ವಿರಾಜಪೇಟೆ: ಪಟ್ಟಣದ ಮೊದಲ ಮಹಿಳಾ ಆಟೋ ಚಾಲಕಿಯಾಗಿ ಕೋಮಲ ಪ್ರಿಯ ಕರ್ತವ್ಯ ಆರಂಭಿಸಿದ್ದು, ಗಣ್ಯರು ಶುಭ ಹಾರೈಸಿದರು.
ಜೈ ಭಾರತ್ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನಗರ ಠಾಣಾಽಕಾರಿ ಪ್ರಮೋದ್, ಮಹಿಳೆಯರು ಆರ್ಥಿಕವಾಗಿ ಮುಂದುವರಿಯುವ ನಿಟ್ಟಿನಲ್ಲಿ ಆಟೋ ಚಾಲಕಿಯಾಗಿ ಕೆಲಸ ನಿರ್ವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಪುರುಷ ಪ್ರಧಾನವಾಗಿರುವ ಈ ಕಾಲಘಟ್ಟದಲ್ಲಿ ಎಲ್ಲರಂತೆ ಬದುಕು ತನ್ನದಾಗಿಸುವ ಪ್ರಯತ್ನ ಮಾಡಿರುವುದು ಶ್ಲಾಘನೀಯ. ಚಾಲಕರು ಕಾನೂನು ಪರಿಪಾಲನೆಯೊಂದಿಗೆ ದಾಖಲೆ ಪತ್ರಗಳನ್ನು ಸರಿದೂಗಿಸಿಕೊಂಡು ಚಾಲನೆಗೆ ಮುಂದಾಗಬೇಕು ಎಂದು ಹೇಳಿದರು.
ವಕೀಲರಾದ ಬಿ. ಎಸ್. ಪುಷ್ಪರಾಜ್ ಮಾತನಾಡಿ, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿ ಆರ್ಥಿಕವಾಗಿ ಸುಧಾರಣೆ ಹೊಂದಲು ಮಹಿಳೆಯರು ಮುಂದಾಗಬೇಕು. ಹಿಂಜರಿಕೆಯನ್ನು ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು. ಆ ನಿಟ್ಟಿನಲ್ಲಿ ಪ್ರಿಯ ಆಟೋ ಚಾಲನೆಗೆ ಮುಂದಾಗಿರುವುದು ಶ್ಲಾಘನೀಯ ಎಂದರು. ಪುರಸಭೆಯ ಉಪಾಧ್ಯಕ್ಷ ಫಾಸಿಯ ತಬ್ಸುಂ, ಸದಸ್ಯರಾದ ಸಿ. ಕೆ. ಪೃಥ್ವಿನಾಥ್, ಸುನಿತಾ ಜೂನಾ, ಸಂಘದ ಸ್ಥಾಪಕ ಅಧ್ಯಕ್ಷ ಶಿವು, ಜೈ ಭಾರತ್ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಪುಟ್ಟ ಬೆಳ್ಯಪ್ಪ , ಪ್ರಧಾನ ಕಾರ್ಯದರ್ಶಿ ಜೀವನ್, ಗೌ. ಅಧ್ಯಕ್ಷ ಪ್ರಭು ಕುಟ್ಟಪ್ಪ , ಪದಾಧಿಕಾರಿಗಳು ಹಾಜರಿದ್ದರು