Mysore
15
broken clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಯದುವೀರ್‌ಗೆ ಟಿಕೆಟ್‌ ಚರ್ಚೆಗೆ ಗ್ರಾಸ; ಸದ್ದಿಲ್ಲದೆ ರಾಜಕೀಯ ಪಡಸಾಲೆಗೆ ಬಂದು ಅಚ್ಚರಿ ಮೂಡಿಸಿದ ರಾಜವಂಶಸ್ಥ

• ಗಿರೀಶ್ ಹುಣಸೂರು

 

ಮೈಸೂರು: ಲೋಕಸಭಾ ಚುನಾವಣೆಗೆ ಮೈಸೂರು- ಕೊಡಗು ಕ್ಷೇತ್ರಕ್ಕೆ ಬಿಜೆಪಿ ಅಚ್ಚರಿಯ ಅಭ್ಯರ್ಥಿಯಾಗಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ ಟಿಕೆಟ್‌ ಘೋಷಣೆ ಮಾಡಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

2014ರ ಲೋಕಸಭೆ ಚುನಾವಣೆಯಲ್ಲಿ ಅಚ್ಚರಿಯ ಅಭ್ಯರ್ಥಿಯನ್ನಾಗಿ ಪತ್ರಕರ್ತ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡಿದ್ದ ಬಿಜೆಪಿ, ಹತ್ತು ವರ್ಷಗಳ ಬಳಿಕ ಮತ್ತೆ ಹೊಸ ಮುಖಕ್ಕೆ ಮಣೆ ಹಾಕಿದೆ. ಕಳೆದ ಎರಡು ವರ್ಷಗಳಿಂದ ಯದುವೀರ್ ರಾಜಕೀಯ ಪ್ರವೇಶದ ಬಗ್ಗೆ ಆಗಾಗ್ಗೆ ಚರ್ಚೆಯಾಗುತ್ತಲೇ ಇತ್ತಾದರೂ ನಯವಾಗಿಯೇ ನಿರಾಕರಿಸುತ್ತಾ ಬಂದಿದ್ದ ಯದುವೀರ್ ಅವರು ಸದ್ದಿಲ್ಲದೆ ರಾಜಕೀಯ ಪಡಸಾಲೆಗೆ ಬಂದು ಅಚ್ಚರಿಮೂಡಿಸಿದ್ದಾರೆ. ಈ ಮೂಲಕ ಅರಸೊತ್ತಿಗೆಯಲ್ಲಿದ್ದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಾಜಕೀಯ ಪ್ರವೇಶಕ್ಕೆ ಕಾರಣಗಳೇನಿರಬಹುದು ಎಂಬ ಚರ್ಚೆಯೂ ಆರಂಭವಾಗಿದೆ.

ಯದುವೀರ್ ಅವರನ್ನೇ ಬಿಜೆಪಿ ಆಯ್ಕೆ ಮಾಡಲು ಅನೇಕ ಕಾರಣಗಳಿವೆ. ಯದುವೀರ್ ಅವರನ್ನು ಬಿಜೆಪಿ ರಾಜಕೀಯಕ್ಕೆ ಕರೆತರಲು ಇರುವ ಮುಖ್ಯ ಕಾರಣ ಮೈಸೂರು ರಾಜಮನೆತನದ ಬಗ್ಗೆ ಹಳೆ ಮೈಸೂರು ಭಾಗದ ಜನರಿಗೆ ಇಂದಿಗೂ ಇರುವ ಗೌರವ, ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಭಾಗದ ಜನರಿಗೆ ಮೈಸೂರು ಅರಸರ ಬಗ್ಗೆ ಅಪಾರ ಗೌರವವಿದೆ. ಮೈಸೂರು ಅರಸರ ಅಭಿವೃದ್ಧಿ ಕಾರ್ಯಗಳು, ದೂರದೃಷ್ಟಿ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯ‌ ಅವರ ಅಭಿವೃದ್ಧಿ ಕೊಡುಗೆಗಳು ಈ ಭಾಗದ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ.

ಕೆಆರ್‌ಎಸ್ ಜಲಾಶಯ, ವಿದ್ಯುತ್ ಉತ್ಪಾದನಾ ಘಟಕ, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಹತ್ತು ಹಲವು ಕಾರ್ಖಾನೆಗಳ ಸ್ಥಾಪನೆಗೆ ಮೈಸೂರು ಅರಸರ ಕೊಡುಗೆ ಅಪಾರ. ಯದುವಂಶದ ಬಗ್ಗೆ ಈ ಭಾಗದ ಜನರಿಗೆ ಇರುವ ಗೌರವ ಭಾವನೆಯೇ ಅವರನ್ನು ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಯೋಚಿಸಲು ಪ್ರಮುಖ ಕಾರಣ ಎನ್ನಲಾಗಿದೆ.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ರಾಜ್ಯದ ಬಿಜೆಪಿ ನಾಯಕರು ಅರಸು ಮನೆತನದ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿಯೇ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ಉನ್ನತಮಟ್ಟದ ನಾಯಕರು ಮೈಸೂರಿಗೆ ಬಂದಾಗೆಲ್ಲ ಅರಮನೆಗೆ ಸೌಹಾರ್ದ ಭೇಟಿ ನೀಡುತ್ತಿದ್ದರು. ಆಗೆಲ್ಲ ಯದುವೀರ್ ರಾಜಕೀಯ ಪ್ರವೇಶದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಲೇ ಬಂದಿತ್ತು. ಆಗೆಲ್ಲ, ರಾಜಕೀಯ ಪ್ರವೇಶವನ್ನು ನಿರಾಕರಿಸುತ್ತಲೇ ಬಂದಿದ್ದ ಅವರು, ಹಲವು ಸ್ವಯಂಸೇವಾ ಸಂಸ್ಥೆಗಳ ಜತೆ ಕೈಜೋಡಿಸಿ ಸಮಾಜ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು.

ನಾಡಹಬ್ಬ ದಸರಾಮಹೋತ್ಸವದಜಂಬೂಸವಾರಿಯ ದಿನ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪ ನಮನ ಸಲ್ಲಿಸುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ವೇದಿಕೆ ಹಂಚಿಕೊಂಡಿದ್ದು ಬಿಟ್ಟರೆ, ಸಿದ್ದರಾಮಯ್ಯ ಅವರ ಜತೆಗೆ ರಾಜಮನೆತನದವರ ಬಾಂಧವ್ಯ ಅಷ್ಟಕಷ್ಟೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಸೇರಿ ಹಲವಾರು ಬಿಜೆಪಿ ನಾಯಕರ ಜೊತೆ ಯದುವೀರ್ ಒಡೆಯರ್ ಭಾಗಿಯಾಗಿದ್ದಾರೆ. ಬಿಜೆಪಿ ನಾಯಕರ ಜೊತೆ ಹಲವು ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಂಡಿದ್ದರೂ ಯಾವುದೇ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರಲಿಲ್ಲ.

ಸಾರ್ವಜನಿಕವಾಗಿ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರೂ ಮತ್ತು ಪ್ರಬುದ್ಧವಾದ ಮಾತುಗಳಿಂದ ಜನರ ಪ್ರೀತಿಗಳಿಸಿದ್ದಾರೆ. ಇದುವರೆಗೂರಾಜಕೀಯವಾಗಿ ಯಾರನ್ನೂ ಟೀಕಿಸದೇ ಅಂತರ ಕಾಯ್ದುಕೊಂಡಿದ್ದಾರೆ. ಹೀಗಾಗಿ
ಯದುವೀರ್‌ ರಾಜಪರಂಪರೆ ಮುಂದುವರಿಸಿದರು ಎಂಬ ಪ್ರೀತಿ ಜನರಲ್ಲಿದೆ. ಜತೆಗೆ, ಯದುವೀರ್ ಯಾವುದೇ ವಿವಾದಗಳಿಗೆ ಸಿಲುಕದೆ ಇರುವುದು ಅವರ ಪ್ಲಸ್ ಪಾಯಿಂಟ್ ಆಗಿದೆ. ಇದರಿಂದಾಗಿ ಪಕ್ಷಾತೀತವಾಗಿಯದುವೀರ್ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.

ಯದುವೀರ್ ಮುಂದಿರುವ ಸವಾಲುಗಳೇನು?

• ಅರಸೊತ್ತಿಗೆ ಬಿಟ್ಟು ನಿಯಮಿತವಾಗಿ ಜನ ಸಾಮಾನ್ಯರೊಂದಿಗೆ ಬೆರೆಯಬೇಕಾಗುತ್ತದೆ

• ರಾಜಕಾರಣದ ಒಳೇಟುಗಳನ್ನು ಅರ್ಥಮಾಡಿಕೊಂಡು ಎಲ್ಲರ ವಿಶ್ವಾಸ ಗಳಿಸಬೇಕು

• ಜಾ.ದಳದೊಂದಿಗಿನ ಮೈತ್ರಿ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರನ್ನು ಒಟ್ಟಾಗಿ ಕರೆದೊಯ್ಯಬೇಕು

• ಮುಖ್ಯಮಂತ್ರಿ ತವರು ಜಿಲ್ಲೆಯಾಗಿರುವುದರಿಂದ ಮೈ ಚಳಿ ಬಿಟ್ಟು ಕಾಂಗ್ರೆಸ್ ಪಕ್ಷವನ್ನು ಎದುರಿಸಬೇಕಾಗುತ್ತದೆ.

• ರಾಜಕೀಯವಾಗಿ ಎದುರಾಗುವ ಟೀಕೆ-ಟಿಪ್ಪಣಿಗಳಿಗೆ ತೀಕ್ಷ್ಮವಾಗಿ ಪ್ರತಿಕ್ರಿಯೆ ನೀಡಬೇಕಾಗುತ್ತದೆ

• ಎರಡೂ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಗೆ ಮುಖಂಡರ ಜೊತೆಗೆ ಕೈಜೋಡಿಸಿ ಶ್ರಮಿಸಬೇಕಾಗುತ್ತದೆ

ಅಭಿವೃದ್ಧಿ ಮತ್ತು ಸಾರ್ವಜನಿಕ ಸೇವೆಯ ದೃಷ್ಟಿಕೋನ ಇಟ್ಟುಕೊಂಡು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಲು ನಿರ್ಧರಿಸಿದ್ದು, ಅಧಿಕಾರ ಇದ್ದಾಗ ಹೆಚ್ಚಿನ ಅಭಿವೃದ್ಧಿ ಮಾಡಲು
ಅವಕಾಶ ಸಿಗುತ್ತದೆ. ಪ್ರತಾಪ್ ಸಿಂಹ ಅವರು ಮೈಸೂರಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರೂ ನನಗೆ ಸಹಕಾರ ನೀಡಲಿದ್ದಾರೆ.
-ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

Tags:
error: Content is protected !!