• ಪ್ರಶಾಂತ್ ಎಸ್.
ಮೈಸೂರು: ಕಾಡು ಎಂದಾಕ್ಷಣ ಕಣ್ಮುಂದೆ ಸುಳಿಯುವ ವನ್ಯಜೀವಿಗಳ ಪೈಕಿ ಹುಲಿ ಕೂಡ ಇದ್ದೇ ಇರುತ್ತದೆ. ಕಾಡುಪ್ರಾಣಿಗಳ ಪ್ರಮುಖ ಪ್ರಭೇದಗಳಲ್ಲಿ ಹುಲಿ ಸಂತತಿ ಕೂಡ ಒಂದಾಗಿದೆ. ಇದರ ಜೀವನ, ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು, ಅಂತಾರಾಷ್ಟ್ರೀಯ ಹುಲಿ ದಿನ ಅಥವಾ ಜಾಗತಿಕ ಹುಲಿ ದಿನವನು ಪ್ರತಿವರ್ಷ ಜು.29ರಂದು ಆಚರಿಸಲಾಗುತ್ತಿದೆ. ಅಧಿಕ ಹುಲಿಗಳಿರುವ ಹುಲಿ ಸಂರಕ್ಷಿತ ಪ್ರದೇಶ ನಾಗರಹೊಳೆ ಅಸಂಖ್ಯಾತ ಆನೆಗಳ ಆವಾಸ ಸ್ಥಾನವು ಕೂಡ ಆಗಿದೆ.
ಆಯಸ್ಸು, ತೂಕ ಮತ್ತು ಆಹಾರ ಪದ್ಧತಿ: ಸಾಮಾನ್ಯವಾಗಿ ಹುಲಿಗಳು 70-120 ಸೆಂ.ಮೀ ಎತ್ತರವಿದ್ದು, ಗಂಟೆಗೆ 49ರಿಂದ 65 ಕಿ.ಮೀ ವೇಗದಲ್ಲಿ ಓಡಬಲ್ಲ ಸಾಮರ್ಥ್ಯ ಹೊಂದಿವೆ. ಗಂಡು ಹುಲಿಗಳು 90-310 ಕೆ.ಜಿ. ಇದ್ದರೆ, ಹೆಣ್ಣು ಹುಲಿಗಳು 65ರಿಂದ 170 ಕೆ.ಜಿ. ತೂಕ ಹೊಂದಿರುತ್ತವೆ.
ಹುಲಿಗಳು ಮೃಗಾಲಯದಲ್ಲಿದ್ದರೆ ಸುಮಾರು 26 ವರ್ಷ, ಕಾಡುಗಳಲ್ಲಿದ್ದರೆ 15 ವರ್ಷ ಜೀವಿಸಬಲ್ಲವು. ಅಂಬಾರ್ ಜಿಂಕೆ, ಕಾಡು ಹಂದಿ, ನೀರೆಮೆಗಳು ಅವುಗಳಿಗೆ ಆಹಾರ. ಒಮ್ಮೊಮ್ಮೆ ಕರಡಿ, ನಾಯಿ, ಚಿರತೆ, ಮೊಸಳೆ, ಕೋತಿಗಳನ್ನೂ ಬೇಟೆಯಾಡುತ್ತವೆ. ಒಮ್ಮೊಮ್ಮೆ ಮನುಷ್ಯರನ್ನು ಕೊಂದು, ಭಕ್ತಿಸುವುದುಂಟು.
ಹುಲಿಗಳ ರಕ್ಷಣೆಗೆ ಡಿಜಿಟಲ್ ನೆರವು: ದೇಶದಲ್ಲಿ ಅತ್ಯುತ್ತಮ ಹತ್ತು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಐದು ನಮ್ಮ ರಾಜ್ಯದಲ್ಲಿಯೇ ಇವೆ. ಇದು ನಮಗೆ ಹೆಮ್ಮೆಯ ಸಂಗತಿ, ರಾಜ್ಯದ ಒಟ್ಟು ಅರಣ್ಯ ಪ್ರದೇಶದಲ್ಲಿ ಶೇ.25ರಷ್ಟನ್ನು ವನ್ಯಜೀವಿ ಸಂರಕ್ಷಣೆಗೆ ಮೀಸಲಿಡಲಾಗಿದೆ. ಅರಣ್ಯದಲ್ಲಿ ಬೆಂಕಿ ಹೊತ್ತಿಕೊಂಡರೆ ತಕ್ಷಣ ಮಾಹಿತಿ ರವಾನಿಸುವ ಮತ್ತು ಕಾರ್ಯಾಚರಣೆ ನಡೆಸುವುದಕ್ಕೆ ತಂತ್ರಜ್ಞಾನದ ನೆರವು ಲಭ್ಯ ಇದೆ. ಅರಣ್ಯ ರಕ್ಷಕರಿಗೆ ಉತ್ತಮ ಗುಣಮಟ್ಟದ ಶಸ್ತ್ರಾಸ್ತ್ರಗಳನ್ನು ಪೂರೈಸಲಾಗಿದೆ. ಕಳ್ಳಬೇಟೆ ತಡೆಗೆ ಶಿಬಿರಗಳನ್ನು ಹೆಚ್ಚಿಸಲಾಗಿದೆ. ಡೋನ್ ಕ್ಯಾಮೆರಾಗಳನ್ನು ಬಳಸಿ ಹುಲಿಗಳ ಸ್ಥಿತಿಗತಿಯನ್ನು ಪರಿಶೀಲಿಸಲಾಗುತ್ತಿದೆ.
ಹಳೇ ಮೈಸೂರು ಭಾಗದಲ್ಲಿ ಹೆಚ್ಚು: ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳಿವೆ. ರಾಷ್ಟ್ರೀಯ ಉದ್ಯಾನ ಬಂಡೀಪುರ, ಬಿಆರ್‌ಟಿ ಮತ್ತು ಮಹದೇಶ್ವರ ಬೆಟ್ಟದ ವನ್ಯಜೀವಿ ಧಾಮದಲ್ಲಿ ಸೂಕ್ತ ಸಂರಕ್ಷಣೆ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗಾಗಿ ಹುಲಿಗಳು ಈ ಭಾಗದಲ್ಲಿ ಅಧಿಕವಾಗಿ ನೆಲೆ ಕಂಡುಕೊಂಡಿವೆ. ಈ ಬಾರಿ ಹುಲಿ ಗಣತಿಯಲ್ಲಿ ಬಂಡೀಪುರದಲ್ಲಿ ಅಂದಾಜು 150ಕ್ಕಿಂತ ಹೆಚ್ಚು, ಬಿಆರ್‌ಟಿಯಲ್ಲಿ 70 ಮತ್ತು ಮಹದೇಶ್ವರ ಬೆಟ್ಟದ ವನ್ಯಜೀವಿಧಾಮದಲ್ಲಿ 18 ಹುಲಿಗಳಿವೆ ಎಂದು ಅಂದಾಜಿಸಲಾಗಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ 110 ಹುಲಿಗಳಿವೆ ಎಂದು ಹೇಳಲಾಗಿದ್ದು, ಹುಲಿ ಗಣತಿಯನ್ನು 3.81 ಲಕ್ಷ ಚದರ ಕಿಲೋ ಮೀಟರ್ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಅಧ್ಯಯನ ಕೈಗೊಳ್ಳಲಾಗಿದೆ. ಹುಲಿಗಳು ವಾಸವಿರುವ ಪ್ರದೇಶ, ಅದರ ಆಹಾರ ಕ್ರಮ, ಮಲ ಮುಂತಾ ದವುಗಳ ಪರೀಕ್ಷೆಗಾಗಿ 3.17 ಲಕ್ಷ ಪ್ರದೇಶವನ್ನು ಅಧ್ಯಯನಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. 141 ಭಾಗಗಳಲ್ಲಿ 26,838 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಉಗುರು ಮಾರಾಟ, ಖರೀದಿ ಅಪರಾಧ: ಭಾರತದ ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಪ್ರಕಾರ ಪ್ರಕಾರ, ಹುಲಿ ಉಗುರು ಮಾರಾಟ, ಖರೀದಿ ಮತ್ತು ಮನುಷ್ಯ-ಹುಲಿ ಸಂಘರ್ಷ ಹೆಚ್ಚು ಬಳಕೆ ಅಪರಾಧ. ಇಂತಹ ಪ್ರಕರಣಗಳಲ್ಲಿ ಆರೋಪ ಸಾಬೀತಾದರೆ ದಂಡ ಮತ್ತು ಸಜೆ ವಿಧಿಸಬಹುದು. ಕನಿಷ್ಠ 3ರಿಂದ 7 ವರ್ಷ ಗಳು ಕಾರಾಗೃಹ ಶಿಕ್ಷೆಗೆ ಗುರಿಯಾಗಬಹುದು.
ಮನುಷ್ಯ ಹುಲಿ ಸಂಗರ್ಷ ಹೆಚ್ಚು: ಮೊದಲೆಲ್ಲಾ 2-3 ಕಿಲೋ ಮೀಟರ್ ದೂರದಲ್ಲಿ ಒಂದು ಹುಲಿ ವಾಸ ಮಾಡುತ್ತಿತ್ತು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಆ ದೂರ 400-500 ಕಿಲೋ ಮೀಟರ್‌ಗಳಿಗೆ ವಿಸ್ತರಿಸಿದೆ. ಹಾಗಾಗಿ ಹುಲಿಗಳು ಕಾಡಂಚಿನ ಗ್ರಾಮಗಳಿಗೆ ನುಗ್ಗುತ್ತಿವೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ:
*502 ಕ್ಯಾಮೆರಾ ಪಾಯಿಂಟ್‌ಗಳು
*1,624 ಹುಲಿಗಳ ಚಿತ್ರ ಕ್ಯಾಮೆರಾಗಳಲ್ಲಿ ಸೆರೆ
*149 ಅಂದಾಜು ವಿಶಿಷ್ಟ ( ಪಟ್ಟೆ ಇರುವ) ಹುಲಿಗಳು ಪತ್ತೆ
ಬಂಡೀಪುರ ಟಿಆರ್
* 612 ಕ್ಯಾಮೆರಾ ಪಾಯಿಂಟ್‌ಗಳು
* 1,709 ಹುಲಿಗಳ ಚಿತ್ರ ಕ್ಯಾಮೆರಾಗಳಲ್ಲಿ ಸೆರೆ
* 140 ಅಂದಾಜು ವಿಶಿಷ್ಟ ( ಪಟ್ಟೆ ಇರುವ) ಹುಲಿಗಳು ಪತ್ತೆ
ಬಿಳಿಗಿರಿ ರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶ
*39 ವಿಶಿಷ್ಟ (ಪಟ್ಟೆ ಇರುವ) ಹುಲಿಗಳು ಪತ್ತೆ
ಕೋಟ್ಸ್))
ತಾಯಿಯಿಂದ ಬೇರ್ಪಟ್ಟ ಹುಲಿ ಮರಿಗಳು ತಮ್ಮ ಸರಹದ್ದನ್ನು ಗುರುತಿಸಿಕೊಳ್ಳುವಾಗ ಮನುಷ್ಯನ ಮೇಲೆ ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಬೇಟೆಯಾಡುವ ಶಕ್ತಿ ಕಳೆದುಕೊಂಡ, ವಯಸ್ಸಾದ, ಗಾಯಗೊಂಡ ಹುಲಿಗಳು ಮನುಷ್ಯನ ಮೇಲೆ ದಾಳಿ ಮಾಡಬಹುದು. ಕೆಲವು ಸಂದರ್ಭಗಳಲ್ಲಿ ಭಯದಿಂದ ಮನುಷ್ಯನ ಮೇಲೆ ಎರಗುತ್ತವೆ.
– ಡಾ.ಪಿ.ರಮೇಶ್ ಕುಮಾರ್ ಐಎಫ್‌ಎಸ್, ಹುಲಿ ಯೋಜನೆ ನಿರ್ದೇಶಕ





