Mysore
20
overcast clouds
Light
Dark

ವೀರ ಪರಂಪರೆಯ ನಾಡು ಕೊಡಗು

• ಬೊಳ್ಳಜೀರ ಬಿ.ಅಯ್ಯಪ್ಪ, ಅಧ್ಯಕ್ಷ, ಕೊಡವ ಮಕ್ಕಡ ಕೂಟ

• ಹೈದರಾಲಿ, ಟಿಪ್ಪು ಅವರ ಕಾಲದಲ್ಲಿ ಕೊಡಗಿನವರ ಸೇವೆ
• ಜಾನಪದೀಯ ವೀರರಾಗಿ ಕೈಯ್ಯಂದೀರ ಅಪ್ಪಯ್ಯ, ಕುಲ್ಲಚಂಡ ಚೋಂದು, ಮಹಾವೀರ ಅಚ್ಚುನಾಯಕ, ಮಹಾವೀರ ಉತ್ತು ನಾಯಕರ ಬಗ್ಗೆ ಉಲ್ಲೇಖ
• ಹೊಯ್ಸಳರ ಕಾಲದ ಸೈನ್ಯದಲ್ಲಿ ಮಾದಯ್ಯ ಅಥವಾ ಮಾದಪ್ಪ ಎಂಬ ಹೆಸರಿನ ಕೊಡಗಿನ ಸೇನಾಧಿಕಾರಿ ಕರ್ತವ್ಯ ನಿರ್ವಹಣೆ
• ಬ್ರಿಟಿಷರ ಕಾಲದಲ್ಲಿ ಅನೇಕರು ಸೇನಾನಿಗಳಾಗಿದ್ದರು
• ಲಿಂಗರಾಜ, ಚಿಕ್ಕವೀರರಾಜೇಂದ್ರರ ಕಾಲದಲ್ಲಿ ಬಿದ್ದಂಡ ಬೋಪಣ್ಣ, ಬಿದ್ದಂಡ ಸೋಮಯ್ಯ ರಾಜನ ಸೈನ್ಯದ ಉನ್ನತ ಹುದ್ದೆಗಳಲ್ಲಿದ್ದರು
• ಮೊದಲನೇ ಮತ್ತು ಎರಡನೇ ಮಹಾಯುದ್ಧದಲ್ಲಿ ಬ್ರಿಟಿಷ್ ಸೇನೆಯ ಪರವಾಗಿ ಪಾಲ್ಗೊಂಡು ಹಲವು ಮಂದಿ ತ್ಯಾಗ, ಬಲಿದಾನ

ಕೊಡಗಿನ ವೀರರು ಪಾಲ್ಗೊಂಡಿದ್ದ ಯುದ್ಧವೊಂದರ ದಾಖಲೆಯು ಕ್ರಿ.ಶ.1174ರ ಪಾಲರೆ ಶಾಸನದಿಂದ ತಿಳಿದುಬರುತ್ತದೆ. ಕೊಡಗಿನ ಇತಿಹಾಸವನು ಅವಲೋಕಿಸಿದಾಗ 5ನೇ ಶತಮಾನದಲ್ಲೇ ಕದಂಬರ ಆಡಳಿತಕ್ಕೆ ಒಳಪಟ್ಟಿದ್ದು ಕಂಡು ಬರುತ್ತದೆ. ಇದನ್ನು 11ನೇ ಮತ್ತು 12ನೇ ಶತಮಾನದವರೆಗೂ ವಿಸ್ತರಿಸಿದ ದಾಖಲೆಗಳು, ಕೇರಳದ ವಯನಾಡಿನಲ್ಲಿ ದೊರೆತ ಶಾಸನಗಳು ಹೇಳಿವೆ. ಈ ಶಾಸನಗಳು ಕ್ರಿ.ಶ. 1026, 1047 ಮತ್ತು 1095ರ ದಾಖಲೆಗಳಾಗಿದ್ದು, ಕದಂಬರು ಮಾತ್ರವಲ್ಲದೆ ಗಂಗರು, ಚೋಳರು ಕೊಡಗನ್ನು ಆಳಿದ್ದಾರೆ.

ಮುಂದೆ ವಿಜಯನಗರ ಸಾಮ್ರಾಜ್ಯ ಪತನವಾದಂತೆ ಅದರ ಸಾಮಂತರಾಗಿದ್ದ ಇಕ್ಕೇರಿ ಅರಸರ ಒಂದು ಭಾಗ ಕೊಡಗಿನತ್ತ ಬಂದು ಹಾಲೇರಿಯಲ್ಲಿ ನೆಲೆ ನಿಂತು, ಹಾಲೇರಿ ರಾಜ ವಂಶಸ್ಥರೆಂದು ಕರೆಯಲ್ಪಟ್ಟು ಕ್ರಿ.ಶ. 1592ರಿಂದ 1834 ರವರೆಗೆ ಕೊಡಗನ್ನು ಆಳಿದರು. ಈ ನಡುವೆ, ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಅವರ ಕಾಲದಲ್ಲಿ ಅವರ ಸೈನ್ಯದಲ್ಲಿ ಕೂಡ ಕೊಡಗಿನವರು ಸೇವೆ ಸಲ್ಲಿಸಿದ್ದಾರೆ.

ಕೊಡಗಿನ ರಾಜರ ಕಾಲದಲ್ಲಿ, ಮುಂದೆ ಬ್ರಿಟಿಷರ ಕಾಲದಲ್ಲಿ ರಾಜ ಮನೆತನಕ್ಕೆ ಅನುಪಮ ಸೇವೆ ಸಲ್ಲಿಸಿದ ಕೊಡಗಿನ ಜನ ಸಮುದಾಯದಲ್ಲಿ ಕೊಡವ ಜನಾಂಗ ಪ್ರಥಮ ಸ್ಥಾನದಲ್ಲಿದೆ. ತಮ್ಮ ದೇಹದಾರ್ಡ್ಯತೆ, ಕಷ್ಟ ಸಹಿಷ್ಣುತೆ, ಶಿಸ್ತು ಮತ್ತು ನಂಬಿಕೆಗಳಿಗೆ ಹೆಸರಾದ ಇವರು ಬ್ರಿಟಿಷರ ಪ್ರೀತಿ ಪಾತ್ರರು ಮತ್ತು ನಂಬಿಕಸ್ಥ ಜನರಾಗಿ ಅವರಿಂದ ಎಲ್ಲ ಸಮುದಾಯಗಳಿಗಿಂತ ವೇಗವಾಗಿ ಇಂಗ್ಲಿಷ್ ಶಿಕ್ಷಣವನ್ನು ಕಲಿತು ಅರಗಿಸಿ ಕೊಂಡಿದ್ದು ಕೂಡ ಅವರ ಏಳಿಗೆಯಲ್ಲಿನ ಪ್ರಮುಖವಾದ ಅಂಶ.

ಕ್ರಿ.ಶ. 1174ರ ಪಾಲರೆ ಶಾಸನಕ್ಕೂ ಮೊದಲು ಜಾನಪದೀಯ ವೀರರಾಗಿ ಕೈಯ್ಯಂದೀರ ಅಪ್ಪಯ್ಯ, ಕುಲ್ಲಚಂಡ ಚೋಂದು, ಮಹಾವೀರ ಅಚ್ಚುನಾಯಕ ಮತ್ತು ಮಹಾವೀರ ಉತ್ತು ನಾಯಕರ ಬಗ್ಗೆ ಉಲ್ಲೇಖಗಳಿದೆ. ಮುಂದೆ ಕ್ರಿ.ಶ. 1316ರ ಹೊಯ್ಸಳರ ಕಾಲದ ಶಾಸನದಲ್ಲಿ ಆಗಿನ ಸೈನ್ಯದಲ್ಲಿ ಮಾದಯ್ಯ ಅಥವಾ ಮಾದಪ್ಪ ಎಂಬ ಹೆಸರಿನ ಕೊಡಗಿನ ಸೇನಾಧಿಕಾರಿ ಕರ್ತವ್ಯ ನಿರ್ವಹಿಸಿದ್ದುದು ಶಾಸನದಲ್ಲಿ ಉಲ್ಲೇಖವಾಗಿದೆ.

ಕ್ರಿ.ಶ. 1600ರಲ್ಲಿ ಕೊಡಗಿನ ರಾಜರು ಹಾಗೂ ಹೈದರಾಲಿ ಮತ್ತು ಟಿಪ್ಪು ಕಾಲದಲ್ಲಿ (ಕ್ರಿ.ಶ. 1760-1799) ಕನ್ನಂಡ ದೊಡ್ಡಯ್ಯ, ಅಪ್ಪಚ್ಚರ ಮಂದಯ್ಯ, ಕುಲ್ಲೇಟಿರ ಪೊನ್ನಣ್ಣ, ಮುಂದೆ ದೊಡ್ಡ ವೀರರಾಜ ಅವರ ಕಾಲದಲ್ಲಿ ಬೋನೀರ ಮುತ್ತಣ್ಣ, ಪಟ್ಟಚೆರುವಂಡ ಬೋಳಕಿ, ಚೆಪ್ಪುಡಿರ ಪೊನ್ನಪ್ಪ, ಅಪ್ಪಾರಂಡ ಬೋಪು ಮತ್ತು ಬ್ರಿಟಿಷರ ಕಾಲದಲ್ಲಿ ದಿವಾನರಾಗಿ ಮತ್ತು ಸೇನಾನಿಗಳಾಗಿ ಕೆಲಸ ಮಾಡಿದ ಅನೇಕರು ದಾಖಲೆಗಳಲ್ಲಿ ಕಂಡು ಬರುತ್ತಾರೆ.

