Mysore
27
few clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಕಸ ಸಂಗ್ರಹಕ್ಕೆ ಸ್ಟೇನ್‌ಲೆಸ್‌ ಡಬ್ಬಗಳ ಅಳವಡಿಕೆ

ನಗರದ ವಾಣಿಜ್ಯ, ಜನನಿಬಿಡ ಸ್ಥಳಗಳಲ್ಲಿ ಅಳವಡಿಕೆ; ಹಸಿ, ಒಣ ಕಸವನ್ನು ವಿಭಜಿಸಿ ಹಾಕಲು ಮನವಿ

ಪ್ರಸಾದ್ ಲಕ್ಕೂರು

ಚಾಮರಾಜನಗರ: ಸ್ಥಳೀಯ ನಗರಸಭೆಯು ನಗರದ ವಾಣಿಜ್ಯ ಸ್ಥಳಗಳು, ಸರ್ಕಾರಿ ಕಚೇರಿಗಳು, ಜನನಿಬಿಡ ಸ್ಥಳಗಳಲ್ಲಿ ಸಾರ್ವಜನಿಕರು ಕಸವನ್ನು ನೆಲಕ್ಕೆ ಬೀಸಾಡದಂತೆ ತಡೆಯಲು ಸ್ಟೇನ್‌ಲೆಸ್ ಕಸದ ಡಬ್ಬಗಳ ಅಳವಡಿಕೆ ಆರಂಭಿಸಿದೆ.

ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಲಭ್ಯವಾಗಿರುವ ೬೦ ಸ್ಟೇನ್‌ಲೆಸ್ ಕಸದ ಡಬ್ಬಗಳನ್ನು ನಗರದ ವಿವಿಧ ಸ್ಥಳಗಳಲ್ಲಿ ಅಳವಡಿಸುವ ಕೆಲಸ ಕಳೆದ ೪ ದಿನಗಳಿಂದ ಪ್ರಾರಂಭವಾಗಿದೆ. ಇಲ್ಲಿಯತನಕ ೨೦ ಕಡೆ ಡಬ್ಬಗಳನ್ನು ಅಳವಡಿಸಿದೆ. ಉಳಿದೆಡೆ ಹಾಕಲು ಸ್ಥಳಗಳಲ್ಲಿ ಗುರುತಿಸಲಾಗುತ್ತಿದೆ.

ಸರ್ಕಾರಿ ಕಚೇರಿಗಳು, ವಾಣಿಜ್ಯ ಸ್ಥಳಗಳು ಮತ್ತು ಜನನಿಬಿಡ ಸ್ಥಳಗಳಲ್ಲಿ, ರಸ್ತೆ, ಚರಂಡಿ, ಪಾದಚಾರಿ ಮಾರ್ಗಗಳಲ್ಲಿ ಸಾರ್ವಜನಿಕರು ಕಸವನ್ನು ಬೀಸಾಡುತ್ತಿದ್ದಾರೆ. ಇದರಿಂದ ನಗರದಲ್ಲಿ ಶುಚಿತ್ವ ಕಾಪಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಪ್ರಯೋಜನವಾಗಿಲ್ಲ.

ಹಿಂದೆಯೂ ನಗರಸಭೆ ಪ್ಲಾಸ್ಟಿಕ್ ಕಸದ ಡಬ್ಬಗಳನ್ನು ಇದೇ ಮಾದರಿಯಲ್ಲಿ ಅಳವಡಿಸಿತ್ತು. ರಸ್ತೆ ವಿಸ್ತರಣೆ, ಅಂತರ್ಜಾಲ ಕೇಬಲ್, ನೀರಿನ ಪೈಪ್‌ಲೈನ್ ಅಳವಡಿಕೆಗೆ ಹಳ್ಳ ತೆಗೆದಾಗ ಪ್ಲಾಸ್ಟಿಕ್ ಡಬ್ಬಗಳು ಒಡೆದು ಹೋದವು. ಕೆಲವು ನಾಪತ್ತೆಯಾದವು.

ನಗರಸಭೆಯು ಪ್ರತಿದಿನ ಬೆಳಗಿನ ಸಮಯ ಪ್ರಮುಖ ವಾಣಿಜ್ಯ ಕೇಂದ್ರಗಳಾದ ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಶ್ರೀ ಚಾಮರಾಜೇಶ್ವರ ದೇವಾಲಯದ ಸುತ್ತಲಿನ ರಥದ ಬೀದಿ, ವಾಣಿಯಾರ್ ಬೀದಿ, ಸಂಪಿಗೆ ರಸ್ತೆ, ಹಳೆಯ ಖಾಸಗಿ ಬಸ್ ನಿಲ್ದಾಣ, ಡಿವಿಯೇಷನ್ ರಸ್ತೆ, ಬಿ.ರಾಚಯ್ಯ ಜೋಡಿ ರಸ್ತೆ, ಸಾರಿಗೆ ಬಸ್ ನಿಲ್ದಾಣ, ಸರ್ಕಾರಿ ಕಚೇರಿಗಳಿಂದ ಕಸ ಸಂಗ್ರಹ ಮಾಡಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಿ ವಿಲೇವಾರಿ ಮಾಡುತ್ತಿದೆ.

ಇಷ್ಟಾದರೂ ಸಂಜೆ ವೇಳೆಗೆ ವಾಣಿಜ್ಯ ಸ್ಥಳಗಳು, ಜನನಿಬಿಡ ಪ್ರದೇಶಗಳಲ್ಲಿ ಕಸ ನೆಲಕ್ಕೆ ಬಿದ್ದು ಒದ್ದಾಡುತ್ತಿದೆ. ನಗರದೊಳಗೆನೈರ್ಮಲ್ಯ ಕಾಪಾಡುವ ಬಗ್ಗೆ ನಗರಸಭೆ, ಜಿಲ್ಲಾಡಳಿತವು ಸಾಕಷ್ಟು ಜಾಗೃತಿ ಮೂಡಿಸಿದರೂ ಸುಧಾರಣೆ ಕಾಣುತ್ತಿಲ್ಲ

” ರಸ್ತೆ, ಚರಂಡಿ ಬದಿಗಳಲ್ಲಿ ಕಸ ಬೀಸಾಡುವುದನ್ನು ತಡೆಯಲು ನಗರದ ವಿವಿಧೆಡೆ ಸ್ಟೇನ್‌ಲೆಸ್ ಸ್ಟೀಲ್ ಕಸದ ಡಬ್ಬಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಜನರು ಕಸವನ್ನು ಎಸೆಯದೆ ಡಬ್ಬಗಳಿಗೆ ಹಾಕಿದರೆ ನಗರದ ನೈರ್ಮಲ್ಯ ಕಾಪಾಡಬಹುದು.”

ಮಂಜುನಾಥ್, ಹಿರಿಯ ಆರೋಗ್ಯ ನಿರೀಕ್ಷಕರು, ನಗರಸಭೆ

ನಗರದ ಎಲ್ಲೆಲ್ಲಿ ಅಳವಡಿಕೆ?: 

ಚಾ.ನಗರ: ನಗರದ ಶುಚಿತ್ವ ಕಾಪಾಡಲು ನಗರಸಭೆ ಕಸದ ಡಬ್ಬಗಳ ಅಳವಡಿಕೆಗೆ ಮುಂದಾಗಿದೆ. ನಗರದ ಜಿಲ್ಲಾಡಳಿತ ಭವನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ತಹಸಿಲ್ದಾರ್ ಕಚೇರಿ, ನ್ಯಾಯಾಲಯದ ಆವರಣ, ಪ್ರವಾಸಿ ಮಂದಿರದ ಸಮೀಪ, ವಿರಕ್ತ ಮಠದ ಮುಂಭಾಗಗಳಲ್ಲಿ ಡಬ್ಬಗಳನ್ನು ಹಾಕಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೌಸಿಂಗ್ ಬೋರ್ಡ್ ಕಾಲೋನಿಯ ಅಂಬೇಡ್ಕರ್ ಉದ್ಯಾನವನ, ಚಾಮರಾಜೇ ಶ್ವರ ಉದ್ಯಾನ, ಪುಟ್ಟಮ್ಮಣ್ಣಿ ಪಾರ್ಕ್, ಮುಖ್ಯ ಅಂಚೆ ಕಚೇರಿಗಳ ಸಮೀಪ ಡಬ್ಬಗಳನ್ನು ಅಳವಡಿ ಸಿದೆ. ಒಣ ಹಾಗೂ ಹಸಿ ಕಸವನ್ನು ಬೇರ್ಪಡಿಸಿ ಹಾಕಲು ಒಂದೇ ಕಡೆ ೨ ಡಬ್ಬಗಳನ್ನು ಅಳವಡಿಸಲಾಗಿದೆ. ಜನರು, ವರ್ತಕರು ಕಸವನ್ನು ಬೇರ್ಪಡಿಸಿ ಹಾಕಬೇಕು. ಬೆಳಿಗ್ಗೆ ಕಸದ ಆಟೋಗಳಲ್ಲಿ ಬಂದು ಡಬ್ಬದಲ್ಲಿ ಶೇಖರಣೆಗೊಂಡ ಕಸವನ್ನು ತುಂಬಿಕೊಂಡು ವಿಲೇವಾರಿ ಘಟಕಕ್ಕೆ ಕೊಂಡೊಯ್ಯಲಿವೆ ಎಂದು ನಗರಸಭೆ ಅಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.

Tags:
error: Content is protected !!