Mysore
75
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲು ರೈತರ ಆಗ್ರಹ

ವಡಕೆಹಳ್ಳ ಗ್ರಾಮದಲ್ಲಿ ಅಹೋರಾತ್ರಿ ಧರಣಿ

ಹನೂರು: ಕಾವೇರಿ ನದಿಯಿಂದ ಏತ ನೀರಾವರಿ ಯೋಜನೆಯ ಮೂಲಕ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ವಡಕೆಹಳ್ಳ ಗ್ರಾಮದಲ್ಲಿ ಆಹೋರಾತ್ರಿ ಧರಣಿ ಆರಂಭಿಸಿದೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಂಟಳ್ಳಿ ಏತ ನೀರಾವರಿ ಹೋರಾಟ ಸಮಿತಿ ಸಂಯುಕ್ತಾಶ್ರಯದಲ್ಲಿಹಮ್ಮಿಕೊಳ್ಳಲಾಗಿರುವ ಅಹೋರಾತ್ರಿ ಧರಣಿಯಲ್ಲಿದಂಟಲ್ಲಿ, ಕೂರಟ್ಟಿ ಹೊಸೂರು, ಶೆಟ್ಟಳ್ಳಿ , ಮಾರ್ಟಳ್ಳಿ ಗ್ರಾಮಗಳ ನೂರಾರು ರೈತರು ಪಾಲ್ಗೊಂಡಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಂಚಾಲಕ ಶೈಲೇಂದ್ರ ಮಾತನಾಡಿ, ರಾಮಾಪುರ ಹೋಬಳಿ ವ್ಯಾಪ್ತಿಯ ಹಲವು ಗ್ರಾಮ ಪಂಚಾಯಿತಿಗಳಲ್ಲಿಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಏತ ನೀರಾವರಿ ಮೂಲಕ ನೀರಿನ ಸೌಲಭ್ಯ ಕಲ್ಪಿಸಬೇಕೆಂದು ಬೈಕ್ ರ‍್ಯಾಲಿ ಹೋರಾಟ ಮಾಡಿ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದರೂ ಇದುವರೆಗೂ ಯಾವುದೇ ಸಮಸ್ಯೆ ಬಗೆಹರಿಸಿಲ್ಲ. ಕಾವೇರಿ ಜಲ ಮಂಡಳಿಯು ಕುಡಿಯುವ ನೀರು ಮತ್ತು ಸಣ್ಣ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲು ೬೩.೮೩ ಟಿಎಂಸಿ ನೀರು ಬಳಸಲು ಸೂಚಿಸಿದ್ದರೂ ಈ ಭಾಗದ ಜನರಿಗೆ ನೀರಿನ ಸೌಲಭ್ಯ ಒದಗಿಸುವುದರಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

೨೦೦೯ರಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಿಲ್ಲಾ ರೈತ ಸಂಘದಿಂದ ಜಿಲ್ಲೆಯ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಬೇಕೆಂದು ನಡೆದ ಹೋರಾಟಕ್ಕೆ ಗೆಲುವು ಸಿಕ್ಕಿ ೧೫ ವರ್ಷಗಳು ಕಳೆದರೂ ಹನೂರು ಭಾಗಕ್ಕೆ ನೀರನ್ನು ಒದಗಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳುರೈತರ ಸಮಸ್ಯೆ ಬಗೆಹರಿಸುತ್ತೇವೆ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಅಂತರ್ಜಲ ಮಟ್ಟ ಕುಸಿದಿರುವುದರಿಂದ ಇಲ್ಲಿನ ನಿವಾಸಿಗಳು ಗ್ರಾಮಗಳನ್ನು ತೊರೆದು ಪಕ್ಕದ ರಾಜ್ಯಗಳಿಗೆವಲಸೆ ಹೋಗುತ್ತಿದ್ದಾರೆ. ಆದ್ದರಿಂದ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಮುಖ ಐದು ಹಕ್ಕೊತ್ತಾಯಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದರು.

ಪ್ರತಿಭಟನಾ ಸ್ಥಳಕ್ಕೆ ಶಾಸಕ ಎಂ.ಆರ್.ಮಂಜುನಾಥ್ ನೀಡಿ ಪ್ರತಿಭಟನಾಕಾರರ ಮನವಿಯನ್ನು ಆಲಿಸಿ ಮಾತನಾಡಿ, ಕ್ಷೇತ್ರ ವ್ಯಾಪ್ತಿಯ ಜನರಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಾಮನಗುಡ್ಡ ಜಲಾಶಯಕ್ಕೆ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಈ ಭಾಗದ ಅಂತರ್ಜಲ ಮಟ್ಟ ಹೆಚ್ಚಿಸುವ ಮೂಲಕ ರೈತರ ವ್ಯವಸಾಯಕ್ಕೆ ಅನುಕೂಲವಾಗಲಿದೆ ಎಂದರು. ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಗುಂಡಾಲ್ ಜಲಾಶಯದ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿಗೆ ೫೦ ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇದೀಗ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾಮಗಾರಿಗೆ ಕೆಲವೇ ದಿನಗಳಲ್ಲಿ ಚಾಲನೆ ನೀಡಲಾಗುವುದು ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಮಾರ್ಟಳ್ಳಿ ಗ್ರಾಮ ಘಟಕದ ಅಧ್ಯಕ್ಷ ಅರ್ಪುದ ರಾಜ್ ಸೇರಿ ದಂತೆ ಸುತ್ತಮುತ್ತಲಿನ ಗ್ರಾಮಗಳ ರೈತ ಮುಖಂಡರು, ಮಹಿಳಾ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Tags:
error: Content is protected !!