Mysore
13
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ಎಚ್‌.ಡಿ ಕೋಟೆಯಲ್ಲೊಂದು ಭೂಮಾಫಿಯಾ!

ಮೂಲ ವಾರಸುದಾರರಿಲ್ಲದ 40 ಎಕರೆ ಜಮೀನು ಕಬಳಿಸಿದ ಪ್ರಭಾವಿಗಳು; ಜನಪ್ರತಿನಿಧಿ, ಅಧಿಕಾರಿಗಳ ಸಹಕಾರ?

ಮಂಜು ಕೋಟೆ
ಎಚ್. ಡಿ. ಕೋಟೆ: ಜಿಲ್ಲೆಯ ಭೂ ಮಾಫಿಯಾ ವಿಚಾರ ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಕೋಟೆ ಪಟ್ಟಣದಲ್ಲಿ ೧೦೦ ಕೋಟಿ ರೂ. ಗಳಿಗೂ ಹೆಚ್ಚು ಬೆಲೆ ಬಾಳುವ ೪೦ ಎಕರೆ ಜಮೀನು ಭೂ ಮಾಫಿಯಾದವರ ಮತ್ತು ಪ್ರಭಾವಿಗಳ ಕಪಿಮುಷ್ಟಿಗೆ ಸಿಲುಕಿರುವುದು ಬೆಳಕಿಗೆ ಬಂದಿದೆ.

ಕೋಟೆ ಪಟ್ಟಣದ ಕೃಷ್ಣಾಪುರ ವೃತ್ತದ ಸಮೀಪ ಪಾಳು ಬಿದ್ದಿರುವ ೪೦ ಎಕರೆ ಜಮೀನನ್ನು ಅನೇಕರು ಅಧಿಕಾರಿಗಳು ಮತ್ತು ಜನಪ್ರತಿನಿಧಿ ಗಳ ಸಹಕಾರದಿಂದ ಪಡೆದು ಕೊಂಡಿದ್ದಾರೆ.

ಈ ೪೦ ಎಕರೆ ಜಮೀನಿನ ವಾರಸುದಾರರು ವಿದೇಶಗಳಿಗೆ ತೆರಳಿ ಹಲವಾರು ವರ್ಷಗಳೇ ಕಳೆದು ಹೋಗಿದ್ದು, ಮೂಲ ವಾರಸುದಾರರು ಯಾರೂ ಇಲ್ಲದ್ದನ್ನು ಗಮನಿಸಿದ ಕೆಲವರು ಕೋಟ್ಯಂತರ ರೂ. ಬೆಲೆ ಬಾಳುವ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿ, ಅಕ್ರಮವಾಗಿ ಖಾತೆ ಮಾಡಿ ಜಮೀನನ್ನು ಲಪಟಾಯಿಸಿದ್ದಾರೆ.

ಎಚ್. ಡಿ. ಕೋಟೆ ಸರ್ವೆ ನಂ. ೮೨/೨, ೮೨/೩, ೮೨/೪, ೮೨/೫ ಹಾಗೂ ೮೨/೬ ರಲ್ಲಿ ಒಟ್ಟು ೪೦ ಎಕರೆ ಜಮೀನು ಇದೆ. ಮೂಲ ಖಾತೆದಾರರಾದ ಅಲಿ ಹಾಸನ್ ಅವರ ಹೆಸರಿ ನಲ್ಲಿ ೨೦ ಎಕರೆ, ಇವರ ಪತ್ನಿಯರಾದ ಹಬೀಬ್ ಉನಿಷ ಹೆಸರಿನಲ್ಲಿ ೧೦ ಎಕರೆ, ರಿಜ್ವಾನಿ ಅವರ ಹೆಸರಿನಲ್ಲಿ ೧೦ ಎಕರೆ ಇದೆ. ಇದನ್ನು ಈ ಹಿಂದೆ ಕ್ರಯದ ಮೂಲಕ ಪಡೆದು ಆರ್‌ಟಿಸಿಯಲ್ಲಿ ಮೂವರ ಹೆಸರು ನೋಂದಣಿ ಆಗಿದೆ.

ಸದರಿ ಜಮೀನಿನ ವಾರಸುದಾರರು ಕಳೆದ ೩೦ ವರ್ಷಗಳ ಹಿಂದೆಯೇ ಭಾರತವನ್ನು ಬಿಟ್ಟು ಬೇರೆ ದೇಶಕ್ಕೆ ಹೋಗಿದ್ದು ಮತ್ತೆ ಮರಳಿ ಬಂದಿಲ್ಲ. ಇದಕ್ಕೆ ಪುಷ್ಟಿ ನೀಡುವಂತೆ ಕೋಟೆ ಪಟ್ಟಣದಲ್ಲಿ ಇವರ ಹೆಸರಿನಲ್ಲಿರುವ ಜಮೀನು ೩೦ ವರ್ಷಗಳಿಂದ ಪಾಳು ಬಿದ್ದಿದೆ. ಪಾಳುಬಿದ್ದ ೪೦ ಎಕರೆ ಜಮೀನನ್ನು ಈ ಹಿಂದೆ ಮಾಜಿ ಸಚಿವ ಕೋಟೆ ಎಂ. ಶಿವಣ್ಣ, ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಮತ್ತು ಪುರಸಭಾ ಆಡಳಿತದವರು ಸರ್ಕಾರದ ವಶಕ್ಕೆ ಪಡೆದು ಬಡಜನರಿಗೆ ನಿವೇಶನ, ಆಸ್ಪತ್ರೆ, ಕಾಲೇಜುಗಳನ್ನು ನಿರ್ಮಾಣ ಮಾಡುವ ಪ್ರಕ್ರಿಯೆ ನಡೆಸಿದ್ದರು. ಆದರೆ ಕೆಲವು ಕಾರಣಗಳಿಂದ ಆ ಪ್ರಕ್ರಿಯೆ ನಡೆದಿಲ್ಲ. ಇದರ ಮಧ್ಯೆ ೨೦೦೭ರಲ್ಲಿ ಈ ಜಮೀನನ್ನು ಕಬಳಿಸುವ ಉದ್ದೇಶದಿಂದ ವಾರಸುದಾರರಲ್ಲದ ಕೆಲವರನ್ನು ಸೃಷ್ಟಿ ಮಾಡಿ ಮೈಸೂರಿನ ಅರುಣ್ ಎಂ. ಗೌಡ ಎಂಬವರು ೪೦ ಎಕರೆ ಜಮೀನನ್ನು ಉಪನೋಂದಣಾಧಿಕಾರಿ ಕಚೇರಿಯಲ್ಲಿ ತಮ್ಮ ಹೆಸರಿಗೆ ಕ್ರಯಕ್ಕೆ ಪಡೆದುಕೊಂಡಿದ್ದರು. ಈ ವಿಚಾರವಾಗಿ ಖಾಸಗಿ ವ್ಯಕ್ತಿ ಒಬ್ಬರು ಅರುಣ್ ಗೌಡ ಕ್ರಯಕ್ಕೆ ಪಡೆದ ಜಮೀನು ಅಕ್ರಮವಾಗಿ ಖರೀದಿಸಿದ್ದು, ಇದರ ವಾರಸುದಾರರು ಯಾರೂ ಇಲ್ಲ ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ವಿಚಾರ ನಡೆಸಿದ ನ್ಯಾಯಾಲಯವು ೧೦ ಎಕರೆ ಜಮೀನನ್ನು ಅರುಣ್‌ಗೌಡ ಕಾನೂನು ಬದ್ಧವಾಗಿ ಖರೀದಿ ಮಾಡಿದ್ದು ಎಂದು ತೀರ್ಪು ನೀಡಿ ಅವರ ಹೆಸರಿಗೆ ಖಾತೆ ಮಾಡಲು ಆದೇಶಿಸಿ, ಉಳಿದ ೩೦ ಎಕರೆ ಜಮೀನನ್ನು ಮೂಲವಾರಸುದಾರರ ಹೆಸರಿನಲ್ಲಿಯೇ ಉಳಿಸುವಂತೆ ಆದೇಶಿಸಿತ್ತು. ನಂತರದ ದಿನಗಳಲ್ಲಿ ಇಲಿಯಾಸ್ ಅಹ್ಮದ್ ಎಂಬವರು ನನಗೆ ೪೦ ಎಕರೆ ಜಮೀನಿನ ಮೂಲವಾರಸುದಾರರು ಜಿಪಿಎ ಮಾಡಿಕೊಟ್ಟಿದ್ದಾರೆ ಎಂದು ೨೦೧೫-೧೬ರಲ್ಲಿ ರಾಮಕೃಷ್ಣ ಎಂಬವರಿಗೆ ಜಮೀನು ಮಾರಾಟ ಮಾಡಿದ್ದರು. ನಂತರ ಆರ್. ಮಹದೇವು ಮತ್ತು ಎಲ್. ನಾಗರಾಜು ಅವರಿಂದ ಜಿಪಿಎ ಮಾಡಿಸಿಕೊಂಡಿದ್ದೇವೆ ಎಂದು ಎಸ್‌ವಿ ಶಿವರಾಂ ಎಂಬವರು ಸೈಯದ್ ಶಕೀಲ್ ಅಹಮದ್ ಹಾಗೂ ಇತರರಿಗೆ ಕ್ರಯಕ್ಕೆ ಬರೆದುಕೊಟ್ಟಿದ್ದರು. ನಂತರ ೨೦೧೬-೧೭ರಲ್ಲಿ ಮತ್ತೆ ಅರುಣ್ ಎಂ. ಗೌಡ ಎಂಬವರಿಗೆ ಮಾರಾಟ ಮಾಡಿದ್ದರು.

ನಂತರ ಕೆಲವರು ನ್ಯಾಯಾಲಯದಲ್ಲಿ ಮೂಲ ವಾರಸುದಾರರಿಲ್ಲದ ಜಮೀನನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಳ್ಳಬೇಕು ಎಂದು ದಾವೆ ಹೂಡಿ ಬಳಿಕ, ನ್ಯಾಯ ಪಂಚಾಯಿತಿ ಮೂಲಕ ವಿವಾದ ಇತ್ಯರ್ಥ ಮಾಡಿಕೊಂಡಿದ್ದೇವೆ ಎಂದು ತಿಳಿಸಿ ಪ್ರಕರಣವನ್ನು ಹಿಂಪಡೆದು, ೩೦ ಎಕರೆ ಜಮೀನಿನ ಪೈಕಿ ೫ ಎಕರೆ ಜಮೀನನ್ನು ಅರುಣ್ ಎಂ. ಗೌಡರಿಗೆ ಬಿಟ್ಟುಕೊಟ್ಟಿದ್ದರು.

ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ದಾಖಲೆ ಇಲ್ಲದೆ ಅರುಣ್ ಎಂ. ಗೌಡ ಅವರ ಹೆಸರಿಗೆ ಆರ್‌ಟಿಸಿ ಮಾಡಿಕೊಟ್ಟಿದ್ದಾರೆ. ೨೦೨೩-೨೪ರಲ್ಲಿ ಆಂಧ್ರಪ್ರದೇಶದ ಬಳ್ಳಾಪುರಂ ಅಮರನಾಥ್ ಎಂಬವರು ತಮಗೆ ಜಿಪಿಎ ಮೂಲಕ ಜಮೀನು ದೊರೆತಿದ್ದು ಎಂದು ವಾದಿಸಿ, ಬಿ. ಎಸ್. ಸುರೇಂದ್ರನಾಥ್, ರಫೀಕ್, ರೆಹಮತ್ ಅಲಿಖಾನ್ ಹಾಗೂ ತೋಸಿಫ್ ಎಂಬವರಿಗೆ ಉಳಿದ ೨೫ ಎಕರೆ ಜಮೀನು ಮಾರಾಟ ಮಾಡಿದ್ದರು. ಬಳ್ಳಪುರಂ ಅಮರನಾಥ್ ಅವರಿಗೆ ಅಧಿಕೃತವಾಗಿ ಯಾವುದೇ ದಾಖಲೆ ಇಲ್ಲದಿದ್ದರೂ ಕೂಡ ಉಪ ನೋಂದಣಾಧಿಕಾರಿ ಕಚೇರಿ ಅಧಿಕಾರಿಗಳು ನೋಂದಣಿ ಮಾಡಿಕೊಟ್ಟಿದ್ದಾರೆ.

ಈ ಎಲ್ಲಾ ದಾಖಲೆಗಳನ್ನು ನೋಡಿದಾಗ ಕೋಟ್ಯಂತರ ರೂ. ಬೆಲೆ ಬಾಳುವ ಜಮೀನನ್ನು ಉಪನೋಂದಣಾಧಿಕಾರಿ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳ ಸಹಕಾರದಿಂದ ಲಪಟಾಯಿಸುವ ಉದ್ದೇಶ ಹೊಂದಿರುವುದು ಗೊತ್ತಾಗುತ್ತದೆ. ಹಾಗಾಗಿ ವಾರಸುದಾರರಿಲ್ಲದ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡಿದ ವ್ಯಕ್ತಿಗಳ ವಿರುದ್ಧ ಹಾಗೂ ಇದಕ್ಕೆ ಕೈಜೋಡಿಸಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ೪೦ ಎಕರೆ ಜಮೀನನ್ನು ಸರ್ಕಾರದ ವಶಕ್ಕೆ ಪಡೆದುಕೊಂಡು ಕಾರ್ಖಾನೆ, ಶಾಲಾ ಕಾಲೇಜು, ಆಸ್ಪತ್ರೆ, ಬಡವರಿಗೆ ನಿವೇಶನ ಹಂಚಿಕೆ ಮಾಡಬೇಕೆನ್ನುವುದು ಪ್ರಜ್ಞಾವಂತರ ಆಗ್ರಹವಾಗಿದೆ. ಈ ಬಗ್ಗೆ ಶಾಸಕ ಅನಿಲ್ ಚಿಕ್ಕಮಾದು, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಸಿ. ಮಹದೇವಪ್ಪ ಅವರು ಗಮನ ಹರಿಸಿ ಕ್ರಮ ಕೈಗೊಳ್ಳಬೇಕಾಗಿದೆ.

 

 

Tags:
error: Content is protected !!