Mysore
24
mist

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ನಾಳೆ ಜಂಬೂಸವಾರಿಯ ವೈಭವ

ಮೈಸೂರು: ನಾಡಿನ ಸಂಸ್ಕೃತಿ, ಸಂಪ್ರದಾಯ, ಪರಂಪರೆಯ ಅಡಿಯಲ್ಲಿ ರೂಪುಗೊಂಡಿರುವ ‘ಮೈಸೂರು ದಸರೆ ’ಯ ಪ್ರಮುಖ ಆಕರ್ಷಣೆಯಾಗಿ ಶನಿವಾರ ನಡೆಯಲಿರುವ ವಿಜಯದಶಮಿ ಜಂಬೂಸವಾರಿಯ ವೈಭವ ಅನಾವರಣಕ್ಕೆ ಕ್ಷಣಗಣನೆ ಆರಂಭವಾಗಿದೆ.

ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಒಳಗೊಂಡ ನವರಾತ್ರಿಯ ಚಲನಚಿತ್ರೋತ್ಸವ, ದಸರಾ ಕುಸ್ತಿಪಂದ್ಯಾವಳಿ, ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟ, ಪುಸ್ತಕ ಮೇಳ, ಮಹಿಳಾ ದಸರಾ, ರೈತ ದಸರಾ, ಮಕ್ಕಳ ದಸರಾ, ನವರಾತ್ರಿ ಜಾನಪದ ರಂಗ ಉತ್ಸವ, ಯುವ ದಸರಾ ಸಂಭ್ರಮದಿಂದ ಸಂಪನ್ನಗೊಂಡಿದೆ. ಆಹಾರ ಮೇಳ, ಫಲ ಪುಷ್ಪ ಪ್ರದರ್ಶನಕ್ಕೆ ಶುಕ್ರವಾರ ತೆರೆ ಬೀಳಲಿದೆ.

ದಸರೆಯ ಪ್ರಮುಖ ಘಟ್ಟವಾಗಿರುವ ಜಂಬೂ ಸವಾರಿ, ಪಂಜಿನ ಕವಾಯತುಗೆ ಸಿದ್ಧತೆಗಳು ಭರದಿಂದ ನಡೆದಿವೆ. ಒಂದಿಷ್ಟು ಹಳತು, ಒಂದಿಷ್ಟು ಹೊಸತನ ತುಂಬಿಕೊಂಡಿದ್ದ ಈ ಬಾರಿಯ ನವರಾತ್ರಿ ಉತ್ಸವದ ಸೌಂದರ್ಯ, ಸಡಗರ ಒಂದು ತೂಕವಾದರೆ, ವಿಜಯದಶಮಿಯ ಜಂಬೂಸವಾರಿ ಮೆರವಣಿಗೆ ಅಂದ-ಚೆಂದ, ಬೆಡಗು-ಬಿನ್ನಾಣದ ತೂಕ ಇನ್ನೊಂದು. ವಿಜಯದಶಮಿ ಜಂಬೂಸವಾರಿ ಮೆರವಣಿಗೆಯು ಈ ಬಾರಿ ಇನ್ನಷ್ಟು ಹೊಳಪು, ರಂಗು ತುಂಬಿಕೊಳ್ಳಲಿದೆ. ವಿಜಯದಶಮಿ ವೈಭವ: ಅ. ೧೨ ರಂದು ಶನಿವಾರ ಮಧ್ಯಾಹ್ನ ೧. ೪೧ ರಿಂದ ೨. ೧೦ ಗಂಟೆಯೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಮನೆ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ನಂತರ ಅರಮನೆ ಆವರಣದಲ್ಲಿ ನಾಡದೇವತೆ ಚಾಮುಂಡೇಶ್ವರಿ ವಿಗ್ರಹ ಹೊತ್ತ ಚಿನ್ನದ ಅಂಬಾರಿಗೆ ಸಂಜೆ ೪ರಿಂದ ೪. ೩೦ರೊಳಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ಯದುವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಸಿ. ಮಹದೇವಪ್ಪ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಉಪಸ್ಥಿತರಿದ್ದು ಪುಷ್ಪಾರ್ಚನೆಗೈಯ್ಯುವರು. ಪ್ರತಿ ಬಾರಿ ಅಂಬಾರಿ ಆನೆಯನ್ನು ಒಡೆಯರ್ ನಿವಾಸದ ಆವರಣದಿಂದ ಅರಮನೆ ಮುಂಭಾಗಕ್ಕೆ ಕರೆತಂದು ಪುಷ್ಪಾರ್ಚನೆ ನೆರವೇರಿಸಲಾಗುತ್ತದೆ. ಆ ನಂತರ ಜಂಬೂಸವಾರಿ ಮೆರವಣಿಗೆಯು ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಸಾಗುತ್ತದೆ. ಆದರೆ, ಈ ಬಾರಿ ಅಂಬಾರಿ ಕಟ್ಟಿದ ನಂತರ ಆನೆಯು ದಕ್ಷಿಣ ಭಾಗದಲ್ಲಿರುವ ಶ್ರೀ ಶ್ವೇತವರಾಹ ಸ್ವಾಮಿ ದೇವಸ್ಥಾನ ಬಳಿಯಿಂದ ಎಡಕ್ಕೆ ತಿರುಗಿ ಅರಮನೆಯ ಮುಖ್ಯ ದ್ವಾರವಾದ ಜಯಮಾರ್ತಾಂಡ ದ್ವಾರದ ಬಳಿಗೆ ಆಗಮಿಸಿ ಅಲ್ಲಿಂದ ಅರಮನೆ ಮುಂಭಾಗದ ಪುಷ್ಪಾರ್ಚನೆ ಜಾಗಕ್ಕೆ ಆಗಮಿಸಲಿದೆ. ಈ ನೂತನ ಮಾರ್ಗವು ೪೦೦ ಮೀ. ಆಗಲಿದ್ದು, ಈ ಮಾರ್ಗದಲ್ಲಿ ಆಸನಗಳನ್ನು ವ್ಯವಸ್ಥೆ ಮಾಡಿ ಜಂಬೂ ಸವಾರಿ ವೀಕ್ಷಣೆಗೆ ಅನುವು ಮಾಡಿಕೊಡಲಾಗುತ್ತದೆ.

