Mysore
15
scattered clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

ಅಧಿಕಾರ ಹಂಚಿಕೆ: ಮಲ್ಲಿಕಾರ್ಜುನ ಖರ್ಗೆ ಮುನ್ನೆಚ್ಚರಿಕೆ

mallikarjun kharge warning congress

ಬೆಂಗಳೂರು ಡೈರಿ
ಆರ್.ಟಿ ವಿಠ್ಠಲಮೂರ್ತಿ

ಕಳೆದ ವಾರ ಕರ್ನಾಟಕಕ್ಕೆ ಬಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಂದು ಗಂಭೀರ ಎಚ್ಚರಿಕೆ ನೀಡಿದರು. ಹೀಗೆ ಅವರು ಎಚ್ಚರಿಕೆ ನೀಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ.

ಅಂದ ಹಾಗೆ ಅವರು ಹೇಳಿದ್ದೇನು? ನೀವು ಕಿತ್ತಾಡುತ್ತಿದ್ದರೆ ಮೋದಿ- ಅಮಿತ್ ಶಾ ಅವರು ರಾಜ್ಯದಲ್ಲಿ ರುವ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುತ್ತಾರೆ ಅಂತ ತಾನೇ. ಗಮನಿಸಬೇಕಾದ ಸಂಗತಿ ಎಂದರೆ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದರಲ್ಲಿ ಹೊಸತೇನೂ ಇಲ್ಲ. ಅಧಿಕಾರ ಹಂಚಿಕೆಯ ವಿಷ ಯಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಅಂತರ್ಯದ್ಧವನ್ನು ಕಂಡವರು ಇದೇ ಮಾತನ್ನು ಪುನರುಚ್ಚರಿಸುತ್ತಲೇ ಇದ್ದಾರೆ. ಹೀಗಾಗಿ ಇದು ಹೊಸ ವಿಷಯವೇನೂ ಅಲ್ಲ. ಆದರೂ ಖರ್ಗೆಯವರು ಇವತ್ತು ಈ ಕುರಿತು ಬಹಿರಂಗ ಎಚ್ಚರಿಕೆ ನೀಡಿರುವುದರಲ್ಲಿ ಒಂದು ವಿಶೇಷತೆ ಇದೆ. ಅದೆಂದರೆ ಇಂತಹ ಕಚ್ಚಾಟ ಮುಂದುವರಿದರೆ ಮೋದಿ , ಶಾ ಈ ಸರ್ಕಾರವನ್ನು ಉರುಳಿಸುತ್ತಾರೆ ಎಂಬುದು.

ಅರ್ಥಾತ್ ಸಾಮಾನ್ಯವಾಗಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳ ಮಧ್ಯೆ ಖರ್ಗೆಯವರ ಹೇಳಿಕೆಯಲ್ಲಿ ಒಂದು ವಿಶೇಷ ಧ್ವನಿ ಇದೆ. ಅದೆಂದರೆ ಈ ಸರ್ಕಾರವನ್ನು ಉರುಳಿಸುವ ಪ್ರಯತ್ನಗಳು ಯಾವ ಹಂತದಲ್ಲಿ ಚುರುಕು ಪಡೆದಿದೆ ಎಂಬುದು.

ಹೀಗಾಗಿ ಖರ್ಗೆಯವರ ಮಾತನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ. ಕೆ. ಶಿವಕುಮಾರ್ ತುಂಬ ಎಚ್ಚರಿಕೆಯಿಂದ ಗಮನಿಸಬೇಕು.

ಅಂದರೆ ಸರ್ಕಾರಕ್ಕೆ ಎರಡೂವರೆ ವರ್ಷಗಳು ತುಂಬಿದ ನಂತರ ತಾವು ಮುಖ್ಯಮಂತ್ರಿಯಾಗಬೇಕು. ಸಿದ್ದರಾಮಯ್ಯ ಅವರು ಯಾವುದೇ ತಕರಾರಿಲ್ಲದೆ ಮುಖ್ಯಮಂತ್ರಿ ಹುದ್ದೆಯನ್ನು ತಮಗೆ ಬಿಟ್ಟುಕೊಡಬೇಕು ಎಂದು ಡಿ. ಕೆ. ಶಿವಕುಮಾರ್ ಬಯಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಮತ್ತೊಂದು ದಿಕ್ಕಿನಲ್ಲಿ ಸಿದ್ದರಾಮಯ್ಯ ಇನ್ನೊಂದು ರೀತಿ ಯೋಚಿಸುತ್ತಿದ್ದಾರೆ.

