ಧರ್ಮೇಂದ್ರ ಕುಮಾರ್ ಮೈಸೂರು
ಒಂದು ಸೀರೆಯನ್ನು ಶತಮಾನ ಕಳೆದರೂ ಕಾಪಿಡುವುದು ಸಾಧ್ಯವೇ? ಅದೂ ಮುಕ್ಕಾಗದಂತೆ, ಮಸುಕಾಗದಂತೆ ಉಳಿಸಿಕೊಳ್ಳಬಹುದು ಅಂದರೆ ನಂಬುವುದು ಹೇಗೆ? ಇದು ಸಾಧ್ಯ ಎನ್ನುತ್ತದೆ ಮೈಸೂರು ಮಹಾರಾಜರು ಕೊಡುಗೆ ನೀಡಿರುವ ಒಂದು ಸೀರೆ.
ಅಂತಿಂಥ ಸೀರೆ ಅಲ್ಲ, ಅಪ್ಪಟ ಬಂಗಾರದ್ದು! ಸುಮಾರು ೬ ತಲೆಮಾರು ಗಳಿಂದ ಉಳಿದುಕೊಂಡು ಬಂದಿದೆ. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ೧೯೧೭ರಲ್ಲಿ ತ ಮ್ಮ ಆತ್ಮೀಯ ಗೆಳೆಯ ಹಾಗೂ ಅರಮನೆಯ ಪ್ರಧಾನ ಶರಾ- ಆಗಿದ್ದ ತುಂಗಾ ಆದಪ್ಪ ಶೆಟ್ಟರಿಗೆ ನೀಡಿದ್ದ ಬಂಗಾರದ ಸೀರೆ ಇಂದಿಗೂ ಮೈಸೂರಿನಲ್ಲೇ ಇದೆ. ಆ ಸೀರೆ ವಿಶ್ವದ ಏಕೈಕ ಬಂಗಾರದ ಸೀರೆಯಾಗಿದೆ. ಅದು ೧೧೨ ವರ್ಷಗಳ ಹಳೆಯ ಸೀರೆಯಾಗಿದ್ದರೂ ಇಂದಿಗೂ ನಾವೀನ್ಯತೆ ಹಾಗೂ ಶ್ರೇಷ್ಠತೆಯನ್ನು ಕಾಪಾಡಿಕೊಂಡಿದೆ. ಬೆಂಗಳೂರಿನ ನಿವಾಸಿಗಳಾಗಿರುವ ಸೌಮ್ಯ ಕಮಲ್ ದಂಪತಿ ತುಂಗಾ ಆದಪ್ಪ ಶೆಟ್ಟರ ವಂಶಜರು. ಈ ಅಮೂಲ್ಯವಾದ ಕೊಡುಗೆಯನ್ನು ಅತ್ಯಂತ ಜೋಪಾನವಾಗಿ ಆಪ್ಯಾಯಮಾನದಿಂದ ಕಾಪಾಡಿಕೊಂಡು ಬಂದಿದ್ದಾರೆ.
ಮಹಾರಾಜರ ಮೇಲಿನ ಅಭಿಮಾನದಿಂದ ಪ್ರತಿ ವರ್ಷ ದಸರಾ ವೇಳೆಯಲ್ಲಿ ಈ ಸೀರೆಯನ್ನು ಹೊರಗೆ ತೆಗೆದು ದೇವರ ಮನೆಯಲ್ಲಿಟ್ಟುನಿತ್ಯವೂ ಪೂಜಿಸಿ ನಂತರ ಜೋಪಾನವಾಗಿ ಒಳಗೆ ಇಡುತ್ತಾ ಅನೇಕ ವರ್ಷಗಳಿಂದ ಕಾಪಾಡಿದ್ದಾರೆ. ಇದು ನಮಗೆ ಸಿಕ್ಕಿರುವ ಅಮೂಲ್ಯವಾದ ನಿಧಿ, ಇದು ಅಂಬಾವಿಲಾಸ ಅರಮನೆಯ ಬಗ್ಗೆ ಅನೇಕ ವಿಷಯಗಳನ್ನು ಹೇಳುತ್ತದೆ. ಆಗಿನ ಕಾಲದಲ್ಲಿ ನೇಯ್ಗೆ ಮಾಡಿರುವುದು. ರಾಜರು ಕೊಟ್ಟ ಈ ಉಡುಗೊರೆ ನಮ್ಮ ಮನೆಯಲ್ಲಿದೆ ಎನ್ನುವುದೇ ನಮಗೆ ಹೆಮ್ಮೆ. ಪ್ರತೀ ವರ್ಷ ಈ ಸೀರೆಯನ್ನು ದಸರಾ ವೇಳೆ ದೇವರ ಮನೆಯಲ್ಲಿಟ್ಟು ಪೂಜೆ ಮಾಡುತ್ತೇವೆ. ಬಳಿಕ ಸ್ವಸ್ಥಾನದಲ್ಲಿ ಇಡುತ್ತೇವೆ ಎನ್ನುತ್ತಾರೆ ಸೌಮ್ಯ ಕಮಲ್. ಇಷ್ಟು ವರ್ಷಗಳು ನಾವು ಈ ಸೀರೆಯನ್ನು ಕಾಪಾಡಿಕೊಂಡು ಬಂದಿದ್ದೇವೆ. ನಮ್ಮ ಮುಂದಿನ ಪೀಳಿಗೆಯ ನಮ್ಮ ಸೊಸೆಯಂದಿ ರಿಗೂ ಇದನ್ನೇ ಹೇಳಿ ಈ ಸೀರೆಯನ್ನು ಜೋಪಾನ ಮಾಡಲು ತಿಳಿಸುತ್ತೇನೆ ಎನ್ನುತ್ತಾರೆ ಅವರು.
ಸೀರೆ ಕೊಟ್ಟಿದ್ದು ಈ ಕಾರಣಕ್ಕೆ : ೧೮೯೭ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಹೋದರಿಯ ವಿವಾಹದ ಸಂದರ್ಭದಲ್ಲಿ ಕರ್ಟನ್‌ಗೆ ಬೆಂಕಿ ತಗುಲಿದ್ದರಿಂದ ಇಡೀ ಅರಮನೆ ಸತತ ೧೧ ದಿನಗಳ ಕಾಲ ಉರಿದು ಸುಟ್ಟು ಹೋಗಿದ್ದು ಗೊತ್ತೇ ಇದೆ. ಅದೇ ಸ್ಥಳದಲ್ಲಿ ಹೊಸ ಅರಮನೆ ನಿರ್ಮಾಣ ಕಾಮಗಾರಿ ಆರಂಭವಾಗಿ ೧೯೧೨ರಲ್ಲಿ ಪೂರ್ಣಗೊಂಡಿತು. ಅದೇ ವರ್ಷ ಗೃಹ ಪ್ರವೇಶ ಮಾಡಿದಾಗ ಮಹಾರಾಜರು ಎಲ್ಲರಿಗೂ ಉಡುಗೊರೆ ನೀಡಿದರು. ಆಗ ತುಂಗಾ ಅದಪ್ಪ ಶೆಟ್ಟರಿಗೆ ಮಹಾರಾಜರು ಬಹು ಪ್ರೀತಿಯಿಂದ ಈ ಬಂಗಾರದ ಸೀರೆಯನ್ನು ಉಡುಗೊರೆಯಾಗಿ ನೀಡಿದರು.