ಮೈಸೂರು: ಮುಂಗಾರು ಮಳೆ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಟೊಮೊಟೋ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಅರಮನೆ ನಗರಿ ಮೈಸೂರಿನಲ್ಲಿ ಟೊಮೊಟೋ ಹಣ್ಣಿನ ಮಾರಾಟ ದರ ದಿಢೀರ್ ಏರಿಕೆ ಕಂಡು ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.
ಮೂರ‍್ನಾಲ್ಕು ದಿನಗಳ ಹಿಂದೆ ಕೆ.ಜಿ.ಗೆ 30 ರೂ.ನಂತೆ ಮಾರಾಟವಾಗುತ್ತಿದ್ದ ಟೊಮೊಟೋ ಬೆಲೆ ಈಗ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 80 ರೂ. ಹಾಗೂ ಹಾಪ್‌ಕಾಮ್ಸ್‌ನಲ್ಲಿ 60 ರೂ.ಗೆ ತಲುಪಿದ್ದು, ಗ್ರಾಹಕರು ಟೊಮೊಟೋ ಖರೀದಿಗೆ ಹಿಂದು ಮುಂದು ನೋಡುವಂತಾಗಿದೆ. ವರ್ಷದ ಹಿಂದೆ ಇದೇ ರೀತಿ ಬೆಲೆ ಏರಿಕೆಯಾಗಿ ಸುಮಾರು ಎರಡು ತಿಂಗಳುಗಳ ಕಾಲ ಕೆ.ಜಿ.ಗೆ 200 ರೂ.ವರೆಗೂ ಮಾರಾಟವಾಗಿತ್ತು.
ಈಗ ಆ ಮಟ್ಟದ ಬೆಲೆ ಏರಿಕೆ ಕಾಣದೇ ಇದ್ದರೂ ಕೆ.ಜಿ.ಗೆ 100 ರೂ. ತಲುಪಬಹುದು ಎಂದು ಮಾರಾಟಗಾರರು ಹೇಳುತ್ತಾರೆ. ಈ ಬಾರಿ ಸುರಿದ ಮಳೆಯಿಂದಾಗಿ ಮೊಟೋ ಬೆಳೆಗೆ ರೋಗ ತಗುಲಿ ಫಸಲು ಸಾಕಷ್ಟು ಹಾನಿಯಾಗಿರುವುದರಿಂದ ಮಾರುಕಟ್ಟೆಗೆ ಬೇಡಿಕೆಯಷ್ಟು ಟೊಮೊಟೋ ಪೂರೈಕೆಯಾಗುತ್ತಿಲ್ಲ. ಇದೇ ದಿಢೀರ್ ಬೆಲೆ ಏರಿಕೆಗೆ ಕಾರಣವಾಗಿದೆ. ಟೊಮೊಟೋ ದರದಲ್ಲಿ ಏರಿಕೆ ಕಾಣುತ್ತಿರುವುದು ರೈತರಲ್ಲಿ ಖುಷಿ ತಂದರೆ, ಗ್ರಾಹಕರು, ಹೋಟೆಲ್ ಮಾಲೀಕರನ್ನು ಕಂಗೆಡಿಸಿದೆ. ಬಡ-ಮಧ್ಯಮ ವರ್ಗದ ಜನರು ಟೊಮೊಟೋ ಕೊಳ್ಳಲು ಹಿಂದೇಟು ಹಾಕುವಂತಾಗಿದೆ. ಕಡಿಮೆ ಬಜೆಟ್ ನಲ್ಲಿ ಜೀವನ ಸಾಗಿಸುವಂತಹ ಕೆಲವು ಕುಟುಂಬಗಳು, ಟೊಮೊಟೋ ಬದಲಿಗೆ ಹುಣಿಸೇಹಣ್ಣು ಹಾಕಿ ಅಡುಗೆ ತಯಾರಿಸುವ ಸನ್ನಿವೇಶ ನಿರ್ಮಾಣವಾಗುತ್ತಿದೆ.