Mysore
30
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

‘ಫಾದರ್’ ಪ್ರಕಾಶ್ ರಾಜ್: ಹೀಗೊಂದು ಸಮ್ಯಕ್‌ದರ್ಶನ

ಬಾ.ನಾ ಸುಬ್ರಮಣ್ಯ

ಅದೊಂದು ಘಟನೆ ಮತ್ತದರ ಬೆಳವಣಿಗೆ ಸುದ್ದಿವಾಹಿನಿಗಳ ಪಾಲಿಗೆ, ಅದರಲ್ಲೂ ಮನರಂಜನಾ ವಾಹಿನಿಗಳ ಕೂಟಕ್ಕೆ ಪೊಗದಸ್ತು. ಸುದ್ದಿ ಸ್ಫೋಟಕ್ಕೆ ಸ್ಪರ್ಧೆ. ಅದೊಂದು ಕೊಲೆ, ಕೊಲೆ ಆರೋಪ ಹೊತ್ತ ಅಪರಾಧಿಗಳು, ಸಿಲೆಬ್ರಿಟಿ ಮತ್ತು ಅವರಿಂದ ಸಿಲೆಬ್ರಿಟಿ ಎಂದು ಕರೆಸಿಕೊಂಡು ಈಗ ಜೊತೆಗೆ ಇರುವಮಂದಿ, ಎಲ್ಲರಸುದ್ದಿಗೂಬೇಡಿಕೆ.ಪರಿಣಾಮಚಿತ್ರೋದ್ಯಮದಲ್ಲಿರುವ, ಅದರಲ್ಲೂ ಪ್ರಚಾರದಲ್ಲಿರುವ ಮಂದಿಗೆ ಎಲ್ಲಿಲ್ಲದ ಬೇಡಿಕೆ. ಕಿರುತೆರೆಯಲ್ಲಿ ಪ್ರಚಾರ ಬಯಸುವ ಮಂದಿಗೆ ಇದೊಂದು ಅವಕಾಶ ಎನ್ನಿ.

ವಾಹಿನಿಗಳ ವರದಿಗಾರರಿಗೋ ಇದು ಅನಿವಾರ್ಯ. ಹಾಗಾಗಿ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಅಲ್ಲಿ ಬಂದವರನ್ನು ಮೊದಲು ಮಾತನಾಡಿಸುವುದು ಈ ವಿಷಯವನ್ನೇ! ಕೆಲವರಿಗೆ ಮಾತನಾಡಬೇಕು, ಕೆಲವರಿಗೆ ಜಾರಿಕೊಳ್ಳಬೇಕು. ಘಟನೆ ಕಾನೂನಿನ ಕೈಯಲ್ಲಿದೆ. ಈ ಹಂತದಲ್ಲಿ ಮಾತನಾಡುವುದು ಎಷ್ಟು ಸರಿ ಎನ್ನುವವರೂ ಇದ್ದಾರೆ. ಆದರೆ ಪ್ರಚಾರದ ಹುಚಿನ ಮಂದಿಗೆ ಅದು ಗೌಣ.