ಅದರ ಪ್ರಕಾರ ಪಕ್ಷದ ಪರಮೋಚ್ಚ ನಾಯಕಿ ಸೋನಿಯಾ ಗಾಂಽ ಅವರು ಅಽಕಾರ ಹಂಚಿಕೆಯ ಬಗ್ಗೆ ತಮ್ಮೆದುರು ಪ್ರಸ್ತಾಪಿಸಿಲ್ಲ. ಇಷ್ಟಾದರೂ ಅವರು ಈ ಕುರಿತು ಮುಂದಿನ ದಿನಗಳಲ್ಲಿ ಪ್ರಸ್ತಾಪಿಸಿದರೆ ಏನು ಮಾಡಬೇಕು ಎಂಬುದು ಸಿದ್ದರಾಮಯ್ಯ ಅವರ ಯೋಚನೆ.

ಸಿದ್ದರಾಮಯ್ಯ ಅವರ ಆಪ್ತರ ಪ್ರಕಾರ ಸೋನಿಯಾ ಗಾಂಧಿಯವರೇ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆಸಿ ನಾನು ಡಿ. ಕೆ. ಶಿವಕುಮಾರ್ ಅವರಿಗೆ ಮಾತುಕೊಟ್ಟಿದ್ದೇನೆ. ಹೀಗಾಗಿ ಅಧಿಕಾರ ಬಿಟ್ಟುಕೊಡಿ ಎಂದರೆ ಸಿದ್ದರಾಮಯ್ಯ ಇಲ್ಲ ಅಂತ ಹೇಳುವುದಿಲ್ಲ.

೨೦೦೬ರಲ್ಲಿ ಜಾ. ದಳ ಪಕ್ಷದಿಂದ ಹೊರಬಿದ್ದು ಎಬಿಪಿಜೆಡಿಯ ಪಕ್ಷ ಕಟ್ಟುತ್ತಿದ್ದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಹಡಗಿಗೆ ಹತ್ತಿಸಿಕೊಂಡವರೇ ಸೋನಿಯಾ ಗಾಂಧಿ….

ಅವತ್ತು ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳುವ ಪ್ರಕ್ರಿಯೆ ಆರಂಭವಾದಾಗ ಇವತ್ತು ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಅಷ್ಟು ಹೊತ್ತಿಗಾಗಲೇ ತಮ್ಮ ಸಮುದಾಯದ ಸರ್ವೋಚ್ಚ ನಾಯಕರಾಗಿ ಬೆಳೆದು ನಿಂತಿದ್ದ ಸಿದ್ದರಾಮಯ್ಯ ಕಾಂಗ್ರೆಸ್ ಹಡಗು ಹತ್ತಿದರೆ, ಮುಖ್ಯಮಂತ್ರಿಯಾಗುವ ತಮ್ಮ ಕನಸಿಗೆ ಅಡ್ಡಿಯಾಗುತ್ತದೆ ಎಂಬ ಆತಂಕ ಖರ್ಗೆ ಅವರಿಗಿತ್ತು.

ಇಂತಹ ಆತಂಕದ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಹಡಗಿಗೆ ಹತ್ತಿಸಲೆತ್ನಿಸುತ್ತಿದ್ದವರ ಮೇಲೆ ಅವರು ಕ್ಷುದ್ರರಾಗಿದ್ದರು. ಆದರೆ ಸೋನಿಯಾ ಗಾಂಧಿಯವರು ಈ ರೀತಿಯ ಯಾವುದೇ ಅಡ್ಡಿಗಳನ್ನು ಲೆಕ್ಕಿಸದೆ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಹಡಗಿಗೆ ಹತ್ತಿಸಿಕೊಂಡರು.

ಅಷ್ಟೇ ಅಲ್ಲ,ಹೀಗೆ ಕಾಂಗ್ರೆಸ್ಸಿಗೆ ಬಂದ ಸಿದ್ದರಾಮಯ್ಯ ಅವರ ದಾರಿಗೆ ಯಾರೂ ಮುಳ್ಳುಗಳಾಗದಂತೆ ನೋಡಿಕೊಂಡರು. ಸಿದ್ದರಾಮಯ್ಯ ಇಲ್ಲಿಗೆ-ಮಲ್ಲಿಕಾರ್ಜುನ ಖರ್ಗೆ ದಿಲ್ಲಿಗೆ ಎಂಬ ಸೂತ್ರ ರೂಪುಗೊಂಡಿದ್ದೇ ಈ ಕಾರಣಕ್ಕಾಗಿ. ನಿಜ ಹೇಳಬೇಕೆಂದರೆ ಖರ್ಗೆಯವರಿಗೆ ಈ ಪ್ರಸ್ತಾಪ ಇಷ್ಟವಿರಲಿಲ್ಲ. ಬದಲಿಗೆ ಕರ್ನಾಟಕದ ರಾಜಕಾರಣದಲ್ಲೇ ಉಳಿದು ಮುಖ್ಯಮಂತ್ರಿಯಾಗುವ ಆಸೆ ಅವರಿಗೆ ಇತ್ತು.

