Mysore
17
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ತಾಯಂದಿರ ಮರಣ; ಬಿಪಿ, ಶುಗರ್‌ ಕಾರಣ

ತಾಯಂದಿರ ಮರಣದ ಮಧ್ಯಂತರ ವಿಶ್ಲೇಷಣಾ ವರದಿಯಲ್ಲಿ ಆತಂಕಕಾರಿ ಅಂಶಗಳು ಪತ್ತೆ

-ಕೆ.ಬಿ.ರಮೇಶನಾಯಕ

ಮೈಸೂರು: ಎಂಡೋಟಾಕ್ಸಿನ್‌ಗಳಿಂದಾಗಿ ಶಂಕಿತ ತಾಯಂದಿರ ಮರಣ ಪ್ರಕರಣಗಳು ಕಂಡುಬಂದ ನಂತರ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ನಡೆದ ತಾಯಂದಿರ ಸಾವುಗಳನ್ನು ವಿಶ್ಲೇಷಿಸಲಾಗಿದ್ದು, ಈ ಸಾವುಗಳಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದ ತಾಯಂದಿರ ಸಂಖ್ಯೆಯೇ ಹೆಚ್ಚು ಎಂಬ ಆತಂಕಕಾರಿ ಅಂಶಗಳು ಪತ್ತೆಯಾಗಿವೆ.

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್ ನಂತರ ಐದು ಮಂದಿ ತಾಯಂದಿರು ಸಾವಿಗೀಡಾದ ಪ್ರಕರಣ ರಾಜ್ಯಾದ್ಯಂತ ದೊಡ್ಡ ತಲ್ಲಣವನ್ನು ಉಂಟುಮಾಡಿತ್ತು. ಪಶ್ಚಿಮ ಬಂಗಾಳದ -ರ್ಮಾಸ್ಯುಟಿಕಲ್ ಕಂಪೆನಿ ಸರಬರಾಜು ಮಾಡಿದ್ದ ನಿಷೇಧಿತ ಮತ್ತು ನಿಷೇಧಿಸದ ಇಂಟ್ರಾವೆನಸ್
ರಿಂಗರ್ ಲ್ಯಾಕ್ವೇಟ್‌ನಿಂದ ಸಾವು ಸಂಭವಿಸಿದೆ ಎಂಬ ವರದಿ ಬಂದಿತ್ತು.

ಇದರಿಂದಾಗಿ ಸರ್ಕಾರ ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಪ್ರಮುಖರು ಸೇರಿದಂತೆ ರಾಜ್ಯ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದ ನಿರ್ದೇಶಕರ ನೇತೃತ್ವದ ಸಮಿತಿಯು ನೀಡಿರುವ ತಾಯಂದಿರ ಮರಣದ ಮಧ್ಯಂತರ ವಿಶ್ಲೇಷಣಾ ವರದಿಯಲ್ಲಿ ಹಲವಾರು ಆತಂಕಕಾರಿ ಅಂಶಗಳನ್ನು ನೀಡುವ ಜತೆಗೆ ಮುಂದಿನ ದಿನಗಳಲ್ಲಿ ತಾಯಂದಿರ ಸಾವಿನ ಪ್ರಮಾಣವನ್ನು ಕಡಿಮೆ ಮಾಡುವ ಕುರಿತು ಶಿಫಾರಸ್ಸುಗಳನ್ನು ಮಾಡಿದೆ.

2024ರ ಏಪ್ರಿಲ್ 1ರಿಂದ ಡಿಸೆಂಬರ್ 31ರ ಅವಧಿಯಲ್ಲಿ ರಾಜ್ಯಾದ್ಯಂತ ಉಂಟಾದ 464 ತಾಯಂದಿರ ಸಾವುಗಳ ಬಗ್ಗೆ ರಾಜ್ಯಮಟ್ಟದ ತಜ್ಞರ ಸಮಿತಿಯು ವಿಶ್ಲೇಷಣಾ ವರದಿಗಾಗಿ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಏಪ್ರಿಲ್-59, ಮೇ-58, ಜೂನ್-42, ಜುಲೈ-39, ಆಗಸ್ಟ್-58, ಸೆಪ್ಟೆಂಬರ್-53, ಅಕ್ಟೋಬರ್-58, ನವೆಂಬರ್-58, ಡಿಸೆಂಬರ್ ತಿಂಗಳಲ್ಲಿ ಉಂಟಾದ 41 ತಾಯಂದಿರ ಮರಣದ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸಿ ಸಲ್ಲಿಸಿರುವ ವರದಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಚಿಂತೆಗೀಡು ಮಾಡಿದೆ.

ಏನೇನು ಅಂಶಗಳು ಪತ್ತೆ?: ತಾಯಂದಿರ ಸಾವಿನ ನೈಜ ಅಂಶಗಳನ್ನು ಪತ್ತೆ ಮಾಡಲು ೪೬೪ ತಾಯಂದಿರ ಮರಣಗಳಲ್ಲಿ 103(ಶೇ.22) ಸಾವು ಖಾಸಗಿ ವಲಯದ ಆಸ್ಪತ್ರೆಗಳಲ್ಲಿ, 305(ಶೇ.65) ಸಾವು ಸಾರ್ವಜನಿಕ ಆರೋಗ್ಯ ಆಸ್ಪತ್ರೆಗಳಲ್ಲಿ ಸಂಭವಿಸಿದ್ದರೆ, ಮನೆಯಿಂದ ಆಸ್ಪತ್ರೆಗೆ ಅಥವಾ ಆಸ್ಪತ್ರೆಯಿಂದ ಆಸ್ಪತ್ರೆಗೆ ಸಾಗಿಸುವ ಅವಧಿಯಲ್ಲಿ45 ಸಾವು(ಶೇ.10), ಮನೆಯಲ್ಲೇ 11 (ಶೇ.2.37) ಸಾವು ಸಂಭವಿಸಿವೆ. 464 ಪ್ರಕರಣಗಳಲ್ಲಿ ಶೇ.18ರಷ್ಟು (84) ಪ್ರಸವಪೂರ್ವ ಮತ್ತು ಶೇ.82ರಷ್ಟು(380) ಸಾವು ಪ್ರಸವ ನಂತರದ ಸಮಯದಲ್ಲಿ ಸಂಭವಿಸಿವೆ. ಶೇ.37 ಸಾವುಗಳು ಸಾಮಾನ್ಯ ಹೆರಿಗೆ ನಂತರ ಹಾಗೂ ಶೇ.63ರಷ್ಟು ಸಿಸೇರಿಯನ್ ನಂತರ ಉಂಟಾಗಿವೆ. ಶೇ.69 ರಷ್ಟು ಸಾವುಗಳು ಅಧಿಕ ರಕ್ತದೊತ್ತಡ, ಮಧುಮೇಹ, ಸೋಂಕು, ರಕ್ತಹೀನತೆ ಅಥವಾ ಹೆಚ್ಚಿನ ಅಪಾಯಕಾರಿ ಅಂಶಗಳನ್ನು ಹೊಂದಿದ್ದರೆ, ಶೇ.31ರಷ್ಟು ತಾಯಿ ಮರಣಗಳು ಯಾವುದೇ ಅಪಾಯಕಾರಿ ಅಂಶಗಳಿಲ್ಲದೆ ಸಂಭವಿಸಿರುವುದು ಪತ್ತೆಯಾಗಿದೆ.

25 ವರ್ಷದೊಳಗಿನ ವಯಸ್ಸಿನವರೇ ಹೆಚ್ಚು: ವಯಸ್ಸಿನ ಆಧಾರದ ಮೇಲೂ ವಿಶ್ಲೇಷಣೆ ಮಾಡಿದ್ದು, 18 ವರ್ಷಕ್ಕಿಂತ ಕಡಿಮೆ-7, 18ರಿಂದ 25 ವರ್ಷದೊಳಗಿನ-230, 26ರಿಂದ 30ರೊಳಗಿನ- 140, 31ರಿಂದ 35ರೊಳಗಿನ- 60, 35 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ 27 ಸಾವುಗಳು ಸಂಭವಿಸಿವೆ.

ತಾಯಂದಿರ ಸಾವು ತಡೆಯುವಲ್ಲಿ ಹಲವು ಲೋಪ ಬೆಳಕಿಗೆ: ತಾಯಂದಿರ ಸಾವುಗಳಲ್ಲಿ ಶೇ.70 ರಷ್ಟು ಸಮಸ್ಯೆಗಳನ್ನು ಪರಿಹರಿಸಿ ಮರಣ ತಡೆಯಬಹುದಾಗಿತ್ತು ಎಂದು ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ಸಮಿತಿ ಹೇಳಿದೆ. ಗರ್ಭಾವಸ್ಥೆಯಲ್ಲಿ ಸಂಭವಿಸುವ ಅಪಾಯಕಾರಿ ಅಂಶಗಳಾದ ರಕ್ತಹೀನತೆ, ಅಧಿಕ ರಕ್ತದೊತ್ತಡ, ಮಧುಮೇಹ, ಸೋಂಕುಗಳಿಗೆ ಆಸ್ಪತ್ರೆ, ಆರೋಗ್ಯ ಕೇಂದ್ರದ ಮಟ್ಟದಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆಯನ್ನು ನೀಡದಿರುವುದು, ಹೆಚ್ಚಿನ ಚಿಕಿತ್ಸೆಗೆ ಉನ್ನತ ಮಟ್ಟದ ಆಸ್ಪತ್ರೆಗೆ ತಾಯಿಯನ್ನು ಕಳುಹಿಸುವ ಮುಂಚಿತವಾಗಿ ರೆಫರಲ್  ಮಾರ್ಗಸೂಚಿಯನ್ನು ಅನುಸರಿಸದೆ ಇರುವುದು, ಸಿಸೇರಿಯನ್ ಪ್ರಮಾಣ ಕಡಿಮೆ ಮಾಡುವುದು, ಮನೆಯಿಂದ ಆಸ್ಪತ್ರೆಗೆ ಅಥವಾ ಆಸ್ಪತ್ರೆಯಿಂದ ಆಸ್ಪತ್ರೆಗೆ ಸಾಗಿಸುವ ಸಮಯದಲ್ಲಿ ಶೇ.10ರಷ್ಟು ತಾಯಂದಿರ ಸಾವುಗಳು ಸಂಭವಿಸಿರುವ ಕಾರಣ ಉನ್ನತ ಚಿಕಿತ್ಸೆಗೆ ಆಸ್ಪತ್ರೆಗಳಿಗೆ ರೆಫರ್ ಮಾಡುವ ಮೊದಲು ರೋಗಿಗಳ ವೈದ್ಯಕೀಯ ಪರಿಸ್ಥಿತಿಯನ್ನು ಸ್ಥಿರಗೊಳಿಸುವುದು ಮುಖ್ಯವೆಂದು ಹೇಳಿದೆ.

ಸಹಜ ಹೆರಿಗೆ ನಂತರ ಶೇ.37ರಷ್ಟು ತಾಯಂದಿರ ಸಾವುಗಳು ಸಂಭವಿಸಿವೆ ಹಾಗೂ ಸಿಸೇರಿಯನ್ ನಂತರ ಶೇ.63ರಷ್ಟು ಮರಣಗಳು ಸಂಭವಿಸಿವೆ. ಇದರ ಅನ್ವಯ ಹೆಚ್ಚಿನ ಸಂಖ್ಯೆಯಲ್ಲಿ ಸಹಜ ಹೆರಿಗೆಗಳನ್ನು ಉತ್ತೇಜಿಸಬೇಕೆಂದು ನೀಡಿರುವ ವಿಶ್ಲೇಷಣಾ ವರದಿಯಲ್ಲಿ ಹೇಳಲಾಗಿದೆ.

ತಾಯಂದಿರ ಮರಣಗಳನ್ನು ತಡೆಯಲು ತಜ್ಞರ ಸಮಿತಿ ನೀಡಿರುವ ಪ್ರಮುಖ 28 ಶಿಫಾರಸುಗಳನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುವುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಸಹಜ ಹೆರಿಗೆಗೆ ಆಗಬೇಕಿರುವ ತುರ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

-ದಿನೇಶ್ ಗುಂಡೂರಾವ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು.

 

Tags:
error: Content is protected !!