ಮೊನ್ನೆ ʼಫಾದರ್ʼ ಸೆಟ್ಟಲ್ಲಿ ನಟ ಪ್ರಕಾಶ್ ರೈ ಅವರಿದ್ದರು. ಇಲ್ಲಿ ಅವರು ಪ್ರಕಾಶ್ ರೈ ಆದರೆ, ಇತರ ಭಾಷಾ ಚಿತ್ರರಂಗಗಳಲ್ಲಿ ಪ್ರಕಾಶ್ ರಾಜ್. ಸಿನಿಮಾ ಮಾತ್ರವಲ್ಲ, ಲೋಕಸಭಾ ಚುನಾವಣೆಯ ಸಮಯದಲ್ಲಂತೂ ಅವರು ಸುದ್ದಿವಾಹಿನಿಗಳ, ಸಾಮಾಜಿಕ ತಾಣಗಳ ಬಹುಬೇಡಿಕೆಯ ವ್ಯಕ್ತಿ. ಅವರಿದ್ದಾರೆ ಅಂದ ಮೇಲೆ ಕೇಳಬೇಕೆ? ಆದರೆ ಅವರೋ, ಅಷ್ಟೇ ಜಾಣತನದಿಂದ ಮಾತು ಬದಲಾಯಿಸಿದರು. ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ಜಾಸ್ತಿ ಆಗ್ಲಿಲ್ಲ, ಆ ಬಗ್ಗೆ ಮಾತಾಡೋಣ, ಆಟೋ ಚಾಲಕರಿಗೆ, ಬೈಕ್ ಸವಾರರಿಂದ ತೊಂದರೆ ಆಗುತ್ತಿದೆ ಆ ಬಗ್ಗೆ ಮಾತಾಡೋಣ. ಸರ್ಕಾರಿ ಶಾಲೆಗಳಲ್ಲಿ ಬಿಸಿ ಊಟ ಅಡುಗೆ ಮಾಡುವವರಿಗೆ ತಿಂಗಳಿಗೆ ಮೂರು ಸಾವಿರ ರೂಪಾಯಿ ಸಂಬಳ. ಅದರ ಬಗ್ಗೆ ಮಾತಾಡೋಣ. ಮಿಕ್ಕವರೆಲ್ಲಾ ಬಹಳ ಬ್ಯುಸಿಯಾಗಿರುವುದರಿಂದ ನಾವು ಇದರ ಬಗ್ಗೆ ಮಾತಾಡೋಣ್ವಾ? ಹೀಗಂತ ಅವರೇ ಪ್ರಶ್ನಿಸಿ, ತಾವು ಅದಕ್ಕೆ ಉತ್ತರಿಸಲು ಸಿದ್ಧವಿಲ್ಲ ಎನ್ನುವುದರ ಜೊತೆಜೊತೆಗೆ ತಮ್ಮ ಸಾಮಾಜಿಕ ಕಾಳಜಿಯನ್ನೂ ಪ್ರಕಟಿಸಿದರು ಪ್ರಕಾಶ್ ರೈ.

ಜೊತೆಗೆ ಪರೋಕ್ಷವಾಗಿ ಕಲಾವಿದ, ಜನಪ್ರಿಯತೆ, ಪಾತ್ರ, ಚಿತ್ರಗಳ ನಿರ್ಮಾಣ ಕುರಿತಂತೆ ಅವರದೇ ಆದ ಅನುಭವದ ಮಾತುಗಳಿದ್ದವು. ಅದು ಎಲ್ಲ ಕಾಲಕ್ಕೂ ತಾರಾಪಟದಲ್ಲಿರುವವರಿಗೆ, ಅದಕ್ಕೆ ಜೋತು ಬೀಳಬಯಸುವ ಮಂದಿಗೆ ಪಾಠದಂತಿತ್ತು. ಪ್ರಕಾಶ ರೈ ಬೆಳ್ಳಿತೆರೆಗೆ ಕಾಲಿಟ್ಟು ಅದಾಗಲೇ ಮೂರು ದಶಕಗಳು ದಾಟಿವೆ. ಕನ್ನಡ ಮಾತ್ರವಲ್ಲ. ತಮಿಳು, ತೆಲುಗು, ಹಿಂದಿ, ಮಲಯಾಳಂ, ಇಂಗ್ಲಿಷ್ ಚಿತ್ರಗಳಲ್ಲಿಯೂ ನಟಿಸುತ್ತಿರುವ ಪ್ರಕಾಶ್ ನಟಿಸಿರುವ ಚಿತ್ರಗಳ ಸಂಖ್ಯೆ ಅದಾಗಲೇ ನಾನೂರರ ಗಡಿ ದಾಟಿದೆ.

ಅಭಿನಯಕ್ಕಾಗಿ ಕೆಲವು ರಾಷ್ಟ್ರಪ್ರಶಸ್ತಿಗಳನ್ನೂ ಪಡೆದಿರುವ ಅವರು ಈಗ ತಾವು ಬಂದ ರಂಗಭೂಮಿ ಕೆಲಸದಲ್ಲೂ ಸಕ್ರಿಯರು.