ಆದರೆ ಸೋನಿಯಾ ಗಾಂಧಿಯವರು ಇದಕ್ಕೆ ಅವಕಾಶ ನೀಡದೆ ೨೦೦೯ರ ಲೋಕಸಭಾ ಚುನಾವಣೆಯಲ್ಲಿ ಖರ್ಗೆ ಕಲಬುರಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ನೋಡಿಕೊಂಡರು.

ಹೀಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಖರ್ಗೆಯವರು ಕೇಂದ್ರ ಸಚಿವರಾಗುವಂತೆ ನೋಡಿಕೊಂಡರು. ಒಂದು ವೇಳೆ ಸೋನಿಯಾ ಗಾಂಧಿ ಇಂತಹ ಅಕಾಮಡೇಟ್ ಮಾಡದೆ ಹೋಗಿದ್ದರೆ ಮುಂದೆ ಸಿದ್ದರಾಮಯ್ಯ ಅವರ ದಾರಿ ಸುಗಮವಾಗುತ್ತಿರಲಿಲ್ಲ.

ಹಾಗಂತ ಇದೊಂದೇ ಅಂತಲ್ಲ. ಇನ್ನೂ ಹಲವಾರು ಸಂದರ್ಭಗಳಲ್ಲಿ ಸಿದ್ದರಾಮಯ್ಯ ಅವರ ದಾರಿಯನ್ನು ಸೋನಿಯಾಗಾಂಧಿ ಸುಗಮಗೊಳಿಸಿದರು. ಹೀಗೆ ಮೇಲೆ ಹೇಳಿದ ಕಾರಣಗಳಿಗಾಗಿ ಸಿದ್ದರಾಮಯ್ಯ ಅವರಿಗೆ ಸೋನಿಯಾ ಗಾಂಧಿ ಅವರ ವಿಷಯದಲ್ಲಿ ತುಂಬು ಗೌರವವಿದೆ. ಆದ್ದರಿಂದ ಸೋನಿಯಾಗಾಂಧಿ ಅವರೇನಾದರೂ ದಿಲ್ಲಿಗೆ ತಮ್ಮನ್ನು ಕರೆಸಿ ಅಧಿಕಾರ ಬಿಟ್ಟುಕೊಡುವಂತೆ ಮನವಿ ಮಾಡಿಕೊಂಡರೆ ಸಿದ್ದರಾಮಯ್ಯ ಇಲ್ಲ ಅನ್ನುವುದಿಲ್ಲ.

ಹಾಗಂತ ತಾವು ಬಿಟ್ಟುಕೊಡುವ ಜಾಗಕ್ಕೆ ಡಿ. ಕೆ. ಶಿವಕುಮಾರ್ ಬಂದು ಕೂರುವುದನ್ನು ಇಷ್ಟಪಡುವುದಿಲ್ಲ. ಹೀಗಾಗಿ ಸೋನಿಯಾ ಗಾಂಧಿಯವರ ಪ್ರಸ್ತಾಪವನ್ನು ಒಪ್ಪಿದರೂ, ಇದಕ್ಕೆ ಪ್ರತಿಯಾಗಿ ಅವರು ಒಂದು ಪ್ರಸ್ತಾಪವನ್ನು ಮಂಡಿಸಲಿದ್ದಾರೆ. ಅದೆಂದರೆ, ಭವಿಷ್ಯದ ನಾಯಕತ್ವ ಎಂಬುದು ಹೇರಿಕೆ ಯಾಗಬಾರದು. ಬದಲಿಗೆ ಪಕ್ಷದ ಶಾಸಕಾಂಗ ಸಭೆಯಲ್ಲಿ ನಿರ್ಧಾರವಾಗಬೇಕು. ಇಲ್ಲದಿದ್ದರೆ ಪಕ್ಷದಲ್ಲಿ ಒಡಕು ಕಂಡು ಬಂದು ಸರ್ಕಾರ ಉರುಳಬಹುದು ಎಂಬುದು. ಯಾವಾಗ ಸಿದ್ದರಾಮಯ್ಯ ಈ ಪ್ರಸ್ತಾಪ ಮಂಡಿಸುತ್ತಾರೋ ಆಗ ಸಹಜವಾಗಿಯೇ ಸೋನಿಯಾಗಾಂಧಿ ಯೋಚಿಸುತ್ತಾರೆ. ಅಷ್ಟೇ ಅಲ್ಲ, ಈ ಕುರಿತು ರಾಹುಲ್ ಗಾಂಧಿಯವರ ಜತೆ ಚರ್ಚಿಸುತ್ತಾರೆ.