ಆಕರ್ಷಕ ಪಂಜಿನ ಕವಾಯತು: ದಸರೆಯ ಅಂತಿಮ ಘಟ್ಟವಾದ ಆಕರ್ಷಕ ಪಂಜಿನ ಕವಾಯತು (ಟಾರ್ಚ್‌ಲೈಟ್‌ಪರೇಡ್) ಸಂಜೆ ೭ ಕ್ಕೆ ಬನ್ನಿಮಂಟಪ ಮೈದಾನದಲ್ಲಿ ನಡೆಯುವ ಮೂಲಕ ದಸರಾ ಸಂಭ್ರಮಕ್ಕೆ ತೆರೆ ಬೀಳಲಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪಂಜಿನ ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸುವರು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಪಾಲ್ಗೊಳ್ಳುವರು.

೧೨೦ಕ್ಕೂ ಹೆಚ್ಚು ಕಲಾತಂಡಗಳು: ಜಂಬೂಸವಾರಿಯ ಮೆರವಣಿಗೆಯಲ್ಲಿ ೧೨೦ಕ್ಕೂ ಹೆಚ್ಚು ಕಲಾತಂಡಗಳು ಹಾಗೂ ೫೦ ಸ್ತಬ್ಧ ಚಿತ್ರಗಳು ಪಾಲ್ಗೊಂಡು ಮೆರುಗು ನೀಡಲಿವೆ. ೩೧ ಜಿಲ್ಲೆಗಳಿಂದ ಆಯಾ ಜಿಲ್ಲೆಗಳ ಪರಂಪರೆ, ಇತಿಹಾಸ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲಾ ತಂಡಗಳು ಹಾಗೂ ತಲಾ ಒಂದೊಂದು ಸ್ತಬ್ಧ ಚಿತ್ರದೊಂದಿಗೆ ಭಾರತೀಯ ರೈಲ್ವೆ, ಸಿಎ-ಟಿಆರ್‌ಐ ಪ್ರವಾಸೋದ್ಯಮ ಇಲಾಖೆ, ವಾರ್ತಾ ಇಲಾಖೆ, ಕಾವೇರಿ ನೀರಾವರಿ ನಿಗಮ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸ್ತಬ್ಧಚಿತ್ರ ಉಪಸಮಿತಿ ಸ್ತಬ್ಧ ಚಿತ್ರಗಳು ಸೇರಿಕೊಂಡಿವೆ.

 

Tags: