Mysore
22
broken clouds
Light
Dark

ನೀಳವಾದ ಕೇಶರಾಶಿಗೆ ಭೃಂಗರಾಜ

• ರಮ್ಯ ಅರವಿಂದ್

ನಾವು ಬಾಲ್ಯದಿಂದಲೂ ಟಿವಿ ಹಾಗೂ ರೇಡಿಯೋ ಜಾಹೀರಾತುಗಳಲ್ಲಿ ‘ನೀಳ ಕೂದಲಿಗಾಗಿ ಶೃಂಗರಾಜ ತೈಲ ಬಳಸಿ’ ಎಂಬು ದನ್ನು ನೋಡಿರುತ್ತೇವೆ, ಅದರ ಬಗ್ಗೆ ಕೇಳಿರುತ್ತೇವೆ. ಈ ಶೃಂಗರಾಜ ಸೊಪ್ಪಿಗೆ ನಾವು ಕನ್ನಡದಲ್ಲಿ ‘ಗರಗದ ಸೊಪ್ಪು’ ಎಂದು ಕರೆಯುತ್ತೇವೆ.

ಶೃಂಗರಾಜ ಒಂದು ರೀತಿಯಲ್ಲಿ ‘ಗಿಡಮೂಲಿಕೆಗಳ ರಾಜ’ ಎಂದರೆ ತಪ್ಪಾಗ ಲಾರದು. ಸಾಮಾನ್ಯವಾಗಿ ಇದು ಎಲ್ಲೆಡೆ ಕಳೆಯ ಸಸ್ಯಗಳಂತೆ ಬೆಳೆದುಕೊಂಡಿರುತ್ತದೆ. ಇದು ನೈಸರ್ಗಿಕವಾಗಿ ಕಪ್ಪು ವರ್ಣದ ಗುಣವನ್ನು ಹೊಂದಿದ್ದು, ಕೂದಲಿಗೆ ಬಣ್ಣ ಕೊಡುವ ಮತ್ತು ತಲೆಕೂದಲನ್ನು ಸೋಂಪಾಗಿ ಬೆಳೆಸುವ ಗುಣ ಹೊಂದಿದೆ. ಆದ್ದರಿಂದಲೇ ಇದನ್ನು ಸಂಸ್ಕೃತದಲ್ಲಿ ‘ಕೇಶರಂಜನ’ ಅಥವಾ ‘ಕೇಶರಾಜ’ ಎಂದು ಕರೆಯಲಾಗುತ್ತದೆ.

ಶೃಂಗರಾಜ ಗಿಡಮೂಲಿಕೆಯಲ್ಲಿಯೂ 2 ವಿಧಗಳಿವೆ. ಒಂದು ಹಳದಿ ಬಣ್ಣದ ಹೂ ಬಿಡುವ ಗಿಡವಾದರೆ ಮತ್ತೊಂದು ಬಿಳಿ ಬಣ್ಣದ ಹೂ ಬಿಡುತ್ತದೆ. ಇದರಲ್ಲಿ ಸಾಕಷ್ಟು ಔಷಧೀಯ ಗುಣಗಳಿದ್ದು, ಪ್ರಾಚೀನ ಕಾಲದಿಂದಲೂ ಆಯುರ್ವೇದದಲ್ಲಿ ವಿವಿಧ ಉದ್ದೇಶಗಳಿಗಾಗಿ ಈ ಗಿಡಮೂಲಿಕೆಯನ್ನು ಬಳಸಲಾಗುತ್ತಿದೆ.

ಕೆಲ ಅಧ್ಯಯನಗಳ ಪ್ರಕಾರ ಭ್ರಂಗರಾಜ ಗಿಡಮೂಲಕೆಯ ತೈಲವು ನೆತ್ತಿ ಹಾಗೂ ಕೂದಲಿನ ಬೇರುಗಳಿಗೆ ಪುಷ್ಟಿಯನ್ನು ನೀಡಿ ರಕ್ತ ಪರಿಚಲನೆಯನ್ನು ಹೆಚ್ಚುಸುವಲ್ಲಿ ಸಹಕಾರಿಯಾಗಿದೆ. ಇದರಿಂದಾಗಿ ದಟ್ಟವಾದ ಕೇಶರಾಶಿ ಹಾಗೂ ಕೂದಲಿನ ಕಾಂತಿಯನ್ನೂ ಹೆಚ್ಚಿಸುವಲ್ಲಿ ಈ ಭ್ರಂಗರಾಜವು ಹೆಚ್ಚು ಪರಿಣಾಮಕಾರಿಯಾಗಿದೆ. ಭ್ರಂಗರಾಜದಿಂದ ತಯಾರಿಸಿದ ತೈಲವನ್ನು ಕೂದಲಿಗೆ ಲೇಪಿಸಿ ವೃತ್ತಾಕಾರದ ಚಲನೆಯಲ್ಲಿ 10 ನಿಮಿಷಗಳ ಕಾಲ ಮಸಾಜ್ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದಾಗಿದೆ.

ಶೃಂಗರಾಜ ಗಿಡದಿಂದ ತೈಲವನ್ನು ತಯಾರಿಸುವ ವಿಧಾನ: ಈ ಭ್ರಂಗರಾಜ ತೈಲವನ್ನು ನಾವು ಮನೆಯಲ್ಲಿಯೇ ತಯಾರಿಸಿ ಕೊಳ್ಳಬಹುದು. ಇದಕ್ಕಾಗಿ ನಾವು ಸಾಧ್ಯವಾದಷ್ಟು ಪ್ರಮಾಣದಲ್ಲಿ ಭಂಗರಾಜ ಎಲೆಗಳನ್ನು ಸಂಗ್ರಹಿಸಿ, ಈ ಎಲೆಗಳನ್ನು 2ರಿಂದ 3 ಸಲವಾ ದರೂ ಶುದ್ಧನೀರಿನಿಂದ ಚೆನ್ನಾಗಿ ತೊಳೆದು, ನಂತರ ಒಂದು ಹತ್ತಿ ಬಟ್ಟೆಯ ಮೇಲೆ ಹರಡಿ ನೆರಳಿನಲ್ಲಿ ಸುಮಾರು ಒಂದು ತಾಸು ಒಣಗಿಸಬೇಕು. ನಂತರ ಒಂದು ಪಾತ್ರೆಯಲ್ಲಿ (ಕಬ್ಬಿಣದಾದರೇ ಸೂಕ್ತ) ಒಂದು ಲೀ. ಕೊಬ್ಬರಿ ಎಣ್ಣೆ ಅಥವಾ ಎಳ್ಳಿನ ಎಣ್ಣೆಯನ್ನು ಹಾಕಿ, ಒಣಗಿಸಿದ ಎಲೆಗಳನ್ನು ಮಿಶ್ರಣ ಮಾಡಿ, ಒಲೆಯ ಮೇಲಿಟ್ಟು ಕಡಿಮೆ ಉರಿಯಲ್ಲಿ 8-10 ನಿಮಿಷಗಳ ಕಾಲ ಕುದಿಯಲು ಬಿಡುವುದು. ಎಣ್ಣೆಯು ಗಾಢ ಹಸಿರು ಬಣ್ಣಕ್ಕೆ ಬದಲಾಗುತ್ತದೆ. ಆರಿದ ನಂತರ ಒಂದು ಗಾಜಿನ ಬಾಟಲಿಗೆ ಶೋಧಿಸಿ ಕೊಂಡು, ಆ ತೈಲವನ್ನು ವಾರಕ್ಕೆ ಎರಡು ಬಾರಿ ಯಂತೆ 5-6 ತಿಂಗಳುಗಳ ಕಾಲ ಕೂದಲಿಗೆ ಹಚ್ಚು ವುದರಿಂದ ಒಳ್ಳೆಯ ಫಲಿತಾಂಶ ನಿರೀಕ್ಷಿಸಬಹುದು.

ಅಡುಗೆಯಲ್ಲಿಯೂ ಶೃಂಗರಾಜ ಬಳಸಬಹುದು : ಶೃಂಗರಾಜ ಎಲೆಗಳನ್ನು ಸಣ್ಣಗೆ ಕತ್ತರಿಸಿ ದೋಸೆ ಹಿಟ್ಟಿಗೆ ಬೆರೆಸಿ ದೋಸೆಯನ್ನು ಸವಿಯಬಹುದು. ಅಲ್ಲದೆ ಅಕ್ಕಿ ಹಿಟ್ಟಿನ ಜತೆ ಸ್ವಲ್ಪ ಉಪ್ಪು, ಜೀರಿಗೆ ಸೇರಿಸಿ ಅಕ್ಕಿರೊಟ್ಟಿಯನ್ನೂ ಸಿದ್ಧಪಡಿಸಿ ಸವಿಯ ಬಹುದು. ಇದರಿಂದ ಆರೋಗ್ಯಕ್ಕೂ ಉತ್ತಮ. ಪ್ರತಿಮನೆಯ ಹಿತ್ತಲಿನಲ್ಲಿ ಹಾಗೂ ಪಾಟ್‌ಗಳಲ್ಲಿ ಇಂತಹ ಅಮೂಲ್ಯವಾದ ಗಿಡಮೂಲಿಕೆಯನ್ನು ಬೆಳೆಸುವ ಜತೆಗೆ ಅವುಗಳನ್ನು ನಾವೂ ಉಪಯೋಗಿಸುವುದರಿಂದ ನಮ್ಮ ದೇಹದ ಆರೋಗ್ಯ ಮತ್ತು ಕೂದಲಿನ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು.
abigna.ramya@gmail.com