ಕಾಂಗ್ರೆಸ್ ಮೂಲಗಳ ಪ್ರಕಾರ ರಾಹುಲ್ ಗಾಂಧಿ ಅವರಿಗೆ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯುವುದು ಬೇಕಿಲ್ಲ. ಹೀಗಾಗಿ ಬಾಕಿ ಉಳಿದ ಅವಧಿಯನ್ನು ಅವರೇ ಪೂರೈಸಲಿ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಹಾಗೊಂದು ವೇಳೆ ವಿವಿಧ ಕಾರಣಗಳಿಗಾಗಿ ಸಿದ್ದರಾಮಯ್ಯ ಅವರೇ ಕೆಳಗಿಳಿಯಲು ಬಯಸಿದರೆ, ಆ ಜಾಗಕ್ಕೆ ಕೃಷ್ಣ ಭೈರೇಗೌಡರನ್ನು ತಂದು ಕೂರಿಸಲು ಅವರು ಬಯಸಿದ್ದಾರೆ. ಆದರೆ ಶಾಸಕಾಂಗ ಸಭೆಯಲ್ಲೇ ಭವಿಷ್ಯದ ನಾಯಕತ್ವ ಇತ್ಯರ್ಥ ವಾಗಬೇಕು ಅಂತ ಸಿದ್ದರಾಮಯ್ಯ ಪಟ್ಟು ಹಿಡಿದರೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ಸಮಾಜ ಕಲ್ಯಾಣ ಸಚಿವ ಡಾ. ಎಚ್. ಸಿ. ಮಹದೇವಪ್ಪ ಅವರ ಹೆಸರುಗಳು ಮುಂಚೂಣಿಗೆ ಬರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಕೋಪಗೊಳ್ಳುವ ಡಿ. ಕೆ. ಶಿವಕುಮಾರ್ ಏನು ಮಾಡಬಹುದು ಅಥವಾ ಡಿ. ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿ ಯಾಗಲಿ ಅಂತ ಸೋನಿಯಾ ಗಾಂಧಿ ಪಟ್ಟು ಹಿಡಿದರೆ ಸಿದ್ದರಾಮಯ್ಯ ಪಡೆ ಯಾವ ಮಾರ್ಗ ಹಿಡಿಯಬಹುದು ಇದೇ ಹೈಕಮಾಂಡ್ ಆತಂಕ.

ಇವತ್ತು ಮಲ್ಲಿಕಾರ್ಜುನ ಖರ್ಗೆಯವರು ಸಿಎಂ, ಡಿಸಿಎಂ ಇಬ್ಬರಿಗೂ ನೇರ ಎಚ್ಚರಿಕೆ ನೀಡಲು ಹೈಕಮಾಂಡ್ ವರಿಷ್ಠರ ಈ ಆತಂಕವೇ ಕಾರಣ. ಇವತ್ತು ಈ ಎಚ್ಚರಿಕೆಯ ಆಳದಲ್ಲಿ ಅಧಿಕಾರ ಹಂಚಿಕೆಗಾಗಿ ಕಚ್ಚಾಟ ಬೇಡ ಮತ್ತು ಬಲಿಷ್ಠ ವರ್ಗಗಳ ಸಿಟ್ಟಿಗೆ ಕಾರಣವಾಗಿರುವ ಜಾತಿ ಗಣತಿಯ ತುರ್ತು ಅಂಗೀಕಾರ ಬೇಡ ಎಂಬುದು ಅವರ ಎಚ್ಚರಿಕೆಯ ಹಿಂದಿರುವ ಧ್ವನಿ. ಮುಂದೇನು ಕತೆಯೋ ಕಾದು ನೋಡಬೇಕು.

Tags:
error: Content is protected !!