೨೮-೩೦ ಸಾವಿರ ರೂ. ಗಳಿದ್ದ ಟನ್ ಮಾವು ಈಗ ೧೩-೧೪ ಸಾವಿರ ರೂ. ಗೆ ಮಾರಾಟ; ರೈತರಿಗೆ ನಷ್ಟ
ದೂರ ನಂಜುಂಡಸ್ವಾಮಿ
ದೂರ: ಹಣ್ಣುಗಳ ರಾಜ ಮಾವಿನ ಹಣ್ಣು ಎಂದರೆ ಎಲ್ಲರ ಬಾಯಲ್ಲಿ ನೀರೂರುತ್ತದೆ. ತೋಟಗಾರಿಕೆ ಬೆಳೆಯಾದ ಮಾವು ಈ ಬಾರಿ ಹೆಚ್ಚಿನ ಲಾಭ ತರುವ ನಿರೀಕ್ಷೆಯನ್ನು ಪ್ರಾರಂಭದಲ್ಲಿ ಮೂಡಿಸಿತ್ತು. ಆದರೆ ಮಾವು ಫಲ ನೀಡುವ ಸಂದರ್ಭದಲ್ಲಿ ಉಂಟಾದ ಬೆಲೆ ಕುಸಿತ ಆ ನಿರೀಕ್ಷೆಯನ್ನು ಹುಸಿ ಮಾಡಿ ರೈತರ ಸಂತಸವನ್ನು ಮಾಯ ಮಾಡಿದೆ.
ಮೈಸೂರು ಜಿಲ್ಲೆಯಲ್ಲಿ ಒಟ್ಟು ೪,೨೭೦ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಮೈಸೂರು ತಾಲ್ಲೂಕಿನಲ್ಲಿ ೧,೬೪೦ ಹೆಕ್ಟೇರ್, ಎಚ್. ಡಿ. ಕೋಟೆಯಲ್ಲಿ ೬೨೭, ಹುಣಸೂರಿನಲ್ಲಿ ೧,೨೬೪, ಕೆ. ಆರ್. ನಗರದಲ್ಲಿ ೮೮, ನಂಜನ ಗೂಡಿನಲ್ಲಿ ೩೬೨, ಪಿ. ಪಟ್ಟಣದಲ್ಲಿ ೫೩, ತಿ. ನರಸೀ ಪುರದಲ್ಲಿ ೨೧೭, ಸರಗೂರಿನಲ್ಲಿ ೨೧ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ.
ಮೈಸೂರು ತಾಲ್ಲೂಕಿನ ಜಯಪುರ ಹಾಗೂ ಇಲವಾಲ ಹೋಬಳಿಗಳಲ್ಲಿ ಅತಿ ಹೆಚ್ಚು ಹಾಗೂ ಕಸಬಾ ಮತ್ತು ವರುಣ ಹೋಬಳಿಯಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಮಾವು ಬೆಳೆಯನ್ನು ಬೆಳೆಯಲಾಗಿದೆ.
ಈ ಬಾರಿ ಹೂ ಬಿಡುವುದು ತಡವಾದರೂ ಕಳೆದ ಐದಾರು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಅತಿ ಹೆಚ್ಚು ಹೂ ಬಿಟ್ಟಿರುವುದರಿಂದ ಮಾವು ತಜ್ಞರ ಪ್ರಕಾರ ಶೇ. ೭೫-೮೦ ರಷ್ಟು ಇಳುವರಿ ಬಂದಿದೆ. ಆದರೆ ಮೇ ಮೊದಲನೇ ವಾರದಲ್ಲಿ ಮಾವು ಕಾರ್ಖಾನೆ ಪ್ರಾರಂಭವಾದಾಗ ಒಂದು ಟನ್ ಮಾವಿಗೆ ೨೮-೩೦ ಸಾವಿರ ರೂ. ವರೆಗೆ ಇತ್ತು. ನಂತರ ಒಂದು ವಾರದಲ್ಲೇ ದಿಢೀರ್ ಬೆಲೆ ಕುಸಿತಗೊಂಡು ಟನ್ ಮಾವು ೧೩-೧೪ ಸಾವಿರ ರೂ. ಗೆ ಮಾರಾಟವಾಗುತ್ತಿದೆ.
ಪ್ರತಿ ವರ್ಷವೂ ಮಾವಿನ ಮರಗಳನ್ನು ಗುತ್ತಿಗೆ ಪಡೆಯುವ ಗುತ್ತಿಗೆದಾರರು ಪ್ರಾರಂಭದಲ್ಲಿ ಅರ್ಧದಷ್ಟು ಹಣವನ್ನು ನೀಡಿ ಮರಗಳನ್ನು ಗುತ್ತಿಗೆಗೆ ಪಡೆದಿರುತ್ತಾರೆ. ಆದರೆ ಈಗ ಬೆಲೆ ಕುಸಿತಗೊಂಡಿರುವುದರಿಂದ ಅವರು ನೀಡಿರುವ ಹಣವೂ ಕೂಡ ಅವರಿಗೆ ದೊರಕದೇ ಇರುವುದ ರಿಂದ ಹಾಗೂ ಅತಿಯಾದ ಮಳೆಯಿಂದ ಮಾವು ಕೊಯ್ಲು ಮಾಡಲೂ ಬಾರದೆ ರೈತರ ಕರೆಗೂ ಉತ್ತರಿಸದೆ ಗುತ್ತಿಗೆದಾರರು ಕಾಯಿಗಳನ್ನು ಹಾಗೆ ಬಿಟ್ಟು ಹೋಗಿದ್ದಾರೆ.