ನಟನೊಬ್ಬನಿಗೆ ತಾರಾಪಟ್ಟ ಬಂದಾಗಿನ ಸ್ಥಿತಿ ಮತ್ತು ಅದರ ಪ್ರಭಾವಳಿಯಿಂದ ಹೊರಬರಬೇಕಾದ ಅಗತ್ಯ ಇತ್ಯಾದಿಗಳನ್ನು ಅವರು ಮೊನ್ನೆ ಪತ್ರಕರ್ತರ ಮುಂದೆ ತೆರೆದಿಟ್ಟರು. ‘ನಾನು ನನ್ನ ಮೂರು ದಶಕಗಳ ವೃತ್ತಿಜೀವನದಲ್ಲಿ ಯಶಸ್ಸಿನಿಂದ ಹಾಳಾದ ಬಹಳಷ್ಟು ಜನರನ್ನು ನೋಡಿದ್ದೇನೆ. ಸೋಲಿನಿಂದ ಹಾಳಾದವರನ್ನು ನೋಡಿದ್ದು ಕಡಿಮೆ. ಯಶಸ್ಸು ಎನ್ನುವುದು ಒಂದು ನಶೆ. ಯಶಸ್ವಿಯಾಗುವುದು ದೊಡ್ಡ ವಿಷಯವಲ್ಲ. ಅದನ್ನು ದಕ್ಕಿಸಿಕೊಳ್ಳೋದು, ಉಳಿಸಿಕೊಳ್ಳೋದು ಬಹಳ ಮುಖ್ಯ. ಹಾಗಾಗಿ, ಡಾ.ರಾಜ್‌ಕುಮಾರ್, ರಜನಿಕಾಂತ್, ಕಮಲ್ ಹಾಸನ್ ಮುಂತಾದವರು ಆರು ದಶಕ, ಐದು ದಶಕಗಳ ಕಾಲ ಕೆಲಸ ಮಾಡಿರುವುದನ್ನು ನಾವು ನೋಡಬಹುದು. ಈಗ ಅಂಥವರು ಸಿಗುವುದೇ ಇಲ್ಲ ನಮಗೆ ಬಹಳಷ್ಟು ಯುವಕರು ಸ್ಟಾರ್‌ಡಂಗೆ ತಯಾರಾಗಿರುವುದಿಲ್ಲ. ಎಷ್ಟು ನಾವು ಅದನ್ನು ಇಳಿಸಿಕೊಂಡು ಹೊರಗೆ ಬರುತ್ತೀವೋ, ಅಷ್ಟೂ ಒಳ್ಳೆಯದು. ಇಲ್ಲದಿದ್ದರೆ ಅದು ನಮ್ಮನ್ನು ಸುಟ್ಟುಹಾಕುತ್ತದೆ. ಕೆಲವರು ಕಲಿಯುತ್ತಿದ್ದಾರೆ, ಕೆಲವರು ಕಲಿಯುವುದಿಲ್ಲ’ ಎನುವ ಅವರ ಮಾತು ಹೊಸ ಸಿನಿಮಾ ನಟರಿಗೆ ಪಾಠ.

ಪ್ರತಿಯೊಬ್ಬರಿಗೂ ಅಹಂಇರಬೇಕು, ಅದು ಸ್ಥಾಭಿಮಾನವಾಗಿರುವವರೆಗೂ ಇರಬೇಕು. ಆದರೆ, ಆ ಅಹಂಕಾರ ದುರಹಂಕಾರ ಆದರೆ ಒಳ್ಳೆಯದಲ್ಲ ಎನ್ನುವುದು ಅವರ ಅಭಿಪ್ರಾಯ. ಕೆಲವರಿಗೆ ಅವರ ಮಾತು ಪಥ್ಯವಾಗದೆ ಇರಬಹುದು. ‘ನಾನು ಜಿಮ್‌ಗೆ ಹೋಗಿಯೇ ನಟ ಆಗುತ್ತೀನಿ ಎಂದರೆ ಆಗುವುದಿಲ್ಲ. ಭಾಷೆ, ಸಂಸ್ಕೃತಿ, ಸಾಹಿತ್ಯದ ಬಗ್ಗೆ ತಿಳಿದುಕೊಳ್ಳುವುದು, ಕಲೆಯ ಪ್ರಕಾರಗಳನ್ನು ಅರಿತುಕೊಳ್ಳುವುದು, ಅದರಿಂದ ನನಗೆ ಹೆಸರಾಗಬೇಕೆಂದು ಬಯಸೋದು ಕೂಡ ಮುಖ್ಯ’ ಎನ್ನುವ ಅವರ ಮಾತು ಬಹಳ ಜನಕ್ಕೆ ರುಚಿಸದು. ಮೈಯನ್ನು ಹುರಿಗೊಳಿಸುವುದು, ಅಭಿನಯ ತರಬೇತಿ, ನೃತ್ಯ, ಸಾಹಸ ಅಭ್ಯಾಸಗಳು ಒಬ್ಬ ನಟನಿಗೆ ಅಗತ್ಯ ಎನ್ನುವ ಬಹಳಷ್ಟು ಮಂದಿಯಲ್ಲಿ ಓದುವ ಅಭ್ಯಾಸ ಕಡಿಮೆ. ಭಾಷೆಯ ಸ್ವಚ್ಛ ಉಚ್ಚಾರಣೆ, ನಮ್ಮ ಸಂಸ್ಕೃತಿಯ ಬಗ್ಗೆ ತಿಳಿವಳಿಕೆ ಎಷ್ಟು ಮಂದಿ ನಟ, ನಟಿಯರಿಗೆ ಇದೆ? ಕನ್ನಡ ಸಾಹಿತ್ಯದ ಓದುಗ ಕಲಾವಿದರು ಎಷ್ಟು ಮಂದಿ ಇದ್ದಾರೆ ಎಂದು ಕೇಳಿದರೆ ಬಹುಶಃ ನಕಾರಾತ್ಮಕ ಉತ್ತರವೇ ಸಿಗಬಹುದು’ ಎನ್ನುತ್ತಾರೆ.

