`ಹೊಸ ತಲೆಮಾರಿನ ಸಾಹಿತ್ಯ’ ಕುರಿತ ವಿಚಾರಗೋಷ್ಠಿಯಲ್ಲಿ ವಿಮರ್ಶಕ ವಿಕ್ರಂ ವಿಸಾಜಿ ಅಭಿಮತ
• ಜಿ.ತಂಗಂ ಗೋಪಿನಾಥಂ
ಮಂಡ್ಯ: ಹೊಸ ತಲೆಮಾರಿನ ಲೇಖಕರು ಬದುಕಿನ ಸಂಕೀರ್ಣ ಚಿತ್ರಗಳನ್ನು ಕಾಣಿಸಲು ಹಂಬಲಿಸುತ್ತಿದ್ದಾರೆ ಎಂದು ವಿಮರ್ಶಕ ವಿಕ್ರಂ ವಿಸಾಜಿ ಹೇಳಿದರು.
ಸಮಾನಾಂತರ ವೇದಿಕೆ-2ರಲ್ಲಿ ‘ಹೊಸ ತಲೆ ಮಾರಿನ ಸಾಹಿತ್ಯ’ ಕುರಿತ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಲವೇ ದೃಷ್ಟಿಕೋನಗಳಿಗೆ ಸೀಮಿತವಾದ ಸಾಹಿತ್ಯ ಉತ್ತಮವಲ್ಲ. ವಿಭಿನ್ನ ಓದಿಗೆ ಆಹ್ವಾನಿಸುವುದೇ ಉತ್ತಮ ಸಾಹಿತ್ಯ ಲೇಖಕನಿಗೆ ಭಾಷೆ ಸಂವೇದನೆ, ವಿಷಯ ವಸ್ತು ಮತ್ತು ಅಭಿವ್ಯಕ್ತಿಯ ಬಗ್ಗೆ ಎಚ್ಚರವಿರಬೇಕು ಎಂದರು.
ಹಿಂಸೆಯ ಬೇರೆ ಬೇರೆ ಆಯಾಮಗಳ ಬಗ್ಗೆ ಬರೆಯುವ ಲೇಖಕರ ಪ್ರಮಾಣ ದೊಡ್ಡ ಸಂಖ್ಯೆ ಯಲ್ಲಿದೆ. ಯಾವುದರ ಬಗ್ಗೆಯಾದರೂ ನಿರ್ಭಯವಾಗಿ ಅವರು ಬರೆಯುತ್ತಿದ್ದಾರೆ. ಅವರ ಓದುಗರ ಬಗ್ಗೆ ಸ್ಪಷ್ಟ ಅಭಿಪ್ರಾಯ ಅವರಲ್ಲಿದೆ. ಅದೃಶ್ಯ ಮತ್ತು ಅಗೋಚರ ಓದಗರೇ ನಿಜವಾದ ಓದುಗರು ಎಂದರು.
ಏಕಕಾಲಕ್ಕೆ ಅನೇಕ ದಿಕ್ಕಿನ ಕಥೆ, ಕಾದಂಬರಿ, ಕವಿತೆ ಹೊಸ ತಲೆಮಾರಿನ ಸಾಹಿತ್ಯದ ವೈಶಿಷ್ಟ್ಯ ವಾಗಿದೆ. ವೈವಿಧ್ಯತೆ, ವಿಭಿನ್ನತೆ ಮತ್ತು ಬಹುತ್ವ ಮಾದರಿಯನ್ನು ಅದು ಒಳಗೊಂಡಿದೆ. ಸಾಹಿತ್ಯ ಕನ್ನಡಿಯಲ್ಲ: ಮಾಯಾಗನ್ನಡಿ ಎಂಬ ಅರಿವು ಹೊಸ ತಲೆಮಾರಿನವರಲ್ಲಿದೆ ಎಂದು ಹೇಳಿದರು.
ಮೇಘನಾ ಸುಧೀಂದ್ರ ಅವರು ‘ಹೊಸ ತಲೆಮಾರಿನ ಕನ್ನಡ ಸಾಹಿತ್ಯ ಮತ್ತು ಬಹುಮುಖಿ ಕ್ಷೇತ್ರಗಳ ಬರಹಗಾರರು’ ವಿಷಯ ಕುರಿತು ಮಾತನಾಡಿ, ಕನ್ನಡದಲ್ಲಿಯೂ ಶ್ರೇಷ್ಠ ಕಥೆಗಳು ಬರುತ್ತಿವೆ. ಅವರದೇ ಆದ ಅಜೆಂಡಾಗಳಲ್ಲಿ ಯಾವುದೇ ಭಯವಿಲ್ಲದೆ ಬರೆಯುತ್ತಿದ್ದಾರೆ. ಕಂಟೆಂಟ್ ಜನರೇಟ್ ಮಾಡುವ ಕಲೆ ಯುವ
ತಲೆಮಾರಿ ನವರಿಗೆ ಸಿದ್ಧಿಸಿದ್ದು, ಹಮ್ಮಬಿಮ್ಮು ಬಿಟ್ಟು ಪುಸ್ತಕ ಮಾರಾಟಕ್ಕೂ ಮುಂದಾಗಿರುವುದು ಶ್ಲಾಘನೀಯ ಎಂದು ಹೇಳಿದರು.
‘ಇತ್ತೀಚಿನ ಸಾಹಿತ್ಯದ ವಸ್ತು ವೈವಿಧ್ಯ ವಿಷಯ ಕುರಿತು ಡಾ.ರಮೇಶ್ ಎಸ್.ಕತ್ತಿ, ಚರಿತ್ರೆ ಕೇಂದ್ರಿತ ಸಾಹಿತ್ಯ ಪ್ರಕಾರ’ ವಿಷಯ ಕುರಿತು ಸಹನಾ ವಿಜಯಕುಮಾರ್ ವಿಚಾರ ಮಂಡಿಸಿದರು. ನಿವೃತ್ತ ಪ್ರಾಧ್ಯಾಪಕ ಸಿ.ಕೆ. ಜಗದೀಶ್ ಆಶಯ ನುಡಿಗಳನ್ನಾಡಿದರು.
ಯುವ ತಲೆಮಾರಿನ ಬರಹಗಾರರಲ್ಲಿ ಅನುಭವ ಕಥನಗಳ ಬರಹ ಜಾಸ್ತಿಯಾಗಿದೆ. ಪುಸ್ತಕ, ಪತ್ರಿಕೆಗಳಿಗೆ ಬರೆಯಬೇಕು ಎಂಬ ಕಟ್ಟಪಾಡುಗಳನ್ನು ಬಿಟ್ಟು ಹೊರಬಂದಿರುವ ಅವರು ಬರಹಕ್ಕೆ ತಮ್ಮದೇ ದಾರಿಗಳನ್ನು ಕಂಡುಕೊಂಡಿದ್ದಾರೆ.
– ಮೇಘನಾ ಸುಧೀಂದ್ರ