Mysore
25
overcast clouds

Social Media

ಶನಿವಾರ, 11 ಏಪ್ರಿಲ 2026
Light
Dark

ಅಂಗಡಿಗಳಲ್ಲಿ ಬಿತ್ತನೆ ಮುಸಕಿನ ಜೋಳ ಸಿಗದೆ ರೈತರ ಪರದಾಟ

ಎಚ್. ಡಿ. ಕೋಟೆ : ರೈತರು ತಮ್ಮ ಜಮೀನುಗಳಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಲು ಮಾರಾಟದ ಅಂಗಡಿಗಳಲ್ಲಿ ಬಿತ್ತನೆ ಬೀಜ ದೊರೆಯದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ.

ತಾಲ್ಲೂಕಿನಲ್ಲಿ ಕಬಿನಿ, ತಾರಕ, ಹೆಬ್ಬಾಳ, ನುಗು ಈ ನಾಲ್ಕು ಜಲಾಶಗಳಿದ್ದರೂ ಈ ಭಾಗದ ರೈತರ ಜಮೀನುಗಳಿಗೆ ಜಲಾಶಯಗಳ ನೀರಿಗಿಂತ ಮಳೆಯೇ ಹೆಚ್ಚು ಆಸರೆಯಾಗಿದೆ. ಸುಮಾರು ೧. ೩೦ ಲಕ್ಷ ಎಕರೆ ಜಮೀನುಗಳಲ್ಲಿ ರೈತರು ಪ್ರತಿ ಸಾಲಿನ ಏಪ್ರಿಲ್‌ನಲ್ಲಿ ಮುಂಗಾರಿನ ಪ್ರಾರಂಭದಲ್ಲಿ ವಿವಿಧ ಬೆಳೆಗಳ ಬಿತ್ತನೆ ಕಾರ್ಯ ಕೈಗೊಳ್ಳುತ್ತಾರೆ. ಆರ್ಥಿಕ ಬೆಳೆಯಾದ ಮುಸುಕಿನ ಜೋಳ, ಹತ್ತಿ, ರಾಗಿ, ಇನ್ನಿತರ ಬೆಳೆಗಳಿಗೆ ಮೊದಲನೇ ಆದ್ಯತೆ ನೀಡುತ್ತಾರೆ.

ಕಳೆದ ಎರಡು ವರ್ಷಗಳಿಂದ ಕ್ಷೇತ್ರದ ರೈತರು ೬೦,೦೦೦ ಎಕರೆ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯುತ್ತಿದ್ದಾರೆ. ಹತ್ತಿ ಬೆಳೆಗೆ ಉತ್ತಮ ಬೆಲೆ ದೊರೆಯದೆ, ಕಾರ್ಮಿಕರ ಸಮಸ್ಯೆ ಎದುರಾಗಿದ್ದರಿಂದ ಮುಸುಕಿನ ಜೋಳ ಬೆಳೆಯಲು ರೈತರು ಉತ್ಸಾಹ ತೋರಿಸುತ್ತಿದ್ದಾರೆ.

ಈಗಾಗಲೇ ಕ್ಷೇತ್ರದಲ್ಲಿ ಮಳೆಯ ವಾತಾವರಣ ಕಾಣಿಸುತ್ತಿದ್ದು, ರೈತರು ತಮ್ಮ ಜಮೀನಿನಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡುವ ಸಲುವಾಗಿ ಮಾರಾಟ ಅಂಗಡಿಗೆ ಬಿತ್ತನೆ ಬೀಜ ಖರೀದಿಸಲು ಹೋದರೆ ಬಿತ್ತನೆ ಮುಸುಕಿನ ಜೋಳದ ಮಾರಾಟವನ್ನು ಸ್ಥಗಿತಗೊಳಿಸಿರುವುದನ್ನು ಕಂಡು ಆತಂಕಗೊಂಡಿದ್ದಾರೆ.

ಕಳೆದ ಸಾಲಿನಲ್ಲಿ ರೈತರು ಮುಸುಕಿನ ಜೋಳ ಬಿತ್ತನೆ ಮಾಡಿ ಬೆಳೆ ಬಂದ ಸಂದರ್ಭದಲ್ಲಿ ಬಿಳಿ ಸುಳಿ ರೋಗ ಕಾಣಿಸಿಕೊಂಡು, ವಿವಿಧ ಬಗೆಯ ಔಷಧಿ ಸಿಂಪಡಿಸಿದರೂ ರೋಗ ನಿಯಂತ್ರಣವಾಗದೆ ಬೆಳೆ ನಾಶವಾಗಿತ್ತು. ಇದರಿಂದ ರೈತರು ಕಂಗಾಲಾಗಿದ್ದರು.

ರೋಗವನ್ನು ನಿಯಂತ್ರಿಸುವ ಸಲುವಾಗಿ ವಿವಿಧ ಕಂಪೆನಿಗಳ ಬಿತ್ತನೆ ಬೀಜಗಳಲ್ಲಿ ಮೆಟಲಾಕ್ಸಿಲ್-ಎಂ ೪% + ಮ್ಯಾಂಕೊಝೆಬ್ ೬೪% ಔಷಧಿಗಳು ಮಿಶ್ರಣಗೊಂಡ ನಂತರವೇ ಬಿತ್ತನೆ ಬೀಜ ಮಾರಾಟ ಮಾಡಬೇಕೆಂದು ಕೃಷಿ ಇಲಾಖೆಯ ಅಽಕಾರಿಗಳು ನೀಡಿರುವ ನಿರ್ದೇಶನದ ಹಿನ್ನೆಲೆಯಲ್ಲಿ ಅಂಗಡಿಗಳಿಗೆ ಬಂದಿದ್ದ ಔಷಧಿ ಮಿಶ್ರಿತವಲ್ಲದ ಬೀಜಗಳ ಮಾರಾಟವನ್ನು ಸ್ಥಗಿತಗೊಳಿಸಿದ್ದಾರೆ.

ಕಂಪೆನಿಯವರು ಕೃಷಿ ಇಲಾಖೆಯ ನಿರ್ದೇಶನದಂತೆ ಔಷಧಿ ಮಿಶ್ರಿತ ಬಿತ್ತನೆ ಬೀಜವನ್ನು ಇನ್ನೂ ಸರಬರಾಜು ಮಾಡದಿರುವುದರಿಂದ ರೈತರು ಬಿತ್ತನೆ ಬೀಜಕ್ಕಾಗಿ ಅಂಗಡಿಗಳಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.

 

Tags:
error: Content is protected !!