Mysore
25
scattered clouds

Social Media

ಮಂಗಳವಾರ, 18 ಮಾರ್ಚ್ 2025
Light
Dark

ಬಿರು ಬೇಸಿಗೆ: ಕರುನಾಡಿಗೆ ಬಿಸಿಲ ಹೊಡೆತ

30 ಡಿಗ್ರಿ ಸೆಲ್ಸಿಯಸ್‌ನ ಗಡ ದಾಟಿದ ದಕ್ಷಿಣ ಒಳನಾಡು; ಇಂದಿನಿಂದ ಒಣ ಹವೆ ಹೆಚ್ಚಾಗುವ ಸಾಧ್ಯತೆ

– ಗಿರೀಶ್ ಹುಣಸೂರು

ಮೈಸೂರು: ಬೇಸಿಗೆಯ ತೀವ್ರತೆ ಹೆಚ್ಚುತ್ತಿದ್ದಂತೆ ಕರ್ನಾಟಕದ ಕಾಶ್ಮೀರ ಎಂದೇ ಕರೆಯುವ ಕೊಡಗು ಸೇರಿ ಮಲೆನಾಡಿನ ಜಿಲ್ಲೆಗಳನ್ನೂ ಒಳಗೊಂಡಂತೆ ಇಡೀ ಕರುನಾಡು ಕಾದ ಕಾವಲಿಯಂತಾಗುತ್ತಿದೆ.

ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಉಷ್ಣಾಂಶ ೩೦ ಡಿಗ್ರಿ ಸೆಲ್ಸಿಯಸ್‌ನ ಗಡಿ ದಾಟಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಸಮೀಪದಲ್ಲಿದೆ. ಮಂಗಳವಾರದಿಂದ ರಾಜ್ಯದಲ್ಲಿ ಒಣಹವೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಿಸಿಲ ನಾಡು ಎಂದೇ ಕರೆಯಲಾಗುವ ರಾಜ್ಯದ ಬಯಲು ಸೀಮೆಯ ಕಲಬುರ್ಗಿಯಲ್ಲಿ ಸೋಮವಾರ 39.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದರೆ, ರಾಜ್ಯದ ಪ್ರಮುಖ ನಗರಗಳಾದ ಬಾಗಲಕೋಟೆ ಮತ್ತು ಧಾರವಾಡಗಳಲ್ಲಿ 39 ಡಿಗ್ರಿ ಸೆಲ್ಸಿಯಸ್, ರಾಯಚೂರು 38.4, ವಿಜಯಪುರ 38, ಬೀದರ್ ಮತ್ತು ಗದಗ 37.6, ಬೆಳಗಾವಿ 35.5, ಬೆಂಗಳೂರು 34.6, ಮಂಗಳೂರು-33.2, ಚಾಮರಾಜನಗರ 36.4, ಮಂಡ್ಯ 34.6, ಕೊಡಗಿನಲ್ಲಿ 32.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಉತ್ತರ ಒಳನಾಡಿನ ಕಲಬುರ್ಗಿ ಮತ್ತು ಧಾರವಾಡದಲ್ಲಿ ಇನ್ನೂ ಎರಡು ದಿನಗಳ ಕಾಲ ಬಿಸಿ ಮತ್ತು ಆರ್ದ್ರ ವಾತಾವರಣ ಇರುವ ಸಾಧ್ಯತೆ ಇದೆ. ಸಿನೊಪ್ಟಿಕ್ ಹವಾಮಾನ ಲಕ್ಷಣದ ಪ್ರಕಾರ ಪಶ್ಚಿಮದಲ್ಲಿ ಒಂದು ಟ್ರಫ್‌
ಉತ್ತರ ಆಂತರಿಕ ಕರ್ನಾಟಕದಿಂದ ತಮಿಳು ನಾಡಿನಾದ್ಯಂತ ಮನ್ನಾರ್ ಕೊಲ್ಲಿಯವರೆಗೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಸಾರ್ವಜನಿಕರಿಗೆ ಸೂಚನೆಗಳಿವು

.ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಸೂರ್ಯನ ಬೆಳಕಿಗೆ ನೇರ ಒಡ್ಡಿ ಕೊಳ್ಳುವುದನ್ನು ತಪ್ಪಿಸಿ.

.ಬಾಯಾ ರಿಕೆ ಇಲ್ಲದಿದ್ದರೂ ಸಾಕಷ್ಟು ನೀರು ಕುಡಿಯಿರಿ.

.ಹಗುರವಾದ, ತಿಳಿ ಬಣ್ಣದ, ಸಡಿಲವಾದ ಮತ್ತುರಂಧ್ರವಿರುವ ಹತ್ತಿ ಬಟ್ಟೆಗಳನ್ನು ಧರಿಸಿ.

.ಬಿಸಿಲಿನಲ್ಲಿ ಹೊರಗೆ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು, ಛತ್ರಿ, ಟೋಪಿಗಳನ್ನು ಬಳಸಿ.

.ತಲೆ ತಿರುಗುವಿಕೆ ಅಥವಾ ಅನಾರೋಗ್ಯ ಅನುಭವಿಸಿದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ.

.ಓಆರ್‌ಎಸ್, ಮನೆಯಲ್ಲಿ ತಯಾರಿಸಿದ ಪಾನೀಯಗಳಾದ ಲಸ್ಸಿ, ತೋರಣಿ(ಅಕ್ಕಿ ನೀರು) ನಿಂಬೆ ಪಾನಕ, ಮಜ್ಜಿಗೆ ಇತ್ಯಾದಿಗಳನ್ನು ಕುಡಿಯಿರಿ. ಇದು ದೇಹವನ್ನು ಮತ್ತೆ ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ.

.ಸಾಕು ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ ಮತ್ತು ಅವುಗಳಿಗೆ ಕುಡಿಯಲು ಸಾಕಷ್ಟು ನೀರು ನೀಡಿ.

.ಪ್ರಯಾಣ ಮಾಡುವಾಗ ನೀರು, ಜ್ಯೂಸ್, ಮಜ್ಜಿಗೆಯನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ.

.ರೈತರು ಜಮೀನಿನಲ್ಲಿ ಕೆಲಸ ಮಾಡುವಾಗ ತಲೆ, ಕುತ್ತಿಗೆ, ಮುಖ ಮತ್ತು ಕೈ ಕಾಲುಗಳ ಮೇಲೆ ಒದ್ದೆಯಾದ
ಬಟ್ಟೆಯನ್ನು ಬಳಸಿ.

ಮಾ.23ರಿಂದ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆ

ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ಬಿಸಿಲು ಹಾಗೂ ಒಣ ಹವೆ ಮುಂದುವರಿಯಲಿದೆ. ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರು ಹಾಗೂ ರಾಮನಗರ ಜಿಗಳ ಒಂದೆರಡು ಕಡೆ ತುಂತುರು ಮಳೆಯ
ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಮೋಡ ಮಾತ್ರ ಇರಬಹುದು. ಈಗಿನಂತೆ ಮಾರ್ಚ್ 23ರಿಂದ ದಕ್ಷಿಣ ಒಳನಾಡು, ಮಲೆನಾಡು, ಕರಾವಳಿ ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.

ಕನಿಷ್ಠ ತಾಪಮಾನದಲ್ಲಿ ಗಮನಾರ್ಹ ಬದಲಾವಣೆ ಇಲ್ಲ ರಾಜ್ಯದ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ 2 ರಿಂದ 4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿಕೆಯಾಗಲಿದ್ದು, ಕನಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಇಲ್ಲ. ಮಾ.23ರವರೆಗಿನ ಮುನ್ಸೂಚನೆಯ ಪ್ರಕಾರ ರಾಜ್ಯದಲ್ಲಿ ಒಣ ಹವೆ ಹೆಚ್ಚಾಗುವ ಸಾಧ್ಯತೆ ಇದೆ.

-ಡಾ.ಎನ್.ಪುವಿಯರಸನ್, ಮುಖ್ಯಸ್ಥರು, ಬೆಂಗಳೂರು ಹವಾಮಾನ ಕೇಂದ್ರ.

ಮಧ್ಯಾಹ್ನದ ನಂತರ ಅರಬ್ಬಿ ಸಮುದ್ರದ ಮೂಲಕ ಸಾಗಿ ಬರುವ ಗಾಳಿಯ ಪ್ರಭಾವದಿಂದ ಕರಾವಳಿ ಭಾಗಗಳಲ್ಲಿ ಮಳೆಯ ಸಾಧ್ಯತೆ ಕ್ಷೀಣಿಸಿದ್ದು, ಮೋಡದ ವಾತಾವರಣ ಮುಂದುವರಿಯುವ ಲಕ್ಷಣಗಳಿವೆ. ಮಾರ್ಚ್ ಕೊನೆಯ ವಾರದಲ್ಲಿ ಮಳೆ ಆರಂಭವಾಗುವ ಲಕ್ಷಣಗಳಿವೆ.

-ಡಾ.ಜಿ.ವಿ.ಸುಮಂತ್ ಕುಮಾರ್, ತಾಂತ್ರಿಕ ಅಧಿಕಾರಿ, ನಾಗನಹಳ್ಳಿ ಕೃಷಿ ಹವಾಮಾನ ಕೇಂದ್ರ.

 

Tags: