Mysore
28
scattered clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಏಪ್ರಿಲ್‌.1 ರಿಂದ 15ರವರೆಗೆ ಕೊಡವ ಕ್ರಿಕೆಟ್‌ ಲೀಗ್‌

ಕೂರ್ಗ್‌ ಕ್ರಿಕೆಟ್‌ ಫೌಂಡೇಶನ್‌ನಿಂದ ಆಯೋಜನೆ; ಪಾಲಿ ಬೆಟ್ಟದಲ್ಲಿ ಕ್ರಿಕೆಟ್‌ ಹಬ್ಬದ ಸಂಭ್ರಮ

-ಪುನೀತ್ ಮಡಿಕೇರಿ

ಮಡಿಕೇರಿ: ಕೂರ್ಗ್ ಕ್ರಿಕೆಟ್ ಫೌಂಡೇಷನ್ ಆಯೋಜಿಸಿರುವ ಕೊಡವ ಕ್ರಿಕೆಟ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಸೀಜನ್- 2 ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದೆ.

ಏ.1ರಿಂದ ಪಂದ್ಯಾವಳಿ ಆರಂಭಗೊಳ್ಳಲಿದ್ದು, ಬಿಡ್ಡಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ. ಐಪಿಎಲ್ ಮಾದರಿಯಲ್ಲಿನಡೆಸಲಾಗುವ ಕೊಡವ ಕ್ರಿಕೆಟ್ ಲೆದರ್
ಬಾಲ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಮೊದಲ ಆವೃತಿ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದಿತ್ತು. ಈ ಬಾರಿ 2ನೇ
ಸೀಜನ್ ಆಯೋಜನೆಗೊಳ್ಳುತ್ತಿದ್ದು, ಏ.1ರಿಂದ 15ರವರೆಗೆ ಪಾಲಿಬೆಟ್ಟದ ಟಾಟಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯಾವಳಿ ಜರುಗಲಿದೆ.

ಐಪಿಎಲ್ ಮಾದರಿಯಲ್ಲೇ ಪಂದ್ಯಾವಳಿ

ಐಪಿಎಲ್ ಮಾದರಿಯಲ್ಲಿಯೇ ನಡೆಯುವ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು 10 ಫ್ರಾಂಚೈಸಿ ತಂಡಗಳು ಪಾಲ್ಗೊಳ್ಳಲಿವೆ. ಇತ್ತೀಚೆಗೆ ಮೈಸೂರಿನ
ಖಾಸಗಿ ಹೋಟೆಲ್‌ನಲ್ಲಿ ಇದರ ಬಿಡ್ಡಿಂಗ್  ಪ್ರಕ್ರಿಯೆ ನಡೆದಿದೆ. ಐಪಿಎಲ್‌ನಂತೆಯೇ ಇಲ್ಲಿ ಆಟಗಾರರನ್ನು ಹಣ ನೀಡಿ ಖರೀದಿ ಮಾಡುವ ನಿಯಮವಿದ್ದು, ಓರ್ವ ಐಕಾನ್  ಪ್ಲೇಯರ್, ಮತ್ತಿಬ್ಬರು ಕಳೆದ ಬಾರಿ ಆಡಿದ ಆಟಗಾರರನ್ನು ರೀಟೇನ್ ಮಾಡಿಕೊಳ್ಳಬಹುದಾಗಿದೆ. ಉಳಿದವರನ್ನು ಬಿಡ್ಡಿಂಗ್ ಮಾಡಿ ತಂಡಕ್ಕೆ ಸೇರಿಸಿಕೊಳ್ಳಬೇಕಿದೆ. ಅದರಂತೆ ಮೈಸೂರಿನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 175 ಆಟಗಾರರನ್ನು ನಾನಾ ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.

15ದಿನಗಳು, 10 ತಂಡಗಳು

15 ದಿನಗಳ ಕಾಲ ಪ್ರತಿದಿನ 2 ಟಿ-20  ಪಂದ್ಯಗಳು ನಡೆಯಲಿದ್ದು, ಎ ಮತ್ತು ಬಿ ಎಂಬ ಎರಡು ಪೂಲ್‌ಗಳಲ್ಲಿ ತಂಡಗಳು ಆಟವಾಡಲಿವೆ. ಎರಡೂ ಪೂಲ್‌ನಲ್ಲಿ ಅತಿ ಹೆಚ್ಚು ರನ್‌ರೇಟ್ ಗಳಿಸುವ ತಂಡಗಳು ಎಲಿಮಿನೇಟರ್, ಕ್ವಾಲಿಫೈಯರ್ 1, ಕ್ವಾಲಿಫೈಯರ್ 2 ಪಂದ್ಯಗಳನ್ನಾಡಬೇಕಿದೆ. ಬಳಿಕ ಕ್ವಾಲಿಫೈರ್ 1 ಮತ್ತು 2ರಲ್ಲಿ ಗೆಲ್ಲುವ ತಂಡಗಳು ಫೈನಲ್‌ನಲ್ಲಿ ಕಪ್‌ಗಾಗಿ ಸೆಣೆಸಾಟ ನಡೆಸಲಿವೆ. ಇದು ಐಪಿಎಲ್ ನಿಯಮವೇ ಆಗಿದ್ದು, 15 ದಿನಗಳ ಕಾಲ ನಡೆಯುವ ಪಂದ್ಯಾವಳಿ ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಮನರಂಜನೆ ನೀಡಲಿದೆ.

2 ಲಕ್ಷ ರೂ. ಮೊದಲ ಬಹುಮಾನ:

ಪಂದ್ಯಾವಳಿಯಲ್ಲಿ ಚಾಂಪಿಯನ್ ಪಟ್ಟ ಅಲಕಂಕರಿಸುವ ತಂಡಕ್ಕೆ ಬರೋಬ್ಬರಿ 2 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ. ರನ್ನರ್  ಅಪ್ ತಂಡಕ್ಕೆ 1 ಲಕ್ಷ ರೂ. ಮತ್ತು 3ನೇ ಬಹುಮಾನ(ಕ್ವಾಲಿಫೈಯರ್ 2ರಲ್ಲಿ ಹೊರನಡೆಯುವ ತಂಡ) ಗಳಿಸುವ ತಂಡಕ್ಕೆ 50 ಸಾವಿರ ರೂ. ಮತ್ತು ಎಲ್ಲಾ ಬಹುಮಾನ
ವಿಜೇತರಿಗೆ ಆಕರ್ಷಕ ಟ್ರೋಫಿ ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.

ಕೊಡವ ಕೌಟುಂಬಿಕ ಪಂದ್ಯಾವಳಿ ಅಲ್ಲ….

ಈ ಟೂರ್ನಿ ಕೊಡವ ಕುಟುಂಬಗಳ ನಡುವೆ ನಡೆಯುವ ಪಂದ್ಯಾವಳಿಯಲ್ಲ. ಬದಲಿಗೆ ಯಾವುದೇ ಕುಟುಂಬದ ಕೊಡವರು ಯಾವ ತಂಡದಲ್ಲಾದರೂ ಆಡಬಹುದಾಗಿದೆ. ಲೆದರ್ ಬಾಲ್ ಟೂರ್ನಿ ಆಗಿರುವುದರಿಂದ ವೃತ್ತಿಪರ ಆಟಗಾರರೇ ಹೆಚ್ಚಾಗಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ರಣಜಿ ಆಡಿದವರು ಮತ್ತು ಐಪಿಎಲ್‌ಗೆ ಆಯ್ಕೆಯಾಗಿದ್ದ ಕೆಲ ಕೊಡವ ಕ್ರಿಕೆಟರ್‌ಗಳೂ ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಉದ್ಯೋಗ ಪಡೆಯಲು ಅವಕಾಶ

ಕಳೆದ ಬಾರಿಯ ಚೊಚ್ಚಲ ಪಂದ್ಯಾವಳಿಯಲ್ಲಿ ಆಟವಾಡಿದ ಇಬ್ಬರು ಆಟಗಾರರು ದೇಶದ ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿರುವುದು ಈ ಟೂರ್ನಿಯ ಗರಿಮೆಯಾಗಿದೆ. ಯೂಟ್ಯೂಬ್ ಲೈವ್‌ನಲ್ಲಿ ಈ ಪಂದ್ಯಾವಳಿಯನ್ನು ವೀಕ್ಷಿಸಬಹುದಾಗಿದ್ದು, ದೊಡ್ಡ ಫ್ರಾಂಚೈಸಿಗಳು, ಪ್ರಾಯೋಜಕರು ಮತ್ತು ನಾನಾ ಕ್ರಿಕೆಟ್ ಅಕಾಡೆಮಿಗಳು ಇಲ್ಲಿ ಉತ್ತಮ ಆಟ ಪ್ರದರ್ಶಿಸುವ ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಇದರೊಂದಿಗೆ ಕಂಪೆನಿಗಳಲ್ಲಿ ಉದ್ಯೋಗ ಪಡೆಯುವುದಕ್ಕೂ ಅವಕಾಶವಿದೆ.

ಕೊಡವ ಕ್ರಿಕೆಟ್ ಲೆದರ್ ಬಾಲ್ ಪ್ರೀಮಿ ಯರ್ ಲೀಗ್ ಸೀಸನ್-2ನ್ನು ಈ ಬಾರಿ ಪಾಲಿಬೆಟ್ಟದಲ್ಲಿ ಆಯೋಜಿಸುತ್ತಿದ್ದೇವೆ. ಏ.1ರಿಂದ ಪಂದ್ಯಾವಳಿ
ಆರಂಭವಾಗಲಿದ್ದು, ಈಗಾಗಲೇ ಬಿಡ್ಡಿಂಗ್ ಪ್ರಕ್ರಿಯೆ ಮುಗಿದಿದೆ. ಲೆದರ್  ಬಾಲ್ ಕ್ರಿಕೆಟ್ ಆಡುವುದರಿಂದ ವೃತ್ತಿಪರ ಕ್ರಿಕೆಟ್‌ನಲ್ಲಿ ಅವಕಾಶಗಳಿದ್ದು, ಕೊಡವ ಯುವಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪಂದ್ಯಾವಳಿ ಆಯೋಜಿಸಲಾಗುತ್ತಿದೆ.

-ಪೊರುಕೊಂಡ ಸುನಿಲ್, ಕೂರ್ಗ್ ಕ್ರಿಕೆಟ್ ಫೌಂಡೇಷನ್ ಅಧ್ಯಕ್ಷ.

 

 

 

Tags:
error: Content is protected !!