Mysore
20
clear sky

Social Media

ಗುರುವಾರ, 29 ಜನವರಿ 2026
Light
Dark

ಫೆಂಗಲ್‌ ಪ್ರಹಾರ; ಫಸಲು ಸಂಹಾರ: ಮೈಸೂರು ಭಾಗದ ವಿವಿಧ ಜಿಲ್ಲೆಗಳಲ್ಲಿ ಬೆಳೆ ಹಾನಿ

ಮೈಸೂರು: ಫೆಂಗಲ್ ಚಂಡಮಾರುತ ಪ್ರೇರಿತ ಮಳೆಯಿಂದಾಗಿ ಭತ್ತದ ಬೆಳೆಗಾರರು ಕಂಗಾಲಾಗಿದ್ದು, ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆ ಕಟಾವಿನ ಸಂದರ್ಭದಲ್ಲಿ ಎಡಬಿಡದೆ ಸುರಿದ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಮಳೆಯಿಂದ ಮೈಸೂರು ಭಾಗದ ಜಿಲ್ಲೆಗಳಲ್ಲಿ ಕೂಡ ಹಲವೆಡೆ ಬೆಳೆಗಳು ಹಾನಿಗೀಡಾಗಿವೆ. ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಕೊಡಗು ಜಿಲ್ಲೆಗಳಲ್ಲಿ ಭತ್ತ, ರಾಗಿ, ಮೆಕ್ಕೆಜೋಳ, ಕಾಫಿ ಹಣ್ಣು , ಟೊಮೆಟೊ ಇತ್ಯಾದಿ ಬೆಳೆಗಳು ರೈತರ ಮಡಿಲು ಸೇರದಂತಾಗಿವೆ. ಮೈಸೂರು ಜಿಲ್ಲೆಯಲ್ಲಿ ೨೦೨೪-೨೫ರ ಮುಂಗಾರು ಹಂಗಾಮಿನಲ್ಲಿ ೮೯,೨೦೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಗುರಿಗೆ ಬದಲಾಗಿ ೮೭,೨೦೫ ಹೆಕ್ಟೇರ್ ಪ್ರದೇಶ ದಲ್ಲಿ ಭತ್ತ ಬೆಳೆಯಲಾಗಿದ್ದು, ನೀರಾವರಿ ಪ್ರದೇಶದಲ್ಲಿ ೫೦೦ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಗುರಿಗೆ ಬದಲಾಗಿ ೩೧೦ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದೆ.

ಹಿಂಗಾರು ಹಂಗಾಮಿನಲ್ಲಿ ಮುಸುಕಿನ ಜೋಳ, ದ್ವಿದಳ ಧಾನ್ಯಗಳಾದ ಅವರೆಕಾಯಿ, ಹುರುಳಿ, ಉದ್ದು, ಹೆಸರು, ಅಲಸಂದೆ ಬೆಳೆಗಳನ್ನು ೪೧,೧೨೮ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಈ ಪೈಕಿ ನೀರಾವರಿ ಪ್ರದೇಶದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವ ಕೆ. ಆರ್. ನಗರ, ತಿ. ನರಸೀಪುರ, ನಂಜನಗೂಡು ತಾಲ್ಲೂಕುಗಳ ಹೆಚ್ಚಿನ ರೈತರು ಕಟಾವು ಮುಗಿಸಿದ್ದರೆ, ತಡವಾಗಿ ನಾಟಿ ಮಾಡಿದ ರೈತರು ಕಟಾವು ಮಾಡಲಾಗದೆ ಪರಿತಪಿಸುವಂತಾಗಿದೆ. ಈಗಾಗಲೇ ಭತ್ತದ ಬೆಳೆ ಕಟಾವಿಗೆ ಬಂದಿದ್ದು, ಚಂಡಮಾರುತದ ಮುನ್ಸೂಚನೆ ತಿಳಿಯದ ಕೆಲ ರೈತರು ಕಟಾವು ಮಾಡಿಸಿ ಕೈ ಸುಟ್ಟುಕೊಂಡಿದ್ದಾರೆ. ಭತ್ತ ಕಟಾವು ಮಾಡಿಸಿ ಗದ್ದೆಯಲ್ಲೇ ಬಿಟ್ಟಿರುವುದರಿಂದ ಮಳೆಗೆ ಭತ್ತದ ಕಾಳುಗಳು ಗದ್ದೆಯಲ್ಲೇ ಉದುರಿ ಹೋಗುವ ಸಾಧ್ಯತೆ ಹೆಚ್ಚಿದೆ.

ಅಲ್ಲದೆ, ಜಾನುವಾರುಗಳ ಮೇವಿಗೆ ಸಂಗ್ರಹಿ ಸುವ ಭತ್ತದ ಹುಲ್ಲು ಕೊಳೆತು ರೈತನ ಕೈಗೆ ಸಿಗದಂತಾಗಿ ಮುಂಬರುವ ದಿನಗಳಲ್ಲಿ ಜಾನುವಾರುಗಳ ಮೇವಿಗೂ ತತ್ವಾರ ಬರುವ ಸಾಧ್ಯತೆ ಹೆಚ್ಚಿದೆ. ಭತ್ತದ ಕೊಯ್ಲು ಮಾಡಿ: ಭಾರತೀಯ ಹವಾಮಾನ ಇಲಾಖೆಯ ಈ ವಾರದ ಮುನ್ಸೂಚನೆ ಪ್ರಕಾರ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆ ಬರುವ ಸಾಧ್ಯತೆ ಇರುವುದರಿಂದ ರೈತರು ಭತ್ತ ಕಟಾವು ಮಾಡಿ, ಚಂಡಮಾರುತದ ನಂತರದ ಶುಷ್ಕ ದಿನಗಳಲ್ಲಿ ರೈತರು ಭತ್ತದ ಕೊಯ್ಲಿಗೆ ಆದ್ಯತೆ ನೀಡಬೇಕು. ಹಾನಿಯನ್ನು ತಡೆಗಟ್ಟಲು ಧಾನ್ಯಗಳನ್ನು ಸರಿಯಾಗಿ ಒಣಗಿಸಿ ಸಂಗ್ರಹಿಸ ಬೇಕು. ಹೊಲದ ಒಳಚರಂಡಿಯನ್ನು ನಿರ್ವಹಿಸಬೇಕು. ತಡವಾದ ಭತ್ತದ ಬೆಳೆಗಳನ್ನು ಕೊಯ್ಲು ಮಾಡಲು ಶುಷ್ಕ ಹವಾಮಾನ ಪರಿಸ್ಥಿತಿಯನ್ನು ಬಳಸಿಕೊಳ್ಳಿ, ಧಾನ್ಯ ಒಡೆದು ಹೋಗುವುದನ್ನು ಕಡಿಮೆ ಮಾಡಲು ಸಾಪೇಕ್ಷ ಆರ್ದ್ರತೆ ಹೆಚ್ಚಿರುವಾಗ ಮುಂಜಾನೆ ಸಮಯದಲ್ಲಿ ಕೊಯ್ಲು ಮಾಡಿ, ಜತೆಗೆ ಕೊಯ್ಲಿನ ನಂತರದ ನಿರ್ವಹಣೆಗೆ ಆದ್ಯತೆ ನೀಡಬೇಕಿದೆ. ಶಿಲೀಂಧ್ರಗಳ ಬೆಳವಣಿಗೆಯನ್ನು ತಡೆಗಟ್ಟಲು ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳಲು ಕಟಾವು ಮಾಡಿದ ಭತ್ತದ ಕಾಳುಗಳನ್ನು ನೆರಳಿನಲ್ಲಿ ಸಂಪೂರ್ಣವಾಗಿ ಒಣಗಿಸಿ, ಚೆನ್ನಾಗಿ ಗಾಳಿ ಮತ್ತು ತೇವಾಂಶ ನಿರೋಧಕ ಶೇಖರಣಾ ಸೌಲಭ್ಯಗಳಲ್ಲಿ ಧಾನ್ಯಗಳನ್ನು ಸಂಗ್ರಹಿಸಿ ಎಂದು ಹವಾಮಾನ ತಜ್ಞರು ಸಲಹೆ ನೀಡಿದ್ದಾರೆ.

ತೋಟದ ಬೆಳೆಗಳಿಗೆ ಹಾನಿ ಇಲ್ಲ: ಫೆಂಗಲ್ ಚಂಡಮಾರುತ ಪ್ರೇರಿತ ಮಳೆಯ ಸಂದರ್ಭದಲ್ಲಿ ಗಾಳಿಯ ತೀವ್ರತೆ ಹೆಚ್ಚಿಲ್ಲದ ಕಾರಣ ಬಾಳೆ ಸೇರಿದಂತೆ ಯಾವುದೇ ತೋಟದ ಬೆಳೆಗಳಿಗೆ ಹಾನಿಯಾಗಿಲ್ಲ. ಆದರೆ, ತೋಟಗಳಲ್ಲಿ ಮಳೆ ನೀರು ಹರಿದು ಹೋಗುವಾಗ ಪೋಷಕಾಂಶಗಳನ್ನೂ ಕೊಚ್ಚಿಕೊಂಡು ಹೋಗಿದೆ. ಹೀಗಾಗಿ ತೋಟದ ಬೆಳೆಗಳಿಗೆ ಕೊಟ್ಟಿಗೆ ಗೊಬ್ಬರ ಇಲ್ಲವೇ ಎರೆ ಗೊಬ್ಬರಗಳನ್ನು ಕೊಡಬೇಕಿದೆ. ಇನ್ನು ತೋಟದಲ್ಲಿ ನೀರು ನಿಂತು ವಸ್ತಿ ಬಂದ ಸಂದರ್ಭ ದಲ್ಲಿ ಹೊಸ ಶಿಲೀಂಧ್ರಗಳು ಸೃಷ್ಟಿಯಾಗಿ ಸದ್ಯ ತೋಟ ಗಳಲ್ಲಿರುವ ತರಕಾರಿ ಬೆಳೆಗಳಾದ ಎಲೆಕೋಸು, ಹೂ ಕೋಸು, ಹಸಿ ಮೆಣಸಿನ ಕಾಯಿ, ಟೊಮೆಟೊ, ತಿಂಗಳ ಹುರಳಿಕಾಯಿ, ಹೂವು ಬಿಡುವ ಹಾಗೂ ಕಾಯಿಕಟ್ಟುವ ಹಂತದಲ್ಲಿರುವ ತೊಗರಿಬೆಳೆಗಳಿಗೆ ಶಿಫಾರಸು ಮಾಡಿದ ಶಿಲೀಂಧ್ರ ನಾಶಕಗಳನ್ನು ಸಿಂಪಡಿಸಿ ರೋಗಬಾಧೆಯಿಂದ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ಫೆಂಗಲ್ ತಂದಿಟ್ಟ ಸಂಕಷ್ಟ: ಫೆಂಗಲ್ ಚಂಡಮಾರುತ ಪ್ರಭಾವದಿಂದ ಚಾಮರಾಜನಗರ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಭತ್ತ ಅಲ್ಲದೆ, ಸಿರಿಧಾನ್ಯ ಬೆಳೆಗಳಿಗೆ ಹೆಚ್ಚು ಧಕ್ಕೆಯಾ ಗಿದೆ. ಚಾಮರಾಜನಗರ ತಾಲ್ಲೂಕಿನ ಇರಸವಾಡಿ, ಹೊಂಗನೂರು ಸೇರಿದಂತೆ ಹಲವು ಹಳ್ಳಿಗಳಲ್ಲಿ ಭತ್ತದ -ಸಲು ನೆಲ ಕಚ್ಚಿದೆ. ಹನೂರು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ರೈತರು ಬೆಳೆದಿದ್ದ ರಾಗಿ, ನವಣೆ, ಸಾಮೆ, ಮುಸುಕಿನ ಜೋಳ ಮಣ್ಣಿನ ಪಾಲಾಗಿವೆ. ಮಂಡ್ಯದಲ್ಲಿಯೂ ಬೆಳೆಗಳ ಹಾನಿ ಮಂಡ್ಯದಲ್ಲಿ ರೈತರು ಬೆಳೆದಿರುವ ಶೇ. ೯೦ರಷ್ಟು ಭತ್ತ ಹಾಗೂ ರಾಗಿ ಕಟಾವಿಗೆ ಬಂದಿದ್ದು, ಇದರಲ್ಲಿ ಶೇ. ೪೦ರಷ್ಟು ಕೊಯ್ಲು ಮಾಡಲಾಗಿದೆ. ಕೊಯ್ಲು ಮಾಡಿದ ಭತ್ತ ಅರಿ (ಕಂತೆ)ಗಳನ್ನು ತಾಕಿನಲ್ಲೇ ಬಿಟ್ಟಿದ್ದು, ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಿದ್ದರಿಂದ ಅವು ಅಲ್ಲಿಯೇ ಮೊಳಕೆ ಒಡೆದು ನಷ್ಟ ವಾಗಿವೆ. ಹೂವು ಹಾಗೂ ಟೊಮೆಟೊ ಬೆಳೆಗಳನ್ನೂ ಕೊಯ್ಯಲು ಆಗದಂತಹ ಸ್ಥಿತಿ ಉಂಟಾಗಿದೆ.

