ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತಾರಣ್ಯಕ್ಕೆ ಸಫಾರಿಗೆ ಬರುವ ಜನರು ಇನ್ನು ಹುಲಿಗಳ ದರ್ಶನವಾಗದಿದ್ದರೂ ಆನೆಗಳನ್ನು ನೋಡಿ ಆನಂದಿಸಬಹುದು. ಆನೆಚೌಕೂರು ವಲಯದ ಮತ್ತಿಗೋಡು ಆನೆ ಕ್ಯಾಂಪ್ ಇದೀಗ ಪ್ರವಾಸಿಗರಿಗೆ ತೆರೆದಿದ್ದು ದಸರಾ ಆನೆಗಳು ಸೇರಿದಂತೆ 15ರಿಂದ 20 ಆನೆಗಳನ್ನು ಏಕಕಾಲದಲ್ಲಿ ವೀಕ್ಷಿಸಿ, ಫೋಟೋ ಕ್ಲಿಕ್ಕಿಸಲು ಅವಕಾಶ ಮಾಡಿಕೊಡಲಾಗಿದೆ.
ಆನೆಚೌಕೂರು ವಲಯದಲ್ಲಿ ಮತ್ತಿಗೋಡು ಕ್ಯಾಂಪ್ ಸುಮಾರು 30 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಈ ಪೈಕಿ 5 ಎಕರೆ ಪ್ರದೇಶವನ್ನು ಒಂದು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು , ರಾಜ ಮಹಾರಾಜರ ಕಾಲದಿಂದಲೂ ಮನುಷ್ಯನ ನಿಕಟವರ್ತಿಯಾಗಿರುವ ಗಜ ಸಮೂಹವನ್ನು ಹತ್ತಿರದಿಂದ ಕಂಡು ಅವುಗಳ ಆಹಾರ, ವಿಹಾರ, ವಿನೋದಾವಳಿಗಳನ್ನು ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.
ವಿಶೇಷ ಸೌಲಭ್ಯ: ಈ ಶಿಬಿರದಲ್ಲಿ 15ರಿಂದ 20 ಆನೆಗಳಿದ್ದು ಇವುಗಳನ್ನು ಒಂದೇ ಬಾರಿಗೆ ವೀಕ್ಷಿಸಲು ಅವಕಾಶವಿದೆ. ಇದಕ್ಕಾಗಿ ಆನೆ ಶಿಬಿರದ ಸುತ್ತ ಸಂದರ್ಶಕರ ಪಥ ನಿರ್ಮಿಸಲಾಗಿದೆ. ಈ ಪಥದ ಎರಡೂ ಬದಿಯಲ್ಲಿ ಮಾಹಿತಿ ಫಲಕ ಆಳವಡಿಸಲಾಗಿದ್ದು, ಆನೆಗಳ ಜೀವನ ಶೈಲಿ, ಆಹಾರ ಪದ್ಧತಿ, ನೀರು ಸೇವನೆ, ಜೀವಿತಾವಧಿ, ಆನೆ ಮಾನವ ಸಂಘರ್ಷ ಮಾಹಿತಿ ಸೇರಿದಂತೆ ಆನೆಗಳ ಬದುಕಿನ ಸಮಗ್ರ ಚಿತ್ರಣವನ್ನು ನೀಡಲಾಗಿದೆ. ಇದಲ್ಲದೆ ಕಾಕನಕೋಟೆ ಖೆಡ್ಡಾದಿಂದ ಹಿಡಿದು ಇತ್ತೀಚಿಗಿನ ಅನಸ್ತೇಶಿಯಾ ಇಂಜೆಕ್ಷನ್ ಪ್ರಯೋಗಿಸಿ ಆನೆಗಳನ್ನು ಸೆರೆ ಹಿಡಿಯುವ ವಿಧಾನದವರೆಗೆ ಆನೆಗಳನ್ನು ಸೆರೆ ಹಿಡಿಯುವ ಮತ್ತು ಪಳಗಿಸುವ ವಿಧಾನಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಮತ್ತಿಕೋಡು ಆನೆ ಕ್ಯಾಂಪ್ ಪ್ರವಾಸಿಗರ ಭೇಟಿಗೆ ತೆರೆದುಕೊಂಡ ದಿನದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು ಆನೆಗಳೊಂದಿಗೆ ಫೋಟೊ ತೆಗೆದುಕೊಂಡು ಸಂತಸಪಡುತ್ತಿದ್ದಾರೆ. ಬೆಳಿಗ್ಗೆ 9ರಿಂದ 10.30 ಮತ್ತು ಸಂಜೆ 4ರಿಂದ 5.30ರವರೆಗೆ ಪ್ರವಾಸಿಗರಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ.
