ಮೈಸೂರು: ನೆತ್ತಿ ಸುಡುವ ಬಿಸಿಲಿನತಾಪ, ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದ ಕಾರ್ಯಕರ್ತರ ದಾಹ ನೀಗಿಸಲು ಹೆಚ್ಚಾಗಿ ಮೊಸರು, ಮಜ್ಜಿಗೆ ವಿತರಿಸುತ್ತಿದ್ದರಿಂದ ಕಳೆದ ಎರಡು ತಿಂಗಳಲ್ಲಿ ನಂದಿನಿ ಉತ್ಪನ್ನಗಳಲ್ಲಿ ಭರ್ಜರಿ ಮಾರಾಟವಾಗಿದೆ. ಮೇ ಅಂತ್ಯದವರೆಗೂ ಇದೇ ಪರಿಸ್ಥಿತಿ ಮುಂದುವರಿದರೆ ಮೈಮುಲ್‌ಗೆ ಮತ್ತಷ್ಟು ಆದಾಯ ತಂದುಕೊಡಲಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.15 ರಿಂದ 20ರಷ್ಟು ಹಾಲು ಮಾರಾಟ ಹೆಚ್ಚಳವಾಗಿದ್ದರೆ, ಮಜ್ಜಿಗೆ ಮಾರಾಟ ದ್ವಿಗುಣವಾಗಿದೆ. ಇದರಿಂದಾಗಿ ಬೇಸಿಗೆಯ ಕಾಲದಲ್ಲಿ ಹಾಲು ಉತ್ಪಾದನೆ ಮತ್ತು ಮಾರಾಟ ಕಡಿಮೆಯಾಗುತ್ತದೆ ಎನ್ನುವ ಮಾತು ಹುಸಿಯಾಗಿದೆ. ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದಿಂದ ವಿಭಜನೆಯಾದರೂ ಜಿಲ್ಲೆಯಲ್ಲಿ ಸಂಗ್ರಹವಾಗುತ್ತಿರುವ ಹಾಲಿನ ಪ್ರಮಾಣ ಕಡಿಮೆಯಾಗಿಲ್ಲ. ವರ್ಷದಿಂದ ವರ್ಷಕ್ಕೆ ಹಾಲು ಶೇಖರಣೆ ಪ್ರಮಾಣ ಜಾಸ್ತಿಯಾಗುವ ಮಾರಾಟದಲ್ಲೂ ಏರಿಕೆಯಾಗುತ್ತಿದೆ.

ಮಳೆಗಾಲದಲ್ಲಿ 8ರಿಂದ 9 ಲಕ್ಷ ಲೀಟರ್ ಹಾಲು ಸಂಗ್ರಹವಾದರೆ, ಬೇಸಿಗೆ ಕಾಲದಲ್ಲಿ 6 ರಿಂದ 7 ಲಕ್ಷ ಲೀಟರ್‌ಗಳಷ್ಟು ಹಾಲು ಸಂಗ್ರಹವಾಗುತ್ತಿತ್ತು. ಆದರೆ, ಮೈಮುಲ್ ಹೈನುಗಾರಿಕೆಯನ್ನು ಅವಲಂಬಿಸಿರುವವರಿಗೆ ಹಲವಾರು ಅನುಕೂಲ, ಸರ್ಕಾರದ ಪ್ರೋತ್ಸಾಹಧನದಿಂದಾಗಿ ಹೈನುಗಾರಿಕೆ ಮಾಡುವವರು ನೆಮ್ಮದಿಯಿಂದ ತಮ್ಮ ಕಾರ್ಯ ಮುಂದುವರಿಸಿದ್ದಾರೆ. ಇದರ ಫಲವಾಗಿ ಬೇಸಿಗೆಯ ಕಾಲದಲ್ಲಿ ಕಡಿಮೆಯಾಗುವುದಕ್ಕಿಂತಲೂ ತನ್ನ ಸರಾಸರಿ ಕಾಪಾಡಿಕೊಂಡಿದ್ದು, ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಅಂದಾಜು 50 ಸಾವಿರ ಲೀಟರ್ ಹೆಚ್ಚು ಉತ್ಪಾದನೆಯಾಗಿದೆ ಎಂದು ಹೇಳಲಾಗಿದೆ.
ಭರ್ಜರಿ ಮಾರಾಟ: ಬಿಸಿಲಿನ ತಾಪದ ನಡುವೆಯೂ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಕಾರ್ಯಕರ್ತರು ತೊಡಗಿದ್ದರಿಂದ ಅವರ ದಾಹ ತಣಿಸಲು ಮೊಸರು, ಮಜ್ಜಿಗೆ ವಿತರಿಸಲಾಗುತ್ತಿತ್ತು. ಅದರಲ್ಲೂ ಬೃಹತ್ ಸಮಾವೇಶ ನಡೆದಾಗ ಸಾವಿರಾರು ಕಾರ್ಯಕರ್ತರು ಭಾಗವಹಿಸುತ್ತಿದ್ದರಿಂದಾಗಿ ಆಯಾ ಪಕ್ಷದವರು ಗೂಡ್ಸ್ ಆಟೋದಲ್ಲಿ ಮೊಸರು, ಮಜ್ಜಿಗೆ ಪೂರೈಸುತ್ತಿದ್ದರು. ವಿತರಿಸಿ ತಂಪು ಮಾಡಿಸಲಾಗುತ್ತಿತ್ತು. ಕಾಂಗ್ರೆಸ್, ಬಿಜೆಪಿ ಸಮಾವೇಶ ಅಲ್ಲದೆ ಪ್ರತಿನಿತ್ಯ ಸ್ಥಳೀಯ ನಾಯಕರು ಪ್ರಚಾರ ಮಾಡುವಾಗಲೂ ನಿತ್ಯ ವಿತರಣೆ ಮಾಡುತ್ತಿದ್ದರು. ಇದಲ್ಲದೆ, ಎರಡು ತಿಂಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮದುವೆ ಸೇರಿದಂತೆ ಶುಭಸಮಾರಂಭಗಳು ನಡೆದಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಹಾಲು ಮಾರಾಟವಾಗಿದೆ. ಪ್ರಸಕ್ತ ನಿತ್ಯ 7.50 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಇದರಲ್ಲಿ 3 ರಿಂದ 3.50 ಲಕ್ಷ ಲೀಟರ್ ಹಾಲು, 1.10 ಲಕ್ಷ ಲೀಟರ್ ಮೊಸರು, 25ರಿಂದ 30ಸಾವಿರ ಲೀಟರ್ ಮಜ್ಜಿಗೆ ಮಾರಾಟವಾಗುತ್ತಿದೆ. ಎಲ್ಲದರ ಸಮಗ್ರ ಮಾರಾಟ ಶೇ.4ರಿಂದ 6ರಷ್ಟು ಹೆಚ್ಚಾದರೆ, ಮೊಸರಿನ ಮಾರಾಟ ದ್ವಿಗುಣವಾಗಿದೆ. ಕಳೆದ ವರ್ಷ 15 ಸಾವಿರ ಲೀಟರ್‌ನಷ್ಟು ಮಜ್ಜಿಗೆ ಮಾರಾಟವಾಗಿದ್ದರೆ, ಈ ಬಾರಿ 30 ಸಾವಿರ ಲೀಟರ್‌ಗೆ ಬಂದು ನಿಂತಿದೆ. ಉಳಿದ ಹಾಲಿನಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟಕ್ಕೆ 1ಲಕ್ಷ, ಮದರ್ ಡೇರಿಗೆ 80 ಸಾವಿರ, ಕೇರಳ ಡೇರಿಗೆ 1 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡಲಾಗುತ್ತಿದೆ. ಉಳಿದದ್ದನ್ನು ಶಾಲಾ ಮತ್ತು ಅಂಗನವಾಡಿ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿ ಹಾಲಿನ ಪುಡಿ ಮಾಡಿ ಕಳುಹಿಸಲಾಗುತ್ತದೆ. ಉಳಿದದ್ದನ್ನು ನಂದಿನಿ ಉಪ ಉತ್ಪನ್ನಗಳಿಗೆ ಬಳಸಲಾಗುತ್ತದೆ ಎಂದು ತಿಳಿಸಲಾಗಿದೆ.
ನಂದಿನಿ ಉತ್ಪನ್ನಗಳಿಗೂ ಡಿಮ್ಯಾಂಡ್
ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಹೊಸ ನಂದಿನಿ ಉತ್ಪನ್ನಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಭಾರೀ ಡಿಮ್ಯಾಂಡ್ ಉಂಟಾಗಿದೆ. ದಶಕಗಳ ಹಿಂದೆ ಬರೀ ಮೈಸೂರು ಪಾಕ್, ನಂದಿನಿ ಪೇಡವಷ್ಟೇ ಜನಪ್ರಿಯವಾಗಿತ್ತು. ಆದರೆ, ಈಗ ಹೊರ ಬರುತ್ತಿರುವ ಉತ್ಪನ್ನಗಳು ಗಮನ ಸೆಳೆಯುತ್ತಿವೆ. ನಂದಿನಿ ಸಿಹಿ ಲಸ್ಸಿ, ನಂದಿನಿ ಮಸಾಲ ಮಜ್ಜಿಗೆ ಮುದಗೊಳಿಸಿದರೆ, ನಂದಿನಿ ಕ್ಯಾಶ್ಯು ಬರ್ಫಿ ಮೊದಲಾದ ತಿನಿಸುಗಳು ಬಾಯಿ ಚಪ್ಪರಿಸುವಂತೆ ಇರುತ್ತವೆ. ಇತ್ತೀಚೆಗೆ ಗಣ್ಯರು, ಶುಭ ಸಮಾರಂಭಗಳಿಗೆ ನೀಡುವ ಉಡುಗೊರೆಗೆ ಕ್ಯಾಶ್ಯುಬರ್ಫಿ ಬಾಕ್ಸ್‌ನ್ನು ಗಿಫ್ಟ್ ಪ್ಯಾಕ್ ಆಗಿ ಮಾಡಿಸಿಕೊಳ್ಳುತ್ತಿರುವುದು ಹೆಚ್ಚಾಗಿದೆ ಎಂದು ಸಿಬ್ಬಂದಿಯೊಬ್ಬರು ಹೇಳಿದರು.ಕಳೆದ ವರ್ಷದ ಮಾರ್ಚ್, ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಈ ಬಾರಿ ಶೇ.5 ರಿಂದ 10ರಷ್ಟು ಹಾಲಿನ ಮಾರಾಟ ಜಾಸ್ತಿಯಾಗಿದೆ. ಮಜ್ಜಿಗೆ ಡಬಲ್ ಸೇಲ್ ಆಗಿದೆ. ನಮ್ಮಲ್ಲಿ ಈಗ ಯಾವುದೇ ಹಾಲು ಉಳಿಯುತ್ತಿಲ್ಲ. ಬೇಸಿಗೆಯಲ್ಲಿ ಹಾಲು ಉತ್ಪಾದನೆ ಕಡಿಮೆಯಾಗುತ್ತದೆ ಎನ್ನುವ ಮಾತಿತ್ತು. ಆದರೆ, ಈಗ ಹೈನುಗಾರರಿಗೆ ಬೇಕಾದ ಮೇವು, ಬೀಜ ಮೊದಲಾದ ಸೌಲಭ್ಯ ನೀಡುವುದರಿಂದ ಉತ್ಪಾದನೆಯಲ್ಲಿ ಇಳಿಮುಖವಾಗಿಲ್ಲ.
– ವಿಜಯಕುಮಾರ್, ವ್ಯವಸ್ಥಾಪಕ ನಿರ್ದೇಶಕರು, ಮೈಮುಲ್.




