ತಿ.ನರಸೀಪುರ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಹೆಚ್ಚಳಕೆ
ತ್ರಿವೇಣಿ ಸಂಗಮದ ಸುತ್ತಮುತ್ತಲ ಪ್ರವಾಸಿ ತಾಣಗಳಿಗೂ ಪ್ರವಾಸಿಗರ ಭೇಟಿ
ಕೋಟ್ಯಂತರ ರೂಪಾಯಿ ವಹಿವಾಟಿನಿಂದ ಸ್ಥಳೀಯ ವ್ಯಾಪಾರಿಗಳಲ್ಲಿ ಮಂದಹಾಸ
ಕೆ.ಬಿ. ರಮೇಶ ನಾಯಕ
ಮೈಸೂರು: ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ ಮೂರು ದಿನಗಳ ಕಾಲ ವೈಭವದಿಂದ ನಡೆದ ಕುಂಭಮೇಳದಿಂದ ಈ ಭಾಗದ ಪ್ರವಾಸೋದ್ಯಮಕ್ಕೆ ಬೂಸ್ಟರ್ ಡೋಸ್ ಸಿಕ್ಕಂತಾಗಿದೆ.
ಸಂಗಮದಲ್ಲಿ ಪುಣ್ಯಸ್ನಾನಕ್ಕೆ ಬಂದ ಜನರು ತಿ. ನರಸೀಪುರದ ಜತೆಗೆ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳಿಗೂ ಭೇಟಿ ನೀಡುತ್ತಿದ್ದು, ಕುಂಭ ಮೇಳದಲ್ಲಿ ಕೋಟ್ಯಂತರ ರೂ ವಹಿವಾಟು ನಡೆದಿದ್ದರಿಂದಾಗಿ ಸ್ಥಳೀಯ ವ್ಯಾಪಾರಿಗಳಲ್ಲಿ ಮಂದಹಾಸ ಮೂಡುವ ಜತೆಗೆ ಒಂದಿಷ್ಟು ಆದಾಯ ಬಂದಿರುವುದು ಗಮನಾರ್ಹವಾಗಿದೆ. ಹಾಗಾಗಿ, ಆರು ವರ್ಷಗಳ ಬಳಿಕ ನಡೆದಿರುವ ಕುಂಭಮೇಳಕ್ಕೆ ಕೊನೆಯ ದಿನ ಬಂದ ಅಪಾರ ಜನಸ್ತೋಮ ದಾಖಲೆ ಬರೆದಿದ್ದು, ೨೦೨೮ರ ಹೊತ್ತಿಗೆ ಮತ್ತಷ್ಟು ಜನರನ್ನು ಆಕರ್ಷಿಸುವುದು ನಿಶ್ಚಿತವಾಗಿದೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ೧೪೮ ವರ್ಷಗಳ ಬಳಿಕ ನಡೆಯುತ್ತಿರುವ ಕುಂಭಮೇಳಕ್ಕೆ ಪ್ರತಿನಿತ್ಯ ಕೋಟ್ಯಂತರ ಜನರು ಭೇಟಿ ನೀಡಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಅದರಲ್ಲೂ ಮಧ್ಯಮ, ಶ್ರೀಮಂತ ವರ್ಗದವರು ವಿಮಾನ, ವಿಶೇಷ ರೈಲುಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇದೇ ಹೊತ್ತಿನಲ್ಲಿ ದಕ್ಷಿಣ ಭಾರತದಲ್ಲೇ ಪ್ರಸಿದ್ಧಿ ಪಡೆದಿರುವ ತಿ. ನರಸೀಪುರದ ತ್ರಿವೇಣಿ ಸಂಗಮದಲ್ಲೂ ಕುಂಭಮೇಳ ಆಯೋಜನೆ ಮಾಡಿದ್ದ ರಿಂದಾಗಿ ಅಪಾರ ಸಂಖ್ಯೆಯ ಜನರು ಆಗಮಿಸಿ ಮಾಘ ಸ್ನಾನ ಮಾಡಿದ್ದಾರೆ. ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ, ಹಾಸನ ಜಿಲ್ಲೆಗಳಲ್ಲದೆ, ತಮಿಳು ನಾಡು, ಆಂಧ್ರಪ್ರದೇಶ, ಕೇರಳ, ತೆಲಂಗಾಣ ರಾಜ್ಯ ಗಳಿಂದಲೂ ಸಹಸ್ರಾರು ಜನರು ಆಗಮಿಸಿದ್ದ ರಿಂದಾಗಿ ಪ್ರವಾಸೋದ್ಯಮಕ್ಕೆ ದೊಡ್ಡ ಲಾಭವಾಗಿದೆ.
ಪ್ರವಾಸೋದ್ಯಮದತ್ತ ಜನರು: ತಿ. ನರಸೀಪುರ ತಾಲ್ಲೂಕಿನ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಪ್ರವಾಸೋದ್ಯಮ ಇಲಾಖೆ ಬಿಂಬಿಸಿದ್ದರಿಂದಾಗಿ ತಲಕಾಡು, ಸೋಮನಾಥಪುರ, ಮೂಗೂರು ಮೊದ ಲಾದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಅದರಲ್ಲೂ ತಲಕಾಡಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.
ಮೂಗೂರು ತ್ರಿಪುರಸುಂದರಿ ಅಮ್ಮನವರ ದೇವಾ ಲಯಕ್ಕೆ ಪ್ರತಿನಿತ್ಯ ನೂರರಿಂದ ೩೦೦ ಮಂದಿಯಷ್ಟೇ ಭೇಟಿ ನೀಡುತ್ತಿದ್ದರೆ, ಸೋಮವಾರ ಮತ್ತು ಶುಕ್ರವಾರ ಜಾಸ್ತಿಯಾಗುತ್ತಿತ್ತು. ಆದರೆ, ಈಗ ಪ್ರತಿನಿತ್ಯ ಒಂದು ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿರುವುದು ಗಮನಾರ್ಹವಾಗಿದೆ.
ಸ್ಥಳೀಯರಿಗೆ ಆದಾಯ: ಕುಂಭ ಮೇಳಕ್ಕೆ ಈ ಬಾರಿ ನಿರೀಕ್ಷೆಗೂ ಮೀರಿ ಜನ ಬಂದಿದ್ದರಿಂದ ಸ್ಥಳೀಯರಿಗೆ ದೊಡ್ಡ ಆದಾಯ ತಂದುಕೊಟ್ಟಿದೆ. ವಸತಿಗೃಹಗಳು ಭರ್ತಿಯಾಗಿದ್ದ ರಿಂದ ಮೂರ‍್ನಾಲ್ಕು ದಿನಗಳು ಒಳ್ಳೆಯ ಗಳಿಕೆ ಕಂಡರೆ, ಹೋಟೆಲ್‌ಗಳಲ್ಲಿ ಭರ್ಜರಿ ವ್ಯಾಪಾರವಾಗಿದೆ. ಅದರಲ್ಲೂ ಪಾನಿಪುರಿ, ಚುರುಮುರಿ, -ಸ್ಟ್ ಪುಡ್, ಎಳನೀರು, ಪೈನಾಪಲ್, ಕಲ್ಲಂಗಡಿ, ಸೌತೆಕಾಯಿ ವ್ಯಾಪಾರಿಗಳಿಗೂ ತುಂಬಾ ವರದಾನವಾಗಿದೆ.
ವಿಶೇಷವಾಗಿ ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಕುಡಿ ಯುವ ನೀರು, ಜ್ಯೂಸ್‌ನ ೪ ಲಕ್ಷ ಬಾಟಲ್‌ಗಳು ವ್ಯಾಪಾ ರವಾಗಿವೆ ಎಂದು ಅಂದಾಜಿಸಲಾಗಿದೆ. ಗ್ರಾಮೀಣ ಪ್ರದೇಶದಿಂದ ಹೆಚ್ಚಾಗಿ ಬಂದಿದ್ದ ಜನರು ಪುರಿ, ಖಾರಾ ಬೂಂದಿ, ಸಿಹಿ ತಿನಿಸುಗಳನ್ನು ಮನೆಗೆ ಕೊಂಡೊಯ್ದಿ ದ್ದರಿಂದ ಸಿಹಿ ತಿನಿಸುಗಳ ವ್ಯಾಪಾರಸ್ಥರಿಗೂ ಸಾಕಷ್ಟು ಆದಾಯ ಬಂದಿದೆ ಎಂದು ಮೂಗೂರಿನ ಸಿಹಿ ತಿಂಡಿ ಮಾಲೀಕ ಶಿವಶಂಕರಪ್ಪ ತಿಳಿಸಿದರು.
ಆಟೋರಿಕ್ಷಾ, ಟೆಂಪೋ ಚಾಲಕರಿಗೂ ಲಾಭ: ಸಾರಿಗೆ ಬಸ್‌ಗಳಲ್ಲದೆ ಬನ್ನೂರು, ನಂಜನಗೂಡು ಮತ್ತಿತರ ಹಳ್ಳಿಗಳಿಂದ ಆಟೋ ರಿಕ್ಷಾ, ಮಿನಿ ಬಸ್‌ಗಳು, ಟೆಂಪೋ ಗಳಲ್ಲಿ ಪ್ರಯಾಣಿಕರು ಬರುತ್ತಿದ್ದ ಕಾರಣ ಖಾಸಗಿ ವಾಹನಗಳವರಿಗೂ ತಿಂಗಳ ಮಟ್ಟಿಗೆ ಆಗುವಷ್ಟು ಲಾಭ ಬಂದಿದೆ. ೩ ತಿಂಗಳುಗಳಿಂದ ನಿತ್ಯ ನಿರ್ವಹಣೆಗೆ ಹಣ ಸಾಕಾಗುತ್ತಿರಲಿಲ್ಲ. ಈ ಕುಂಭಮೇಳದಲ್ಲಿ ಖರ್ಚು ಕಳೆದು ೫೦ ಸಾವಿರ ರೂ. ಉಳಿಸಿದ್ದೇವೆ ಎಂದು ಚಾಲಕ ಆಲಗೂಡು ಸೋಮಣ್ಣ ಖುಷಿ ಹಂಚಿಕೊಂಡರು.
ಅಧಿಕಾರಿಗಳಿಗೂ ಶಹಬ್ಬಾಸ್ ಗಿರಿ
ದಸರಾ ಮಹೋತ್ಸವದ ನಂತರ ಬಹುದೊಡ್ಡ ಕಾರ್ಯಕ್ರಮದ ಹೊಣೆ ಹೊತ್ತಿದ್ದ ಅಧಿಕಾರಿಗಳ ಕಾರ್ಯ ವೈಖರಿಗೆ ಶಹಬ್ಬಾಸ್ ಗಿರಿ ವ್ಯಕ್ತವಾಗಿದೆ. ಯುವ ದಸರಾ ಅತ್ಯಂತ ಯಶಸ್ವಿಯಾಗುವಂತೆ ನೋಡಿಕೊಂಡಿದ್ದ ಉಪ ವಿಭಾಗಾಧಿಕಾರಿ ಕೆ. ಆರ್. ರಕ್ಷಿತ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಕುಂಭಮೇಳದ ಹೊಣೆ ಹೊತ್ತಿದ್ದರು. ಸ್ವಾಮೀಜಿಗಳ ಸಲಹೆಗೆ ತಕ್ಕಂತೆ ಕುಟೀರ, ಪ್ರಾರ್ಥನಾ ಮಂದಿರಗಳು ಮೊದಲಾದ ವ್ಯವಸ್ಥೆಗಳನ್ನು ಮಾಡಿದ್ದರಿಂದ ಸ್ವಾಮೀಜಿಗಳ ಸಂತಸಕ್ಕೆ ಕಾರಣವಾಗಿತ್ತು. ಸಾರ್ವಜನಿಕರ ಮಾಘ ಸ್ನಾನಕ್ಕೆ ಮೂರು ಕಡೆಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿ ಬ್ಯಾರಿಕೇಡ್‌ಗಳನ್ನು ಹಾಕಿ ಸಣ್ಣ ಅವಘಡ ಇಲ್ಲದಂತೆ ನೋಡಿಕೊಂಡರೆ, ಪ್ರಸಾದದಲ್ಲೂ ಕೊರತೆ ಇಲ್ಲದಂತೆ ನಿರ್ವಹಣೆ ಮಾಡಿದ್ದ ಅಧಿಕಾರಿಗಳ ಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಬೆನ್ನು ತಟ್ಟಿದ್ದಾರೆ.