ವಿಶೇಷವಾಗಿ ಲಿಂಗರಾಜ ಮತ್ತು ಚಿಕ್ಕವೀರರಾಜೇಂದ್ರ ಅವರ ಕಾಲದಲ್ಲಿ ಬಿದ್ದಂಡ ಬೋಪಣ್ಣ ಮತ್ತು ಬಿದ್ದಂಡ ಸೋಮಯ್ಯ ಅವರ ಬಗ್ಗೆ ಉಲ್ಲೇಖವಿದ್ದು, ಇಂದಿಗೂ ಮಡಿಕೇರಿ ರಾಜರ ಗದ್ದಿಗೆಯ ಬಳಿ ತಮ್ಮ ಗದ್ದಿಗೆಗಳನ್ನು ಹೊಂದಿರುವ ಈ ಇಬ್ಬರು ಕೊಡಗು ರಾಜರ ಕಾಲದಲ್ಲಿ ರಾಜನ ಸೈನ್ಯದ ಉನ್ನತ ಹುದ್ದೆಗಳಲ್ಲಿದ್ದರು.

ಕೊಡಗಿನ ಬಗ್ಗೆ ಜಿ.ರಿಕ್ಟ‌ರ್‌ ಬರೆದ ‘ಕೊಡಗು ಗೆಜೆಟಿಯರ್’, ನಂತರದಲ್ಲಿ ಡಿ.ಎನ್.ಕೃಷ್ಣಯ್ಯ ಅವರ ‘ಕೊಡಗಿನ ಇತಿಹಾಸ’, ಐ.ಮಾ. ಮುತ್ತಣ್ಣ ಅವರ ‘ಕೂರ್ಗ್ ಮೆಮೊರಿಯಸ್’ ಮತ್ತು ‘ಎ ಟೈನಿ ಮಾಡೆಲ್ ಸ್ಟೇಟ್ ಆಫ್ ಸೌತ್ ಇಂಡಿಯಾ’, ಬಿ.ಎಲ್.ರೈಸ್ ಅವರ ‘ಮೈಸೂರ್ ಅಂಡ್ ಕೂರ್ಗ್ ಫ್ರಂ ದಿ ಇನ್‌ಸ್ಕ್ರಿಪ್ಸನ್‌’, ಎಂ.ಎನ್‌. ಶ್ರೀನಿವಾಸ್‌ ಅವರ ‘ರಿಲಿಜಿಯನ್ ಅಂಡ್ ಸೊಸೈಟಿ ಅಮಾಂಗ್ ದಿ ಕೂರ್ಗ್ ಆಫ್ ಸೌತ್ ಇಂಡಿಯಾ’ ಮೊದಲಾದವುಗಳು ಕೊಡಗಿನ ಇತಿಹಾಸ ಮತ್ತು ಐತಿಹ್ಯಗಳ ಮೇಲೆ ಬೆಳಕು ಚೆಲ್ಲುವ ಅಧಿಕೃತ ಅಧ್ಯಯನ ಪೂರ್ಣ ಪ್ರಯತ್ನಗಳಾಗಿವೆ.

ಆದರೆ, ಲೆಫ್ಟಿನೆಂಟ್ ಕರ್ನಲ್ ಕೆ.ಸಿ.ಪೊನ್ನಪ್ಪ ಅವರ ‘ಎ ಸ್ಟಡಿ ಆಫ್ ದಿ ಒರಿಜಿನ್ಸ್ ಆಫ್ ಕೂರ್ಗ್’ ಅತ್ಯಂತ ಆಧಾರ ಸಹಿತ ಅಧ್ಯಯನ ಪೂರ್ಣ ಸಂಶೋಧನ ಕೃತಿಯಾಗಿದ್ದು, ಇದರಲ್ಲಿ ಐ.ಮಾ.ಮುತ್ತಣ್ಣ ಅವರ ನಂತರ ಕೊಡಗಿನ ಚರಿತ್ರೆ ಹಾಗೂ ವಿಶೇಷವಾಗಿ ಕೊಡಗಿನ ಸೈನಿಕ ಪರಂಪರೆಯಲ್ಲಿ ಕೊಡವ ಜನಾಂಗದ ಪಾತ್ರವನ್ನು ಲೆಫ್ಟಿನೆಂಟ್ ಕರ್ನಲ್ ಕೆ.ಸಿ.ಪೊನ್ನಪ್ಪ ಅವರು ಉಲ್ಲೇಖಿಸಿದ್ದಾರೆ.

ಇತ್ತೀಚೆಗೆ ಬಿಡುಗಡೆಗೊಂಡ ಐತಿಚಂಡ ರಮೇಶ್ ಉತ್ತಪ್ಪ ಅವರ 1965ರ ಯುದ್ಧ ಮತ್ತು ಮಹಾವೀರ ಚಕ್ರ ಪುರಸ್ಕೃತ ಸ್ಕ್ವಾ.ಲೀ.ಅಜ್ಜಮಾಡ ದೇವಯ್ಯ’, ಮಣಿಯಪಂಡ ತಮ್ಮಯ್ಯ ಅವರ ‘ಸಮರ ಭೈರವಿ’, ಮೂಕೊಂಡ ನಿತಿನ್ ಕುಶಾಲಪ್ಪ ಅವರ ‘ದಿ ಮೇಜ‌ ಹೂ ಕೆಪ್ ಹಿಸ್ ಕೂಲ್’ ಎಂಬ ಕೃತಿ ಉಲ್ಲೇಖಾರ್ಹ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಸಮ ಕಾಲೀನರು ಮತ್ತು ಇನ್ನೂ ಹಿಂದಕ್ಕೆ ಹೋಗಿ ನೋಡುವುದಾದರೆ, ಮೊದಲ ಮಹಾ ಯುದ್ಧ ಮತ್ತು ಎರಡನೇ ಮಹಾಯುದ್ಧಗಳಲ್ಲಿ ಪಾಲ್ಗೊಂಡು ಬ್ರಿಟಿಷ್ ಸೇನೆಯ ಪರವಾಗಿ ತ್ಯಾಗ, ಬಲಿದಾನ ಮಾಡಿದ ಹಲವು ಮಂದಿ ಇದ್ದಾರೆ. ಅವರ ಪೈಕಿ ಮೊದಲನೇ ಮಹಾಯುದ್ಧದಲ್ಲಿ ಲೆಫ್ಟಿನೆಂಟ್ ಕರ್ನಲ್ ಡಾಣಣ ಕೋದಂಡ ಮಾದಪ್ಪ ಗಣಪತಿ ಅವರು ವೈದ್ಯಕೀಯ ಕ್ಷೇತ್ರದಲ್ಲಿನ ಅನುಪಮ ಸೇವೆಗಾಗಿ ಬ್ರಿಟಿಷ್ ಸೇನೆಯ ಅತ್ಯುನ್ನತ ಗೌರವವಾಗಿದ್ದ ‘ಮಿಲಿಟರಿ ಕ್ರಾಸ್ ಅನ್ನು ಪಡೆದವರು. ಅದೇ ರೀತಿ ಅದೇ ಯುದ್ಧದಲ್ಲಿ ಕ್ಯಾಪ್ಟನ್ ಕೇಟೋಳಿರ ಚಂಗಪ್ಪ ಮಾದಪ್ಪ ಮತ್ತು ಕ್ಯಾಪ್ಟನ್ ಕೋದಂಡ ಪಿ.ಮಾಚಯ್ಯ ಅವರು ಹುತಾತ್ಮರಾಗಿದ್ದಾರೆ.

ಕೊಡಗಿನ ಕೀರ್ತಿ ಹೆಚ್ಚಿಸಿದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಜೊತೆಗೆ 1918ರಲ್ಲಿ ಕಿಂಗ್ ಕಮಿಷನ್ ಸೇರಿದ, ಮುಂದೆ ಬ್ರಿಗೇಡಿಯರ್ ಆಗಿ ನಿವೃತ್ತರಾದ ಚೆಪ್ಪುಡಿರ ಬಿ.ಪೊನ್ನಪ್ಪ ಹಾಗೂ ಎರಡನೇ ಮಹಾ ಯುದ್ಧದಲ್ಲಿ ಮಿಲಿಟರಿ ಕ್ರಾಸ್’ ಗೌರವ ಪಡೆದ ಬ್ರಿಗೇಡಿಯರ್ ಡಾಣಣ ಕೀತಿಯಂಡ ಕಾಳಪ್ಪ ಗಣಪತಿ ಹಾಗೂ ಬ್ರಿಗೇಡಿಯರ್ ಅಲ್ಲಪಂಡ ಚಿಣ್ಣಪ್ಪ ಕಾಳಪ್ಪ ಕೂಡ ಎರಡನೇ ಮಹಾ ಯುದ್ಧದಲ್ಲಿ ಪಾಲ್ಗೊಂಡವರಾಗಿದ್ದಾರೆ. ಹಾಗೆಯೇ ಬ್ರಿಗೇಡಿಯರ್ ಕೋದಂಡ ಐ. ಸೋಮಯ್ಯ ಅವರ ಹೆಸರು ಕೂಡ ಇಲ್ಲಿ ಉಲ್ಲೇಖಾರ್ಹ.