ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ನವರಾತ್ರಿ ವೇಳೆ ನಡೆ ಯುವ ಧಾರ್ಮಿಕ ಕಾರ್ಯಕ್ರಮಕ್ಕೆ ಅಂಬಾವಿಲಾಸ ಅರಮನೆ ಸಜ್ಜಾಗುತ್ತಿದೆ. ಅದಕ್ಕಾಗಿ ಸಿದ್ಧತಾ ಕಾರ್ಯಗಳನ್ನು ಆರಂಭಿಸಲಾಗಿದೆ.
ಪ್ರಮುಖವಾಗಿ ಅರಮನೆಯ ದರ್ಬಾರ್ ಹಾಲ್, ಗ್ಯಾಲರಿ, ಆನೆ ಬಾಗಿಲಿನ ಬಳಿಯ ಮೇಲ್ಚಾವಣಿ ಸೇರಿದಂತೆ ಒಳಾವರಣದಲ್ಲಿ ಅಗತ್ಯವಿದ್ದೆಡೆ ಬಣ್ಣ ಬಳಿಯುವ ಹಾಗೂ ವಿದ್ಯುತ್ ದೀಪಗಳ ದುರಸ್ತಿ ಕಾರ್ಯ ಆರಂಭಿಸಲಾಗಿದೆ. ಬಣ್ಣದ ಕೆಲಸ ಮತ್ತು ವಿದ್ಯುತ್ ಬಲ್ಬ್ ಬದಲಿಸುವುದಕ್ಕಾಗಿ ಕಾಲಾವಧಿ ಕಟ್ಟಲಾಗುತ್ತಿದ್ದು, ೧೫ ದಿನದೊಳಗೆ ಅರಮನೆ ಒಳಾವರಣದಲ್ಲಿ ದಸರಾ ಸಿದ್ಧತಾ ಕಾರ್ಯ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ಅರಮನೆ ಆವರಣದಲ್ಲಿರುವ ವಿವಿಧ ಉದ್ಯಾನವನಲ್ಲಿ ಕಳೆ ಗಿಡ ತೆರವು ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಈಗಾಗಲೇ ಅರಮನೆ ಮುಂಭಾಗದ ಪಾರ್ಕ್‌ನಲ್ಲಿ ಕಳೆ ಗಿಡಗಳನ್ನು ತೆರವು ಮಾಡಿ ಹೂವಿನ ಜೋಡಣೆ ಮಾಡಲು ನೆಲ ಅಗೆದು ಹದ ಮಾಡಲಾಗುತ್ತಿದೆ. ಅಲ್ಲದೆ, ಪಾರ್ಕ್‌ನಲ್ಲಿರುವ ವಿದ್ಯುತ್ ದೀಪಗಳ ಕಂಬಗಳಿಗೆ ಬಣ್ಣ ಬಳಿಯುವ ಕಾರ್ಯಕ್ಕೂ ಚಾಲನೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.