ರೈತರು ತಮ್ಮ ತೋಟದಲ್ಲಿ ಬೆಳೆದ ಮಾವನ್ನು ಕೊಯ್ಲು ಮಾಡಲು ಆಗದೆ ಹಾಗೆಯೇ ಬಿಡಲೂ ಆಗದೆ ಗುತ್ತಿಗೆದಾರರ ನಿರೀಕ್ಷೆಯಲ್ಲಿ ಕಾಯುತ್ತಾ ಕುಳಿತಿದ್ದಾರೆ. ಒಂದು ವಾರದಿಂದ ಸುರಿಯು ತ್ತಿರುವ ನಿರಂತರ ಮಳೆಯಿಂದಾಗಿ ಮಾವಿನ ಕಾಯಿ ಕಪ್ಪು ಬಣ್ಣಕ್ಕೆ ತಿರುಗಿ, ಹೂಜಿ ಬಂದು, ಅರ್ಧ ಹಣ್ಣಾಗಿ ನೆಲಕ್ಕೆ ಉದುರುತ್ತಿವೆ.
ಈ ರೀತಿಯ ಬೆಲೆಕುಸಿತ ರೈತರ ಸ್ಥಿತಿಯನ್ನು ಮತ್ತಷ್ಟು ಚಿಂತಾಜನಕಗೊಳಿಸಿದೆ. ಆದ್ದರಿಂದ ಮುಖ್ಯಮಂತ್ರಿಗಳು ಹಾಗೂ ತೋಟಗಾರಿಕಾ ಸಚಿವರು ನಷ್ಟದಲ್ಲಿರುವ ರೈತರ ಈ ಸಮಸ್ಯೆ ಯನ್ನು ಆಲಿಸಿ ಬಗೆಹರಿಸಲು ಮುಂದಾಗ ಬೇಕೆಂಬುದು ಈ ಭಾಗದ ರೈತರ ಒತ್ತಾಯವಾಗಿದೆ.
ಕಳೆದ ವರ್ಷ ಮಾವು ಇಳುವರಿ ಕಡಿಮೆ ಇತ್ತು ಹಾಗೂ ಬೆಲೆ ಹೆಚ್ಚಾಗಿತ್ತು. ಜ್ಯೂಸ್ ಫ್ಯಾಕ್ಟರಿಗಳಿಂದ ಹೆಚ್ಚಿನ ಬೇಡಿಕೆ ಇತ್ತು. ಈ ಬಾರಿ ಕಳೆದ ವರ್ಷ ಶೇಖರಣೆ ಮಾಡಿದ ಮಾವು ಖರ್ಚಾಗದೇ ಇರುವುದರಿಂದ ಫ್ಯಾಕ್ಟರಿಗಳು ಮಾವು ಖರೀದಿಗೆ ಮುಂದಾಗುತ್ತಿಲ್ಲ. ಅಲ್ಲದೆ ಈ ಬಾರಿ ಫಸಲು ಹೆಚ್ಚಿದೆ. ಇದು ಮಾವು ಬೆಲೆ ಕುಸಿತಕ್ಕೆ ಕಾರಣವಾಗಿದೆ. ತಮಿಳುನಾಡು ಹಾಗೂ ಆಂಧ್ರಪ್ರದೇಶದ ತೋತಾಪುರಿ ಹಣ್ಣುಗಳು ಇಲ್ಲಿಗೆ ಬಂದರೆ ಇನ್ನೂ ಬೆಲೆ ಕುಸಿತವಾಗುವ ಸಾಧ್ಯತೆಯಿದೆ.
-ಅಶ್ರಫ್, ಮಾವು ವ್ಯಾಪಾರಿ, ಪಿ. ಕೆ. ಮಂಡಿ ಕೃಷಿ ಮಾರುಕಟ್ಟೆ ಬಂಡಿಪಾಳ್ಯ, ಮೈಸೂರು.
ಪ್ರತಿಯೊಂದು ವಸ್ತುವಿಗೂ ಇಂತ್ತಿಷ್ಟು ಬೆಲೆ ಇದೆ ಆದರೆ ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಬೆಂಬಲ ಬೆಲೆ ದೊರಕುತ್ತಿಲ್ಲ. ಸರ್ಕಾರ ಬೇರೆ ಬೆಳೆಗಳಂತೆ ಮಾವು ಬೆಳೆಗೂ ಬೆಂಬಲ ಬೆಲೆ ಘೋಷಿಸಿ ಬೆಳೆಯನ್ನು ಖರೀದಿ ಮಾಡಿ ಶೇಖರಣಾ ಘಟಕ ಸ್ಥಾಪಿಸಿ ಬೆಳೆಯನ್ನು ಶೇಖರಿಸಲು ಮುಂದಾಗಬೇಕು. ನಷ್ಟದಲ್ಲಿರುವ ರೈತರಿಗೆ ಸಹಾಯಧನ ಕಲ್ಪಿಸಿ ಅವರು ಪುನಶ್ಚೇತನ ಗೊಳ್ಳಲು ಅವಕಾಶ ಕಲ್ಪಿಸಬೇಕು.
-ಡಿ. ಎಂ. ಗಿರೀಶ್, ಡಿ. ಎಸ್. ಶಂಕರ್, ರೈತರು, ದೂರ ಗ್ರಾಮ.