ನಟನಿರಲಿ, ಯಾರೇ ಇರಲಿ ಕಲಿಕೆ ನಿರಂತರ ಎನ್ನುವುದನ್ನು ಎಲ್ಲರೂ ಬಲ್ಲರು. ಅವರೂ ಅದನ್ನೇ ಹೇಳುತ್ತಾರೆ. ಅದು ಅವರ ಅನುಭವದ ಮೂಸೆಯಿಂದ, ‘ನಾನೇ ಈಗ ಮತ್ತೆ ಕಲಿಯಬೇಕಾದ ಪರಿಸ್ಥಿತಿಯಲ್ಲಿದ್ದೀನಿ. ಇಷ್ಟು ಸಿನಿಮಾಗಳನ್ನು ಮಾಡಿದ್ದೇನೆ, ಹೊಸಹೊಸ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಇವತ್ತು ಹೊಸಬರ ಜೊತೆಗೆ ಮಾಡುವಾಗ, ಅವರು ಬೇರೇನೋ ಕೇಳುತ್ತಿದ್ದಾರೆ ಅಂತನಿಸುತ್ತಿದೆ. ಹಾಗಾಗಿ, ಇದುವರೆಗೂ ಕಲಿತಿದ್ದನ್ನು ಮರೆತು, ಹೊಸದಾಗಿ ಕಲಿಯಬೇಕು. ಇದೊಂದು ಸವಾಲು. ಖುಷಿಯಾಗುತ್ತಿದೆ’ ಎನ್ನುತ್ತಾರವರು.