ಕಣ್ಗಾವಲು ಉಪಕರಣಗಳ ಪ್ರದರ್ಶನ : ಮಾನವ-ಆನೆ ಸಂಘರ್ಷ ಮತ್ತು ಕಾರ್ಯಾಚರಣೆಗಳನ್ನು ನಿರ್ವಹಿಸಲು ಅರಣ್ಯ ಇಲಾಖೆ ಬಳಸುವ ಉಪಕರಣಗಳನ್ನು ನೇರವಾಗಿ ವೀಕ್ಷಿಸಲು ಪ್ರವಾಸಿಗರಿಗೆ ಇಲ್ಲಿ ಅವಕಾಶ ಮಾಡಿಕೊಡಲಾಗಿದೆ. ಟ್ರ್ಯಾಂಕ್ವಿಲೈಜರ್ ಡಾರ್ಟ್‌ಗಳು ಮತ್ತು ಅವುಗಳನ್ನು ಹಾರಿಸಲು ಬಳಸುವ ಬಂದೂಕುಗಳು, ಆನೆ ಕಾರ್ಯಾಚರಣೆಗೆ ಅಗತ್ಯವಾದ ಹಗ್ಗಗಳನ್ನು ನಿರ್ದಿಷ್ಟ ಕೋಣೆೊಯೊಂದರಲ್ಲಿ ಪ್ರದರ್ಶಿಸಲಾಗುತ್ತಿದೆ.
ಆನೆಗಳನ್ನು ಪಳಗಿಸುವ ವಿಶೇಷ ಕೇಂದ್ರ: ಮತ್ತಿಗೋಡು ಆನೆ ಶಿಬಿರವು ನೂರಾರು ಆನೆಗಳನ್ನು ಪಳಗಿಸಿದ ಚಾರಿತ್ರಿಕ ಹಿನ್ನೆಲೆಯನ್ನು ಹೊಂದಿದೆ. ಈಗಲೂ ಸೆರೆ ಹಿಡಿದ ಆನೆಗಳನ್ನು ಪಳಗಿಸಲು ಈ ಶಿಬಿರಕ್ಕೆ ಕರೆತರಲಾಗುತ್ತದೆ. ಶಿಬಿರದಲ್ಲಿ ಆನೆಗಳ ಹಿಂಡು ಮತ್ತು ಮರಿ ಆನೆಗಳು ಒಟ್ಟಾಗಿ ವಾಸಿಸುತ್ತಿವೆ. ಇಲ್ಲಿನ ನುರಿತ ಮಾವುತರು ಮತ್ತು ಕಾವಾಡಿಗರು ವಿಶೇಷ ಆರೈಕೆ ಮತ್ತು ಪೋಷಣೆಯೊಂದಿಗೆ ಆನೆಗಳು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತಾರೆ.
ಮತ್ತಿಗೋಡು ಆನೆ ಕ್ಯಾಂಪ್ ಮಕ್ಕಳಿಗೆ ಆನೆಗಳ ಬಗ್ಗೆ ಮಾಹಿತಿ ನೀಡುವ ವಿಶೇಷ ಕೇಂದ್ರವಾಗಿದೆ. ದಸರಾದಲ್ಲಿ ದೂರದಿಂದ ನೋಡಿದ ಆನೆಗಳನ್ನು ಇಲ್ಲಿ ನೇರವಾಗಿ ನೋಡಿ ಖುಷಿಪಟ್ಟಿದ್ದೇವೆ. ಇದರ ಜತೆ ಆನೆ ರೈಡಿಂಗ್ ವ್ಯವಸ್ಥೆ ಕಲ್ಪಿಸುವುದರಿಂದ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಬಹುದು.
– ಶಮಿತ ಕುಶಾಲನಗರ, ಪ್ರವಾಸಿಗರುಮತ್ತಿಗೋಡು ಶಿಬಿರದಲ್ಲಿ ಪ್ರವಾಸಿಗರಿಗೆ ವನ್ಯಜೀವಿ ಸಂರಕ್ಷಣೆ, ಆನೆ ಕಾರಿಡಾರ್, ಮಾನವ ಮತ್ತು ಆನೆ ಸಂಘರ್ಷ ಸೇರಿದಂತೆ ಹಲವು ಮಾಹಿತಿಗಳನ್ನು ಇಲಾಖೆಯ ನುರಿತ ತಜ್ಞರಿಂದ ನೀಡುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ.
-ಹರ್ಷಕುಮಾರ್ ಚಿಕ್ಕನರಗುಂದ, ಡಿಸಿಎಫ್ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