ನು ಗೂಡ್ಸ್ ಆಟೋ, ಟೆಂಪೋ, ದ್ವಿಚಕ್ರ ವಾಹನಗಳ ಮೂಲಕ ತರುವ ರೈತರು ಹಾಗೂ ನೇರವಾಗಿ ರೈತರಿಂದ ತರಕಾರಿ ಖರೀದಿಸುವ ಸಾರ್ವಜನಿಕರು ಇಲ್ಲಿ ಜಮಾಯಿಸುತ್ತಾರೆ. ಹಾಗಾಗಿ ಈ ಸ್ಥಳ ಸದಾ ಜನ ದಟ್ಟಣೆಯಿಂದ ಕೂಡಿರುತ್ತದೆ.

ಪ್ರತಿದಿನ ಬೆಳಗಿನ ಜಾವದಿಂದ ಸಂಜೆವರೆಗೂ ಸಾವಿರಾರು ಮಂದಿ ರೈತರು ಅಂದಾಜು 20 ಲಕ್ಷರೂ.ಗೂ ಹೆಚ್ಚು ವ್ಯಾಪಾರ ವಹಿವಾಟು ನಡೆಸುತ್ತಾರೆ. ಇದಲ್ಲದೆ ಸುಮಾರು 450ಕ್ಕೂ ಹೆಚ್ಚು ಮಂದಿ ಸಣ್ಣ ವ್ಯಾಪಾರಸ್ಥರು ಆರ್‌ಎಂಸಿಯಿಂದ ಹಣ್ಣು, ಸೊಪ್ಪು, ತರಕಾರಿ ತಂದು ಅಂದಾಜು 25 ಲಕ್ಷ ರೂ. ವರೆಗೂ ವ್ಯಾಪಾರ ವಹಿವಾಟು ನಡೆಸುತ್ತಾರೆ. ಒಟ್ಟಾರೆ ಈ ಮಾರುಕಟ್ಟೆಯಲ್ಲಿ ಕಡಿಮೆ ಎಂದರೂ ದಿನಕ್ಕೆ 50 ಲಕ್ಷ ರೂ.ಗಳ ವ್ಯಾಪಾರ ವಹಿವಾಟು ನಡೆಯುತ್ತದೆ. ಇಂತಹ ಮಾರುಕಟ್ಟೆಯಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದಿರುವುದು ಶೋಚನೀಯ

ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಅಡ್ಡಾದಿಡ್ಡಿ ವಾಹನ ನಿಲುಗಡೆ: ಇಷ್ಟೆಲ್ಲಾ ವಹಿವಾಟು ನಡೆಯುವ, ನಿತ್ಯ ಸಾವಿರಾರು ಜನರು ಬಂದು ಹೋಗುವ ಈ ಮಾರುಕಟ್ಟೆಯಲ್ಲಿ ಒಂದು ವ್ಯಸ್ಥಿತವಾದ ಪಾರ್ಕಿಂಗ್ ಸ್ಥಳ ಇಲ್ಲ. ಎಲ್ಲೆಂದರಲ್ಲಿ ಗೂಡ್ಡ ಆಟೋಗಳು, ಟೆಂಪೋಗಳು, ದ್ವಿಚಕ್ರವಾಹನಗಳನ್ನು ನಿಲ್ಲಿಸಲಾಗುತ್ತದೆ. ರಾಡಿ ಹಿಡಿದ ಕೆಸರು ಮಣ್ಣಿನಲ್ಲಿ ಹಲವು ಮಂದಿ ಜಾರಿ ಬಿದ್ದಿದ್ದಾರೆ.

ದ್ವಿಚಕ್ರ ವಾಹನಗಳಲ್ಲಿ ಬರುವವರು ಆಯತಪ್ಪಿ ಬಿದ್ದಿದ್ದಾರೆ. ಕೆಲವು ಆಟೋಗಳು ಮಗುಚಿಕೊಂಡಿವೆ. ಈ ಸಮಸ್ಯೆಗಳನ್ನು ಯಾರಿಗೆ ಹೇಳುವುದು? ಜಿಲ್ಲಾಡಳಿತ ಮಾನವೀಯತೆ ದೃಷ್ಟಿಯಿಂದಲಾದರೂ ಕನಿಷ್ಠ ಮೂಲಸೌಕರ್ಯ ಒದಗಿಸಬೇಕು ಎಂಬುದು ರೈತರು, ವಾಹನ ಚಾಲಕರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರ ಅಭಿಪ್ರಾಯವಾಗಿದೆ. ಬಿಡಾಡಿ ದನಗಳ ಕಿರಿಕಿರಿ: ಮಾರುಕಟ್ಟೆ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಬಿಸಾಡುವ ಕೊಳೆತ ಹಣ್ಣು, ತರಕಾರಿಗಳನ್ನು ತಿನ್ನಲು ಹಲವಾರು ಬಿಡಾಡಿ ದನಗಳು, ಗೂಳಿಗಳು ಲಗ್ಗೆಯಿಡುವುದಲ್ಲದೆ ಜನರ ಮಧ್ಯೆ ನುಗ್ಗಿ ಆತಂಕ ಸೃಷ್ಟಿಸುತ್ತವೆ.

‘ಆಂದೋಲನ’ ಕಳಕಳಿ
ನಗರದ ಲ್ಯಾನ್ಸ್‌ಡನ್ ಕಟ್ಟಡದ ಮುಂಭಾಗದಲ್ಲಿ ವ್ಯಾಪಾರ ಮಾಡುತ್ತಿದ್ದ ಹಣ್ಣು, ತರಕಾರಿ ವ್ಯಾಪಾರಸ್ಥರನ್ನು ಅಲ್ಲಿಂದ ಎತ್ತಂಗಡಿ ಮಾಡಿಸಿದಾಗ ಈ ವ್ಯಾಪಾರಸ್ಥರ ಬೆನ್ನಿಗೆ ನಿಂತಿದ್ದು ‘ಆಂದೋಲನ’ ದಿನಪತ್ರಿಕೆ. ಬಡ ರೈತರು, ವ್ಯಾಪಾರಸ್ಥರಿಗೆ ನೆಲೆ ಕಾಣಿಸಲು ದಲಿತ ಸಂಘರ್ಷ ಸಮಿತಿ ಹಾಗೂ ‘ಆಂದೋಲನ’ ಪತ್ರಿಕೆಯ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರು ನಿರಂತರ ಹೋರಾಟ ಮಾಡಿದ ಫಲವಾಗಿ ಎಂ.ಜಿ.ರಸ್ತೆಯ ಈ ಸ್ಥಳದಲ್ಲಿ ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಯಿತು.

ಸಹಕಾರ ಸಂಘ ಆರಂಭ: ರೈತರು ಹಾಗೂ ವ್ಯಾಪಾರಸ್ಥರ ಅನುಕೂಲಕ್ಕಾಗಿ ಹಾಗೂ ಮಧ್ಯವರ್ತಿಗಳ ಕಿರುಕುಳ ಇಲ್ಲದೆ ರೈತರು ಖರೀದಿದಾರರಿಗೆ ನೇರವಾಗಿ ತರಕಾರಿ ಮಾರಾಟ ಮಾಡುವ ವ್ಯವಸ್ಥೆ ಸುಗಮಗೊಳಿಸಲು 2011ರಲ್ಲಿ ಆರಂಭವಾದ ಸಿದ್ದಾರ್ಥ ತರಕಾರಿ ಬೆಳೆಯುವ ರೈತರು ಮತ್ತು ವ್ಯಾಪಾರಸ್ಥರ ಸಹಕಾರ ಸಂಘಕ್ಕೆ ರಾಜಶೇಖರ ಕೋಟಿ ಅವರು ಒತ್ತಾಸೆಯಾಗಿದ್ದರು.

ಕೋಟ್ಸ್‌))

ನಾವೆಲ್ಲರೂ ಅಸಹಾಯಕ ಸ್ಥಿತಿಯಲ್ಲಿ ದ್ದೇವೆ. ನಾನು ನಿತ್ಯ ಸೊಪ್ಪು, ತರಕಾರಿ ಖರೀದಿಸಲು ಬರುತ್ತೇನೆ. ನನ್ನ ಕಣ್ಣೆ ದುರೇ ಅನೇಕರು ಜಾರಿ ಬಿದ್ದಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕಡೆಯಪಕ್ಷ ಮಣ್ಣನ್ನಾದರು ಹಾಕಿಸ ಬಹುದಾಗಿತ್ತು. ಜನರ ಸಮಸ್ಯೆ ಕೇಳದೇ ಹೋದರೆ ಹೇಗೆ?

– ಸೈಯದ್ ನಾಜಿರ್, ವ್ಯಾಪಾರಿ, ಮೈಸೂರು

ಮಳೆಗಾಲ ಬಂತೆಂದರೆ ಪ್ರತಿದಿನವೂ ಇದೇ ಗೋಳು. ನಾವು ಯಾರಿಗೆ ಹೇಳೋದು. ನಾವು ಬೆಳೆದ ಫಸಲನ್ನು ಮಾರಲು ಇಲ್ಲಿಗೆ ಬರ್ತಿವಿ. ಆದರೆ ಮಳೆ ಬಂದಾಗ ಇಲ್ಲಿ ನಿಲ್ಲುವುದಕ್ಕೆ ಆಗುವುದಿಲ್ಲ. ಈ ಕೆಸರಿನಲ್ಲೇ ತರಕಾರಿ ಇಟ್ಟುಕೊಳ್ಳಬೇಕು. ಕೆಟ್ಟ ವಾಸನೆ ಬರುತ್ತದೆ. ವ್ಯಾಪಾರ ಮುಗಿ ಯುವವರೆಗೂ ಮೂಗು ಮುಚ್ಚಿಕೊಂಡು ನಿಂತಿರುತ್ತೇವೆ.
-ಅರಸನಾಯಕ, ರೈತ, ಮೈಸೂರು

ರೈತರ ಜಮೀನಿನಿಂದ ಮಾರುಕಟ್ಟೆಗೆ ತರಕಾರಿ ತರುವುದು ನನ್ನ ನಿತ್ಯದ ಕೆಲಸ. ಇಲ್ಲಿ ಇಷ್ಟೊಂದು ಕೊಳಕು, ಕೆಸರು ಇದೆ. ವಾಹನದಿಂದ ಕೆಳಗೆ ಇಳಿಯುವುದಕ್ಕೆ ಆಗುವುದಿಲ್ಲ. ಕೆಲವೊಮ್ಮೆ ಚಕ್ರ ಹೂತುಕೊಳ್ಳುತ್ತದೆ. ಈ ಸಮಸ್ಯೆಯನ್ನು ಯಾರಿಗೆ ಹೇಳಬೇಕೋ ಗೊತ್ತಿಲ್ಲ. ಆದರೂ ಸಂಬಂಧಪಟ್ಟವರು ಇದನ್ನು ಸರಿಪಡಿಸಿಕೊಡಬೇಕು ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ.
-ನಾಗೇಶ್, ಚಾಲಕ, ಎಚ್.ಡಿ.ಕೋಟೆ

Tags: