Mysore
25
haze

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಕೆಎಸ್‌ಐಸಿ ಹೊರಗುತ್ತಿಗೆ ನೌಕರರು ಹೊರಕ್ಕೆ?

-ಸಾಲೋಮನ್

ಮೈಸೂರು: ಕಳೆದ ಹತ್ತು ವರ್ಷಗಳಿಂದಲೂ ಕರ್ನಾಟಕ ರೇಷ್ಮೆ ಕೈಗಾರಿಕೆಗಳ ನಿಗಮ (ಕೆಎಸ್‌ಐಸಿ)ದ ವಿವಿಧ ಉತ್ಪಾದನಾ ಘಟಕಗಳಲ್ಲಿ ಹೊರಗುತ್ತಿಗೆ ನೌಕರರಾಗಿ ದುಡಿಯುತ್ತಿರುವವರ ಸೇವಾ ಅವಧಿಯನ್ನು ಮೊಟಕುಗೊಳಿಸುವ ಹುನ್ನಾರ ನಡೆದಿದೆ ಎಂಬ ಅನುಮಾನದ ಅಲೆ ಎದ್ದಿದೆ.

ಈ ಗುತ್ತಿಗೆ ನೌಕರರನ್ನು ಮಂಗಳವಾರ ಬೆಳಿಗ್ಗೆ ಮೈಸೂರಿನಲ್ಲಿರುವ ರೇಷ್ಮೆ ಕಾರ್ಖಾನೆ ಒಳಗೆ ಬಿಡದೆ, ಏಕಾಏಕಿ ಹೊರಗೆ ಹಾಕಿದ್ದು, ಈ ಆರೋಪವನ್ನು ಪುಷ್ಟೀಕರಿಸಿದೆ. ಮೈಸೂರಿನಲ್ಲಿರುವ ಕೆಎಸ್‌ಐಸಿ ರೇಷ್ಮೆ ನೇಯ್ಗೆ ಕಾರ್ಖಾನೆ, ಚನ್ನಪಟ್ಟಣದ ನೇಯ್ಗೆ ಕಾರ್ಖಾನೆ, ತಿ.ನರಸೀಪುರ ನೂಲು ತೆಗೆಯುವ ಘಟಕ, ಬೆಂಗಳೂರು ಕೇಂದ್ರ ಕಚೇರಿ ಹಾಗೂ ಮಾರಾಟ ಮಳಿಗೆಗಳಲ್ಲಿ 815ಕ್ಕೂ ಹೆಚ್ಚು ಕಾರ್ಮಿಕರು ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇದೇ ಮೊದಲ ಬಾರಿಗೆ ಇವರುಗಳನ್ನು ಹೊರ ಹಾಕಲಾಗಿದೆ. ಒಂದು ದಿನದ ಮಟ್ಟಿಗೆ ಅಷ್ಟೇ. ನಾಳೆಯಿಂದಲೇ ಹೊರಗುತ್ತಿಗೆ ನೌಕರರು ಕೆಲಸಕ್ಕೆ ಬರಬಹುದು ಎಂಬುದು ಕೆಎಸ್‌ಐಸಿ ಆಡಳಿತ ಮಂಡಳಿಯವರ ಸಮರ್ಥನೆ.

ಬೆಂಗಳೂರಿನ ಕೆಎಸ್‌ಎ–ಕಾರ್ಪೊರೇಷನ್ ಇಲ್ಲಿನ ಗುತ್ತಿಗೆದಾರ ಸಂಸ್ಥೆಯಾಗಿದ್ದು, ಈ ಸಂಸ್ಥೆಯು  29.03.2025
ರಂದು, ಏ.1ರಂದು ಕೆಲಸಕ್ಕೆ ಬರಬೇಡಿ, ಒಂದು ದಿನ ಬ್ರೇಕ್ ಎಂದು ಪ್ರಕಟಣೆ ಹೊರಡಿಸಿತ್ತು. ಅದರ ಪ್ರತಿಯನ್ನು ಸೂಚನಾ ಫಲಕದಲ್ಲಿ ಹಾಕಲಾಗಿತ್ತು. ಕಾರ್ಮಿಕರು ಏನಿದು? ಎಂದು ಪ್ರಶ್ನೆ
ಮಾಡಿದ್ದೆ, ನೋಟಿಸ್‌ನ್ನು ಹರಿದು ಹಾಕಲಾಗಿದೆ.

ಏ.1ರ ಬೆಳಿಗ್ಗೆ ಗುತ್ತಿಗೆ ನೌಕರರು ಹಾಗೂ ಇಲ್ಲಿನ ಸೆಕ್ಯೂರಿಟಿಗಳನ್ನು ಕೆಲಸಕ್ಕಾಗಿ ಕಾರ್ಖಾನೆ ಒಳಗೆ ತೆರಳಲು ಬಿಡದೆ ಗೇಟ್‌ಗೆ ಬೀಗ ಹಾಕಲಾಗಿತ್ತು.

ಬೀಗ ಹಾಕಿದ್ದೇಕೆ?: ಕಾರ್ಮಿಕರಿಗೆ ಕೆಲಸ ಮಾಡಲು ಅವಕಾಶ ಕೊಡದೆ ಏ.1ರಂದು ಏಕೆ ಗೇಟ್ ಬೀಗ ಹಾಕಿದರು ಎಂಬ ಪ್ರಶ್ನೆಗೆ ಇಲ್ಲಿನ ಕಾರ್ಮಿಕರು, ‘ನಮ್ಮ ಸೇವಾ ಅವಧಿಯನ್ನು ಮೊಟಕುಗೊಳಿಸುವುದು ಹಾಗೂ ಸೇವೆಯನ್ನು ಖಾಯಂಗೊಳಿಸುವುದನ್ನು ತಪ್ಪಿಸುವುದೇ ಪ್ರಮುಖ ಉದ್ದೇಶವಾಗಿದೆ’
ಎಂದು ಆರೋಪಿಸುತ್ತಾರೆ.

ಗುತ್ತಿಗೆದಾರರು ಹಾಗೂ ಕೆಎಸ್‌ಐಸಿ ಆಡಳಿತ ಮಂಡಳಿಯವರು, ಇಲ್ಲಿನ ಕಾರ್ಮಿಕರ ಖಾಯಮಾತಿ, ವೇತನ
ಹೆಚ್ಚಳ, ದುಪ್ಪಟ್ಟು ಕೂಲಿ(ಓಟಿ) ಮುಂತಾದ ಬೇಡಿಕೆಗಳನ್ನು ಈಡೇರಿಸದ ಕಾರಣ ಗುತ್ತಿಗೆ ಕಾರ್ಮಿಕರು  2023ರಲ್ಲಿ ಮೈಸೂರಿನ ಸಹಾಯಕ ಕಾರ್ಮಿಕ ಆಯುಕ್ತರಿಗೆ ದೂರು ನೀಡಿದ್ದರು.

ಕೂಡಲೇ ಸಹಾಯಕ ಕಾರ್ಮಿಕ ಆಯುಕ್ತರು, ಮಾನಂದವಾಡಿ ರಸ್ತೆಯ ರೇಷ್ಮೆ ನೇಯ್ಗೆ ಕಾರ್ಖಾನೆಗೆ ಭೇಟಿ
ನೀಡಿ ಪರಿಶೀಲನೆ ನಡೆಸಿದ್ದರು.

ಕಾರ್ಮಿಕರು ನೀಡಿದ ದೂರು ಹಾಗೂ ಅಧಿಕಾರಿಗಳು ನಡೆಸಿದ್ದ ಪರಿಶೀಲನೆ ಅಂಶಗಳು ಒಂದೇ ಆಗಿದ್ದರಿಂದ ಕೆಎಸ್‌ಎಫ್‌-9 ಮತ್ತು ಕೆಎಸ್‌ಐಸಿ ಆಡಳಿತ ಮಂಡಳಿಯವರಿಗೆ ವಿವಿಧ ಕಾರ್ಮಿಕ ಕಾಯ್ದೆಗಳನ್ನು ಉಲ್ಲಂಘಿಸಿರುವ ಸಂಬಂಧ ನೋಟಿಸ್ ನೀಡಿದ್ದರು. ಆದರೂ ಗುತ್ತಿಗೆಯವರು ಮತ್ತು ಕೆಎಸ್‌ಐಸಿ ಆಡಳಿತ ಮಂಡಳಿಯವರು ನೌಕರರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಜರುಗಿಸಿಲ್ಲ.

ನೇಮಕಾತಿಗೆ ಅನುಮೋದನೆ ಸಿಕ್ಕಿದೆ: ಕೆಎಸ್‌ಐಸಿ ನಿಗಮದಲ್ಲಿ 976 ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಆದರೂ ಸುಮಾರು 800ಕ್ಕೂ ಅಧಿಕ ಹುದ್ದೆಗಳನ್ನು  ಭರ್ತಿ ಮಾಡಿರುವುದಿಲ್ಲ.

ಉಚ್ಚ ನ್ಯಾಯಾಲಯವು 2023ರ ನವೆಂಬರ್ 11ರಂದು ನೀಡಿದ ಆದೇಶದಲ್ಲಿ ಸುಮಾರು 815ಕ್ಕೂ ಹೆಚ್ಚಿನ ವಿವಿಧ ಹುದ್ದೆಗಳಿಗೆ ಮಾನವ ಸಂಪನ್ಮೂಲ ಒದಗಿಸಲು ನೀಡಿರುವ ಗುತ್ತಿಗೆಯನ್ನು ರದ್ದುಗೊಳಿಸಿ, ಹೊಸದಾಗಿ ಟೆಂಡರ್ ಪ್ರಕ್ರಿಯೆ ಕೈಗೊಳ್ಳುವಂತೆ ಆದೇಶಿಸಿತ್ತು.

ಆದರೆ ಕೆಎಸ್‌ಐಸಿ ಆಡಳಿತ ಮಂಡಳಿ ಈ ಸಂಬಂಧವೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಕಾರ್ಮಿಕರು ಆರೋಪಿಸಿದರು.

  • ಒಂದು ದಿನ ಟೆಂಡರ್ ಬ್ರೇಕ್ ಅಷ್ಟೇ : ಜಿಎಂ ಕಾತ್ಯಾಯಿನಿ ದೇವಿ
  •  ಸುಮಾರು  800ಕ್ಕೂ ಅಧಿಕ ಹುದ್ದೆ ಭರ್ತಿ ಮಾಡದ ಆಪಾದನೆ
  • 2023 ರಲ್ಲಿ ಸಹಾಯಕ ಕಾರ್ಮಿಕ ಆಯುಕ್ತರಿಗೆ ಗುತ್ತಿಗೆ ನೌಕರರ ದೂರು
  •  ಮೈಸೂರು, ತಿ.ನರಸೀಪುರ, ಚನ್ನಪಟ್ಟಣದ ನೌಕರರು ಹೊರಕ್ಕೆ
  • ಒಟ್ಟು 815 ಮಂದಿ ಹೊರಗುತ್ತಿಗೆ ನೌಕರರು

ಸೇವಾ ಅವಧಿ ಕಡಿತದ ಹುನ್ನಾರ: ಆರೋಪ

‘ನೋಟಿಸ್ ನೀಡದೆ ಹೊರಹಾಕಿರುವುದು ಆತಂಕ ಉಂಟುಮಾಡಿದೆ’ ನಮ್ಮಲ್ಲಿ 8/10 ವರ್ಷಗಳಿಂದ ಕೆಲಸ
ಮಾಡುತ್ತಿರುವವರು ಇದ್ದಾರೆ. ಇದೇ ಮೊದಲ ಬಾರಿಗೆ ನಮ್ಮನ್ನು ಹೀಗೆ ಹೊರಗೆ ಹಾಕಿರುವುದು. ನಮ್ಮ ಸೇವಾ ಅವಧಿಯನ್ನು ಮೊಟಕುಗೊಳಿಸುವ ಹುನ್ನಾರ ನಡೆಯುತ್ತಿರಬಹುದು. ಯಾವುದೇ ನೋಟಿಸ್ ನೀಡದೆ, ಈ ರೀತಿ ಹೊರಗೆ ಹಾಕಿರುವುದು ನೌಕರರಲ್ಲಿ ಆತಂಕ ಹುಟ್ಟಿಸಿದೆ. ನಾವು ಕಾರ್ಮಿಕ ಇಲಾಖೆಗೆ ದೂರು ನೀಡಿದ್ದೇವೆ.

-ಧನಂಜಯ, ಜಂಟಿ ಕಾರ್ಯದರ್ಶಿ, ಕೆಎಸ್ಐಸಿ ಹೊರಗುತ್ತಿಗೆ ಮತ್ತು ಇತರೆ ನೌಕರರ ಸಂಘ, ಮೈಸೂರು.

‘ ಒಂದು ದಿನ ಟೆಂಡರ್ ಬ್ರೇಕ್ ಅಷ್ಟೇ, ಯಾರನ್ನೂ ತೆಗೆದಿಲ್ಲ’ 

ಕೆಎಸ್ಐಸಿಯಲ್ಲಿ ಖಾಯಂ, ಕಾಂಟ್ರ್ಯಾಕ್ಟ್ ಹಾಗೂ ಹೊರಗುತ್ತಿಗೆ ನೌಕರರು ಇದ್ದಾರೆ. ನೌಕರರನ್ನು ಒದಗಿಸಲು ಕೆಎಸ್ಎಫ್- 9 ಕಾರ್ಪೊರೇಷನ್ ಎಂಬ ಸಂಸ್ಥೆಗೆ ಸರ್ಕಾರ ಗುತ್ತಿಗೆ ನೀಡಿದೆ.

ಮಾ.31ಕ್ಕೆ ಅವರ ಟೆಂಡರ್ ಮುಗಿದಿತ್ತು. ಮತ್ತೆ ಅವರಿಗೇ ಟೆಂಡರ್ ಆಗಿರುವುದರಿಂದ ಒಂದು ದಿನ ಬ್ರೇಕ್ ಮಾಡಿ ಮಾರನೇ ದಿನದಿಂದ ಮುಂದುವರಿಸುತ್ತಾರೆ. ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸುವ ಹಕ್ಕು ಕೆಎಸ್ಐಸಿಗೆ ಇಲ್ಲ. ಹೊರಗುತ್ತಿಗೆ ಪಡೆದಿರುವ ಸಂಸ್ಥೆಯ ಜವಾಬ್ದಾರಿ ಅದು. ಕೆಲಸಕ್ಕೆ ಬರಬೇಡಿ ಎಂದು ಯಾರಿಗೂ ಹೇಳಿಲ್ಲ.

-ಕಾತ್ಯಾಯಿನಿ ದೇವಿ, ಕೆಎಸ್ಐಸಿ ವ್ಯವಸ್ಥಾಪಕ ನಿರ್ದೇಶಕರು (ಪರ್ಸನಲ್‌), ಮೈಸೂರು.

 

Tags:
error: Content is protected !!