ಜನ ಕಲಾವಿದರನ್ನು ಏಕೆ ಪ್ರೀತಿಸುತ್ತಾರೆ, ಅವರಿಂದ ಏನು ನಿರೀಕ್ಷಿಸುತ್ತಾರೆ ಎನ್ನುವ ಪ್ರಶ್ನೆ ಸಹಜ. ಪ್ರಕಾಶ್ ತಮ್ಮ ನೆನಪಿನ, ಅನುಭವದ ಬುತ್ತಿಯಿಂದ ಅದನ್ನುತೆರೆದಿಡುತ್ತಾರೆ. ಇತ್ತೀಚೆಗೆ ರಾಯನ್’ ಸಿನಿಮಾದಸಮಾರಂಭದಲ್ಲಿದ್ದೆ. ಆ ಚಿತ್ರಕ್ಕೆ ರೆಹಮಾನ್ ಸಂಗೀತ ಸಂಯೋಜಿಸುತ್ತಿದ್ದು, ರೆಹಮಾನ್ ಚಿತ್ರರಂಗಕ್ಕೆ ಬಂದು 30 ವರ್ಷಗಳಾಗಿವೆ. ನನ್ನ ಮೊದಲ ತಮಿಳು ಚಿತ್ರಕ್ಕೆ ಅವರೇ ಸಂಗೀತ ನಿರ್ದೇಶಕರು. 30 ವರ್ಷಗಳ ನಂತರವೂ ನಾವಿನ್ನೂ ಇದ್ದೀವಲ್ಲ ಎನ್ನುವುದೇ ಬಹಳ ಸಂತೋಷದ ವಿಷಯ. ಒಬ್ಬ ಕಲಾವಿದ ಬೆಳೆಯೋದು ಬರೀ ಅವನ ಪ್ರತಿಭೆಯಿಂದ ಮಾತ್ರವಲ್ಲ. ಜನರ ಪ್ರೀತಿಯಿಂದ ಮತ್ತು ಅದಕ್ಕಿಂತ ಜನರು ಅವನ ಮೇಲಿಟ್ಟಿರುವ ನಂಬಿಕೆಯಿಂದ. ಆ ನಂಬಿಕೆಯನ್ನು 30 ವರ್ಷಗಳ ಕಾಲ ಉಳಿಸಿಕೊಂಡಿದ್ದೇವೆ ಎನ್ನುವುದೇ ನಮ್ಮ ಹೆಮ್ಮೆ ಆಗುತ್ತದೆ. ಏಕೆಂದರೆ, ಅವರು ನಮ್ಮನ್ನು ನಂಬಿ ಒಂದು ವೇದಿಕೆ ಕೊಟ್ಟಿದ್ದಾರೆ. ಅವರಿಗೆ ಇಷ್ಟ ಆದರಂತೂ, ನಿಮ್ಮನ್ನು ಪ್ರೀತಿಸೋಕೆ ಕಾರಣಗಳನ್ನು ಹುಡುಕುತ್ತಾನೆ. ಒಬ್ಬ ವ್ಯಕ್ತಿಯ ಬೆಳವಣಿಗೆ ಬರೀ ಅವನು ಬೆಳೆದ ಎತ್ತರ ನೋಡಿ ಲೆಕ್ಕ ಹಾಕುವುದಲ್ಲ, ಅವನು ಎತ್ತರವಾಗಿ ಬೆಳೆದ ಮೇಲೆ ಎಷ್ಟು ಜನರನ್ನು ಬೆಳೆಸಿದ ಎನ್ನುವುದರ ಮೇಲೆ

ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ ಪ್ರಕಾಶ್ ರೈ, ತಮಗೆ ಮೊದಲು ಅವಕಾಶ ನೀಡಿದ ಕೆ.ಬಾಲಚಂದರ್ ನಿರ್ದೇಶನದ 75ನೇ ಚಿತ್ರವನ್ನು ತಾವು ನಿರ್ಮಿಸಿ ಸಂಭ್ರಮಿಸಿದ್ದರು. ಸೋಲು-ಗೆಲುವುಗಳನ್ನು ಒಂದೇ ರೀತಿಯಲ್ಲಿ ನೋಡುವ ಪ್ರಕಾಶ್ ತಮ್ಮ ಚಿತ್ರಗಳ ಪೈಕಿ ‘ನಾನು ನನ್ನ ಕನಸು’, ‘ಒಗ್ಗರಣೆ’ ಅಥವಾ ‘ಇದೆಂಥಾ ರಾಮಾಯಣ’ ಚಿತ್ರಗಳು ನನ್ನ ಅಭಿರುಚಿ ಎನ್ನುತ್ತಾರೆ.

‘ಮಹಾತ್ಮ ಗಾಂಧಿ ಬಿಟ್ಟರೆ ನಾನೇ ಫಾದರ್ ಆಫ್ ದಿ ನೇಷನ್’ ಅಂತಾರೆ. ಏಕೆಂದರೆ, ಅಷ್ಟೊಂದು ತಂದೆಯ ಪಾತ್ರಗಳನ್ನು ನಾನು ಇದುವರೆಗೂ ಮಾಡಿಬಿಟ್ಟಿದ್ದೀನಿ’ ಎನ್ನುವ ಪ್ರಕಾಶ್ ರೈ ‘ಫಾದರ್’ ಚಿತ್ರದ ಕುರಿತಂತೆ, ‘ಇದು ತೀವ್ರವಾಗಿ ಕಾಡುವ ಸಿನಿಮಾ. ತಂದೆ-ಮಗನ ಬಾಂಧವ್ಯಕ್ಕಿಂತ, ಇಲ್ಲಿ ಮಗನನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ ಹಿರಿಯರನ್ನೂ ಅರ್ಥ ಮಾಡಿಕೊಳ್ಳಬೇಕು ಎಂದು ಸೂಕ್ಷ್ಮವಾಗಿ ಹೇಳಲಾಗಿದೆ. ಪರಿಸ್ಥಿತಿಯ ವಿಕೋಪಗಳಿಗೆ ಅಥವಾ ಕೆಲವು ಒತ್ತಡಗಳಿಗೆ ಆ ಸಂಬಂಧ ಪ್ರಶ್ನಿಸಲ್ಪಡುತ್ತದೆ. ಜೀವನದಲ್ಲಿ ಕೆಲವು ಸಂಘರ್ಷಗಳು ಬಂದಾಗ ನಮಗೊಂದು ಲಿಬರೇಶನ್ ಸಿಗುತ್ತದೆ. ಒಂದು ಪರಿಸ್ಥಿತಿ ಎದುರಾದಾಗ ನಮ್ಮೊಳಗಿರುವ ಇನ್ನೊಂದು ಶಕ್ತಿ ನಮಗೆ ಅರ್ಥವಾಗೋದಕ್ಕೆ ಅಥವಾ ನಾವು ಇನ್ನಷ್ಟು ಬೆಳೆಯೋದಕ್ಕೆ ಸಾಧ್ಯ. ಅದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಇದೊಂದು ಜನ ಸಾಮಾನ್ಯರ ಸಿನಿಮಾ. ನಿಜವಾಗಲೂ ಕಾಡುವ ಸಿನಿಮಾ’ ಎನ್ನುವ ಮಾತು, ಅವರಿಗೆ ಆ ಪಾತ್ರದ ಮತ್ತು ಚಿತ್ರದ ಮೇಲಿರುವ ಭರವಸೆಯನ್ನು ಹೇಳುತ್ತದೆ.

ಸಾಮಾಜಿಕ ಮಾಧ್ಯಮಗಳ ಎರಡೂ ಮುಖಗಳನ್ನು ಗಮನಿಸಿದ್ದನ್ನು ಅವರು ಹೇಳುವುದು ಹೀಗೆ- ಮಾಣಿಕ್ಯ ಒಳ್ಳೆಯದು. ಆದರೆ ಅದು ಕೋತಿಯ ಕೈಗೆ ಸಿಕ್ಕರೆ? ಈ ಮಾಧ್ಯಮಗಳು ಮುಖ್ಯವಾದ ವಿಷಯಗಳನ್ನು ತಲುಪಿಸುವ ಮಹತ್ವದ ಪಾತ್ರ ವಹಿಸುತ್ತಿವೆ. ಇದರಲ್ಲಿ ಒಳ್ಳೆಯದೂ ಇದೆ, ಕೆಟ್ಟದ್ದೂ ಇದೆ. ಅವೆರಡರಲ್ಲಿ ನಾವು ಯಾವುದನ್ನು ತೆಗೆದುಕೊಳ್ಳುತ್ತೇವೆ ಎನ್ನುವುದು ಬಹಳ ಮುಖ್ಯ. ಅಣು ಬಾಂಬ್ ಕಂಡುಹಿಡಿದದ್ದು ಎನರ್ಜಿಗೆ, ಇನ್ನೊಬ್ಬರನ್ನು ಕೊಲ್ಲುವುದಕ್ಕೆ ಅಲ್ಲ. ಇಲ್ಲಿ ನಮ್ಮ ಮನಸ್ಸಾಕ್ಷಿ, ಆತ್ಮಾವಲೋಕನ ಬಹಳ ಮುಖ್ಯ.

ಇತ್ತೀಚಿನ ಆ ಬೆಳವಣಿಗೆಯ ಕುರಿತು ಪ್ರಕಾಶ್ ಪ್ರತಿಕ್ರಿಯೆ ಇರಲಿಲ್ಲ, ನಿಜ, ಆದರೆ ಕಲಾವಿದ, ಕಲೆ, ತಾರಾಪಟ್ಟ ಇತ್ಯಾದಿಯ ಮೂಲಕ ಅವರು ಎಲ್ಲವನ್ನೂ ಹೇಳುವ ಪ್ರಯತ್ನ ಮಾಡಿದರು.

Tags: