Mysore
19
overcast clouds
Light
Dark

ಕಾವೇರಿ ಸಮಸ್ಯೆ ಬಂದಾಗಲೆಲ್ಲಾ ನೆರವಾಗುವ ಕಬಿನಿ

• ಮಂಜು ಕೋಟೆ

ಎಚ್.ಡಿ.ಕೋಟೆ: ಕಾವೇರಿ ನೀರಿನ ಸಮಸ್ಯೆ ಎದುರಾಗಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ತಾಲ್ಲೂಕಿನ ಕಬಿನಿ ಜಲಾಶಯ ಆಪದ್ಬಾಂಧವನಂತೆ ಕಾಪಾಡುತ್ತಿದ್ದು, ಈ ಬಾರಿಯೂ ಇಲ್ಲಿಯವರೆಗೆ 3 ಟಿಎಂಸಿ ನೀರನ್ನುತಮಿಳುನಾಡಿಗೆ ನೀಡಿದೆ.

ಕಾವೇರಿ ನೀರು ನಿಯಂತ್ರಣ ಸಮಿತಿ ನಿತ್ಯ ಒಂದು ಟಿಎಂಸಿ ನೀರನ್ನು ನೀಡುವಂತೆ ಆದೇಶಿಸಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸರ್ವ ಪಕ್ಷದ ಸದಸ್ಯರು 8 ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಹರಿಸಲು ನಿರ್ಣಯ ಕೈಗೊಂಡಿದ್ದು, ಅದರಂತೆ ಕಬಿನಿಯಿಂದ ನೀರು ಹರಿಸಲಾಗುತ್ತಿದೆ.

ಕಾವೇರಿ ಸಮಸ್ಯೆ ಉದ್ಭವವಾದಾಗಿನಿಂದಲೂ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ನೆರವಾಗುತ್ತಿರುವ ಕಬಿನಿ ಜಲಾಶಯದಿಂದ ಈಗ ಭಾರೀ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ.

ಮೂರು ದಿನಗಳ ಹಿಂದೆ ಕಬಿನಿ ಜಲಾಶಯ ಗರಿಷ್ಟ ಮಟ್ಟ 84 ಅಡಿ ತಲುಪಿರುವುದರಿಂದ ಜಲಾಶಯದಿಂದ 25 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಇಲ್ಲಿಯವರೆಗೆ ನದಿ ಮತ್ತು ತಮಿಳುನಾಡಿಗೆ ಮೂರು ಟಿಎಂಸಿ ನೀರು ಹರಿದುಹೋಗಿದೆ.

ವಯನಾಡು ಮತ್ತು ತಾಲ್ಲೂಕಿನಲ್ಲಿ ಮತ್ತೆ ಮಳೆ ಆರ್ಭಟ ಹೆಚ್ಚಾಗಿರುವುದರಿಂದ 17 ಸಾವಿರ ಕ್ಯೂಸೆಕ್ಸ್ ಇದ್ದ ಒಳಹರಿವಿನ ಪ್ರಮಾಣ 20 ಸಾವಿರ ಕ್ಯೂಸೆಕ್ಸ್‌ಗೆ ಏರಿಕೆಯಾಗಿದೆ.

ಕಳೆದ ಸಾಲಿನಲ್ಲಿ ಜುಲೈ ಕೊನೆಯ ವಾರದಲ್ಲಿ ಜಲಾಶಯ ಭರ್ತಿಯಾಗಿತ್ತು. ಆದರೆ ಈ ಬಾರಿ 20 ದಿನಗಳ ಮುಂಚೆಯೇ ಭರ್ತಿಯಾಗಿರುವುದರಿಂದ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ ಆದೇಶ ಪಾಲಿಸಲು ಸಹಾಯಕವಾಗಿದೆ.

ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಕಾವೇರಿ ಸಮಸ್ಯೆ ಬಂದಾಗಲೆಲ್ಲಾ ಕಬಿನಿ ಜಲಾಶಯದಿಂದ ಅನುಕೂಲ ಪಡೆಯುವಂತೆಯೇ ಕ್ಷೇತ್ರದ ಅಭಿವೃದ್ಧಿ ಮತ್ತು ಜಲಾಶಯಗಳ ಅಭಿವೃದ್ಧಿಗೂ ಕಾಳಜಿ ವಹಿಸಿದ್ದರೆ ತಾಲ್ಲೂಕಿನ 4 ಜಲಾಶಯಗಳು ಮತ್ತಷ್ಟು ಅಭಿವೃದ್ಧಿಯಾಗಿ ಕ್ಷೇತ್ರ ಪ್ರವಾಸೋದ್ಯಮ ದೃಷ್ಟಿಯಿಂದ ಪ್ರಗತಿಯತ್ತ ಸಾಗುತ್ತಿತ್ತು. ಈಗಲಾದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕು ಎಂಬುದು ಕ್ಷೇತ್ರದ ಪ್ರಜ್ಞಾವಂತರ ಆಶಯವಾಗಿದೆ.

ಕೋಟ್ಸ್‌))

ಕಾವೇರಿ ಸಮಸ್ಯೆ ಉದ್ಭವಿಸಿದಾಗೆಲ್ಲಾ ನಮ್ಮ ಕ್ಷೇತ್ರದ ಕಬಿನಿ ಜಲಾಶಯ ಪರಿಹಾರ ನೀಡುತ್ತಿದೆ. ಕಬಿನಿ ಜಲಾಶಯ ಭರ್ತಿಯಾಗಿ ಅತಿ ಹೆಚ್ಚು ನೀರನ್ನು ನದಿಗೆ ಮತ್ತು ತಮಿಳುನಾಡಿಗೆ ಬಿಡಲಾಗುತ್ತಿದ್ದು, ಕಾವೇರಿ ನೀರು
ನಿಯಂತ್ರಣ ಸಮಿತಿಯವರು ಮತ್ತು ಸರ್ವ ಪಕ್ಷದ ಸದಸ್ಯರು ತೆಗೆದುಕೊಂಡ ನಿರ್ಣಯದಂತೆ ಜಲಾಶಯದಿಂದ ನೀರನ್ನು ಹರಿಸಲಾಗುತ್ತಿದೆ. ತಾಲ್ಲೂಕಿನ ಜಲಾಶಯಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾ‌ ಅವರು ಬಹಳಷ್ಟು ಅನುದಾನವನ್ನು ನೀಡುತ್ತಿದ್ದಾರೆ.
-ಅನಿಲ್ ಚಿಕ್ಕಮಾದು, ಶಾಸಕರು

ವಿಪರೀತ ಮಳೆ ಆಗುತ್ತಿರುವುದರಿಂದ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದು ಸೋಮವಾರ ಸಂಜೆ ವೇಳೆಗೆ 25 ಸಾವಿರ ಕ್ಯೂಸೆಕ್ಸ್‌ಗೂ ಹೆಚ್ಚಿನ ನೀರನ್ನು ಹರಿಸಲಾಗುತ್ತದೆ. ಈಗಾಗಲೇ ಜಲಾಶಯ ತುಂಬಿ, ನದಿಗೆ 3 ಟಿಎಂಸಿಗೂ ಹೆಚ್ಚು ನೀರನ್ನು ಬಿಡಲಾಗಿದೆ. ಸರ್ವ ಪಕ್ಷಗಳ ಸದಸ್ಯರು ತೆಗೆದುಕೊಂಡಿರುವ ನಿರ್ಣಯಕ್ಕೂ ಇದು ಪೂರಕವಾಗಿದೆ.
-ಚಂದ್ರಶೇಖರ್, ಇಇ, ಕಬಿನಿ ಜಲಾಶಯ.