ಕೋಟೆ: ರೈತ ಸಂಘದ ಎರಡು ಬಣಗಳಿಂದ ಪ್ರತ್ಯೇಕವಾಗಿ ನಡೆದ ರೈತ ದಿನಾಚರಣೆ
ಮಂಜು ಕೋಟೆ
ಹೆಚ್.ಡಿ.ಕೋಟೆ: ರೈತ ಸಂಘಗಳ ವತಿಯಿಂದ ನಡೆದ ವಿಶ್ವ ರೈತ ದಿನಾಚರಣೆಯಲ್ಲಿ ರೈತರು ಸಡಗರದಿಂದ ಪಾಲ್ಗೊಂಡಿದ್ದರಿಂದ ತಾಲ್ಲೂಕಿನಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು.
ತಾಲ್ಲೂಕಿನಲ್ಲಿ ರೈತಾಪಿ ವರ್ಗದವರೇ ಹೆಚ್ಚಾಗಿ ವಾಸಿಸುತ್ತಿದ್ದು, ಕೃಷಿಯನ್ನೇ ಅವಲಂಬಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ರೈತರಿಗೆ ದಿನದಿಂದ ದಿನಕ್ಕೆ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಇಂಥ ಸಂದರ್ಭದಲ್ಲಿ ರೈತ ಸಂಘಟನೆಗಳು ವಿಶ್ವ ರೈತ ದಿನಾಚರಣೆ ಅಂಗವಾಗಿ ನಡೆಸಿದ ರೈತರ ಹಬ್ಬದ ಕಾರ್ಯಕ್ರಮ ತಾಲ್ಲೂಕಿನಲ್ಲಿ ರೈತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ.
ಕರ್ನಾಟಕ ರಾಜ್ಯ ರೈತ ಪರ್ವ ಮತ್ತು ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದದವರು ಪೈಪೋಟಿಯ ಮೂಲಕ ರೈತರ ಹಬ್ಬವನ್ನು ಪಟ್ಟಣದಲ್ಲಿ ಪ್ರತ್ಯೇಕವಾಗಿ ಆಯೋಜಿಸಿದ್ದರು.
ಎರಡೂ ರೈತ ಸಂಘಗಳ ರಾಜ್ಯಾಧ್ಯಕ್ಷರಾದ ಅರುಣ್ ಕುಮಾರ್ ಮತ್ತು ಚಂದನ್ ಗೌಡ ಸಮ್ಮುಖದಲ್ಲಿ ತಾಲ್ಲೂಕಿನ ಉಸ್ತುವಾರಿ ಗಳಾದ ವೈ. ಎಲ್. ನವೀನ್ ಕುಮಾರ್, ಹರೀಶ್ ಗೌಡ, ಕುಮಾರ ಹಾಗೂ ಹೈರಿಗೆ ಉಮೇಶ್, ಮಾದೇಗೌಡ, ಲೋಕೇಶ್, ಸತೀಶ್ ನೇತೃತ್ವದಲ್ಲಿ ಅಂಬೇಡ್ಕರ್ ಭವನ ಮತ್ತು ತಾರಕ ಫಂಕ್ಷನ್ ಹಾಲ್ ಮುಂಭಾಗ ದಲ್ಲಿ ಎರಡೂ ಸಂಘಟನೆಯವರು ಪ್ರತ್ಯೇಕವಾಗಿ ರೈತರ ಹಬ್ಬವನ್ನು ನಡೆಸಿದರು.
ಮೆರವಣಿಗೆಯಲ್ಲಿ ಕಲಾತಂಡಗಳು, ಹಳ್ಳಿಕಾರ್ ತಳಿಗಳ ಎತ್ತುಗಳ ಪ್ರದರ್ಶನ, ರೈತರಿಗೆ ಸನ್ಮಾನ, ವಿಚಾರಗೋಷ್ಠಿ, ಅರಿವು ಕಾರ್ಯಕ್ರಮ ಮುಂತಾದವುಗಳನ್ನು ಅರ್ಥಪೂರ್ಣವಾಗಿ ನಡೆಸಿದರು.
ತಾಲ್ಲೂಕಿನಲ್ಲಿ ರೈತ ಸಂಘಗಳ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಪ್ರತ್ಯೇಕವಾಗಿ ಕಾರ್ಯಕ್ರಮ ನಡೆದಿರುವುದು ಇದೇ ಪ್ರಪ್ರಥಮವಾಗಿದೆ. ತಾಲ್ಲೂಕಿನಲ್ಲಿ ಇರುವ ರೈತರ ಸಮಸ್ಯೆಗಳನ್ನು, ಕಷ್ಟಗಳನ್ನು, ಅವರ ಕೆಲಸ ಕಾರ್ಯಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ರೈತ ಸಂಘಟನೆಗಳು ಮತ್ತು ಮುಖಂಡರು ಮುಂದಾದರೆ ರೈತ ಕುಟುಂಬಗಳಿಗೆ ನೆರವಾಗಲಿದೆ.




