Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಶುದ್ಧ ನೀರಿನ ಸುತ್ತ ಅಶುದ್ಧತೆ: ಆಂದೋಲನ’ ರಿಯಾಲಿಟಿ ಚೆಕ್; ಹಲವೆಡೆ ಅನೈರ್ಮಲ್ಯ ದರ್ಶನ

ಒಂದು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ 8 ಲಕ್ಷ ರೂ. ವೆಚ್ಚ
ಖಾಸಗಿ ಗುತ್ತಿಗೆ ಸಂಸ್ಥೆ ಗಳಿಗೆ ಘಟಕಗಳ ನಿರ್ವಹಣೆ ಜವಾಬ್ದಾರಿ
ಕೆಲ ಘಟಕಗಳಲ್ಲಿ ಸೀಮಿತ ಆಕಾರದ 5 ರೂ. ನಾಣ್ಯ ಹಾಕಿದರೆ ಮಾತ್ರ ನೀರು ಲಭ್ಯ
ಘಟಕಗಳಲ್ಲಿ 15 ದಿನಗಳಿಗೊಮ್ಮೆ ನೀರು ಬದಲಾವಣೆ ಕಡ್ಡಾಯ

ಮೈಸೂರು: ಸಾರ್ವಜನಿಕರಿಗೆ ಅಗತ್ಯವಾದಾಗಲೆಲ್ಲ ಶುದ್ಧವಾದ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಮಹಾನಗರಪಾಲಿಕೆ ವತಿಯಿಂದ ಹಲವು ಬಡಾವಣೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ, ಅವುಗಳ ಪೈಕಿ ಹಲವು ಕೆಟ್ಟಿದ್ದು, ಕೆಲವು ಘಟಕಗಳಲ್ಲಿ ಅಶುಚಿತ್ವ ತಾಂಡವವಾಡುತ್ತಿದೆ.

ನಗರಪಾಲಿಕೆಯಿಂದ 5 ರೂ.ಗಳಿಗೆ 20 ಲೀ. ಶುದ್ದ ಕುಡಿಯುವ ನೀರು ದೊರೆಯುವ 109 ಘಟಕಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ ‘ಆಂದೋಲನ’ 22 ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಪೈಕಿ 10 ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ.

ನಗರದ ನಾಚನಹಳ್ಳಿ ಪಾಳ್ಯ, ಸರಸ್ವತಿಪುರಂ, ಕುವೆಂಪುನಗರ, ಕೆಎಚ್‌ ಬಿ ಕಾಲೋನಿ, ಶ್ರೀರಾಂಪುರ ಸಮೀಪದ ದೇವಯ್ಯನ ಹುಂಡಿ, ನಾಚನಹಳ್ಳಿ ಪಾಳ್ಯ, ವಿಜಯನಗರ ರೈಲ್ವೆ ಬಡಾವಣೆ ಸಹಿತ ಹಲವು ಬಡಾವಣೆಗಳಲ್ಲಿ ಕುಡಿಯುವ ನೀರಿನ ಘಟಕಗಳ ಸುತ್ತಮುತ್ತ ಅಶುಚಿತ್ವ ತುಂಬಿತುಳುಕುತ್ತಿದೆ.

ಎಲ್ಲ ಆಕಾರಗಳ 5 ರೂ. ಒಪ್ಪದ ಘಟಕಗಳು: ಶುದ್ದ ಕುಡಿಯವ ನೀರಿನ ಘಟಕಗಳಲ್ಲಿ ಎಲ್ಲ ರೀತಿಯ ಆಕಾರದ 5 ರೂ. ನಾಣ್ಯಗಳನ್ನು ಸ್ವೀಕರಿಸುವುದಿಲ್ಲ. 5 ರೂ. ಮುಖಬೆಲೆಯ ನಿರ್ದಿಷ್ಟ ಸ್ವರೂಪದ ಕಾಯಿನ್‌ ಗಳನ್ನು ಯಂತ್ರಕ್ಕೆ ಹಾಕಿದಾಗ ಮಾತ್ರ ನೀರು ಲಭ್ಯವಾಗುತ್ತಿದೆ. ಇದರಿಂದ ಹಲವು ಕಡೆ ಸಾರ್ವಜನಿಕರು ಮಿನರಲ್ ವಾಟರ್‌ಗೆ ಮೊರೆ ಹೋಗುತ್ತಿದ್ದಾರೆ ಎನ್ನಲಾಗಿದೆ.