ಕೊಡಗಿನಲ್ಲಿ ಭತ್ತ, ಕಾಫಿ ಹಣ್ಣು ಮೇಲೆ ಫೆಂಗಲ್ ಕಣ್ಣು: ಫೆಂಗಲ್ ಚಂಡಮಾರುತದಿಂದ ಸುರಿದ ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಭತ್ತ ಮತ್ತು ಕಾಫಿ -ಸಲು ಬೆಳೆಗಾರರ ಕೈ ಸೇರದ ಪರಿಸ್ಥಿತಿ ನಿರ್ಮಾಣವಾಗಿದೆ. ಭತ್ತ ಬೆಳೆದಿರುವ ಗದ್ದೆಗಳಲ್ಲಿ ಮಳೆಯಿಂದ ಅತಿಯಾದ ತೇವಾಂಶ ಇದೆ. ಹಾಗಾಗಿ ಬೆಳೆಯ ಕೊಯ್ಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಹಲವೆಡೆ ಕಾಫಿಹಣ್ಣುಗಳು ಮಳೆಯ ಹೊಡೆತಕ್ಕೆ ಸಿಲುಕು ಮಣ್ಣು ಪಾಲಾಗಿವೆ. ಕೊಡ್ಲಿಪೇಟೆ, ಶನಿವಾರ ಸಂತೆ, ಸೋಮವಾರಪೇಟೆ ಕಸಬಾ ಹೋಬಳಿಯಲ್ಲಿ ಭತ್ತ ಮತ್ತು ಕಾಫಿ ಬೆಳೆಗೆ ಹಾನಿಯಾಗಿದೆ.

ಬೆಳೆಗಳಿಗೆ ಹಾನಿ ವರದಿ ಇಲ್ಲ ಚಂಡಮಾರುತ ದಿಂದಾಗಿ ಕೇವಲ ಎರಡು ದಿನಗಳ ಕಾಲ ಮಳೆ ಸುರಿದು, ಮರು ದಿನದಿಂದಲೇ ಬಿಸಿಲು ಬಂದಿರುವುದರಿಂದ ಜಿಲ್ಲೆಯಲ್ಲಿ ಯಾವುದೇ ಬೆಳೆಗಳಿಗೂ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. – ಎನ್. ರವಿ, ಜಂಟಿ ಕೃಷಿ ನಿರ್ದೇಶಕರು, ಮೈಸೂರು ಡಿ.

೭ರವರೆಗೆ ಮಳೆ ಮುಂದುವರಿಯುವ ಸಾಧ್ಯತೆ ದಕ್ಷಿಣ ಒಳನಾಡಿನ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣದ ಮುನ್ಸೂಚನೆ ಇದೆ. ಡಿ. ೭ರ ತನಕ ಅಲ್ಲಲ್ಲಿ ಮಳೆ ಮುಂದುವರಿಯುವ ಸಾಧ್ಯತೆಗಳಿವೆ. ಡಿ. ೭ರಂದು ನಿಕೋಬಾರ್ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿವೆ. ಪರಿಸ್ಥಿತಿ ಮತ್ತು ಪರಿಣಾಮವನ್ನು ಕಾದು ನೋಡಬೇಕಾಗಿದೆ. – ಡಾ. ಜಿ. ವಿ. ಸುಮಂತ್ ಕುಮಾರ್, ತಾಂತ್ರಿಕ ಅಧಿಕಾರಿ, ನಾಗನಹಳ್ಳಿ ಕೃಷಿ ಹವಾಮಾನ ಕ್ಷೇತ್ರ ವಿಭಾಗ

 

Tags:
error: Content is protected !!