Mysore
19
clear sky

Social Media

ಗುರುವಾರ, 15 ಜನವರಿ 2026
Light
Dark

ಐಟಿ-ಬಿಟಿ ತಂದ ಹೈಟೆಕ್‌ ಸಿಎಂ

ಕೈಗಾರಿಕೆ ಏಳ್ಗೆಗೆ ಶ್ರಮ: ಬೆಂಗಳೂರನ್ನು ಸಿಂಗಾಪುರ ಮಾಡುವ ಆಶಯ
ಬೆಂಗಳೂರು: ರಾಜಧಾನಿ ಬೆಂಗಳೂರಿನತ್ತ ವಿಶ್ವವೇ ತಿರುಗಿನೋಡುವಂತೆ ಮಾಡಿದ, ಐಟಿ ಬಿಟಿ ನಗರಿಯನ್ನಾಗಿ ಮಾಡಿ ಕರ್ನಾಟಕದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆಯಾಗಿ ನೀಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದು ಎಸ್. ಎಂ. ಕೃಷ್ಣ ಅವರು.

ಹೈಟೆಕ್ ಮುಖ್ಯಮಂತ್ರಿ ಎಂದೇ ಹೆಸರಾಗಿದ್ದ ಎಸ್. ಎಂ. ಕೃಷ್ಣ ಅವರು ಬೆಂಗಳೂರಿಗೆ ಸಿಲಿಕಾನ್ ಸಿಟಿ ಎಂದು ಹೆಸರು ಬರಲು ಕಾರಣರಾಗಿದ್ದರು. ಈ ಮೂಲಕ ಜಾಗತಿಕ ಭೂಪಟದಲ್ಲಿ ಬೆಂಗಳೂರಿನ ಹೆಸರು ಕಾಣಿಸಿಕೊಳ್ಳುವಂತೆ ಮಾಡಿದ್ದರು.

ಐಟಿ ಬಿಟಿ ಕ್ಷೇತ್ರಕ್ಕೆ ಅಗಾಧವಾದ ಬೆಂಬಲ ನೀಡಿ ಬೆಂಗಳೂರು ನಗರದ ಬೆಳವಣಿಗೆಗೆ ಹಾಕಿಕೊಟ್ಟ ಭದ್ರಬುನಾದಿಯಿಂದ ಜಾಗತಿಕ ಮಟ್ಟದಲ್ಲಿ ಬೆಂಗಳೂರು ಸಿಲಿಕಾನ್ ವ್ಯಾಲಿ ಎಂದು ಹೆಸರು ಗಳಿಸಿ ಅಮೆರಿಕದ ಕ್ಯಾಲಿಫೋರ್ನಿ ನಗರಕ್ಕೆ ಪರ್ಯಾಯವಾಗಿ ಹೆಸರು ಗಳಿಸಿತ್ತು. ಇಂದು ರಾಜ್ಯದ ಆಯವ್ಯಯ ಮೂರು ಲಕ್ಷ ಕೋಟಿ ರೂ. ದಾಟಿದ್ದರೆ ಅದಕ್ಕೆ ಕಾರಣ ಕೃಷ್ಣರವರು ಐಟಿ ಕ್ಷೇತ್ರಕ್ಕೆ ನೀಡಿದ ಅವಕಾಶಗಳೇ ಕಾರಣ. ಲಕ್ಷಾಂತರ ಉದ್ಯೋಗ ಸೃಷ್ಟಿಸಿ ಹಲವು ಮೂಲ ಸೌಕರ್ಯಗಳನ್ನು ನೀಡಿ ಕನ್ನಡ ನಾಡನ್ನು ವಿಶ್ವ ಭೂಪಟದಲ್ಲಿ ಬೆಳಗಿಸಲು ಕೃಷ್ಣರವರ ಪಾತ್ರ ಅತ್ಯಂತ ದೊಡ್ಡದು.

೧೯೮೩ರಲ್ಲಿ ಕೇಂದ್ರ ಕೈಗಾರಿಕಾ ಸಚಿವರಾಗಿದ್ದ ಅವರು ಕೈಗಾರಿಕೆಗಳ ಏಳಿಗೆ ಬಗ್ಗೆ ಸಾಕಷ್ಟು ಶ್ರಮ ವಹಿಸಿದ್ದರು. ದೇಶದ ಪ್ರತಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಕೈಗಾರಿಕಾ ಬಡಾವಣೆಗಳ ಸ್ಥಾಪನೆಗೆ ಮುಂದಾದರು. ಇದರ ಫಲವನ್ನು ಬಿಹಾರ, ಒರಿಸ್ಸಾ ಸೇರಿದಂತೆ ಹಲವು ರಾಜ್ಯಗಳು ಪಡೆದುಕೊಂಡವು.

೧೯೯೯ರಿಂದ ೨೦೦೪ ಕೃಷ್ಣ ರವರು ಮುಖ್ಯಮಂತ್ರಿಯಾಗಿ ನಾಡಿಗೆ ಸಲ್ಲಿಸಿದ ಸೇವೆ ಅವಿಸ್ಮರಣೀಯ. ಅವರ ಕಾಲಘಟ್ಟದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಯೋಜನೆಗಳು ಇಂದಿಗೂ ಜಾರಿಯಲ್ಲಿದ್ದು, ಅದು ಕೃಷ್ಣರವರ ದೂರದೃಷ್ಟಿಯ ಫಲ. ಸ್ತ್ರೀ ಶಕ್ತಿ, ಅಕ್ಷರ ದಾಸೋಹ, ರೈತರಿಗೆ ಪಹಣಿ ನೀಡುವ ಭೂಮಿ ಯೋಜನೆ, ಯಶಸ್ವಿನಿ ಯೋಜನೆ ಸಮಾಜದ ಸರ್ವ ಜನರನ್ನು ಜನಪರ ಗೆದ್ದ ಯೋಜನೆಗಳಾಗಿವೆ.

ಬೆಂಗಳೂರು ಸಿಂಗಾಪುರದಂತೆ ಆಗಬೇಕು ಎಂದು ಕನಸು ಕಂಡಿದ್ದ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರು, ತಾವು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಐಟಿ ಕ್ಷೇತ್ರಕ್ಕೆ ಇನ್ನಿಲ್ಲದಷ್ಟು ಅವಕಾಶಗಳನ್ನು ಸೃಷ್ಟಿಸಿದ್ದರು. ಇದರಿಂದ ಉದ್ಯಾನ ನಗರಿಯು ಐಟಿ ಸಿಟಿಯಾಗಿ ಮಾರ್ಪಟ್ಟಿದ್ದಲ್ಲದೆ ’ಭಾರತದ ಸಿಲಿಕಾನ್ ವ್ಯಾಲಿ’ಯಾಗಿ ಬೆಳೆಯಲು ಸಾಧ್ಯವಾಯಿತು.

ಅವರು ಮುಖ್ಯಮಂತ್ರಿಯಾಗಿದ್ದಾಗಲೇ ವಿಕಾಸ ಸೌಧ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು. ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಕ್ಕೆ ಶ್ರಮಿಸಿದ್ದರು, ಬೆಂಗಳೂರಿಗೆ ಮೆಟ್ರೋ ತರುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.

 

Tags:
error: Content is protected !!