ಐದು ವರ್ಷಗಳ ಅವಧಿಗೆ ಶುದ್ದ ಕುಡಿಯುವ ನೀರಿನ ಘಟಕಗಳನ್ನು ನಿರ್ವಹಣೆ ಮಾಡಲು ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡಿದ್ದು, ಈಗಾಗಲೇ ಅದರ ಅವಧಿ ಮುಗಿದಿದೆ. ಹಾಗಾಗಿ ಸದ್ಯಕ್ಕೆ ಕೆಟ್ಟು ನಿಂತಿರುವ ನೀರಿನ ಘಟಕಗಳ ದುರಸ್ತಿ ಸಾಧ್ಯವಾಗಿಲ್ಲ.

ಈ ಹಿಂದೆ ಕೇರ್ಗಳ್ಳಿ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಹಾಗೂ ಬೋರ್‌ವೆಲ್‌ ನೀರಿಗೆ ಒಳಚರಂಡಿ ನೀರು ಮಿಶ್ರಣಗೊಂಡು, ಕಾಲರಾ, ವಾಂತಿ- ಭೇದಿಯಂತಹ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಿದ್ದನ್ನು ಗಮನಿಸಬಹುದಾಗಿದೆ. ಇದೀಗ ಕೆಲವು ಶುದ್ಧ ನೀರಿನ ಘಟಕಗಳ ಸುತ್ತ ಗಿಡಗಂಟಿಗಳು ಬೆಳೆದು ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿವೆ. ಸ್ಥಳೀಯರು ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಎದುರಿಸುತ್ತಿದ್ದಾರೆ. ಕೆಲವು ಘಟಕಗಳಿಗೆ ಸದಾ ಬೀಗ ಹಾಕಲಾಗಿರುತ್ತದೆ ಎನ್ನಲಾಗಿದೆ. ಘಟಕದಲ್ಲಿ ನಮೂದಿಸಿರುವ ಮೊಬೈಲ್ ನಂಬರ್ಗೆ ಕರೆ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ಒಂದು ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆಗೆ 8 ಲಕ್ಷ ರೂ. ವೆಚ್ಚ ವಾಗುತ್ತದೆ. ಸಾಮಾನ್ಯವಾಗಿ ಸಾರ್ವಜನಿಕರು, ಪುಟ್ ಪಾತ್ ವ್ಯಾಪಾರಿಗಳು ಶುದ್ಧ ಕುಡಿಯುವ ನೀರಿನ ಘಟಕವನ್ನೇ ಆಶ್ರಯಿಸಿರುತ್ತಾರೆ. ಆದರೆ ಘಟಕ ಬಂದ್ ಆಗಿದ್ದು, ಖಾಸಗಿಯವರು ಸ್ಥಾಪಿಸಿರುವ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಅವಲಂಬಿಸಿ ಶುದ್ದ ನೀರು ತಂದು ಕುಡಿಯುತ್ತಿದ್ದಾರೆ. ಕೆಲ ಘಟಕಗಳಿಗೆ ಕೊಳವೆ ಬಾವಿಯಿಂದ, ಹಲವು ಘಟಕಗಳಿಗೆ ಅಂತರ್ಜಲ ಮೂಲದಿಂದ ನೀರು ಪೂರೈಕೆ ಆಗುತ್ತದೆ. ಆ ನೀರನ್ನು ಘಟಕಗಳಲ್ಲಿ ಶುದ್ದೀಕರಿಸಿ ನಂತರ ಸಾರ್ವಜನಿಕರಿಗೆ ಒದಗಿಸಲಾಗುತ್ತದೆ.

ನಗರದ ವಾಣಿವಿಲಾಸ ನೀರು ಸರಬರಾಜು ಕೇಂದ್ರದಿಂದ ಸ್ಥಾಪಿಸಿರುವ ನೀರಿನ ಘಟಕಗಳನ್ನು ಪಾಲಿಕೆಯು ಖಾಸಗಿ ಗುತ್ತಿಗೆ ಸಂಸ್ಥೆಗಳ ಮೂಲಕ ನಿರ್ವಹಣೆ ಮಾಡುತ್ತಿದೆ.

ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ: ಘಟಕಗಳಲ್ಲಿ ಶುದ್ಧ ನೀರು ಹೊರಬರಲು ಅಳವಡಿಸಿರುವ ಯೂನಿಟ್‌ಗಳನ್ನು ಆಗಾಗ ಬದಲಾವಣೆ ಮಾಡಬೇಕು. ಈ ಘಟಕಗಳಲ್ಲಿ ಶೇಖರಿಸುವ ನೀರನ್ನು 15 ದಿನಗಳಿಗೊಮ್ಮೆ ಬದಲಾವಣೆ ಮಾಡಬೇಕು. ಆದರೆ, ಈ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎನ್ನಲಾಗಿದೆ. ಹಾಗಾಗಿ ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಜನರಿಗೆ ಕುಡಿಯಲು ಯೋಗ್ಯ ನೀರು ಕೊಡಿ: ಸೆಲ್ವಕುಮಾ‌ರ್

ಇತ್ತೀಚೆಗೆ ಮೈಸೂರಿನಲ್ಲಿ ಎಲ್ಲಾ ಸರ್ಕಾರಿ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿಯೂ ಆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಅವರು, ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಕೊರತೆ ಇಲ್ಲ. ಆದರೆ ಜನರಿಗೆ ಕುಡಿಯಲು ಯೋಗ್ಯವಾದ ನೀರನ್ನು ನೀಡಬೇಕು. ಆದ್ದರಿಂದ ಪ್ರತಿ ಗ್ರಾಮದಲ್ಲಿಯೂ ನಿಯಮಿತವಾಗಿ ನೀರಿನ ಪರೀಕ್ಷೆ ಮಾಡಿ, ಕುಡಿಯಲು ನೀರು ಯೋಗ್ಯವಾಗಿದೆಯೇ ಎಂಬುದನ್ನು ಪರೀಕ್ಷಿಸಿ ನೀಡಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಎಲ್ಲೆಲ್ಲಿ ಘಟಕಗಳು ಸ್ಥಗಿತವಾಗಿವೆ?

1 ಮಂಜುನಾಥಪುರ, ಯಾದವಗಿರಿ
2 ವಿಜಯನಗರ ರೈಲ್ವೆ ಬಡಾವಣೆ
3 ಸರಸ್ವತಿಪುರಂ
4 ಕುವೆಂಪುನಗರ (ಸುಯೋಗ್‌ ಆಸ್ಪತ್ರೆ)
5 ಶ್ರೀರಾಂಪುರ (ದೇವಯ್ಯನ ಹುಂಡಿ)
6 ಮಹದೇವಪುರ (ರೈಲ್ವೆ ಆರ್ಚ್)
7 ವಿಶ್ವೇಶ್ವರ ನಗರ (ರೈಲ್ವೆ ಕ್ವಾರ್ಟಸ್‌್ರ)
8 ವಿವೇಕಾನಂದ ನಗರ
9 ನಾಚನಹಳ್ಳಿ ಪಾಳ್ಯ
10 ಕುಕ್ಕರಹಳ್ಳಿ

ನೀರಿನ ಘಟಕಗಳು ಕೆಟ್ಟಿರುವುದಕ್ಕೆ ಕಾರಣಗಳು

1 ಶುದ್ಧ ಕುಡಿಯುವ ನೀರಿನ ಘಟಕಗಳ ಅಸಮರ್ಪಕ ನಿರ್ವಹಣೆ
2 ನೀರು ಶುದ್ದೀಕರಣಕ್ಕೆ ಬೇಕಾದ ಯೂನಿಟ್‌ಗಳನ್ನು ನೆಯಮಿತವಾಗಿ ಬದಲಾಯಿಸದಿರುವುದು
3 ಕಳಪೆ ಯಂತ್ರೋಪಕರಣಗಳನ್ನು ಅಳವಡಿಕೆ ಮಾಡಿರುವುದು
4 ಕೆಲವೆಡೆ ವಿದ್ಯುತ್‌ ಸಂಪರ್ಕದ ತಂತಿ ಕಿತ್ತು ಹೋಗಿರುವುದು.

ಯಾವುದೇ ಘಟಕದಲ್ಲಿಯೂ ನೀರು ಕಲುಷಿತ ಆಗಿಲ್ಲ: ಮೈಸೂರಿನ ಕುವೆಂಪುನಗರ ಎಂ ಬ್ಲಾಕ್, ಕೆಎಚ್‌ ಬಿ ಕಾಲೋನಿ ಮತ್ತು ವಿವೇಕಾನಂದನಗರದಲ್ಲಿನ ಘಟಕಗಳಲ್ಲಿ ನೀರು ಕಲುಷಿತಗೊಂಡಿದೆ ಎಂಬ ಶಂಕೆ ಸಾರ್ವಜನಿಕರಿಂದ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪತ್ರಿಕೆಯು ಮೂರೂ ಘಟಕಗಳ ನೀರನ್ನು ಜಿಲ್ಲಾ ಸರ್ವೇಕ್ಷಣ ಘಟಕದ ವತಿಯಿಂದ ಪರೀಕ್ಷೆಗೊಳಪಡಿಸಿದಾಗ, ಯಾವುದರಲ್ಲಿಯೂ ನೀರು ಕಲುಷಿತಗೊಂಡಿಲ್ಲ ಎಂಬುದಾಗಿ ವರದಿ ಬಂದಿದೆ.

ಆರ್‌ಓ ಪ್ರೋಸಸ್ ಎಂದರೇನು?: ಆರ್‌ಓ ಎಂಬುದು ನೀರು ಶುದ್ದೀಕರಣ ಪ್ರಕ್ರಿಯೆ. ಅದರಲ್ಲಿ ನೀರಿನಲ್ಲಿರುವ ಬೇಡದ ಇಯನ್ಸ್, ಮೊಕ್ಯೂಲ್ಸ್ – ದೊಡ್ಡ ಪ್ರಮಾಣದ ಪಾರ್ಟಿಕಲ್ಪ ಅನ್ನು ಹೊರತೆಗೆದು ನೀರನ್ನು ಶುದ್ದೀಕರಿಸಲಾಗುತ್ತದೆ. ಇದು ಘಟಕವನ್ನು ನಿರ್ವಹಿಸುವ ಗುತ್ತಿಗೆದಾರರ ಜವಾಬ್ದಾರಿಯಾಗಿರುತ್ತದೆ.

ಕೆಟ್ಟು ನಿಂತ ಘಟಕಗಳ ದುರಸ್ತಿಗೆ ಸೂಚನೆ: ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಕಾರ್ಯವನ್ನು ಖಾಸಗಿ ಗುತ್ತಿಗೆ ಸಂಸ್ಥೆಗಳಿಗೆ ನೀಡಲಾಗಿದೆ. ಅವರು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಸಮಸ್ಯೆ ಉಂಟಾಗಿರಬಹುದು. ಕೂಡಲೇ ಎಲ್ಲೆಲ್ಲಿ ಸಮಸ್ಯೆ ಇದೆಯೋ ಅದನ್ನು ಸರಿಪಡಿಸುವಂತೆ ಆಯಾಯ ವ್ಯಾಪ್ತಿಯ ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವುದು.
-ಅಶ್ವಿನ್ ಕುಮಾರ್, ಎಇಇ, ವಾಣಿ ವಿಲಾಸ ಸರಬರಾಜು ಕೇಂದ್ರ, ಯಾದವಗಿರಿ.

ಖಾಸಗಿ ಘಟಕಗಳೇ ಅನಿವಾರ್ಯ: ನೀರಿನ ಘಟಕಗಳನ್ನು ಸಂಬಂಧಪಟ್ಟ ನಗರಪಾಲಿಕೆ ಸಮರ್ಪಕವಾಗಿ ನಡೆಸದ ಕಾರಣ ಸಹಜವಾಗಿಯೇ ಖಾಸಗಿ ಘಟಕಗಳತ್ತ ಮುಖ ಮಾಡುವಂತಾಗಿದ್ದು, ಇನ್ನಾ ದರೂ ಈ ನೀರಿನ ಘಟಕವನ್ನು ಸರಿಪಡಿಸುತ್ತಾ ರೆಯೇ ಎಂದು ಕಾದುನೋಡಬೇಕಿದೆ.
– ಶಿವು, ರೈಲ್ವೆ ಬಡಾವಣೆ, ವಿಜಯನಗರ, ಮೈಸೂರು

ಯಂತ್ರಗಳ ಸುರಕ್ಷತೆಗೆ ಕ್ರಮವಿಲ್ಲ: ಕುಡಿಯುವ ನೀರಿನ ಘಟಕ ಗಳ ಒಳಗೆ ಲಕ್ಷಾಂತರ ರೂ. ಮೌಲ್ಯದ ಯಂತ್ರೋಪ ಕರಣಗಳಿವೆ. ಅವುಗಳ ಸುರಕ್ಷತೆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನೀರಿನ ಘಟಕಗಳನ್ನು ಸಂಬಂಧಪಟ್ಟ ಗುತ್ತಿಗೆ ಸಂಸ್ಥೆಗಳು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಹಾಗಾಗಿ ಸಾಕಷ್ಟು ಘಟಕಗಳು ಸ್ಥಗಿತಗೊಂಡಿವೆ. ಇನ್ನಾದರೂ ಕೆಟ್ಟಿರುವ ನೀರಿನ ಘಟಕಗಳನ್ನು ಸರಿಪಡಿಸಲು ಸಂಬಂಧಪಟ್ಟವರು ಮುಂದಾಗಬೇಕು.
-ಧೀರಜ್ ಗೌಡ, ಮಂಜುನಾಥಪುರ, ಯಾದವಗಿರಿ

ಕಾಯಿನ್‌ ಬಾಕ್ಸ್‌ಗಳು ಸರಿ ಇಲ್ಲ: ಕೆಲವಡೆ ಆರ್‌ಒ ಘಟಕ ಗಳಿಗೆ ನೀರು ಪೂರೈಸುವ ಬೋರ್‌ವೆಲ್‌ಗಳು ಕೆಟ್ಟಿವೆ. ಯಂತ್ರೋಪಕರಣಗಳು ಹಾಳಾಗಿದ್ದು, ಕಾಯಿನ್ ಬಾಕ್ಸ್‌ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹಾಗಾಗಿ ಖಾಸಗಿಯವರು ಸ್ಥಾಪಿಸಿ ರುವ ಘಟಕದಲ್ಲಿ ನೀರು ತೆಗೆದುಕೊಳ್ಳುತ್ತಿದ್ದೇವೆ.
-ಪ್ರವೀಣ್‌, ವಿವೇಕಾನಂದನಗರ

ಘಟಕಗಳ ಸೂಕ್ತ ನಿರ್ವಹಣೆ ಇಲ್ಲ: ಜನರಿಗೆ ಶುದ್ದ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ನಗರಪಾಲಿಕೆಯು ಲಕ್ಷಾಂತರ ರೂ. ಖರ್ಚು ಮಾಡಿ ಘಟಕಗಳನ್ನು ನಿರ್ಮಾಣ ಮಾಡಿದೆ. ಆದರೆ, ಅವು ಗಳನ್ನು ಬಡಾವಣೆಯ ಹೊರಗೆ ಸ್ಥಾಪಿಸುವುದ ರಿಂದ ಸೂಕ್ತ ನಿರ್ವಹಣೆ ಮಾಡುತ್ತಿಲ್ಲ.
-ರುದ್ರೇಶ್, ಕುವೆಂಪುನಗರ, ಮೈಸೂರು

ಘಟಕ ಕೆಟ್ಟು ತಿಂಗಳಾಗಿದೆ: ನಮ್ಮ ಮನೆ ಸಮೀಪದ ನೀರಿನ ಘಟಕ ಈಗಾಗಲೇ ಕೆಟ್ಟುನಿಂತು ತಿಂಗಳು ಕಳೆದಿದೆ. ಆದರೆ ಅಧಿಕಾರಿ ಗಳು ದುರಸ್ತಿಪಡಿಸದೆ, ನಿರ್ಲಕ್ಷ್ಯ ವಹಿಸಿದ್ದಾರೆ.
-ರಾಮು, ಶ್ರೀರಾಂಪುರ (ದೇವಯ್ಯನಹುಂಡಿ), ಮೈಸೂರು

Tags: