ಭೇರ್ಯ: ಸಂಜೆ ನಂತರ ನಿಲ್ದಾಣದೊಳಗೆ ಬಾರದ ಬಸ್‌ಗಳು; ಕುಡಿಯುವ ನೀರು, ಪಾರ್ಕಿಂಗ್ ವ್ಯವಸ್ಥೆ ಇಲ್ಲ
ಭೇರ್ಯ ಮಹೇಶ್
ಭೇರ್ಯ: ಗ್ರಾಮದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವೇನೋ ಹೈಟೆಕ್ ಆಗಿದೆ. ಆದರೆ ಬೆಳಿಗ್ಗೆ, ಸಂಜೆ, ರಾತ್ರಿ ವೇಳೆಯಲ್ಲಿ ಕೆಲವು ಬಸ್‌ಗಳು ನಿಲ್ದಾಣದೊಳಗೆ ಬರು ತ್ತಿಲ್ಲ, ಹೋಟೆಲ್, ಅಂಗಡಿಗಳು ಮುಚ್ಚಿರು ವುದರಿಂದಾಗಿ ನಿಲ್ದಾಣ ಬಿಕೋ ಎನ್ನುತ್ತಿದೆ.
ಮೂರೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಭೇರ್ಯ ಗ್ರಾಮದ ಬಸ್ ನಿಲ್ದಾಣದಲ್ಲಿ ಶೌಚಾಲಯ, ವಿಶ್ರಾಂತಿ ಕೊಠಡಿ ಎಲ್ಲವನ್ನೂ ನಿರ್ಮಿಸಲಾಗಿದೆ. ಆದರೆ ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲವಾಗಿದೆ. ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ೨೫ ಬೈಕ್‌ಗಳು ಕಳ್ಳತನವಾಗಿವೆ. ಆದ್ದರಿಂದ ಸುರಕ್ಷಿತ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕಾಗಿದೆ.
ಹೊಸದಾಗಿ ನಿರ್ಮಿಸಿದ್ದರೂ ಈ ನಿಲ್ದಾಣ ಪ್ರಯಾಣಿಕರಿಗೆ ಸುರಕ್ಷಿತವಾಗಿಲ್ಲ, ಸಂಜೆ ನಂತರ ಒಬ್ಬರೇ ಓಡಾಡುವುದಕ್ಕೆ ಹಿಂಜರಿಯುವಂ ತಾಗಿದೆ. ಸ್ಥಳೀಯ ಪೊಲೀಸರು ಕೂಡ ಬರುತ್ತಿಲ್ಲ. ಸೂಕ್ತ ಭದ್ರತೆ ಇಲ್ಲದಿರುವುದರಿಂದ ಪ್ರಯಾ ಣಿಕರು ಸಂಜೆ ನಂತರ ಬಸ್ ನಿಲ್ದಾಣದೊಳಗೆ ಬರುವುದನ್ನೇ ನಿಲ್ಲಿಸಿದ್ದಾರೆ. ಆದ್ದರಿಂದ ನಿಲ್ದಾಣದಲ್ಲಿ ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಕೆಲವು ಬಸ್ ಬರುತ್ತಿಲ್ಲ: ಇಲ್ಲಿ ಮುಖ್ಯವಾಗಿ ಕೆಲವು ಬಸ್‌ಗಳ ಚಾಲಕರು ಸಂಜೆಯಿಂದ ರಾತ್ರಿಯವರೆಗೆ ನಿಲ್ದಾಣ ದೊಳಗೆ ಬರುತ್ತಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಕೆಲವು ಬಾರಿ ಬಸ್ ನಿಲ್ಲಿಸದೇ ಹಾಗೆಯೇ ಹೊರಟು ಹೋಗುತ್ತಾರೆ. ಒಮ್ಮೊಮ್ಮೆ ರಸ್ತೆಯಲ್ಲಿ ಬಸ್ ನಿಲ್ಲಿಸುವುದರಿಂದ ಪ್ರಯಾಣಿಕರು ಬಸ್ ಹತ್ತಲು ಓಡುತ್ತಾರೆ. ಈ ವೇಳೆ ಏನಾದರೂ ಅಪಘಾತ ಸಂಭವಿಸಿದರೆ ಯಾರು ಹೊಣೆ? ಎಂಬುದು ಪ್ರಯಾಣಿಕರ ಪ್ರಶ್ನೆಯಾಗಿದೆ.